ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಯಲ್ಲಿರುವ ಚಹಾ ಲೋಟವನ್ನೇ ರಿಮೋಟ್ ಕಂಟ್ರೋಲರ್ ಆಗಿಸಿ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕೈಯಲ್ಲಿ ಹಿಡಿದಿರುವ ಚಹಾ ಲೋಟ, ಮೇಜಿನಲ್ಲಿಟ್ಟಿರುವ ಆಟಿಕೆ ಅಥವಾ ನಮ್ಮ ಬಳಿ ಇರುವ ಇನ್ಯಾವುದೋ ವಸ್ತುವನ್ನೇ ಟಿವಿ ರಿಮೋಟ್ ಕಂಟ್ರೋಲರ್ ಆಗಿ ಬಳಸುವಂತಿದ್ದರೆ ಹೇಗಿರಬಹುದು? ರಿಮೋಟ್‌ಗಾಗಿ ಹುಡುಕಾಡುವುದು, ಹಾಳಾದ ರಿಮೋಟ್ ದುರಸ್ತಿ ಮಾಡುವ ಕಿರಿಕಿರಿಯೇ ಇಲ್ಲವಾಗಬಹುದಲ್ಲವೇ...

ಹೌದು, ನಮ್ಮ ಬಳಿ ಸಿದ್ಧ ಇರುವ ವಸ್ತುವನ್ನೇ ಟಿವಿ ರಿಮೋಟ್ ಆಗಿ ಬಳಸುವ ದಿನ ಇನ್ನು ದೂರವಿಲ್ಲ. ಇದಕ್ಕೆ ಸಂಬಂಧಿಸಿದ ತಂತ್ರಜ್ಞಾನವೊಂದನ್ನು ಬ್ರಿಟನ್ನಿನ ಸಂಶೋಧಕರು ಅಭಿವೃದ್ಧಿಪಡಿಸಿದ್ದಾರೆ.

ಇಷ್ಟೇ ಅಲ್ಲದೆ, ದೇಹದ ಅಥವಾ ಯಾವುದೇ ವಸ್ತುಗಳ ಚಲನೆಯನ್ನು ಆಧರಿಸಿ ಸ್ಕ್ರೀನ್‌ಗಳು (ಟಿವಿ ಪರದೆ) ಕಾರ್ಯನಿರ್ವಹಿಸುವಂಥ ತಂತ್ರಜ್ಞಾನವನ್ನು ಲ್ಯಾನ್‌ಕೇಸ್ಟರ್ ವಿಶ್ವವಿದ್ಯಾಲಯದ ಸಂಶೋಧಕರು ಪ್ರದರ್ಶಿಸಿದ್ದಾರೆ. ಇದನ್ನು ‘ಮ್ಯಾಚ್‌ಪಾಯಿಂಟ್’ ತಂತ್ರಜ್ಞಾನ ಎಂದು ಕರೆಯಲಾಗಿದೆ. ಇದು ಕಾರ್ಯನಿರ್ವಹಿಸಲು ಕೇವಲ ವೆಬ್‌ಕ್ಯಾಮ್ ಸಾಕು. ಸ್ಕ್ರೀನ್‌ನಲ್ಲಿರುವ ಚಿಕ್ಕ ಉಪಕರಣವೊಂದರ ಸಹಾಯದಿಂದ ಇದು ಕೆಲಸ ಮಾಡಲಿದೆ.

ಕೈಯಲ್ಲಿರುವ ಯಾವುದೇ ವಸ್ತುವನ್ನು ರಿಮೋಟ್ ಕಂಟ್ರೋಲರ್‌ನಂತೆ ಬಳಸಿಕೊಂಡು ಟಿವಿಯ ಶಬ್ದ ಹೆಚ್ಚು–ಕಡಿಮೆ ಮಾಡಲು, ಚಾನೆಲ್ ಬದಲಾಯಿಸಲು, ಮೆನುವನ್ನು ನೋಡಲು ಈ ತಂತ್ರಜ್ಞಾನ ಸಹಾಯ ಮಾಡಲಿದೆ. ಕೈ, ತಲೆಯ ಚಲನೆಯನ್ನೂ ಇಲ್ಲಿ ರಿಮೋಟ್‌ನಂತೆ ಬಳಸಬಹುದಾಗಿದೆ.

ಸದ್ಯ ಅಸ್ತಿತ್ವದಲ್ಲಿರುವ ‘ಸಂಜ್ಞಾ ನಿಯಂತ್ರಣ’ ತಂತ್ರಜ್ಞಾನದಲ್ಲಿ ದೇಹದ ಯಾವುದಾದರೊಂದು ನಿರ್ದಿಷ್ಟ ಭಾಗವನ್ನೇ ಬಳಸಿ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ, ಹೊಸ ತಂತ್ರಜ್ಞಾನದಲ್ಲಿ ದೇಹದ ಯಾವುದೇ ಭಾಗವನ್ನು ರಿಮೋಟ್‌ ಕಂಟ್ರೋಲರ್‌ನಂತೆ ಬಳಸಬಹುದಾಗಿದೆ. ಇದು ಬಳಕೆದಾರನ ಕೆಲಸವನ್ನು ಇನ್ನಷ್ಟು ಸುಲಭ ಮಾಡಲಿದೆ.

ಹೊಸ ತಂತ್ರಜ್ಞಾನದಲ್ಲಿ ನಿರ್ದಿಷ್ಟ ನಿರ್ವಹಣೆಯ ತಂತ್ರವನ್ನೂ ಬಳಕೆದಾರ ತಿಳಿದಿರಬೇಕಿಲ್ಲ.ಧ್ವನಿಯನ್ನು ಹೆಚ್ಚು ಅಥವಾ ಕಡಿಮೆ ಮಾಡಲು ಬಳಕೆದಾರರು ಕೈ, ತಲೆ ಅಥವಾ ದೇಹದ ಇನ್ಯಾವುದೇ ಭಾಗವನ್ನು ಬಳಸಿಕೊಂಡು ಕಮಾಂಡ್ ನೀಡಬಹುದು. ಅಥ ಆ ಬೇಕಾದ ಚಾನೆಲ್‌ಗೆ ಬದಲಾಯಿಸಬಹುದು. ಟಿವಿ ಮಾತ್ರವಲ್ಲದೆ, ಯೂಟ್ಯೂಬ್‌ ಟ್ಯುಟೋರಿಯಲ್ಸ್‌ನಂಥ ಇತರ ಸ್ಕ್ರೀನ್‌ಗಳ ನಿಯಂತ್ರಣಕ್ಕೂ ಈ ಹೊಸ ತಂತ್ರಜ್ಞಾನವನ್ನು ಬಳಸಬಹುದಾಗಿದೆ. ಸ್ಕ್ರೀನ್‌ಗಳ ಮೇಲೆ ಚಿತ್ರಗಳನ್ನು ಜೂಮ್‌ ಇನ್ ಮಾಡಲು ಮತ್ತು ಜೂಮ್ ಔಟ್‌ ಮಾಡಲೂ ಮ್ಯಾಚ್‌ಪಾಯಿಂಟ್‌ ಬಳಕೆಯಾಗಲಿದೆ.

ಈ ತಂತ್ರಜ್ಞಾನದಿಂದ ಬಳಕೆದಾರರು ಸ್ಟೇಷನರಿ ವಸ್ತುಗಳನ್ನೂ ರಿಮೋಟ್‌ ಆಗಿ ಬಳಸಬಹುದಾಗಿದೆ. ಉದಾಹರಣೆಗೆ: ಮೇಜಿನ ಮೇಲಿರುವ ಮಗ್ ಅಥವಾ ಆಟಿಕೆ ಕಾರೊಂದು ಮ್ಯೂಸಿಕ್ ಪ್ಲೇಯರ್‌ನ ಟ್ರ್ಯಾಕ್ ಅನ್ನು ಎಡ ಅಥವಾ ಬಲಕ್ಕೆ ಚಲಿಸುವಂತೆ ಮಾಡುವ ಮೂಲಕ ಬದಲಾಯಿಸಬಹುದು. ಧ್ವನಿಯನ್ನೂ ಹೆಚ್ಚು ಅಥವಾ ಕಡಿಮೆ ಮಾಡಬಲ್ಲದು.

‘ನಿರ್ದಿಷ್ಟ ವಸ್ತುವೊಂದನ್ನು ಗುರುತುಹಿಡಿದು ಕಾರ್ಯನಿರ್ವಹಿಸುವುದರ ಬದಲು ಚಲನೆಯ ಗತಿಯನ್ನು ಸಂಜ್ಞಾ ನಿಯಂತ್ರಣದ ಮೂಲಕ ಗುರುತಿಸಿ ಕಾರ್ಯನಿರ್ವಹಿಸುವ ಹೊಸ ವಿಧಾನ ಇದಾಗಿದೆ’ ಎಂದು ವಿಶ್ವವಿದ್ಯಾಲಯದ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿ ಕ್ರಿಸ್ಟೋಫರ್ ಕ್ಲರ್ಕ್ ಅಭಿಪ್ರಾಯಪಟ್ಟಿದ್ದಾರೆ.

‘ಹೊಸ ತಂತ್ರಜ್ಞಾನದಿಂದ ದಿನ ಬಳಕೆಯ ವಸ್ತುಗಳೇ ರಿಮೋಟ್ ಆಗಿ ಬಳಕೆಯಾಗಲಿವೆ. ರಿಮೋಟ್‌ಗಾಗಿ ಹುಡುಕಾಟ ನಡೆಸುವ ಅಗತ್ಯವೇ ಇಲ್ಲ’ ಎಂದು ಕ್ಲರ್ಕ್ ಬಣ್ಣಿಸಿದ್ದಾರೆ.

ಮೌಸ್, ಕೀಬೋರ್ಡ್‌ ಬಳಸಲಾಗದವರಿಗೆ ಪರ್ಯಾಯವಾಗಿಯೂ ಮ್ಯಾಚ್‌ಪಾಯಿಂಟ್ ಕಾರ್ಯನಿರ್ವಹಿಸುವ ಸಾಧ್ಯತೆ ಇದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ತಂತ್ರಜ್ಞಾನ ಪೂರ್ಣಪ್ರಮಾಣದಲ್ಲಿ ಎಷ್ಟರಮಟ್ಟಿಗೆ ಯಶಸ್ವಿಯಾಗಲಿದೆ ಎಂಬುದನ್ನು ಕಾದುನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT