ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಷ್ಟದ ಡಬ್ಬಿಯೊಳಗಿನ ಕನಸುಗಳು

ವಿದ್ಯಾರ್ಥಿ ವಿಭಾಗದಲ್ಲಿ ಬಹುಮಾನ ಪಡೆದ ಕಥೆ
Last Updated 14 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ನೂರಂದಪ್ಪ ಪಡಶೆಟ್ಟಿ

*

ಸಿದ್ರಾಮ, ಗೌಡ್ರ ಮನಿ ಅಂಗಳಕ ಬಂದರುಪ್ಲೆ ಒಂದ ಬಟ್ಲದಾಗ ಚಾ ಜೊತಿಗಿ ಒಂದ ಗ್ಲಾಸ್ ನೀರ ತಂದು ಪಡಸಾಲ್ಯಾಗ ಇಟ್ಟು ‘ಚಾ ಕುಡಿ ಸಿದ್ರಾಮ’ ಅಂದು ಒಳಗ ಹೋದ್ಲು ಗೌಡತಿ, ಚಾ ಕುಡದು ಬಟ್ಲದಾಗ ತ್ವಾಡೆ ನೀರ ಹಾಕಿ ಒಂದು ಬಟ್ ಒಳಗ್ಹಾಕಿ ಅಳಗಾಡಸಿ ಚೆಲ್ಲಿಟ್ಟು ಅಂಗಳಕ ಬಂದು ಕಷ್ಟದ ಡೆಬ್ಬಿ ತೆಕ್ಕೊಂಡ ಕುಂತ. ಗೌಡ ಎದುರ ಬಂದ ಕುಂತರುಪ್ಲೆ ಗೌಡ್ರ ಕೈಯಾಗ ಸ್ಪೆಶಲ್ ಕನಡಿ ಕೊಟ್ಟು ಹಣಗಿ ಕತ್ರಿ ಟೆಸ್ಟ್ ಮಾಡಕತ್ತಿದ. ಗೌಡ ಕನಡಿಯೊಳಗ ಮುಖ ನೋಡ್ಕೋತಾ ‘ಸಿದರ್‍ಯಾ, ನಿನ್ ಮಗನಿಗಿ ಕಲಬುರಗಿಗಿ ಬಿಡಾಕತ್ತಿದೆಂತಲಲೆ ಸಾಲಿಗಿ?’ ಅಂದ. ಸಿದ್ರಾಮನ ಧ್ಯಾನ ಗೌಡನ ಮಾತಿನ ಕಡಿ ಹರಡಿ ಹಣಗಿ ಗೌಡನ ತೆಲಿಯೊಳಗ ಹಾಕಿ ಕೂದಲ ಕತ್ತರಸಗೋತ ‘ಹೌದ್ರಿ ಗೌಡ್ರೆ, ಹತ್ತನೇ ಚೊಲೊ ಪಾಸಾಗಿ ಸಾಲಿಗೆ ಪಸ್ಟ್ ಬಂದಾನ್ರೆಲ. ಅದಕೆ ನಿಮ್ ಮಗನಂಗೆ ಸಾಯಿನ್ಸ್ ಮಾಡ್ಸಬೇಕಂತ ನಾಳೆ ಕಲಬುರಗಿಗಿ ಕರಕೊಂಡ್ ನಡದೀನ್ರಿ’ ಅಂದ. ಸ್ವಲ್ಪ ಗಡ್ಸ್‌ನಿಂದ ‘ಲೇ ಸಿದರ್‍ಯಾ ನನ್ ಮಗಾ ಕಲ್ಯಾಕತ್ತಿದ್ದು ಧಾರವಾಡದಾಗಲೇ. ನಿನ್ನೌನ ಗೊತ್ತದಿಲ್ಲ?, ಈ ವರ್ಷ ಸೆಕೆಂಡಿಯರ್ ಅದನಲೇ, ಫಸ್ಟ್ ವರ್ಷಕ್ಕೆ ಎಷ್ಟ್ ಖರ್ಚ ಬಂದದ ಗೊತ್ತೇನಲೆ ಹುಚ್ ಸೂಳೆಮಗನ? ಸೈನ್ಸ್ ಅಂದ್ರ ಹಗುರನಕೊಂಡಿಯನ? ಸುಮ್ನೆ ಈಗ ಸೈನ್ಸ್ ಮಾಡಸಿ ಆಮ್ಯಾಲ ಕಲಸೂದ್ ಆಗಲಾರದಕ ಫೇಲಾಗಿ ಊರಾಗ ಬಂದು ಕುಡಕೋತ ತಿನಕೋತ ತಿರಗ್ಯಾಡಿ ಹಾಳಾತಾವ, ಸುಮ್ಮ್‌ ಆರ್ಟ್ಸ ಗೀರ್ಟ್ಸ ಮಾಡಸಿ ಮಾಸ್ತಾರ ಗೀಸ್ತಾರ ಮಾಡಸು. ಚಂದ ಬದಕತಾವ’ ಅಂದು ಬೆನ್ನ ಖಡೀ ಮಾಡಿ ಜೋರ ಉಸರ ಬಿಟ್ಟ ಗೌಡ. ಕತ್ರೀಲೆ ಒಂದಸಲ ಹಣಗಿ ಜಾಡಸಿದ ಸಿದ್ರಾಮ ಗೌಡನ ತೆಲಿ ಒತ್ತಿ ಬಗ್ಗಿಸಿ ನೆತ್ತಿ ಮ್ಯಾಲಿನ ಕೂದಲ ಸಣ್ಣ ಮಾಡಕೋತ ‘ಅಂದಾಜ ಎಸ್ಟ್ ಕರ್ಚ ಬರಬೋದ್ರಿ ಗೌಡ್ರೆ ಎರಡು ವರ್ಷ ಸಾಯಿನ್ಸ್ ಮಾಡಸಾಕ?’ ಅಂತ ಕೇಳಿದ. ನಿನ್ನೌನ್ ಹಡಿಬಿಟ್ಟಿ ನಿನ್ ಹೊಲದ ವರ್ಷದ ಬೆಳಿ ಜೊತಿ ನಮ್ಮಂತೋರು ಕೊಡೋ ಜ್ವಾಳ ತೊಗರಿಗಿ ತಿರಗಾಡಿ ಕೂಡಸಿದ್ ಕಣದ ಕಾಳುನು ಸೇರಸಿ ತಗದ್ರೂ ಆರ್ ತಿಂಗಳ ಖರ್ಚಿಗಿ ಸಾಲಲ್ಲಲೇ ಅವರಿಗಿ’ ಅಂದ ಗೌಡ.

‘ಏನರೆ ಆಗಲ್ಯಾಕ್ರಿ ಗೌಡ್ರೆ ಇವನೌನ್ ನನ್ ಹೊಲ ಮಾರ್‍ಯಾದ್ರು ಚಿಂತಿಲ್ಲ ಮಗನಿಗಿ ಸಾಯಿನ್ಸ್ ಮಾಡಸ್ತೀನಿ’ ಅಂತ ಹಣಗಿ, ಕತ್ರಿ ಎರಡೂ ಡೆಬ್ಯಾಗ ಒಗದು ಒಂದು ಶ್ಯಾಂಪೂ ಚೀಟ್ ತಗದು ಮುಖಕ್ ಹಚ್ಚಾಕ ಬಂದರುಪ್ಲೆ ‘ಲೇ ಅಲ್ಲಿ ಮಲ್ಲಮ್ ತಂದಿಟ್ಟೀನ್ ನೋಡಲೇ, ಸನ್ಯಾಸಿ ಸುಳೆಮಗನೆ’ ಅನಕೋತ ತನ್ ದೋತರದಲೆ ಬೆನ್ನ ಜಾಡಸಕೊಂಡ ಗೌಡ. ‘ದ್ಯಾಸ್ಹಾರಿದ್ದೆರೀ’ ಅಂದು ಗೌಡ ತಂದಿಟ್ಟಿದ್ದ ಕ್ರೀಮ್ ತಗದು ಗೌಡ್ರ ಉಬ್ಬಿದ ಗಲ್ಲಕ ಹಚ್ಚಿ, ಕತ್ತೀಯೊಳಗ ಒಂದು ಹೊಸ ರೇಜರ್ ಪತ್ತಿ ಹೋಳ ಸೇರಸಿ ದಾಡಿ ಮಾಡಕೋತ, ‘ಅದೇ ಗೌಡ್ರೆ ಈ ಸಲದ ಗ್ರಾಮಸಬೆದಾಗ ನನ್ ಹೆಸರಿಲೆ ಒಂದು ಮನಿ ಹಾಕಸ ಇಚಾರ ಜರ ಗುರುಲಿಂಗಯ್ಯ ಮುತ್ಯೋರ ಕಿವ್ಯಾಗ ನೀವೊಂದಸ್ವಲ್ಪ್ ಹಾಕಿದ್ರ ಬೇಸ್ಯಾಕಿತ್ರಿ’ ಅಂದ. ‘ಮೊನ್ನೆನೆ ಹೇಳಿನಲೆ ಅವರಿಗಿ. ಈ ಸಲ ನಿನಗೊಂದ ಬರಸಿಬಿಡಮ್ ತಗೊ’ ಅಂದಿದಕ ಬಡಬಡ ದಾಡಿ ಮುಗಸಿ ಅವಸರ ಮಾಡಕೋತ ಮನಿಗಿ ಬಂದವ್ನೆ ಕಷ್ಟದ ಡೆಬ್ಬಿ ಮಾಡದಾಗಿಟ್ಟು ದೇಸಾಯೋರ ಮನಿ ಮುಂದಿಂದ್ಹಾಯ್ಸಿ ತನ್ ಹೊಲದ ಕಡಿ ಹೊಂಟ.

ತೆಲ್ಯಾಗ ಬರೇ ಮಗನ ಕಾಲೇಜದೇ ಚಿಂತಿ, ಊರಾಗ ನಾಕ ಮಂದಿ ಕಲತೋರಿಗಿ ಕೇಳಿದ್ರೂನು ಕರ್ಚ ನೀಗಲ್ಲಂತೆ ಹೇಳ್ತಾರ ಮಗ ನೋಡಿದ್ರ ನೀಗಲಾರದಂತದ್ದೇ ಓದಿ ಪಸ್ಟ್ ಬಂದಾನ, ಮಗಾನೇ ನೀಗಲಾರದ ಮಾಡ್ಯಾನಂದ್ರ ನಾ ಯಾಕ ಬಿಡಲಿ?, ಇವನೌನ ಕಡಿಮಿ ಬಿದ್ರ ಸಾಲ ಮಾಡ್ಯಾದ್ರೂ ಚಿಂತಿಲ್ಲ ಸಾಯಿನ್ಸೆ ಮಾಡಸ್ತಿನಿ ಅನಕೋತ ನಿಂಗಯ್ಯ ಮುತ್ಯಾನ ಗುಡಿ ಮುಂದಿನ್ ಹಳ್ಳದ ದಂಡಿ ದಾಟಿ ತನ್ನ ಹೊಲದ ಒಡ್ಡಿಗಿ ಬಂದು ನಿಂತ. ಕರೀ ಮಣ್ಣಿನ ಸಮೃದ್ಧವಾದ ಹೊಲ ಎರಡೆಕರೆ ಇದ್ದರೂನು ಚೊಲೊ ಮಳಿ ಬಂದ್ರ ಎಕರೇಕೆಂಟ ಚೀಲ ಕಟ್ಟಿಟ್ಟ ಬುತ್ತಿ. ಮುಂದಿನ ವರ್ಷ ತೊಗರಿ ದಾಣಿ ಚೊಲೊ ಬಂತದ್ರ ಇವನೌನ ಯೆಲ್ಲಾ ರೊಕ್ಕಾನು ಮಗನ ಸಾಲಿಗೇ ಹೋಗಲಾಕಂತ ಯೋಚನೆ ಮಾಡಿದವ್ನೆ ಹೊಲದ ತುಂಬಾ ತಿರಗಾಡಿ ನಕ್ಕೋತ ಮನಿಗಿ ಬಂದ.

ಇಮಾನ್ ಅಂತ ಮುಗಲಾಗಿನ ಸಣ್ಣ ಇಮಾನ ನೋಡಾಕತ್ತಿದ್ದ ರೇಣುಕಾ ಅದೆಸ್ಟ ಸಲ ಅಂದಾಳೊ ಸಾಲೆನ್ ಮಾಸ್ತಾರಗೋಳ್ ಮುಂದ ನಾ ಸಾಲಿ ಕಲತು ಇಮಾನ ನಡಸ್ತಿನಂತ, ಇಮಾನ ಎಲ್ಲಿರ್ತದೋ ಏನೋ ಮುಗಲಾಗ ಅದರ ಸೌಂಡ್ ಕೇಳಿತಂದ್ರ ಸಾಕು ಇಮಾನ್ ಅನಕೋತ ಇದ್ದಲ್ಲಿಂದ ಓಡಿ ಬಂದು ಮುಗಲನ್ ಇಮಾನ ನೋಡತನ ಬಿಡಾಂಗಿಲ್ಲ. ಮಗಳ ಈ ಹುಚ್ಚತನಕ್ಕ ಬಯ್ಕೋತ ಬಂದ ಸಂಗಮ್ಮ ಒಳಗ ಕರದು ‘ನಿಮ್ಮಪ್ಪನ ಲಿಂಗಪೂಜೇಕ ಒಂದ್ ಕಳಸಿ ನೀರ ತಗೊಂಡ್‌ಬಾ’ ಅಂತ ಕಳಸಿ, ಸಿದ್ರಾಮನ ಜಳಕಕ್ ನೀರಿಟ್ಟು ರೊಟ್ಟಿ ಬಡ್ಯಾಕುಂತ್ಲು. ಜಳಕ ಮುಗಸಿದ ಸಿದ್ರಾಮ ಲಿಂಗಪೂಜೆ ಮಾಡಕೊಂಡು ಊಟಕ್ಕುಂತ. ರೇಣುಕಾ ಊಟಕ ನೀಡಿ ‘ಎಪ್ಪಾ...’ ಅಂದ್ಲು. ಏನಂತ ಕೇಳಿದಕ, ಈ ಸಲ ಎಂಟನೇಕ ಜಾಸ್ತಿ ಕಾಪಿ ಬೇಕಾತಾವ ಮತ್ ಕಂಪಾಸ್ ಅಂತ ಅನದ್ರಾಗೆ ‘ನಾಳೆ ಅಣ್ಣನ ಸಲ್ಯಾಕ ಕಲಬುರಗಿಗಿ ಹೋಗಕತ್ತೀನ್ಲ, ಎಲ್ಲಾ ತರತೀನ್ ತಗೊ’ ಅಂದು ಊಟ ಮಾಡಕತ್ತಿದ.

‘ಈ ಸಲದ ತೊಗರಿ ಪಟ್ಟಿ ಇನ ಕೊಟ್ಟಿಲ್‌ನೋಡ್ ಸೌಕಾರ, ಮತ್ ನಾಳೆ ಶಾಣಪ್ಪನ ಸಾಲಿಗಿ ಹೆಂಗ ಮಾಡ್ತಿ? ಈಗೆ ಸೌಕಾರನ ಕಡಿ ಹೋಗಿ ಬಾ’ ಅಂತ ಸಂಗವ್ವ ಹೇಳಿದಕ ‘ಹೋತಿನಿ ಈಗ್ ಅಲಿಗೆ ನಡದೀನಿ, ನೋಡಿದೆಲ ಇವತ ಗೌಡನ ಬಿಟ್ಟು ಬ್ಯಾರೆ ಯಾರ್ ಮನಿಗೆರೆ ಕಸ್ಟಕ್ ಹೋಗಿನ್ಯಾ? ಶಾಣಪ್ಪ ಪಾಸಾಗಿಂದ್ಹಿಡದು ಇಲಿತನ ಚಂದ ನಿದ್ದಿ ಇಲ್ಲ, ಹೆಂಗರ ಮಾಡಿ ರೊಕ್ಕ ಜಮಾಸದೇ ಒಂದು ದೊಡ್ಡ ಚಿಂತಿ ಆಗ್ಯಾದ, ಅಚ್ಚಿ ವರ್ಷ ನಮಗ ಸಾಲ ಕೊಟ್ಟ ಹೊಸಮನಿ ಶಂಕ್ರಪ್ಪ ಸೌಕಾರ ಮಗನು ಬಕ್ಕಳ ಕಲತು ಕಲಬುರಗಿ ದೊಡ್ಡ ಕಾಲೇಜದಾಗ ನೌಕ್ರಿ ಮಾಡಾಕತ್ತಾನಂತ. ಅವನ ಪೋನ್ ನಂಬರನು ತಗೊಂಡ್ ಬರ್ತಿನಿ. ಕರ್ಚ ಗಿರ್ಚ ಎಸ್ಟ್ ಹಿಡಿತದಂತ ಕೇಳಿದ್ರಾಯ್ತು, ನೋಡಮ್, ದೇವ್ರು ಎಲಿತನ ಹಚ್ಚತಾನ ಅಲಿತನ ಕಟ್‌ಪಟ ಮಾಡಿದ್ರಾಯ್ತು’ ಅಂದ.

‘ಏಟ್ ಕೊಡತಾನೊ ಏಟ್ ಬಿಡತಾನ್ನೋಡು, ಗೊಬ್ಬರದು ಎಣ್ಣೀದು ಎಲ್ಲಾ ಮುರಕೊಂಡು ಕೊಟ್ರ ಏಟಾಗತದ ಲೆಕ್ಕಾರೆ ಮಾಡಿದ್ಯಾ?’ ಅಂದ್ಲು ಸಂಗಮ್ಮ. ‘ಎಲ್ಲಾ ಅಲ್ಲೇ ನೋಡತೀನಿ, ಸೌಕಾರ ಎಲ್ಲಾ ಲೆಕ್ಕ ಹಚ್ಚಿಟ್ಟಾನ. ಹೋಗಿಬರ್ತಿನಿ’ ಅಂತ ಕೈ ತೊಳಕೊಂಡ ಗಂಗಾಳಕ ನಮಸ್ಕಾರ ಮಾಡಿ ಎದ್ದು ಸಂಗಣ್ಣ ಸೌಕಾರನ ಅಂಗಡಿಕಡಿ ನಡದ. ದಾರ್‍ಯಾಗ ಒಳ್ಳೆಣ್ಣಿ ಕಿಟ್ಲಿ, ಸಕ್ರಿ ಹಿಡಕೊಂಡ ನಡದಿದ್ದ ಪರಮಯ್ಯನವರ ಮಗ, ಸಿದ್ರಾಮಗ ನೋಡಿ ‘ಏ ಮಾಮ, ಎಸ್ಟ್ ಹುಡಕೀನೊ ಮಾರಾಯ ಕಿಲ್ ನೋಡು ತೆಲ್ಯಾನ ಕೂದಲ ಕಿಂವ್ಯಾಗ ಹೋಲಕತ್ತಾವ ನಮ್ಮಪ್ಪ ಬಯ್ಲಾಕತ್ತಾನ’ ಅಂದ. ‘ಇನಾ ಎರಡ ದಿನಾ ಹೋಲ್ರಿ ಅಳೆ ಮಾಡಮು’ ಅನಕೋತ ಅಂಗಡಿ ಸಮೀಪ ಬಂದು ನಿಂತ್ಕೊಂಡ.

ಅಂಗಡಿ ಎದುರ ಕೆಂಪನ ಲೆಕ್ಕದ ಖಾತೆ ತೆಕ್ಕೊಂಡು ಪೂಜಾರಿ ನಂದಪ್ಪಗ ರೊಕ್ಕ ಎಣಿಸಿ ಕೊಡಾಕತ್ತಿದ್ದ ಸಂಗಣ್ಣ ಸೌಕಾರ ಹಂಗೆ ವಾರಿಗಣ್ಣಿಲೆ ಸಿದ್ರಾಮಗ ನೋಡಿ ಎರಡ ಸಲ ತೆಲಿ ಮ್ಯಾಗೆತ್ತಿ ಕೆಳಗಿಳಿಸಿ ಬಾ ಅಂತ ಸನ್ನಿ ಮಾಡಿದಕ ಸ್ವಲ್ಪ ಸಮೀಪ ಹೋಗಿ ನಿಂತ್ಗೊಂಡ. ರೊಕ್ಕೆಣಸದು ಮುಗದಮ್ಯಾಲ ಸಿದ್ರಾಮನ ಕಡಿ ಕಣ್ ಹೊಳ್ಳಿಸಿದ ಸಂಗಣ್ಣ ಸೌಕಾರ ‘ಏನ್ ಸಿದ್ರಾಮ... ಕುಂದ್ರು’ ಅಂದ. ‘ಅದೇರಿ ಸೌಕಾರ ತೊಗರಿ ಪಟ್ಟೀ’ ಅಂತ ದೀರ್ಘವಾಗಿ ಎಳೆದಕ, ‘ಇನೊಂದ ನಾಕೈದಿನ ಹೋಗ್ಲಿ ಕೊಡಮ್’ ಅಂದ ಸೌಕಾರ. ಅದಕ ಸಿದ್ರಾಮ ‘ನಾಳೆ ಜರ ಮಗನ ಸಾಲಿಸಲ್ಯಾಕ ಕಲಬುರಗಿಗಿ ನಡದಿದ್ಯರಿ ಸೌಕಾರ’ ಅಂದ. ‘ನಿನ್ ಮಗ ಸಾಲಿಗಿ ಪಸ್ಟ್ ಬಂದಾನಂತಲೋ ಸಿದ್ರಾಮ, ಹುಡುಗನ ಸಾಲಿಸಲ್ಯಾಕಂದ್ರ ಆಯ್ತೊಗೊ. ಸಂಜಿ ಕಡಿ ಬಾ ಕೊಡತಿನಿ’ ಅಂತ ಸೌಕಾರ ಕೊಟ್ಟ ಭರೋಸಾಕ ಖುಷಿಯಿಂದ ಮನಿಗ ಬಂದು ಹೇಂಡ್ತಿಗಿ ಹೇಳಿ ಗುರಲಿಂಗಯ್ಯ ಮುತ್ಯೋರ ಮನಿಕಡಿ ವಿಚಾರ ಮಾಡಕೋತ ನಡದ. ಗೌಡರ ಮನಸ ಮಾಡಿದ್ರಿಂದಲೆ ಪಂಚಾಯ್ತಿ ಅಧ್ಯಕ್ಷ ಆಗಿದ್ದ ಮುತ್ಯೋರು ಗೌಡ್ರ ಮಾತ್ ಮೀರಲ್ಲಂತ ಇಸ್ವಾಸದ, ಈ ಸಲದ ಗ್ರಾಮಸಭಾದಾಗ ನನ್ ಹೆಸರಿನ ಮ್ಯಾಲ ಒಂದ ಮನಿ ಬರದ್ರ ತನ್ ಹಳಿ ಮನಿ ಜಾಗದಾಗ ಒಂದೆರಡು ಹೊಸ ಕೋಲಿಗೋಳು ನಿಂತಿದ್ದ ಕನಸ ಕಾಣಕೋತ ಗುರಲಿಂಗಯ್ಯ ಮುತ್ಯೋರ ಮನಿಗಿ ಬಂದ. ಮ್ಯಾಳಿಮ್ಯಾಲ ನಿಂತು ಮೊಬೈಲ್‌ದಾಗ ಮಾತಾಡಿ ಕೆಳಗ ಬಂದ ಮುತ್ಯೋರು ಸಿದ್ರಾಮಗ ನೋಡಿ ‘ಏನಲೆ ಸಿದ್ರ್ಯಾ ಬಂದ ಸುದ್ದಿ?’ ಅಂದ್ರು. ‘ಅದೇರಿ ಮುತ್ಯೋರು ನಾಳಿನ್ ಗ್ರಾಮಸಭಾದಾಗ ನನಗೊಂದ ಮನಿ ಬರಸ್ತಿನೆಂದಿದ್ರೆಲ. ಅದೇ ಒಂದ ಮಾತ ಕೇಳಿದ್ರಾಯ್ತಂತ ಬಂದಿದ್ದೆರಿ’ ಅಂದ, ‘ಗೌಡ್ರುನು ಹೇಳ್ಯಾರಲೆ ಮನ್ನೆ, ಈ ಸಲ ಬರಸಮ್ ತೊಗೊ’ ಅಂದಿದಕ ‘ಆಯ್ತರಿಯಪ್ಪ’ ಅಂದವ್ನೆ ‘ಚಾ ಕುಡದು ಹೋಗಲೆ’ ಅಂದಿದಕ ‘ಇಲ್ರಿ ಮುತ್ಯೋರು ಕುಡದೆ ಬಂದಿನ್ರಿ’ ಅಂತ ತನ್ ಮನಿಕಡಿ ನಡದ.

ನಸಕಿನ್ಯಾಗ ಎದ್ದು ಸಂಗಮ್ಮ ಮಾಡಿಟ್ಟ ಬುತ್ತಿ ತಗೊಂಡು ಆರರ ಬಸ್ಸಿಗಿ ಸಿದ್ರಾಮನ ಜೊತಿಗಿ ತನ್ ಸಾಲಿ ಕಾಗದ ಪತ್ರಗಳ ಪ್ಲಾಸ್ಟಿಕ್ ಚೀಲ ಹಿಡಕೊಂಡ ಶಾಣಪ್ಪ ಖುಷಿಲಿಂತ ಬಸ್ ಹತ್ತಿದ. ಕಲಬುರಗಿಗಿ ಟಿಕಿಟ್ ತಗೊಂಡ್ ಕುಂತವ್ನೆ ಸಿದ್ರಾಮ ಯೋಚನೆ ಮಾಡಕತ್ತ, ಗೊಬ್ಬರ ಎಣ್ಣಿ ಎಲ್ಲಾ ಬಾಕಿದು ಲೆಕ್ಕ ಹಾಕಿ ತಗದ್ರು ಒಂದು ನಲವತ್ತು ಸಾವಿರರೆ ಕೈಗಿ ಹತ್ತಾವಂತ ಮಾಡಿದ್ರ ಬಡ್ಡಿ ಗಿಡ್ಡಿ ಅಂತ ಸೇರಸಿ ಮೂವತ್ತೈದ ಸಾವಿರ ಕೊಟ್ನಲ ಸೌಕಾರ, ಈ ಸಲದ ತೊಗರಿ ದಾಣಿನು ನಾಕ್‌ಸಾವಿರ ಮ್ಯಾಲ ಜಿಗಿಲಿಲ್ಲ ಇವನೌನ್ ಏಟ್ ಬೆಳದ್ರು ಆಟೆ ಅದ ಅಂದು ಮಗನ ಕಣ್ಣಾಗಿದ್ದ ಪಿಚ್ ತಗದು ತನ್ ಧೋತರಲೆ ಮಗನ ಕಣ್ಣ ವರಸಿ ಅಂಗಿ ಕಿಸೆದಂದು ಡೈರಿ ತಗದು ಯಾವದೊ ನಂಬರ್ ಹುಡುಕಿ ಈ ನಂಬರ್ ವತಟಿ ಬರದು ಇಟಕೊ ಅಂದು ಮಗನಿಗಿ ಕೊಟ್ಟ.

ಬಸ್ ಜೇವರಗಿ ದಾಟಿ ಕಲಬುರಗಿ ಬರದಕ ಎಂಟೂವರಿ ಆಗಿತ್ತು, ಮಗನಿಗಿ ಕರಕೊಂಡ್ ಇಳದವನೆ ಆ ನಂಬರ್ ತೋಂಡು ಕಾಯಿನ್‌ಬಾಕ್ಸ್‌ದಿಂದ ಶಿವು ಸೌಕಾರಗ ತಾನು ಬಂದಿದ್ದು ತಿಳಿಸಿದ. ಅವಾ ಹತ್ತು ನಿಮಿಷದಾಗ ಬಂದು ಇಬ್ರಿಗಿ ಕರಕೊಂಡು ಸದ್ಗುರು ಕಾಲೇಜ ಮುಂದ ಬಂದು ನಿಂತ. ‘ನೋಡು ಸಿದ್ರಾಮಣ್ಣ ಗುಲ್ಬರ್ಗಾದಾಗ ನಾಕೈದು ಕಾಲೇಜ ಬಾಳ ಫೇಮಸ್ಸವ, ಅದ್ರಾಗ ಸದ್ಗುರು ಕಾಲೇಜನು ಒಂದು, ಇದ್ರಾಗ ನಿನ್ ಮಗನಿಗಿ ಎಡ್ಮಿಶನ್ ಸಿಕ್ತಂದ್ರ ಭಾರಿ ಆಗ್ತದ’ ಅನಕೋತ ‘ಪರ್ಸೆಂಟೇಜ್ ಎಸ್ಟಾಗ್ಯಾದ’ ಅಂತ ಶ್ಯಾಣಪ್ಪನ ಕಡಿ ನೋಡಿದ, ಶಾಣಪ್ಪ ‘ಎಪ್ಪತ್ತಾರ್ ಆಗ್ಯಾದ್ರಿ’ ಅಂದ, ಹಂಗಂದಿದಕ ಶಿವು ಸೌಕಾರಗ ಆಶ್ಚರ್ಯ ಅನಿಸಿ ‘ಎಲೆ ಇವನ ಸಾಲಿಗಿ ಪಸ್ಟ್ ಬಂದಾನಂದ್ರಲ ಎಪ್ಪತ್ತಾರೆ ಹೈಯಸ್ಟೇನಲೆ?’ ಅಂತ ಕೇಳಿದಕ ಶಾಣಪ್ಪ ‘ಹೂಂ’ ಅಂತ ತೆಲಿ ಅಲ್ಲಾಡಿಸ್ದ. ಯಾಕ್ರಿ ಸೌಕಾರ ನಂಬರ್ ಕಡಿಮಿ ಆದುವೆನ್ರಿ? ಗಾಬರಿದಿಂದ ಕೇಳಿದ ಸಿದ್ರಾಮ. ಶಿವು ಸೌಕಾರ ನಕ್ಕೋತ ‘ಸಿದ್ರಾಮ, ನಿನ್ ಮಗನಿಗಿ ಇಂಥ ಕಾಲೇಜಗೋಳದಾಗ ಸೀಟ್ ಸಿಗದೇ ಭಾಳ ಕಷ್ಟದಪಾ, ಯಾಕಂದ್ರ ಈ ಕಾಲೇಜಗೋಳದಾಗೆಲ್ಲಾ ತೊಂಬತ್ತರ ಮ್ಯಾಲ ಯಾರ ನಂಬರ್ ತೋಂಡಿರ್ತಾರ ಅವ್ರಿಗಷ್ಟೆ ತಗೋತಾರ’ ಅಂದ ಶಿವು ಸೌಕಾರನ ಮಾತಗೋಳ್ ಕೇಳಿದ ಸಿದ್ರಾಮ ‘ಹಂಗಾದ್ರ ಹೆಂಗ್ರಿ ಸೌಕಾರ?’ ಅಂದ.

‘ಇದೇ ನೋಡಪಾ ನಮ್ ಹಳ್ಳಿ ಮಂದೀಗಿ ಮಾಡ ದೊಡ್ಡ ಧೋಕಾ ಅಂದ್ರ, ಇವನೌನ ಇವರು ಹುಷಾರಿದ್ದ ಮಕ್ಕಳೀಗಿ ತಗೊಂಡು ಅದೇನ್ ಹುಷಾರ್ ಮಾಡತಾರೊ, ಹಳ್ಳ್ಯಾಗ ಕನಡಾ ಮೀಡಿಯಮ್‌ದಾಗ ಕಲತು ಪಾಸಾಗಿ ಬಂದಿರೋ ಮಕ್ಕಳಂದ್ರ ಕಿಮ್ಮತ್ತೇ ಕೊಡಲ ಸಿದ್ರಾಮಣ್ಣ, ಇರ್ಲಿ ನೋಡಮ್ಮಂತ. ರೊಕ್ಕ ಎಸ್ಟ್ ತಂದೀದಿ?’ ಅಂತ ಕೇಳಿದಕ ‘ಮೂವತ್ತೈದ ಸಾವಿರ ಅದಾವ್ರಿ ಸೌಕಾರ’ ಅಂದ ಸಿದ್ರಾಮ. ‘ಏ ಸಿದ್ರಾಮಣ್ಣ ಈ ರೊಕ್ಕ ಎಕಡಿನೂ ಹತ್ತಂಗಿಲ್ಲೊ, ಗುಲಬರ್ಗಾದಂತಲ್ಲಿ ಇಂತಾ ಕಾಲೇಜದಾಗ ಸೈನ್ಸ್ ಕಲಸದ್ರಾಗ ನಿನ್ ಬೆವರಿನ ನೀರ ಸಂಗಯ್ಯನ ಹೊಳೀಗಿ ಹರಿತಾವ, ಬೆವರ ಸುರಿಸಿ ದುಡದಿರೊ ನಿಮ್ಮಂತೋರ್ ರೊಕ್ಕಕ್ಕ ಇಂತಾ ಕಾಲೇಜಗೋಳದಾಗ ಕಿಮ್ಮತ್ತೇ ಇಲ್ಲ’ ಅಂದಿದಕ. ‘ಮತ್ ಹೆಂಗ್ ಮಾಡದ್ರಿ ಸೌಕಾರ?’ ಅಂತ ಕಣ್ಣಗಲ ಮಾಡಿದ ಸಿದ್ರಾಮಗ ಕರಕೊಂಡು ‘ಏನ್ಯಾಕ ಆಗಲ್ಯಾಕ ಕೇಳಕೊಂಡರೆ ಬರಮಂತ’ ಅಂದಕೋತ ಮೂವೋರು ಕಾಲೇಜಿನ್ಯಾಗ ಮೂರ್ನಾಲ್ಕಡಿ ಕುರ್ಚಿ ಟೇಬಲ್ ಹಾಕೊಂಡು, ಬಂದಿರೊ ಮಂದಿಗೆಲ್ಲಾ ಏನೇನೋ ಹೇಳಕೋತ್ ಕುಂತಿದ್ದ ಹೆಣ್ಮಕ್ಳ ಎದುರಿಗಿ ಬಂದು ನಿಂತ್ರು. ಶಾಣಪ್ಪನ ಮಾರ್ಕ್ಸ್ ಕಾರ್ಡ್ ನೋಡಿದ ಹೆಣ್ಮಗಳು ಒಂದು ಕಾಗದ ಕೊಟ್ಟು ‘ಈ ಅಪ್ಲಿಕೇಶನ್ ತುಂಬಿ ಕೊಟ್ ಹೋಗ್ರಿ, ನಾಳೆ ಸೆಲೆಕ್ಷನ್ ಲಿಸ್ಟ್ ಹಚತಾರ ಆಗಿತ್ತಂದ್ರ ಎಡ್ಮಿಷನ್ ಮಾಡ್ರಿ, ಒಂದು ವರ್ಷಿಗಿ ಒಂದು ಲಕ್ಷದ ಹತ್ತು ಸಾವಿರ ರುಪಾಯಿ ಫೀಸ್ ಆಗತದ’ ಅಂತ ಒಂದೇ ಉಸಿರಿನ್ಯಾಗ ಬಾಹ್ಯಾಟ್ ಮಾಡಿದಂಗ ಹೇಳಿಬಿಟ್ಲು.

ವಾಪಸ್ ಹೊರಗ ಕರಕೊಂಡು ಬಂದ ಶಿವು ಸೌಕಾರ ‘ಈ ಬಡ್ಡಿಮಕ್ಳು ಬಂದಿರೊ ಮಂದಿಲಿಂತ ಅಪ್ಲಿಕೇಶನ್ ಫೀಸ್ ಅಂತ ಎರಡೆರಡು ನೂರು ರುಪಾಯಿ ಸುಲಿತಾರ, ಕೊನಿಗಿ ಯಾರ ಶ್ರೀಮಂತರ ಮಕ್ಕಳಿರ್ತಾರೋ, ಅವರಿಗಿ ಸೀಟ್ ಕೊಟ್ಟು ಅವ್ರು ಕೊಡೊ ರೊಕ್ಕದಾಗ ಕಾಲೇಜ ನಡಸ್ತಾರ. ಎಷ್ಟು ಹಳ್ಳಿಮಕ್ಕಳು ಸರಕಾರಿ ಸಾಲ್ಯಾಗ ಓದಿ ತೊಂಬತ್ತರ ಮ್ಯಾಲ ನಂಬರ್ ತಗೋತಾರ್ ಹೇಳು ಸಿದ್ರಾಮಣ್ಣ?,  ಇದೆಲ್ಲ ಬಿಟ್‌ಬಿಡು, ಅಚ್ಚಿ ವರ್ಷ ನೆರೆ ಹಾವಳಿ ಬಂದಿದಕ ಬೆಳಿಗೋಳೆಲ್ಲಾ ಲಾಸಾಗಿ ನಮ್ಮಪ್ಪನ ಬಲ್ಲಿ ಮಾಡಿದ ನಿನ್ ಸಾಲದ ಲೆಕ್ಕನೆ ಎರಡು ಲಕ್ಷ ದಾಟ್ಯಾದ, ಅದಕೆ ಸುಮ್ ಅಲ್ಲೇ ಜೇವರ್ಗ್ಯಾಗ ಸರಕಾರಿ ಕಾಲೇಜದಾಗ ಆರ್ಟ್ಸ್ ಮಾಡಸಿ, ಹೆಂಗರೆ ಮಾಡಿ ಸಾಲ ತೀರಸ ಕಡೆ ಲಕ್ಷ್ಯ ಕೊಡು’ ಅಂತ್ಹೇಳಿ ‘ಈ ಸೈನ್ಸ್ ಗೀನ್ಸ್ ಎಲ್ಲಾ ನಿಮ್ಮಂತೋರ್ ಮಕ್ಕಳಿಗಲ್ಲ’ಅಂದು ಸಮಾಧಾನದ ಮಾತ ಹೇಳಿ, ಸಿದ್ರಾಮಗ ಹೊಳ್ಳಿ ಜೇವರ್ಗಿ ಬಸ್ಸಿಗಿ ಕುಂದರ್ಸಿ ಹೋದ.

ಕಲಬುರಗಿಲಿಂತ ಜೇವರ್ಗಿ ಬರತನ ಏನೇನೋ ಭಾಳ ಗಂಭೀರವಾಗಿ ವಿಚಾರ ಮಾಡಿದ ಸಿದ್ರಾಮನ ಮುಖ ಏನೋ ದೊಡ್ಡ ನಿರ್ಧಾರಕ್ಕ ಬಂದಂಗ ಕಾಣತಿತ್ತು. ಜೇವರಗಿದಾಗ ಇಳದರುಪ್ಲೆ ಗೌರ್ಮೆಂಟ್ ಕಾಲೇಜದಾಗ ಎಡ್ಮಿಷನ್ ಮಾಡಸಿ, ಶಂಕ್ರಪ್ಪ ಸೌಕಾರ ಹೇಳಿದ ವೀರಶೈವ ಹಾಸ್ಟೆಲ್‌ನ್ಯಾಗ ಮಗನೀಗಿ ಬಿಟ್ಟು ರಾತ್ರಿ ಮುಕ್ಕಾಮ್ ಬಸ್ಸಿಗಿ ಊರಿಗಿ ಬಂದವ್ನೆ, ಹೆಂಡ್ತಿಗುಡ ಗಂಭೀರವಾಗಿ ಮಾತ ಹೇಳಕತ್ತ. ‘ವರ್ಷದ ಹಿಂದ ತ್ವಾಡೆ ದಿನ ಆ ದೌಲತ್ ಸಾಬ ಗಂಟಬಿದ್ದು ಹೇಳ್ತಿದ್ದ ನಿನ್ನ ಅಣ್‌ತಮ್ಮಂದಿರೆಲ್ಲಾ ಕಟಿಂಗ್‌ಶಾಪ್ ಹಾಕೊಂಡು ರೊಕ್ಕ ಎಣಿಸೊ ಟೈಮಿನ್ಯಾಗ ಯಾಕ ಬೇಕ್ ನಿನಗ ಮನಿ ಮನಿ ತಿರಗ್ಯಾಡಿ ಕಷ್ಟ ಮಾಡದು? ಜೀವನಾಪೂರ್ತಿ ಹಿಂಗೆ ಮಾಡಿದ್ರ ರೊಕ್ಕ ಗಳಸದು ಯವಾಗ ಕಲಿಬೆಕು? ಊರಾಗ ನಾಕ್‌ಮಂದಿ ಪ್ರೀತಿ ಗಳಸಿದ್ರು ಅದು ಹೆಚ್ಚಿಗಿ ಗುಲಾಮಿತನಕ್ಕ ಬಲಿಯಾತದ, ಮನಷ್ಯನ್ ಬಲ್ಲಿ ಇರದು ಯಾವದ್ಯಾಕ ಕಲಾ ಆಗಲ್ಯಾಕ ಅದ್ರಿಂದ ಶ್ರೀಮಂತ ಆಗೋದು ಕಲಿಬೇಕೊ ಸಿದ್ರಾಮಣ್ಣ, ಸುಮ್ ನಾ ಹೇಳಿದಂಗ ಹೊಲ ಯಾರಿಗೆರ ನಂಬಿಕಸ್ಥರಿಗಿ ಗುತ್ತಗಿ ಕೊಟ್ಟು ಪೂಣೆಕ ದುಡ್ಯಾಕ ಬಂದಬಿಡು, ಮೊದಲ ನನ್ ಜಾಗದಾಗೆ ಇದ್ದು ಅಲ್ಲೆ ಕಟಿಂಗ್‌ಶಾಪ್‌ನ್ಯಾಗ ದುಡದು ಆಮ್ಯಾಲ ನೀನೆ ಒಂದು ಕಟಿಂಗ್‌ಶಾಪ್ ಹಾಕಿದೆಂದ್ರ ರೊಕ್ಕನೆ ರೊಕ್ಕ, ನೀ ಯೇನ ಬಯಸಿದ್ದು ತಕೊಬಹುದು, ಮುಂದ ನಿನ್ ಮಕ್ಳಿಗಿ ನಾಕ ದುಡ್ಡರೆ ಆತಾವ...’ ಅಂತೆಲ್ಲಾ ದೌಲತ್‌ಸಾಬನ ಮಾತಗೋಳ್ ನೆನಪ್ ಮಾಡಕೊಂಡ.

‘ಈ ಹಳ್ಳಿನ್ಯಾಗಿದ್ರ ಒಂದು ಸೊಂತ ಮನಿ ಕಟ್ಸಗೊಳಾಕನು ಗೌಡ್ರು, ಸೌಕಾರ್ರು, ಸ್ವಾಮಿಗೋಳದು ಹಸ್ತ ಬೇಕಾತದ. ನೋಡು ಸಂಗಿ, ನಾವು ಸಾಲ ತಗೊಂಡಿದ್ದು ನಮ್ ಮಗನಿಗಿ ಹೇಳಾರದೆ ಮುಚ್ಚಿಟ್ಟೀವಿ, ಆದರ ಶಂಕ್ರಪ್ಪ ಸೌಕಾರ ಸಾಲ ಕೊಟ್ಟಿದ್ದು ಮಗ ಶಿವು ಸೌಕಾರನ ಮುಂದ ಬಿಚ್ಚಿಟ್ಟಾನ. ಅಪ್ಪ ಕೊಟ್ಟಿದ್ದ ಸಾಲ ಮಗ ನೆಪ್ ಮಾಡಿಕೊಡತಾನಂದ್ರ ನಮ್ ಸಾಲ ಜಲ್ದಿ ತೀರಸದೇ ಚೊಲೊ, ಮುಂಜಾನೆದ್ದು ನಮ್ ಮುಖ ನೋಡಲಾರದ ಮಂದಿಗಿ ಸಿದ್ಧೇಶ್ವರ ಸ್ವಾಮಿಗೋಳು ಬಂದು ಬಸವಣ್ಣ ದಿನಾ ಮುಂಜಾನೆದ್ದು ಮೊದಲ ಹಡಪದ ಅಪ್ಪಣ್ಣನ ಮಾರಿ ನೋಡತಿದ್ನಂತ ಹೇಳಿದ್ದಕ ಈ ಊರ ಮಂದಿ ಮನಿ ಮನಿ ತಿರಗಿ ಕಷ್ಟ ಮಾಡತಿದ್ದೆ. ಆದರ ಯಾವೊಬ್ನುನೂ ಬಸವಣ್ಣನಂಗ ನನ್ ಮುಖ ನೋಡಲಿಲ್ಲ. ಅದಕೆ ಈ ಊರ ಬಿಟ್ಟುಬಿಡದೇ ಚೊಲೊ ಅನ್ಸಕತ್ತದ. ಮುಂದ ಒದ್ಯಾಡಾ ಬದಲಿ ಪುನಾಕ ಹೋಗಿ ದುಡದು ಮನಷರ್ ಆಗಬೋದು’ ಅಂತಾ ರಾತ್ರಿ ಪೂರಾ ಮಾತಿನ್ಯಾಗೆ ಕಳದ ಗಂಡ ಹೆಂಡತಿ, ಮರದಿನ ಸಂಜಿ ಆರರೊಳಗ ಮಗಳೀಗಿ ಕರಕೊಂಡು ಗಂಟಗೋಳ ಸಮೇತ ಕಲಬುರಗಿ ರೈಲ್ವೆ ಸ್ಟೇಷನ್‌ಗೆ ಬಂದು ಪೂನಾಕ ಹೋಗೊ ರೈಲಿನ ಪ್ಯಾಸಿಂಜರ್ ಬೋಗ್ಯಾಗ ಒತ್ಯಾಡಕೋತ ಹೆಬ್ಬಿದರು. ಗಂಟಗೋಳಿಡಾಕ ಎಲ್ಲಿನು ಜಾಗಿರ್ಲಾರದಕ ಸಂಡಸ್ ರೂಮಿನ ಎದುರಿನ ಸಂದ್ಯಾಗಿಟಕೊಂಡು ಬಾಕಲದಾಗೆ ಕುಂತ್ರು. ರೈಲು ಹೊಂಟಬಿಡತು, ರೈಲಿನ ಬಾಕಲ ಹೊರಗ ಕಣ್ ಬಿಟಕೊಂಡು ಕುಂತಿದ್ದ ರೇಣುಕಾಗ ಹಾರಕೋತ್ ಹೋಗಾಕತ್ತಿದ್ದ ಇಮಾನ ಕಾಣಸಾಕತ್ತಿತ್ತು, ಸಪ್ಪಳ ಮಾತ್ರ ಹಳಿಮ್ಯಾಲ ಹೊಂಟಿದ್ದ ರೈಲಿಂದು ಕೇಳಾಕತ್ತಿತ್ತು. ಇಮಾನ ರೈಲಿನ ಬಾಕಲದಾಗಿಂದು ಹಿಂದಕ ಸರೀತು, ರೈಲಿನ ವೇಗ ಜಾಸ್ತಿ ಆಗ್ತಾ ಹೊಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT