ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಳಬಾಳು ಹುಣ್ಣಿಮೆ ಒಳಗೆ ಎಲ್ಲ ಕೆರೆ ತುಂಬಿಸಿ

Last Updated 22 ಅಕ್ಟೋಬರ್ 2017, 5:24 IST
ಅಕ್ಷರ ಗಾತ್ರ

ದಾವಣಗೆರೆ: ಮುಂಬರುವ ಜನವರಿಯಲ್ಲಿ ಜಗಳೂರಿನಲ್ಲಿ ತರಳಬಾಳು ಹುಣ್ಣಿಮೆ ಇದೆ. ಅಷ್ಟರೊಳಗೆ ಜಿಲ್ಲೆಯ 22 ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಗುತ್ತಿಗೆ ಕಂಪೆನಿ ಎಲ್‌ ಅಂಡ್‌ ಟಿಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹರಿಹರ ಬಳಿ ತುಂಗಭದ್ರಾ ನದಿಯ ಜಾಕ್‌ವೆಲ್‌ನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ ಅವರೊಂದಿಗೆ ಶನಿವಾರ ವೀಕ್ಷಿಸಿದ ಅವರು ರೈತರ ಸಭೆ ನಡೆಸಿ, ಮಾತನಾಡಿದರು.

ಜುಲೈ 25ರಿಂದ ಜಾಕ್‌ವೆಲ್‌ನಿಂದ ನೀರು ಬಿಡಲಾಗಿದೆ. ಇದುವರೆಗೂ ಕೇವಲ 6 ಕೆರೆಗಳು ತುಂಬಿವೆ. ಇನ್ನೂ 16 ಕೆರೆಗಳಿಗೆ ನೀರು ತುಂಬಿಸಬೇಕಿದೆ. ನದಿಯಲ್ಲೂ ಈಗ ಹರಿವಿನ ಪ್ರಮಾಣ ಉತ್ತಮವಾಗಿದೆ. ಇಂತಹ ವೇಳೆಯಲ್ಲಿ ಆದಷ್ಟು ಶೀಘ್ರ ಕೆರೆ ತುಂಬಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ನಿಗದಿತ ಯೋಜನೆ ಪ್ರಕಾರ 22 ಕೆರೆಗಳೂ ಒಟ್ಟಿಗೆ ತುಂಬಬೇಕಿತ್ತು. ಈ ಮಧ್ಯೆ ಹಲವು ತೊಂದರೆ ಎದುರಾಗಿವೆ. ಗುತ್ತಿಗೆ ಕಂಪೆನಿಯ ಪ್ರತಿನಿಧಿಗಳು ಸಮರ್ಪಕವಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದು ಅಧಿಕಾರಿಗಳನ್ನು ಸ್ವಾಮೀಜಿ ತರಾಟೆಗೆ ತೆಗೆದುಕೊಂಡರು.

‘ನೀರು ಹರಿಸಲು ಇರುವ ತೊಂದರೆ ಏನು? ರೈತರಿಂದ ಯಾವ ರೀತಿಯ ಸಮಸ್ಯೆ ಎದುರಾಗಿದೆ? ಸಚಿವರು ಹಾಗೂ ರೈತರ ಎದುರೇ ಇದು ಇತ್ಯರ್ಥವಾಗಲಿ’ ಎಂದು ಸ್ವಾಮೀಜಿ ಪಟ್ಟುಹಿಡಿದರು. ನಂತರ ರೈತರಿಗೇ ಸಮಸ್ಯೆ ಹೇಳಲು ಸೂಚಿಸಿದರು.

‘ಹೆಬ್ಬಾಳು ಕೆರೆಗೆ ಕಳೆದ ಎರಡು ತಿಂಗಳಿನಿಂದ ನೀರು ಬಂದಿಲ್ಲ. ನರಗನಹಳ್ಳಿಗೆ ಇಷ್ಟು ದಿವಸದಲ್ಲಿ ನೀರು ಬಂದಿದ್ದೆ 15 ದಿವಸ. ಹಾಲೇಕಲ್ಲು ಕೆರೆಗೆ 8 ದಿವಸ, ಬಿಳಿಚೋಡಿಗೆ 4 ದಿವಸ ಮಾತ್ರ ನೀರು ಬಂದಿದೆ’ ಎಂದು ಆಯಾ ಗ್ರಾಮಗಳ ರೈತರು ಹೇಳಿದರು.

ಪ್ರತಿಕ್ರಿಯಿಸಿದ ಕಂಪೆನಿ ಅಧಿಕಾರಿಯೊಬ್ಬರು, ‘ಆನಗೋಡು ಬಳಿ ರೈತರು ವಾಲ್ವ್ ಒಡೆದು ಹಾಕಿದ್ದಾರೆ. ಇದರಿಂದ ನೀರು ಮುಂದಕ್ಕೆ ಹೋಗುತ್ತಿಲ್ಲ. ಪದೇ ಪದೇ ಬೆಸ್ಕಾಂ ವಿದ್ಯುತ್‌ ಸ್ಥಗಿತಗೊಳಿಸುವುದರಿಂದಲೂ ಸಮಸ್ಯೆ ಎದುರಾಗಿದೆ. ಅಲ್ಲದೇ, ಅಲ್ಲಲ್ಲಿ ಪೈಪ್‌ಲೈನ್‌ ಒಡೆದು ನೀರು ಸೋರಿಕೆಯಾಗುತ್ತಿದೆ’ ಎಂದರು.

‘ವಾಲ್ವ್ ಒಡೆದ ರೈತರ ಊರಿನ ಕೆರೆಗೆ ನೀರು ಬಂದ್‌ ಮಾಡಿಸುವುದು ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಮುಂದೆ ಕೈಗೊಳ್ಳಲಾಗುವುದು. ಆದರೆ, ದುರಸ್ತಿ ಕೆಲಸವನ್ನೂ ತುರ್ತಾಗಿ ನೀವೇ ಕೈಗೊಳ್ಳಬೇಕು. ಇದಕ್ಕೆ ತಕ್ಕ ಸಿಬ್ಬಂದಿ ನಿಯೋಜಿಸಬೇಕು; ಸಬೂಬು ಹೇಳಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ,
ಸ್ವಾಮೀಜಿ ಇಬ್ಬರೂ ಒಟ್ಟಿಗೆ ಪ್ರತಿಕ್ರಿಯಿಸಿದರು.

‘ಮುಂಬರುವ ಶನಿವಾರದ ಒಳಗೆ ಪೈಪ್‌ಲೈನ್‌ ಸೋರಿಕೆ ಸೇರಿದಂತೆ ಹಲವು ದುರಸ್ತಿ ಕ್ರಮಗಳನ್ನು ಕೈಗೊಳ್ಳಲಾಗುವುದು. ತದನಂತರ ನೀರಿನ ಸರಾಗ ಹರಿವಿಕೆಗೆ ಪ್ರಯತ್ನಿಸಲಾಗುವುದು’ ಎಂದು ಕಂಪೆನಿ ಅಧಿಕಾರಿಗಳು ಭರವಸೆ ನೀಡಿದರು. ಸಭೆಯಲ್ಲಿ 22 ಕೆರೆ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಡಾ.ಮಂಜುನಾಥ ಗೌಡ, ಎಪಿಎಂಸಿ ಅಧ್ಯಕ್ಷ ಮುದೇಗೌಡ್ರು ಗಿರೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT