ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಳಿದ್ದಾಳೆ ಈಗಲೂ....

Last Updated 11 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

*ನಭಾ ಒಕ್ಕುಂದ

ಅವಳು ಶಾಲೆಗೆ ಹೋಗುವ ಹುಡುಗಿ. ಶಾಲೆ, ಮನೆ, ಆಟ, ಪಾಠಗಳ ಜೊತೆ ಆರಾಮಾಗಿ ಬೆಳೆದವಳು. ಹೆಸರು ಕವಿತಾ. ಅಪ್ಪ ಅಮ್ಮನ ಮುದ್ದಿನ ಮಗಳು.

ಶಾಲೆಗೆ ಹೋಗಿ, ಗೆಳತಿಯರೊಟ್ಟಿಗೆ ಆಟ, ಪಾಠ ಮುಗಿಸಿ ಮನೆಗೆ ಬರುವುದು ದಿನಂಪ್ರತಿ ನಡೆಯುತ್ತಿತ್ತು. ಪ್ರತಿದಿನ ಬೆಳಿಗ್ಗೆ ಗುರುಗಳು ವಾರ್ತೆ ನೋಡಲು, ಪೇಪರ್ ಓದಲು ಒತ್ತಾಯ ಮಾಡ್ತಾನೇ ಇದ್ದರು. ಆದರೆ ಆಕೆ ಅಂತಹ ಸಾಹಸಕ್ಕೆ ಹೋಗಿರಲಿಲ್ಲ. ಆಟ ಆಡೋದಂದ್ರೆ ತುಂಬಾ ಇಷ್ಟ. ಅಪ್ಪನೊಟ್ಟಿಗೆ ಕಾಲ ಕಳೆಯೋದು ಇನ್ನೂ ಇಷ್ಟ. ಹೀಗೆ ಆರಾಮಾಗಿ, ಮಜವಾಗಿ ಕಾಲ ಕಳೀತಾ ಇದ್ಲು.

ಅದೊಂದು ದಿನ ರಾತ್ರಿ ಊಟ ಮಾಡಲು ಅಡುಗೆ ಮನೆಗೆ ಹೋದಳು. ಅಮ್ಮ ಊಟಕ್ಕೆ ಹಾಕುತ್ತಿದ್ದಳು. ಕವಿತಾಳನ್ನ ನೋಡಿದ ಅಮ್ಮ ‘ಟಿ.ವಿ ಆನ್ ಮಾಡಿ ನ್ಯೂಸ್ ಹಚ್ಚು ಮಗಾ’ ಅಂದಳು. ಕವಿತಾ ಓಡೋಡ್ತಾ ಹೋಗಿ ಟಿ.ವಿ ಆನ್‌ ಮಾಡಿ ಅಮ್ಮನ ಹತ್ತಿರ ಹೋದ್ಲು. ಕೊನೆಗೆ ಅಪ್ಪ, ಅಮ್ಮ, ಕವಿತಾ ಮೂರೂ ಜನ ತಾಟು ತೆಗೆದುಕೊಂಡು ಟಿ.ವಿ ಮುಂದೆ ಹೋಗಿ ಕುಳಿತರು. ವಾರ್ತೆಗಳು ಬರುತ್ತಾ ಇದ್ದವು.

ಇದ್ದಕ್ಕಿದ್ದಂತೆ ತಂದೆ ಮಗಳ ಮೇಲೆ ಅತ್ಯಾಚಾರ ಮಾಡಿದ ಸುದ್ದಿ! ಊಟ ಮಾಡುತ್ತಿದ್ದ ಕವಿತಾಳಿಗೆ ತುತ್ತು ಇಳೀಲೇ ಇಲ್ಲ. ಅಪ್ಪನ ಮುಖ ನೋಡಿದ್ಲು. ಗಾಬರಿಗೊಂಡಳು. ಒಂದೂ ಮಾತಾಡದೆ ಊಟ ಮುಗಿಸಿ ಮಲಗಲು ಹೋದಳು.

ಅವತ್ತು ರಾತ್ರಿ ಕವಿತಾಳ ತಂದೆ ಹೊರಗೆ ಹೋಗ್ತಾ ಇದ್ರು. ಅಪ್ಪನ ಜೊತೆ ಸುತ್ತಾಡೋದು ಕವಿತಾಳ ರೂಢಿ. ಅಪ್ಪನಿಗೆ ಏನೇ ಕೆಲಸ ಇದ್ರೂ ಒಂದು ಸುತ್ತು ತಿರುಗಾಡಲು ಹೋಗೋಣ ಎಂದು ಕಾಡಿಸುತ್ತಿದ್ದಳು. ಅವತ್ತು ಅವರ ತಂದೆಯೇ ‘ಹೋಗೋಣ ಬಾ’ ಎಂದಾಗ, ‘ನಿದ್ದೆ ಬಂದಿದೆ ಮಲಗ್ತೀನಿ’ ಆಂತ ಹೇಳಿ ಎದ್ದು ಹೋದಳು. ಅವರೂ ಸುಮ್ಮನಾದ್ರು. ಮಾರನೇ ದಿನ ಶಾಲೆಗೆ ಹೋದ್ಲು. ಕ್ಲಾಸ್‌ಗಳು ಪ್ರಾರಂಭವಾದ್ವು. ಕವಿತಾಳಿಗೆ ಮಾತ್ರ ಕೂಡ್ಲಿಕ್ಕೆ ಆಗ್ತಿಲ್ಲ. ಏನೂ ತಲೆಗೆ ಹೋಗ್ತಿಲ್ಲ. ಏನು ಮಾಡಬೇಕು ಎನ್ನುವುದೂ ಅರ್ಥ ಆಗ್ತ ಇರಲಿಲ್ಲ. ಊಟಕ್ಕೆ ಬಿಟ್ಟರು. ಫ್ರೆಂಡ್ಸ್ ಎಲ್ರೂ ಏನೇನೋ ಮಾತಾಡುತ್ತ, ನಗುತ್ತಾ, ಊಟ ಮಾಡುತ್ತಿದ್ದರು. ಇವಳಿಗೆ ಒಂದು ಮಾತೂ ಬರಲಿಲ್ಲ. ಅಂತೂ ಹೇಗೋ ಶಾಲೆ ಮುಗಿಸಿ ಮನೆಗೆ ಬಂದಳು.

ವಿಪರೀತ ಜ್ವರ! ಆಸ್ಪತ್ರೆಗೆ ಹೋಗಲೂ ಇಷ್ಟವಿಲ್ಲ. ತಿರುಗಾಡಲು ಹೋಗುವುದು ದೂರವೇ ಉಳೀತು. ಎಷ್ಟೋ ದಿನ ಒಬ್ಬಳೇ ಇರಲು ಪ್ರಾರಂಭಿಸಿದಳು. ದಿನಗಳೂ ಕಳೆದವು. ಅಪ್ಪ ಅಮ್ಮನಿಗೆ ಕವಿತಾಳ ಮೇಲೆ ಅನುಮಾನ ಬರಲು ಶುರುವಾಯ್ತು. ಏನಾಗಿದೆ ಎಂದು ತಿಳಿದುಕೊಳ್ಳಲು ಹರಸಾಹಸ ಮಾಡಿದರು. ಕವಿತಾಳಿಗೆ ಏನು ಹೇಳಬೇಕೋ ಅರ್ಥ ಆಗಲಿಲ್ಲ.

ಹೆದರಿದ್ದನ್ನ ಹೇಳಿದರೆ ತಂದೆಗೆ ಬೇಜಾರಾಗಬಹುದೇನೋ ಅನ್ನಿಸ್ತು. ಕೊನೆಗೂ ಅವಳಮ್ಮನಿಗೆ ಅದು ಹೇಗೋ ಗೊತ್ತಾಯ್ತು. ಅವಳನ್ನ ಕರೆದು ಕೂಡಿಸಿ ಎಷ್ಟೋ ದಿನ ತಿಳಿಸಿ ಹೇಳಿದರು. ಭಯದಿಂದ ಹೊರತರಲು ಗುದ್ದಾಡಿದರು. ಅವಳೂ ಅಪ್ಪ ಅಮ್ಮನ ಮಾತನ್ನ ನಂಬಿದಳು.

ಮೊದಲಿನ ಹಾಗೆ ಇರಲು ಪ್ರಯತ್ನಿಸಿದಳು. ಪ್ರಯತ್ನ ಪಡುತ್ತಲೇ ಇದ್ದಾಳೆ. ಈಗ ಮೊದಲಿನ ಹಾಗೆ ಅಪ್ಪನ ಜೊತೆ ಅಡ್ಡಾಡುತ್ತಿದ್ದಾಳೆ. ಎಲ್ಲವೂ ಸರಿಯಾಗಿದೆ.ಆದರೂ ಎಷ್ಟೋ ರಾತ್ರಿ ಕೆಟ್ಟ ಕನಸು ಬೀಳುತ್ತದೆ. ಭಯ ಪಡುತ್ತಾಳೆ. ಗಾಬರಿಗೊಳ್ಳುತ್ತಾಳೆ. ಆಮೇಲೆ ಮತ್ತೆ ಅದು ಕನಸು ಎಂದು ಸುಮ್ಮನಾಗುತ್ತಾಳೆ. ಅವಳು ಈಗಲೂ ಇದ್ದಾಳೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT