ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನಗರಗಳಲ್ಲಿ ಮಿತಿ ಮೀರಿದ ಸದ್ದು ಗದ್ದಲ

Last Updated 22 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಬೆಂಗಳೂರು ಸೇರಿ ಭಾರತದ ಮಹಾ ನಗರಗಳಲ್ಲಿ ಶಬ್ದ ಮಾಲಿನ್ಯದ ಪ್ರಮಾಣ ವಿಪರೀತ ಮಟ್ಟದಲ್ಲಿದೆ ಎಂದು ವಾತಾವರಣದ ಶಬ್ದದ ಮೇಲೆ ನಿಗಾ ಇರಿಸುವ ರಾಷ್ಟ್ರೀಯ ಜಾಲದ ಅಧ್ಯಯನ ಹೇಳಿದೆ.

ದೇಶದ ಏಳು ಮಹಾ ನಗರಗಳಲ್ಲಿನ ವಾತಾವರಣದಲ್ಲಿ ಶಬ್ದದ ಪ್ರಮಾಣ ಎಷ್ಟಿದೆ ಎಂಬುದನ್ನು ವಿಜ್ಞಾನಿಗಳು ಅಧ್ಯಯನ ಮಾಡಿದ್ದಾರೆ. 2011ರಿಂದಲೇ ಈ ಅಧ್ಯಯನ ನಡೆಯುತ್ತಿದ್ದು ಪ್ರತಿ ನಗರದ ತಲಾ ಹತ್ತು ಸ್ಥಳಗಳಲ್ಲಿ ಅಧ್ಯಯನ ನಡೆಸಲಾಗಿದೆ. ಆರಂಭದಲ್ಲಿ ಪ್ರತಿ ನಗರದ ಐದು ಸ್ಥಳಗಳಲ್ಲಿ ಅಧ್ಯಯನ ನಡೆಸಲಾಯಿತಾದರೂ ಬಳಿಕ ಅದಕ್ಕೆ ಮತ್ತೆ ಐದು ಸ್ಥಳಗಳನ್ನು ಸೇರಿಸಲಾಯಿತು.

ಕೈಗಾರಿಕಾ ಪ್ರದೇಶ, ವಾಣಿಜ್ಯ ಪ್ರದೇಶ, ವಸತಿ ಪ್ರದೇಶ ಮತ್ತು ಶಬ್ದ ನಿಷೇಧ ವಲಯಗಳಲ್ಲಿ ಈ ಅಧ್ಯಯನ ಮಾಡಲಾಗಿದೆ. ಅಧ್ಯಯನ ನಡೆಸಲಾದ ಶೇ 14.3ರಷ್ಟು ಸ್ಥಳಗಳಲ್ಲಿ ಮಾತ್ರ ಶಬ್ದದ ಪ್ರಮಾಣ ನಿಗದಿತ ಮಟ್ಟದಲ್ಲಿದೆ. ಈ ಸ್ಥಳಗಳಲ್ಲಿ ಹೆಚ್ಚಿನವು ನಿಯಂತ್ರಿತ ಕೈಗಾರಿಕಾ ಪ್ರದೇಶಗಳಲ್ಲಿವೆ. 2011ರ ಬಳಿಕ ಸದ್ದಿನ ಪ್ರಮಾಣ ಗಣನೀಯವಾಗಿ ಏರುತ್ತಲೇ ಸಾಗಿದೆ.

ಅಧ್ಯಯನ ನಡೆಸಲಾದ ಯಾವುದೇ ವಾಣಿಜ್ಯ ಪ್ರದೇಶ, ವಸತಿ ಪ್ರದೇಶ ಅಥವಾ ಶಬ್ದ ನಿರ್ಬಂಧ ವಲಯಗಳಲ್ಲಿ ಶಬ್ದದ ಪ್ರಮಾಣ ಸಂಪೂರ್ಣವಾಗಿ ನಿಗದಿತ ಮಿತಿಯೊಳಗೆ ಇರಲಿಲ್ಲ. ‘ಕರೆಂಟ್‌ ಸೈನ್ಸ್‌’ ನಿಯತಕಾಲಿಕದಲ್ಲಿ ಈ ಅಧ್ಯಯನ ವರದಿ ಪ್ರಕಟವಾಗಿದೆ.

ಬೆಂಗಳೂರಿನಲ್ಲಿ ಶಬ್ದ ಮಾಲಿನ್ಯ:

ಬೆಂಗಳೂರಿನ ಪೀಣ್ಯ ಕೈಗಾರಿಕಾ ಪ್ರದೇಶದ ವಾತಾವರಣದಲ್ಲಿ ಸದ್ದಿನ ಪ್ರಮಾಣ ಕಳೆದ ಐದು ವರ್ಷಗಳಲ್ಲಿ ಭಾರಿ ಏರಿಕೆಯಾಗಿದೆ. ವಸತಿ ಪ್ರದೇಶವಾದ ನಿಸರ್ಗ ಭವನದಲ್ಲಿ ರಾತ್ರಿಯಲ್ಲಿಯೂ ಸದ್ದಿನ ಪ್ರಮಾಣ ಮಿತಿಗಿಂತ ಬಹಳ ಹೆಚ್ಚೇ ಇದೆ. ಯಶವಂತಪುರ, ಆರ್‌ವಿಸಿಇ ಮತ್ತು ನಿಮ್ಹಾನ್ಸ್‌ ಪ್ರದೇಶಗಳಲ್ಲಿ ಸದ್ದಿನ ಪ್ರಮಾಣ ಮಿತಿಗಿಂತ ಹೆಚ್ಚು. ಹಾಗೆಯೇ ದೊಮ್ಮಲೂರು, ಪೀಣ್ಯ ಮತ್ತು ನಿಸರ್ಗ ಭವನ ಪ್ರದೇಶಗಳಲ್ಲಿ ಸೆಪ್ಟೆಂಬರ್‌ ಮತ್ತು ಫೆಬ್ರುವರಿ ನಡುವಣ ಅವಧಿಯಲ್ಲಿ ಸದ್ದು ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

ಯಶವಂತಪುರದಲ್ಲಿ ಸದ್ದಿನ ಸರಾಸರಿ ಪ್ರಮಾಣ ಹಗಲಿನ ಹೊತ್ತು 70 ಡೆಸಿಬಲ್‌ ಆಗಿದ್ದರೆ ರಾತ್ರಿಯಲ್ಲಿ ಇದು 62 ಡೆಸಿಬಲ್‌ಗೆ ಇಳಿಯುತ್ತದೆ. ಪೀಣ್ಯ ಮತ್ತು ವೈಟ್‌ಫೀಲ್ಡ್‌ಗಳಲ್ಲಿ 2011ರಿಂದ ಶಬ್ದದ ಮಟ್ಟ ಏರುತ್ತಲೇ ಹೋಗಿದೆ. ಹಾಗಿದ್ದರೂ ಸದ್ದಿನ ಪ್ರಮಾಣ ನಿಗದಿತ ಮಿತಿಯೊಳಗೇ ಇದೆ.

ಅಧ್ಯಯನ ನಡೆದ ನಗರಗಳು: ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತ, ಬೆಂಗಳೂರು, ಹೈದರಾಬಾದ್‌, ಲಖನೌ

ಅಧ್ಯಯನ ನಡೆದ ಸ್ಥಳಗಳ ಹಂಚಿಕೆ:

ಕೈಗಾರಿಕಾ ಪ್ರದೇಶ 12

ವಾಣಿಜ್ಯ ಪ್ರದೇಶ 25

ವಸತಿ ಪ್ರದೇಶ 16

ಶಬ್ದದ ನಿಯಂತ್ರಿತ ವಲಯಗಳು 17

ಶಬ್ದದ ನಿಗದಿತ ಮಿತಿ

ಕೈಗಾರಿಕಾ ಪ್ರದೇಶ: 70– 75 ಡೆಸಿಬಲ್‌

ವಾಣಿಜ್ಯ ಪ್ರದೇಶ: 65–55 ಡೆಸಿಬಲ್‌

ವಸತಿ ಪ್ರದೇಶ: 55–45 ಡೆಸಿಬಲ್‌

ಶಬ್ದ ನಿರ್ಬಂಧ ವಲಯ: 50–40 ಡೆಸಿಬಲ್‌

ಅಧ್ಯಯನದಿಂದ ಏನು ಲಾಭ: ಈ  ವರದಿಯ ಅಧಾರದಲ್ಲಿ ವಾಹನಗಳ ಸಂಚಾರ ನಿಯಂತ್ರಣ ಮತ್ತು ಶಬ್ದ ನಿಯಂತ್ರಣ ಮಾಡಬಹುದು. ಶಬ್ದ ಮಾಲಿನ್ಯವು ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅತಿಯಾದ ಶಬ್ದದಿಂದಾಗಿ ಭಾವೋದ್ವೇಗ ಮತ್ತು ಹೃದಯ ಕಾಯಿಲೆಗಳು ಉಂಟಾಗಬಹುದು ಎಂದು ಹಿಂದಿನ ಅಧ್ಯಯನಗಳು ತೋರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT