ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಂಸ್ಥಿಕ ರೂಪ ಪಡೆದ ಹೇರಂಜಾಲು ಪರಂಪರೆ

Last Updated 20 ಅಕ್ಟೋಬರ್ 2017, 9:46 IST
ಅಕ್ಷರ ಗಾತ್ರ

ಬೈಂದೂರು: ಯಕ್ಷ ಗುರು ಎಂದು ಖ್ಯಾತರಾದ ಬಹುಶ್ರುತ ಕಲಾವಿದ ಹೇರಂಜಾಲು ವೆಂಕಟರಮಣ ಗಾಣಿಗ ಹೇರಂಜಾಲು ಪರಂಪರೆಯ ಹುಟ್ಟಿಗೂ ಕಾರಣರಾದವರು. ದೀರ್ಘ ಕಾಲದಿಂದ ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಕಲಾವಿದರನ್ನು ರೂಪಿಸುತ್ತ ಬಂದ ಅವರು 2007ರಲ್ಲಿ ಹೇರಂಜಾಲು ಯಕ್ಷ ಗಾನ ಪ್ರತಿಷ್ಠಾನ ಸ್ಥಾಪಿಸುವ ಮೂಲಕ ನಾಗೂರಿನಲ್ಲಿ ಯಕ್ಷಗಾನ ಶಿಕ್ಷಣಕ್ಕೆ ಸಾಂಸ್ಥಿಕ ರೂಪ ನೀಡಿದರು.

ತಂದೆಯ ಹಾದಿಯಲ್ಲಿ ಮಗನ ಹೆಜ್ಜೆ ಗುರುತು: ಭಾಗವತಿಕೆಯಲ್ಲಿ ಉತ್ಕೃಷ್ಟ ಸ್ತರ ಸಿದ್ಧಿಸಿಕೊಂಡ ಅವರ ಪುತ್ರ ಗೋಪಾಲ ಗಾಣಿಗ ವೃತ್ತಿಮೇಳದಲ್ಲಿ ಭಾಗವತರಾಗಿ ದುಡಿಯುವುದರ ಜತೆಗೆ ತಂದೆಯ ಬಳಿಕ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ.

ನಾಗೂರಿನ ಗುಂಜಾನುಗುಡ್ಡೆಯಲ್ಲಿ ಮಾರ್ವಿ ರಾಮಕೃಷ್ಣ ಹೆಬ್ಬಾರ ಸ್ಮಾರಕ ಬಯಲು ರಂಗಮಂದಿರ ನಿರ್ಮಿಸಿ ಅಲ್ಲಿ ಪ್ರತಿಷ್ಠಾನದ ಉದ್ದೇಶಗಳಾದ ಯಕ್ಷಗಾನ ಶಿಕ್ಷಣ, ತರಬೇತಿ, ಅರಿವು, ಪ್ರಸಾರದ ಮೂಲಕ ಹೊಸಪೀಳಿಗೆಗೆ ಕಲೆಯ ಆಸಕ್ತಿ, ಅಭಿರುಚಿ, ಕೌಶಲ ಹಸ್ತಾಂತರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಅಲ್ಲೀಗ ಇಬ್ಬರು ಯುವತಿಯರು, ಆರು ಯುವಕರು ಭಾಗವತಿಕೆ ಕಲಿಯುತ್ತಿದ್ದರೆ, 10ರಿಂದ 22 ವರ್ಷ ವಯೋಮಾನದ 35 ವಿದ್ಯಾರ್ಥಿಗಳು ಯಕ್ಷಗಾನ ಕಲಾಭ್ಯಾಸ ನಡೆಸುತ್ತಿದ್ದಾರೆ. ತಾಲ್ಲೂಕಿನ ಯಕ್ಷಗಾನ ಕಲಾ ಸಕ್ತರು ತರಬೇತಿ ಪಡೆದು ಹವ್ಯಾಸಿ ಕಲಾವಿದರಾಗಿ ರಂಗ ಪ್ರವೇಶಿಸುತ್ತಿದ್ದಾರೆ.

ಪ್ರತಿಷ್ಠಾನ ಮತ್ತು ಯಕ್ಷಗಾನ ಶಾಲೆಯ ಚಟುವಟಿಕೆಗಳನ್ನು ವಿಸ್ತರಿಸಲು ಶ್ರಮಿಸುತ್ತಿರುವ ಗೋಪಾಲ ಗಾಣಿಗ ಮತ್ತು ಅವರ ಬಳಗ ಹಿಂದಿನ ಸೀಮಿತ ಪ್ರದರ್ಶನಗಳ ಮಿತಿಯನ್ನು ದಾಟಿ ಈ ವರ್ಷ, ಇದೇ 21ರಿಂದ 30ರವರೆಗೆ 10ದಿನಗಳ ದಿ. ವೆಂಕಟರಮಣ ಗಾಣಿಗ ನೆನಪಿನೋಕುಳಿಯ ‘ಯಕ್ಷಗಾನ ದಶಮಿ’ ಆಯೋಜಿಸಿದೆ.

ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರಿಂದ ಚಾಲನೆಗೊಳ್ಳುವ ಕಾರ್ಯಕ್ರಮ ಸಚಿವ ಪ್ರಮೋದ್ ಮಧ್ವರಾಜ್ ಅವರಿಂದ ಸಮಾಪನಗೊಳ್ಳಲಿದೆ.ಶಾಸಕ ಕೆ. ಗೋಪಾಲ ಪೂಜಾರಿ ಸೇರಿದಂತೆ ಗಣ್ಯರನೇಕರು ಭಾಗವಹಿಸುವರು.

10 ದಿನವೂ ವೈವಿಧ್ಯಮಯ ಯಕ್ಷಗಾನ ಪ್ರಕಾರಗಳ ಪ್ರದರ್ಶನ ನಡೆಯುತ್ತದೆ. ಪ್ರತಿಷ್ಠಾನವು ವೆಂಕಟ ರಮಣ ಗಾಣಿಗ ಮತ್ತು ಮಾರ್ವಿ ರಾಮಕೃಷ್ಣ ಹೆಬ್ಬಾರ್ ಸ್ಮಾರಕ ಪ್ರಶಸ್ತಿ ಆರಂಭಿಸಿದ್ದು ನಿವೃತ್ತ ಕಲಾವಿದ ಕೊಪ್ಪಾಟೆ ಮುತ್ತ ಗೌಡ ಮತ್ತು ಸಾಲಿಗ್ರಾಮ ಮಕ್ಕಳ ಮೇಳದ ಅಧ್ವರ್ಯು ಎಚ್. ಶ್ರೀಧರ ಹಂದೆ ಈ ಪ್ರಶಸ್ತಿಗಳ ಮೊದಲ ಪುರಸ್ಕೃತರಾಗಲಿರುವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT