ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ ಫೈನಲ್‌ ಹಣಾಹಣಿ ರೋಮಾಂಚನ

ಫಿಫಾ 17 ವರ್ಷದೊಳಗಿನವರ ವಿಶ್ವಕಪ್‌: ಬ್ರೆಜಿಲ್‌ಗೆ ಜರ್ಮನಿ ಎದುರಾಳಿ
Last Updated 19 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ (ಎಎಫ್‌ಪಿ): ಫಿಫಾ 17 ವರ್ಷದೊಳಗಿವನರ ವಿಶ್ವಕಪ್‌ನ ಪ್ರಮುಖ ಹಂತ ಮುಗಿದಿದ್ದು ಕ್ವಾರ್ಟರ್‌ ಫೈನಲ್ ಹಣಾಹಣಿಗೆ ವೇದಿಕೆ ಸಜ್ಜುಗೊಂಡಿದೆ.

ಎಂಟರ ಘಟ್ಟದ ಪಂದ್ಯಗಳಲ್ಲಿ ಬಲಿಷ್ಠ ತಂಡಗಳು ಮುಖಾಮುಖಿಯಾಗಲಿವೆ. ಜ‌ರ್ಮನಿ ಮತ್ತು ಬ್ರೆಜಿಲ್‌ ಒಂದು ಪಂದ್ಯದಲ್ಲಿ ಸೆಣಸಲಿದ್ದರೆ, ಅಮೆರಿಕ ಮತ್ತು ಇಂಗ್ಲೆಂಡ್‌ ಮತ್ತೊಂದು ಪಂದ್ಯದಲ್ಲಿ ಹೋರಾಟ ನಡೆಸಲಿವೆ. ಮಾಲಿಗೆ ಘಾನಾ ಎದುರಾಳಿಯಾದರೆ ಸ್ಪೇನ್‌ ವಿರುದ್ಧ ಇರಾನ್‌ ಆಡಲಿದೆ.

ಬುಧವಾರ ನಡೆದ ಪ್ರಿ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಬ್ರೆನ್ನರ್‌ ಗಳಿಸಿದ ಎರಡು ಗೋಲುಗಳ ಬಲದಿಂದ ಹೊಂಡುರಾಸ್ ತಂಡವನ್ನು ಏಕಪಕ್ಷೀಯ ಮೂರು ಗೋಲುಗಳಿಂದ ಸೋಲಿಸಿ ಬ್ರೆಜಿಲ್‌ ಕ್ವಾರ್ಟರ್ ಫೈನಲ್‌ ಹಂತಕ್ಕೆ ಸುಲಭವಾಗಿ ಲಗ್ಗೆ ಇರಿಸಿತು. ಮೂರು ಬಾರಿಯ ಚಾಂಪಿಯನ್ನರಿಗೆ 11ನೇ ನಿಮಿಷದಲ್ಲಿ ಬ್ರೆನ್ನರ್‌ ಮುನ್ನಡೆ ತಂದುಕೊಟ್ಟರು. ಮಾರ್ಕೋಸ್ ಆ್ಯಂಟೊನಿಯೊ 44ನೇ ನಿಮಿಷದಲ್ಲಿ ಮುನ್ನಡೆ ಹೆಚ್ಚಿಸಿದರು. ಪ್ರತ್ಯುತ್ತರ ನೀಡಲು ಶ್ರಮಿಸುತ್ತಿದ್ದ ಹೊಂಡುರಾಸ್‌ಗೆ 56ನೇ ನಿಮಿಷದಲ್ಲಿ ಬ್ರೆನ್ನರ್ ಮತ್ತೊಂದು ಪೆಟ್ಟು ನೀಡಿದರು.

ಟೂರ್ನಿಯಲ್ಲಿ ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರುವಲ್ಲಿ ವಿಫಲವಾದರೂ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿರುವ ಜರ್ಮನಿ ಭಾನುವಾರ ನಡೆಯಲಿರುವ ಎಂಟರ ಘಟ್ಟದ ಪಂದ್ಯದಲ್ಲಿ ಬ್ರೆಜಿಲ್‌ಗೆ ಸವಾಲೊಡ್ಡುವುದೇ ಎಂಬ ಕುತೂಹಲಕ್ಕೆ ಕಾರಣವಾಗಿದೆ.

ಬುಧವಾರ ನಡೆದ ಕೊನೆಯ ಪ್ರಿ ಕ್ವಾರ್ಟರ್ ಫೈನಲ್  ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಘಾನಾ ತಂಡದವರು ಚೊಚ್ಚಲ ಟೂರ್ನಿ ಆಡುತ್ತಿರುವ ನೈಗರ್‌ ಎದುರು 2–0ಯಿಂದ ಜಯಿಸಿದರು.

ಬುಧವಾರ ನಡೆದ ಪಂದ್ಯದಲ್ಲಿ ನಾಯಕ ಎರಿಕ್‌ ಅವಿಯಾ ಮತ್ತು ರಿಚರ್ಡ್‌ ಡ್ಯಾನ್ಸೊ ಗಳಿಸಿದ ಗೋಲುಗಳಿಂದ ತಂಡ ಜಯಿಸಿತು. 17 ವರ್ಷದೊಳಗಿನವರ ಆಫ್ರಿಕನ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಘಾನಾ ಎದುರು ಪೆನಾಲ್ಟಿ ಶೂಟ್‌ಔಟ್‌ನಲ್ಲಿ 5–6ರ ಸೋಲುಂಡ ಮಾಲಿ ತಂಡಕ್ಕೆ ಸೇಡು ತೀರಿಸಿಕೊಳ್ಳಲು ಈಗ ಅವಕಾಶ ಲಭಿಸಿದೆ. ‌

ಇರಾನ್ ಮತ್ತು ಬಲಿಷ್ಠ ಸ್ಪೇನ್ ನಡುವಿನ ಪಂದ್ಯ ಕುತೂಹಲ ಕೆರಳಿಸಿದ್ದು ಅಚ್ಚರಿಯ ಫಲಿತಾಂಶ ಮೂಡುವುದೇ ಎಂಬ ಪ್ರಶ್ನೆಗೆ ಭಾನುವಾರ ಮೊದಲ ಪಂದ್ಯದಲ್ಲಿ ಉತ್ತರ ಸಿಗಲಿದೆ.

ಬಲಿಷ್ಠರಿಗೆ ಪೆಟ್ಟು: ಟೂರ್ನಿಯಲ್ಲಿ ಅಚ್ಚರಿ ಮೂಡಿಸಿರುವ ಇರಾನ್‌ ಬಲಿಷ್ಠ ತಂಡಗಳನ್ನು ಮಣಿಸುತ್ತ ಮುನ್ನಡೆಸಿದೆ. ಮೆಕ್ಸಿಕೊವನ್ನು 2–1 ಗೋಲುಗಳಿಂದ ಸೋಲಿಸಿ ಈ ತಂಡ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇರಿಸಿದೆ. ಅಮೆರಿಕವನ್ನು ಎದುರಿಸಲಿರುವ ಇಂಗ್ಲೆಂಡ್‌ಗೆ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಮೊದಲೇ ಆಘಾತವಾಗಿದೆ. ತಂಡದ ಪ್ರಮುಖ ಆಟಗಾರ ಜಾಡೋನ್ ಸಾಂಚೊ ಅವರನ್ನು ಅವರ ಮೂಲ ಕ್ಲಬ್ ಆದ ಜರ್ಮನಿಯ ಬೊರುಸಿಯಾ ಡಾರ್ಟ್‌ಮಂಡ್‌ವಾಪಸ್ ಕರೆಸಿಕೊಂಡಿದೆ. ಗುಂಪು ಹಂತ ಮತ್ತು ಪ್ರಿ ಕ್ವಾರ್ಟರ್ಫೈನಲ್‌ನಲ್ಲಿ ಅವರು ಮೂರು ಗೋಲು ಗಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT