ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಜಿಲ್ಲೆಯಲೂ ಆಯುರ್ವೇದ ಆಸ್ಪತ್ರೆ

Last Updated 17 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ:‘ದೇಶದ ಪ್ರತಿ ಜಿಲ್ಲೆಯಲ್ಲೂ ಆಯುರ್ವೇದ ಆಸ್ಪತ್ರೆಯನ್ನು ಆರಂಭಿಸಲಾಗುತ್ತದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದರು.

ಆಯುರ್ವೇದ ದಿನವಾದ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೆಹಲಿಯಲ್ಲಿ ಸ್ಥಾಪಿಸಲಾಗಿರುವ ಅಖಿಲ ಭಾರತ ಆಯುರ್ವೇದ ಸಂಸ್ಥೆಯನ್ನು (ಎಐಐಎ) ದೇಶಕ್ಕೆ ಸಮರ್ಪಿಸಿ ಅವರು ಮಾತನಾಡಿದರು.

‘ಎಲ್ಲಾ ಜಿಲ್ಲೆಗಳಲ್ಲೂ ಆಯುರ್ವೇದ ಆಸ್ಪತ್ರೆಗಳನ್ನು ಸ್ಥಾಪಿಸುವ ಬಗ್ಗೆ ಆಯುಷ್ ಸಚಿವಾಲಯ ಯೋಜನೆ ಸಿದ್ಧಪಡಿಸುತ್ತಿದೆ. ಮೂರು ವರ್ಷಗಳಲ್ಲಿ ದೇಶದಾದ್ಯಂತ 65 ಆಸ್ಪತ್ರೆಗಳನ್ನು ಆರಂಭಿಸಲಾಗಿದೆ. ದೇಶದ ವಿವಿಧೆಡೆ ಆಯುಷ್ ‌ಗ್ರಾಮಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ. ಆಯುರ್ವೇದವನ್ನು ಉತ್ತೇಜಿಸುವ ಸಲುವಾಗಿ ಕಾರ್ಪೊರೇಟ್ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ನಿಧಿಯನ್ನು ಆಯುಷ್‌ನ ಈ ಯೋಜನೆಗಳಲ್ಲಿ ವಿನಿಯೋಗಿಸಲು ಮುಂದಾಗಬೇಕು’ ಎಂದು ಅವರು ಕರೆ ನೀಡಿದರು.

‘ತನ್ನ ಇತಿಹಾಸ ಮತ್ತು ಪರಂಪರೆಯನ್ನು ಗೌರವಿಸದಿದ್ದರೆ ಯಾವುದೇ ದೇಶವೂ ಮುಂದುವರೆಯಲು ಸಾಧ್ಯವಿಲ್ಲ. ಬ್ರಿಟಿಷರ ಕಾಲದಲ್ಲಿ ಆಯುರ್ವೇದವನ್ನು ಕಡೆಗಣಿಸಲಾಗಿತ್ತು. ಸ್ವಾತಂತ್ರ್ಯ ಬಂದ ನಂತರವೂ ಆಯುರ್ವೇದವನ್ನು ಕಡೆಗಣಿಸಲಾಯಿತು. ಆದರೆ ನಾವು ಅದಕ್ಕೆ ಆದ್ಯತೆ ನೀಡುತ್ತಿದ್ದೇವೆ. ಸಾರ್ವಜನಿಕ ಆರೋಗ್ಯ ಸೇವೆಯ ಜತೆಗೆ ಆಯುರ್ವೇದವನ್ನು ವಿಲೀನ ಮಾಡುತ್ತೇವೆ’ ಎಂದು ಅವರು ಘೋಷಿಸಿದರು.

‘ಆಧುನಿಕ ಅಲೋಪಥಿ ವೈದ್ಯಕೀಯ ಪದ್ಧತಿಯ ಔಷಧಗಳು ಮತ್ತು ಚಿಕಿತ್ಸೆಗಳು ತಕ್ಷಣವೇ ಪರಿಣಾಮ ಬೀರುತ್ತವೆ. ಜತೆಗೆ ಅವುಗಳಿಂದ ಅಡ್ಡ ಪರಿಣಾಮಗಳಾಗುವ ಸಾಧ್ಯತೆಯೂ ಕಡಿಮೆ. ಆದರೆ ಆಯುರ್ವೇದದ ಚಿಕಿತ್ಸೆಗಳು ನಿಧಾನಗತಿಯಲ್ಲಿ ಪರಿಣಾಮ ಬೀರುತ್ತವೆ. ತಕ್ಷಣವೇ ಪರಿಣಾಮ ಬೀರುವಂತೆ ಮತ್ತು ಅಡ್ಡಪರಿಣಾಮಗಳು ಉಂಟಾಗದಂತೆ ಆಯುರ್ವೇದದ ಔಷಧಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯಬೇಕು. ಇದಕ್ಕಾಗಿ ಈ ಕ್ಷೇತ್ರದ ಪರಿಣತರು ಶ್ರಮಿಸಬೇಕು’ ಎಂದು ಅವರು ಕರೆ ನೀಡಿದರು.

***
₹ 156 ಕೋಟಿ – ಎಐಐಎ ಸ್ಥಾಪನೆಯ ವೆಚ್ಚ

10 ಎಕರೆ – ಎಐಐಎ ಹರಡಿಕೊಂಡಿರುವ ಭೂಭಾಗದ ವಿಸ್ತೀರ್ಣ

700 – ರೋಗಿಗಳಿಗೆ ಏಕಕಾಲದಲ್ಲಿ ಚಿಕಿತ್ಸೆ ನೀಡುವ ಸಾಮರ್ಥ್ಯ

–––

ಸಂಸ್ಥೆಯು 2015ರ ಅಂತ್ಯದಲ್ಲೇ ತಾತ್ಕಾಲಿಕ ಕಟ್ಟಡದಲ್ಲಿ ಕಾರ್ಯಾರಂಭ ಮಾಡಿತ್ತು. 2016ರೊಂದರಲ್ಲೇ ಸಂಸ್ಥೆ 82,962 ರೋಗಿಗಳಿಗೆ ಚಿಕಿತ್ಸೆ ನೀಡಿದೆ. ಈಚೆಗಷ್ಟೇ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದ ಸಂಸ್ಥೆಯನ್ನು ಮಂಗಳವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.

***
* ಅಖಿಲ ಭಾರತ ಆಯುರ್ವೇದ ಸಂಸ್ಥೆ ಉದ್ಘಾಟನೆಯಲ್ಲಿ ಪ್ರಧಾನಿ ಘೋಷಣೆ

* ದೇಶದ ಎಲ್ಲಾ ಆಯುರ್ವೇದ ಸಂಸ್ಥೆಗಳ ಪರಮೋಚ್ಛ ಸಂಸ್ಥೆ– ಎಐಐಎ

* ಎಐಐಎನಲ್ಲಿದೆ ಕಾಲೇಜು, ಸಂಶೋಧನಾಲಯ, ಪ್ರಯೋಗಾಲಯ ಮತ್ತು ಆಸ್ಪತ್ರೆ

* ಸಾರ್ವಜನಿಕ ಆರೋಗ್ಯ ಸೇವೆಯಲ್ಲಿ ಆಯುರ್ವೇದ ವಿಲೀನಕ್ಕೆ ಚಿಂತನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT