ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇವರೇ ತ್ರೀ ಈಡಿಯಟ್ಸ್‌ನ ಫುನ್ಸುಖ್ ವಾಂಗ್ಡ್

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

–ರವಿ ಮೂಡುಕೊಣಾಜೆ

ಅಮೀರ್ ಖಾನ್ ಅಭಿನಯದ ‘ತ್ರೀ ಈಡಿಯಟ್ಸ್’ನ ರಾಮ್‌ ದಾಸ್ ಚಂಚಾಡ್ ಪಾತ್ರ ನೆನಪಿದೆಯೇ? ಈ ಪಾತ್ರ ನಿರ್ವಹಿಸಿದ್ದ ಅಮೀರ್‌ ಖಾನ್ ಮುಖ ಮನದ ತೆರೆಯಲ್ಲಿ ಅನಾವರಣಗೊಂಡಿತೆ? 2009ರಲ್ಲಿ ತೆರೆ ಕಂಡಿದ್ದ ಈ ಚಿತ್ರ ದೇಶದಾದ್ಯಂತ ಸಂಚಲನವನ್ನೇ ಮೂಡಿಸಿತ್ತು. ಚಿತ್ರದ ಕೊನೆಯಲ್ಲಿ ಆ ಪಾತ್ರದ ನಿಜವಾದ ಹೆಸರು ತಿಳಿದು ಬರುತ್ತದೆ. ಅದು 500ಕ್ಕೂ ಹೊಸ ಅವಿಷ್ಕಾರಗಳಿಗೆ ಪೇಟೆಂಟ್ ಹೊಂದಿರುವ ವಿಜ್ಞಾನಿ ಮತ್ತು ಶಿಕ್ಷಕ ಫುನ್ಸುಖ್ ವಾಂಗ್ಡ್ ಅವರದು.

ಫುನ್ಸುಖ್ ವಾಂಗ್ಡ್ ಎಂಬುವುದು ತ್ರೀ ಈಡಿಯಟ್ಸ್ ಚಿತ್ರದಲ್ಲಿ ವಿಜ್ಞಾನಿಯನ್ನು ಪ್ರತಿನಿಧಿಸುವ ಪಾತ್ರಕ್ಕೆ ಇಟ್ಟ ಹೆಸರು. ನಿಜ ಜೀವನದಲ್ಲಿ ಅವರ ಹೆಸರು ಸೊನಾಮ್ ವಾಂಗ್ಚುಕ್. ಎಂಜಿನಿಯರಿಂಗ್ ಪದವೀಧರರಾಗಿರುವ ಸೊನಾಮ್ ಜಮ್ಮು ಕಾಶ್ಮೀರದ ಲೇಹ್ ಜಿಲ್ಲೆಯಲ್ಲಿ 1966ರಲ್ಲಿ ಹುಟ್ಟಿದರು. ಶಿಕ್ಷಣಕ್ಕೆ ಪೂರಕ ವಾತಾವರಣ ಇಲ್ಲದ ಕಾರಣ ಸೊನಾಮ್ ವಾಂಗ್ಚುಕ್ ಅವರು ತಮ್ಮ 9ನೇ ವಯಸ್ಸಿನವರೆಗೂ ಶಾಲೆಯ ಮೆಟ್ಟಿಲು ಹತ್ತಲಿಲ್ಲ.

ಸೊನಾಮ್ ವಾಂಗ್ಚುಕ್ ಅವರ ತಂದೆ ಸೊನಾಮ್ ವಾಂಗ್ಯಾಲ್ ಒಬ್ಬ ರಾಜಕಾರಣಿ. ಸೊನಾಮ್ ವಾಂಗ್ಚುಕ್ ಅವರನ್ನು ಅವರ ತಾಯಿ 9ನೇ ವಯಸ್ಸಿನಲ್ಲಿ ಶ್ರೀನಗರದ ಒಂದು ಶಾಲೆಗೆ ದಾಖಲು ಮಾಡಿದರು. ಅಲ್ಲಿ ಅವರನ್ನು ಭಾಷಾ ಸಮಸ್ಯೆ ಕಾಡುತ್ತಿತ್ತು. ನಂತರದ ದಿನಗಳಲ್ಲಿ ದೆಹಲಿಯಲ್ಲಿರುವ ವಿಶೇಷ ಕೇಂದ್ರೀಯ ವಿದ್ಯಾಲಯದಲ್ಲಿ ಅವರಿಗೆ ಪೂರ್ಣ ಪ್ರಮಾಣದ ಶಿಕ್ಷಣ ದೊರೆಯಿತು. 1987ರಲ್ಲಿ ಶ್ರೀನಗರದ ನ್ಯಾಷನಲ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಬಿ.ಟೆಕ್ (ಮೆಕಾನಿಕಲ್‌ ಎಂಜಿನಿಯರಿಂಗ್‌) ಪದವಿ ಪಡೆದರು. ಫ್ರಾನ್ಸ್‌ನಲ್ಲಿ ಮಣ್ಣಿನ ವಾಸ್ತುಶಿಲ್ಪದ ಬಗ್ಗೆ ಎರಡು ವರ್ಷ ಅಭ್ಯಾಸ ಮಾಡಿದರು.

ಕಣಿವೆ ಪ್ರದೇಶದಲ್ಲಿ ಮಕ್ಕಳಿಗೆ ಸರಿಯಾಗಿ ವಿದ್ಯಾಭ್ಯಾಸ ಸಿಗದೇ ಅವರು ಪಡುವ ಕಷ್ಟಗಳು ಹಾಗೂ ಅಲ್ಲಿಯವರ ಜೀವನ ಮಟ್ಟದಲ್ಲಿ ಸುಧಾರಣೆ ಆಗದೇ ಇರುವುದನ್ನು ಬಹಳ ಹತ್ತಿರದಿಂದ ಮನಗಂಡ ಇವರು, ಲಡಾಕ್‌ನಲ್ಲಿ ಸೆಕ್‌ಮೋಲ್‌ ಎಂಬ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದರು. ಇದು ತನ್ನ ಕಲಿಕಾ ವಿಧಾನದ ವೈಶಿಷ್ಟ್ಯದ ಕಾರಣದಿಂದ ಜಾಗತಿಕ ಮನ್ನಣೆ ಗಳಿಸಿದೆ.

ಸಾಮಾನ್ಯ ಅರ್ಥದಲ್ಲಿ ‘ದಡ್ಡರು’ ಎನಿಸಿಕೊಳ್ಳುವ ಮಕ್ಕಳಿಗೆ ಮಾತ್ರ ಇಲ್ಲಿ ಪ್ರವೇಶಕ್ಕೆ ಅವಕಾಶ. ಕ್ಯಾಂಪಸ್ ಸಂಪೂರ್ಣ ಸೌರ ಶಕ್ತಿಯಿಂದ ನಡೆಯುತ್ತದೆ. ವಿದ್ಯಾಸಂಸ್ಥೆಯ ಕ್ಯಾಂಪಸ್‌ನಲ್ಲಿ ಗಡಿಯಾರವನ್ನು ಒಂದು ತಾಸು ಮುಂದಕ್ಕೆ ಇರಿಸಲಾಗಿದೆ. ಮಕ್ಕಳು ರಾತ್ರಿ ಬೇಗ ಮಲಗಿ, ಬೆಳಿಗ್ಗೆ ಸೂರ್ಯ ಉದಯಿಸುವ ಮೊದಲು ಏಳಲಿ ಎಂಬ ಕಾರಣಕ್ಕಾಗಿ ಹೀಗೆ ಮಾಡಲಾಗಿದೆ.

ಒಂದು ದೇಶದ ಆಡಳಿತ ನಡೆಯುವಂತೆಯೇ ವಿದ್ಯಾಸಂಸ್ಥೆಯ ಕ್ಯಾಂಪಸ್ ಆಡಳಿತ ನಿರ್ವಹಿಸಲಾಗುತ್ತದೆ. ಅಲ್ಲಿ ಚುನಾಯಿತ ಅಧ್ಯಕ್ಷರು ಹಾಗೂ ಸಚಿವರನ್ನು ಆರಿಸಲಾಗುತ್ತದೆ. ಅವರೆಲ್ಲ ಕಲಿಯುವ ಮಕ್ಕಳೇ ಆಗಿರುವುದು ವಿಶೇಷ. ಅವರ ಸುಪರ್ದಿಯಲ್ಲಿ ಗಿಡಗಳ ಪಾಲನೆ ಪೋಷಣೆ, ಕ್ಯಾಂಪಸ್‌ನಲ್ಲಿ ಸ್ವಚ್ಛತೆ ಕಾಪಾಡುವುದು, ಹಸು, ಕರು ಕುರಿಗಳನ್ನು ಪಾಲನೆ ಪೋಷಣೆ ನಡೆಯುತ್ತದೆ.

ಮಣ್ಣಿನ ಪರೀಕ್ಷೆಯ ತಂತ್ರಗಳು ಮತ್ತು ನಿತ್ಯದ ಕೆಲಸಗಳನ್ನು ಸುಲಭಗೊಳಿಸುವ ಯಂತ್ರಗಳನ್ನು ಮಕ್ಕಳ ಜೊತೆಗೂಡಿ ಸೋನಾಮ್ ವಾಂಗ್ಚುಕ್ ರೂಪಿಸಿಕೊಂಡಿದ್ದಾರೆ. ಶಿಕ್ಷಣ ಕ್ರಮದಲ್ಲಿ ಇವರು ರೂಪಿಸಿದ ಸುಧಾರಣೆಗಳನ್ನು ಗುರುತಿಸಿ ಹಲವು ಪ್ರಶಸ್ತಿಗಳು ಹುಡುಕಿಕೊಂಡು ಬಂದಿವೆ. ಅವರು ತಮ್ಮ ಆವಿಷ್ಕಾರಗಳಿಗೆ ಪೇಟೆಂಟ್‌ಗಳನ್ನೂ ಪಡೆದುಕೊಂಡಿದ್ದಾರೆ.

ಸಿನಿಮಾಕ್ಕೆ ಪ್ರೇರಣೆ
2008ರಲ್ಲಿ ಮುಂಬೈಗೆ ಸೊನಾಮ್ ವಾಂಗ್ಚುಕ್ ಬಂದಿದ್ದರು. ಸಿಯನ್ಯನ್ ಐಬಿನ್ ಸಂಸ್ಥೆಯು ವಾಂಗ್ಚುಕ್ ಅವರ ಸೇವೆಯನ್ನು ಗುರುತಿಸಿ 'ರಿಯಲ್ ಹೀರೊ' ಗೌರವ ನೀಡಿತ್ತು. ಆ ಸಮಾರಂಭದಲ್ಲಿ ಅಮೀರ್ ಖಾನ್ ಅವರೂ ಇದ್ದರು. ಈ ಸಂದರ್ಭಸೊನಾಮ್ ವಾಂಗ್ಚುಕ್ ಅವರ ಸೆಕ್‌ಮೋಲ್‌ ವಿದ್ಯಾಸಂಸ್ಥೆಯ ಸಾಕ್ಷ್ಯಚಿತ್ರವನ್ನು ಅಲ್ಲಿದ್ದ ಸಭಿಕರಿಗೆ ತೋರಿಸಲಾಯಿತು. ಇದನ್ನು ನೋಡಿದ ಅಮೀರ್‌ ಖಾನ್ ಅವರಿಗೆ ಇಂಥ ಸಾಧಕ ಮತ್ತು ವಿದ್ಯಾಸಂಸ್ಥೆಯನ್ನು ಜಗತ್ತಿಗೆ ಪರಿಚಯಿಸಬೇಕು ಎಂದು ಅನಿಸಿತು. ಹೀಗಾಗಿಯೇ 'ತ್ರೀ ಇಡಿಯೆಟ್ಸ್' ಸಿನಿಮಾದಲ್ಲಿ ಸೊನಾಮ್ ವಾಂಗ್ಚುಕ್ ಅವರ ಸಾಧನೆಯನ್ನು ಫುನ್ಸುಖ್ ವಾಂಗ್ಡ್ ಪಾತ್ರದ ಮೂಲಕ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT