ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳವಾರ, 24–10–1967

Last Updated 23 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಪ್ರಪಂಚದ ಸುಖ, ಶಾಂತಿಗೆ ನೆಲೆವೀಡಾದ ವಿಶ್ವಸಂಸ್ಥೆ ಬಲ ಸಂವರ್ಧನೆಗೆ ರಾಷ್ಟ್ರಪತಿ ಕರೆ

ದೆಹಲಿ, ಅ. 23- ಪ್ರಪಂಚದ ಜನತೆಯ ಸುಖ, ಶಾಂತಿ, ಮತ್ತು ಸಂಪತ್ತಿಗೆ ಒಂದೇ ನೆಲೆಯಾಗಿರುವ ವಿಶ್ವರಾಷ್ಟ್ರ ಸಂಸ್ಥೆಯನ್ನು ಬಲಗೊಳಿಸುವ ಅಗತ್ಯವನ್ನು ರಾಷ್ಟ್ರಪತಿ ಡಾ. ಜಾಕೀರ್ ಹುಸೇನ್‌ರು ಇಂದು ಒತ್ತಿ ಹೇಳಿದರು.

ಶಾಂತಿಗೆ ಅನೇಕ ಬಾರಿ ಬೆದರಿಕೆ ಬಂದಿದ್ದರೂ, ವಿಶ್ವರಾಷ್ಟ್ರಸಂಸ್ಥೆಯು ರಾಷ್ಟ್ರಗಳನ್ನು ಅಣು ವಿನಾಶದಿಂದ ರಕ್ಷಿಸಿದೆಯೆಂದು ವಿಶ್ವರಾಷ್ಟ್ರಸಂಸ್ಥೆ 22ನೇ ವಾರ್ಷಿಕೋತ್ಸವದ ಸಂದರ್ಭಕ್ಕೆ ಮಾಡಿದ ಪ್ರಸಾರ ಭಾಷಣದಲ್ಲಿ ಇಂದು ತಿಳಿಸಿದರು.

**

ಮುಂದಿನ ವಾರ ಮಹಾಜನ್ ವರದಿ ಪ್ರಕಟಣೆ ಸಂಭವ

ನವದೆಹಲಿ, ಅ. 23– ಮೈಸೂರು–ಮಹಾರಾಷ್ಟ್ರ ಗಡಿ ವಿವಾದದ ಬಗೆಗಿನ ಮಹಾಜನ್ ಆಯೋಗದ ವರದಿಯನ್ನು ಯಾವ ಅಧಿಕೃತ ಟೀಕೆ–ಟಿಪ್ಪಣಿಗಳೂ ಇಲ್ಲದೆ ಮುಂದಿನ ವಾರದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುವುದೆಂದು ರಾಜಕೀಯ ವರ್ತುಲಗಳ ನಂಬಿಕೆಯಾಗಿದೆ.

ವರದಿಯ ಬಿಡುಗಡೆಯಿಂದ ಮಹಾಜನ್ ಶಿಫಾರಸುಗಳ ಬಗ್ಗೆ ಸಂಬಂಧಿಸಿದ ರಾಜ್ಯಗಳಿಗೆ ಒಂದು ಸಂಪೂರ್ಣ ಚಿತ್ರ ದೊರೆಯುವುದರಿಂದ ಅಂಥ ಕ್ರಮ ಅಗತ್ಯವೆನಿಸಿದೆ.

ಅಲ್ಪಸ್ವಲ್ಪ ದೊರೆತ ಶಿಫಾರಸುಗಳಿಂದ ಉದ್ರೇಕಗೊಂಡು ಮಹಾರಾಷ್ಟ್ರದಲ್ಲಿ ಚಳವಳಿಯ ಬಿಸಿಯೇರುವುದು ಇದರಿಂದ ತಪ್ಪೀತೆಂದು ಭಾವಿಸಲಾಗಿದೆ.

**

ಅಪಾಯ! ಎಚ್ಚರ!

ಬೆಂಗಳೂರು, ಅ. 23– ಭಾರತದಲ್ಲಿ ಪ್ರಜಾಪ್ರಭುತ್ವ ಎದುರಿಸುತ್ತಿರುವ ಅಪಾಯಗಳ ಬಗ್ಗೆ ಬುದ್ಧಿವಂತ ಜನ ಹಾಗೂ ವಿದ್ಯಾರ್ಥಿ ಸಮುದಾಯವನ್ನು ಎಚ್ಚರಿಸಬೇಕು.

ಇದು, ಮಾಜಿ ಶ್ರೇಷ್ಠ ನ್ಯಾಯಮೂರ್ತಿ ಶ್ರೀ ಗಜೇಂದ್ರಗಡ್ಕರ್ ಅವರಿಗಿರುವ ತೀವ್ರಾಕಾಂಕ್ಷೆ.

ಸಂಜೆ ಈ ಅಪಾಯಗಳನ್ನು ಕುರಿತು ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಾತನಾಡಿದ ಶ್ರೀಯುತರು, ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಲು ಅವಕಾಶವನ್ನು ತಾವೇ ಬೇಡಿದುದಾಗಿ ತಿಳಿಸಿದರು.

‘ನನ್ನ ಭಾಷಣದ ಬಗ್ಗೆ ನೀವು ಮೆಚ್ಚುಗೆ ವ್ಯಕ್ತಪಡಿಸುವುದು ಬೇಡ. ಕರತಾಡನ ಮಾಡುವುದು ಬೇಡ. ನಾನು ನಿಮ್ಮ ಹೃದಯವನ್ನು ಸ್ಪರ್ಶಿಸಿದ್ದರೆ ಅಷ್ಟು ಸಾಕು’ ಎಂದರು.

**

ಪ್ರಜಾಸತ್ತೆಗೆ ಅಪಾಯ ಕುರಿತು ಗಜೇಂದ್ರಗಡ್ಕರ್

ಬೆಂಗಳೂರು, ಅ. 23– ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಆಡಳಿತ ಅಂತ್ಯವಾಗಿ ಕಾಂಗ್ರೆಸ್ಸೇತರ ಸರ್ಕಾರಗಳು ಅಧಿಕಾರಕ್ಕೆ ಬಂದ 1967ರ ಸಾರ್ವತ್ರಿಕ ಚುನಾವಣೆಗಳು ‘ನಿಜವಾದ ಮೊದಲನೆಯ ಚುನಾವಣೆಗಳು’ ಎಂದು ಮುಂಬೈ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ. ಪಿ.ಬಿ. ಗಜೇಂದ್ರ ಗಡ್ಕರ್ ಅವರು ಇಂದು ಇಲ್ಲಿ ಅಭಿಪ್ರಾಯಪಟ್ಟರು.

**

ಅಣ್ವಸ್ತ್ರ ಪ್ರಸರಣದಿಂದ ರಾಷ್ಟ್ರಗಳ ಭದ್ರತೆ ಅಸಾಧ್ಯ: ತಜ್ಞರ ತಂಡದ ಎಚ್ಚರಿಕೆ

ವಿಶ್ವಸಂಸ್ಥೆ, ಅ. 23– ಅಣ್ವಸ್ತ್ರಗಳ ಮತ್ತಷ್ಟು ಪ್ರಸರಣ ಮತ್ತು ವಿಸ್ತರಣೆಯಿಂದ ಇನ್ನು ಮುಂದೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಭದ್ರತೆ ಖಂಡಿತವಾಗಿಯೂ ಲಭಿಸದೆಂದು ಅಂತರರಾಷ್ಟ್ರೀಯ ತಜ್ಞರ ತಂಡವೊಂದು ‘ನಿಸ್ಸಂಕೋಚ’ ತೀರ್ಮಾನಕ್ಕೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT