ಸಂಗತ

ಗುನುಗಿದ್ದೆಲ್ಲ ಸಂಗೀತವಾದೀತೇ?

ಶಾಸ್ತ್ರೀಯ ಸಂಗೀತರ ಅಭಿರುಚಿ ರೂಢಿಸಿಕೊಂಡರೆ ಸಂಗೀತ ತಾನೇ ತಾನಾಗಿ ಆಸ್ವಾದನೆಗೆ ನಿಲುಕೀತು

ಗುನುಗಿದ್ದೆಲ್ಲ ಸಂಗೀತವಾದೀತೇ?

‘ರಿಯಾಲಿಟಿ ಷೋಗಳಿಂದ ಶಾಸ್ತ್ರೀಯತೆಗೆ ಧಕ್ಕೆ’ 

(ಪ್ರ.ವಾ., ಅ. 23) ಎಂದು ಬೆಂಗಳೂರು ಗಾಯನ ಸಮಾಜ ಆಯೋಜಿಸಿದ್ದ 48ನೇ ಸಂಗೀತ ಸಮ್ಮೇಳನದ ಅಧ್ಯಕ್ಷ ರುದ್ರಪಟ್ನಂ ಸಹೋದರರು ಅಭಿಪ್ರಾಯಪಟ್ಟಿರುವುದು ಸಮಯೋಚಿತವಾಗಿದೆ. ದಿವಂಗತ ಎಂ. ಬಾಲಮುರಳಿ ಕೃಷ್ಣ ಅವರು ‘ಶಂಕರಾಭರಣಂ ಚಿತ್ರದ ಸಂಗೀತ ಅಶಾಸ್ತ್ರೀಯ’
ಎಂದಾಗ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರು ಕಿಂಚಿತ್ತೂ ಬೇಸರಗೊಳ್ಳಲಿಲ್ಲ. ಬದಲಿಗೆ, ‘ನನ್ನ ಬದುಕಿನಲ್ಲಿ ಒಂದೇ ಒಂದು ಆಸೆಯಿದೆ. ಅದೇನೆಂದರೆ ಶಾಸ್ತ್ರೀಯ ಸಂಗೀತ ಕಛೇರಿ ನೀಡಬೇಕು, ಅದಕ್ಕೆ ಬಾಲಮುರಳಿಯವರ ಮಾರ್ಗದರ್ಶನ ಬೇಕೇ ಬೇಕು’ ಎಂದು ಅಳಲು ತೋಡಿಕೊಂಡಿದ್ದು ಅವರ ವಿನೀತ ಭಾವಕ್ಕೆ ಸಾಕ್ಷಿ.

ಸ್ವತಃ ಬಾಲಮುರಳಿ ಕೃಷ್ಣ ತಾವು ಸಂಗೀತದ ಹಿರಿಯ ವಿದ್ಯಾರ್ಥಿ ಎಂದುಕೊಳ್ಳುತ್ತಿದ್ದರು. ಸಾಂಪ್ರದಾಯಿಕ ಸ್ವರೂಪ, ಶೈಲಿಯೊಂದಿಗೆ ರಾಜಿಯಾಗದ ಮಾದರಿಯ ಗುಣಮಟ್ಟ, ಶಾಸ್ತ್ರೀಯ ಸಂಗೀತದ ಜೀವಾಳ. ಸಂಗೀತವೆಂದರೇನೆ ಸಾಮರಸ್ಯ. ಗದ್ದಲವೆಂದರೆ ಗಲಿಬಿಲಿ. ಎಲ್ಲರೂ ಯಾವುದನ್ನು ಸರಾಗವಾಗಿ ಹಾಡಬಹುದೋ ಅದೇ ಸಂಗೀತವೆನ್ನಿಸಿಬಿಟ್ಟಿದೆ! ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕರು ಕೂಡ ಕಛೇರಿಗೆ ಮುನ್ನ ಮೂರ್ನಾಲ್ಕು ತಾಸು ತಾಲೀಮು ನಡೆಸುತ್ತಾರೆ. ಆದ್ದರಿಂದಲೇ ಅವರು ಶ್ರೋತೃಗಳನ್ನು ಸೆಳೆಯಲು ಸಾಧ್ಯವಾಗುತ್ತದೆ. ಇಂಥ ಬದ್ಧತೆಯಿಲ್ಲದಿದ್ದರೆ ರಿಯಾಲಿಟಿ ಷೋ ಆದಿಯಾಗಿ ಎಲ್ಲಾ ಕಲಾ ಪ್ರದರ್ಶನಗಳೂ ನೆಲಕಚ್ಚುತ್ತವೆ!

ಒಂದು ಕಾಲದಲ್ಲಿ ಸಿನಿಮಾಗಳಿಗೆ ಎಂತಹ ಕರ್ಣಾನಂದಕರ ಶಾಸ್ತ್ರೀಯ ಸಂಗೀತ ಅಳವಡಿಸಲಾಗುತ್ತಿತ್ತೆಂದರೆ ಅವನ್ನು ಕೇಳುವ ಸಲುವಾಗಿಯೇ ಹಲವು ಬಾರಿ ಜನ ಚಿತ್ರಮಂದಿರಗಳತ್ತ ಧಾವಿಸುತ್ತಿದ್ದರು. ಥೀಯೆಟರ್‌ನ ಸೌಂಡ್ ಬಾಕ್ಸ್ ಇರಿಸುವ ಕೊಠಡಿಯ ಹಿಂಗೋಡೆಗೆ ಕಿವಿ ತಗುಲಿ
ಸಿಯಾದರೂ ಹಾಡು ಸವಿಯಬೇಕೆನ್ನುವ ಹಂಬಲ. ಆ ದಿನಮಾನಗಳಲ್ಲಿ ಅದೆಷ್ಟೋ ಸಿನಿಮಾ ಹಾಡುಗಳು ಶಾಲೆಗಳ ಪ್ರಾರ್ಥನಾ ಗೀತೆಗಳಾಗಿ ಝೇಂಕರಿಸಿದವು. ಬರುಬರುತ್ತ ಸಿನಿಮಾ ಗೀತೆಗಳು ದ್ವಂದ್ವಾರ್ಥಗಳ ಗೂಡಾಗುತ್ತಿವೆ. ಗದ್ಯವೇ ಪದ್ಯದ ವೇಷ ತೊಡುತ್ತಿದೆ. ಪ್ರಾಸಕ್ಕಾಗಿ ಸಮುದ್ರವನ್ನೇ ನದಿಗೆ ಹರಿಸುವಂಥ ಅತಾರ್ಕಿಕತೆ.

ವೃತ್ತಿ ನಾಟಕಗಳಲ್ಲಿ ಅಭಿನಯ ಆಕಾಂಕ್ಷಿಗಳಿಗೆ ಹಾಡಲು ಬರುವುದೇ, ಸ್ವರ–ರಾಗ ಜ್ಞಾನವುಂಟೇ ಎಂದು ಪರೀಕ್ಷಿಸಲಾಗುತ್ತಿತ್ತು. ಕಾವ್ಯವಾಚನ, ಹರಿಕಥೆ ಕಾರ್ಯಕ್ರಮಗಳು ನೇಪಥ್ಯಕ್ಕೆ ಸರಿದಿವೆ. ನಾವು ಯಾವುದನ್ನು ‘ಕರ್ನಾಟಕ ಸಂಗೀತ’ ಎನ್ನುತ್ತೇವೋ ಅದು ನಮ್ಮ ರಾಜ್ಯ ಕರ್ನಾಟಕಕ್ಕೆ ಸಂಬಂಧಿಸಿದ್ದಲ್ಲ. ‘ಕರ್ಣಃ ಅಟತಿ ಇತಿ ಕರ್ಣಾಟಕ’ ಅಂದರೆ ಕರ್ಣಗಳಿಗೆ ಯಾವುದು ಇಂಪಾಗಿರುವುದೊ ಅದೆಲ್ಲವೂ ಕರ್ಣಾಟಕವೇ. ಹಾಗಾಗಿಯೇ ಕರ್ನಾಟಕ ಸಂಗೀತ ಅಥವಾ ಯಾವುದೇ ಶಾಸ್ತ್ರೀಯ ಪ್ರಕಾರದ ಗಾಯನ ಶ್ರೋತೃಗಳ ಹೃದಯ ತಲಪುತ್ತದೆ. ಆತ್ಮಾನಂದ ನೀಡುತ್ತದೆ.

ಕರ್ನಾಟಕ ಸಂಗೀತ ವಿಶೇಷವಾಗಿ ಭಾರತದ ದಕ್ಷಿಣ ರಾಜ್ಯಗಳೆಲ್ಲವನ್ನೂ ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಒಗ್ಗೂಡಿಸುತ್ತದೆ. ಸಂಗೀತ ಮನೋಭಾವಗಳ ಭಾಷೆ. ಖ್ಯಾತ ಡೇನಿಶ್ ಕಾದಂಬರಿಕಾರ ಹಾನ್ಸ್ ಆಂಡರ್‍ಸನ್, ‘ಪದಗಳು ಸೋತಾಗ ಸಂಗೀತ ಮಾತನಾಡುವುದು’ ಎಂದಿ
ದ್ದಾನೆ. ಸಿನಿಮಾಗೆ ಅಳವಡಿಸಿದ ಶಾಸ್ತ್ರೀಯ ಹಾಡುಗಳನ್ನು ಅನುಕರಿಸಹೋಗಿ ಮುಗ್ಗರಿಸುವ ಕಾರಣ ಸ್ಪಷ್ಟವಿದೆ. ಕಠಿಣ ಪರಿಶ್ರಮದಿಂದ ನಿಯಮಬದ್ಧವಾಗಿ ಕಲಿಯದೆ ‘ನಾವೂ ಹಾಡಬಹುದು, ಇದರಲ್ಲೇನು’ ಎಂಬ ಅಂಧ ಮೇಲರಿಮೆ. ವೃಥಾ ಅನುಕರಣೆ ಹೆಚ್ಚೆಂದರೆ ಮಿಮಿಕ್ರಿಯಾಗಬಹುದು ಮಾತ್ರ. ಪರರನ್ನು ಅನುಸರಿಸುವ ಭರದಲ್ಲಿ ತಮ್ಮದಲ್ಲದ ಧ್ವನಿಯಲ್ಲಿ ಹಾಡುವುದೂ ಉಂಟು. ಶಾಲಾ ಕಾಲೇಜುಗಳಲ್ಲಿ ಸಂಗೀತ ಒಂದು ಕಲಿಕೆಯ ವಿಷಯವಾಗಿದೆ. ಆದರೂ ಅಲ್ಲಿಂದ ಹೊರಬರುವ ವಿದ್ಯಾರ್ಥಿಗಳು ಎಷ್ಟರಮಟ್ಟಿಗೆ ಅದರ ಬಗ್ಗೆ ಆಸಕ್ತಿ ತೋರಿಸಿ, ಸಂಶೋಧನೆಗಳಲ್ಲಿ ತೊಡಗುತ್ತಾರೆ ಎನ್ನುವುದು ಪ್ರಶ್ನೆ. ವಾಸ್ತವವಾಗಿ ಶಾಸ್ತ್ರೀಯತೆಯ ಬೇರು ದೇಸಿಯೇ. ಆದರೆ ದೇಸಿ ಶಿಸ್ತು, ಕ್ರಮ, ನಿಯಮ, ಸಂದು ಸಂಸ್ಕರಣೆ ಆಗಬೇಕು ಅಷ್ಟೇ.

ಕೊಳಲು ವಾದಕರಾಗಿದ್ದ ಡಾ. ರಮಣಿಯವರಲ್ಲಿ ಒಬ್ಬ ಬಾಲಕ, ‘ಕೊಳಲು ಕಲಿಸಿ’ ಎಂದ. ಅದಕ್ಕೆ ರಮಣಿ ‘ಖಂಡಿತವಾಗಿ ಹೇಳಿಕೊಡುವೆ, ಆದರೆ ನೀನು ಶಾಲೆ ಬಿಡಬೇಕಾಗಬಹುದು’ ಅಂತ ಹೇಳಿದರು.

ಶಾಸ್ತ್ರೀಯ ಎಂದರೆ ವೈಜ್ಞಾನಿಕ ಎಂದೇ ಅರ್ಥ. ಕೇರಳದಲ್ಲಿ ವಿಜ್ಞಾನ ಪರಿಷತ್ ಸಂಸ್ಥೆಗೆ ‘ಕೇರಳ ಶಾಸ್ತ್ರ ಪರಿಷತ್’ ಎಂದೇ ಕರೆಯುತ್ತಾರೆ. ಸಂಗೀತವನ್ನು ವೈಜ್ಞಾನಿಕವಾಗಿ ಕಲಿತು ಒಲಿಸಿಕೊಳ್ಳಬೇಕೇ ಹೊರತು ಇನ್ನೊಬ್ಬರು ಹಾಡುವುದನ್ನು ಕೇಳಿ, ನೋಡಿ ಕರಗತವಾಗಿಸಿಕೊಳ್ಳುವುದು ಅಸಾಧ್ಯ. ಶಾಸ್ತ್ರೀಯವಾಗಿ ಹಾಡುವುದು ಕಠಿಣ, ಅದಕ್ಕೆ ಅಗಾಧ ಶ್ರಮ, ಶ್ರದ್ಧೆ ಅಗತ್ಯ ಎಂಬ ಅಸಮರ್ಥನೀಯ ಅಸಹಾಯಕತೆಯ ಫಲವೇ ಫ್ಯೂಷನ್ ಎನ್ನಬಹುದೇನೋ!

ಗಮನಿಸಬೇಕಾದ್ದೇನೆಂದರೆ ಫ್ಯೂಷನ್‍ನಲ್ಲಿ ಹಾಡುಗಾರರಿಗೆ ವಾದ್ಯ ಸಹಕಾರ ಒದಗಿಸುವ ಕಲಾವಿದರು ಸಮರ್ಥವಾಗಿಯೇ ಶಾಸ್ತ್ರೀಯ ಸಂಗೀತ ಕಲಿತಿರುತ್ತಾರೆ. ಶಾಸ್ತ್ರೀಯತೆಗೆ ಬಂದಿರುವ ಧಕ್ಕೆ ಫ್ಯೂಷನ್ ಹಂತವನ್ನೂ ದಾಟಿ ಮುಂದೆ ಸಾಗಿದೆ. ಹಿನ್ನೆಲೆ ಟ್ಯೂನ್ಸ್ ಹಾಕಿಕೊಂಡು ಅದಕ್ಕೆ ತಕ್ಕಂತೆ ಗಾನ ಒಪ್ಪಿಸುವುದಿದೆ. ಭರತನಾಟ್ಯ, ಕೂಚಿಪುಡಿಯಂಥ ನೃತ್ಯ ಪ್ರದರ್ಶಿಸಲು ಈ ವಿಧಾನ ಅನಿವಾರ್ಯವೆನ್ನಿಸುವ ಮಟ್ಟಿಗೆ ಅನುಸರಿಸಲಾಗುತ್ತದೆ.

ಹೀಗಾಗಿ ಗಾಯನ, ನೃತ್ಯಕ್ಕೆ ವಾದ್ಯಗಳ ಸುಸಂಬದ್ಧತೆ ಅಯೋಮಯವಾಗುತ್ತದೆ. ಪುರಂದರ ದಾಸರು, ‘ತಾಳ ಬೇಕು, ತಾಳಕ್ಕೆ ತಕ್ಕ ಮೇಳ ಬೇಕು’ ಎಂದರು. ಶ್ರುತಿಯೇ ತಾಯಿಯಾಗಿ, ಲಯವೇ ತಂದೆಯಾಗಿ ವಿಜೃಂಭಿಸದಿದ್ದರೆ ಅಬ್ಬರ ಕಟ್ಟಿಟ್ಟ ಬುತ್ತಿ. ಒಂದು ಕಾಲದಲ್ಲಿ ಮೈಕ್ ವ್ಯವಸ್ಥೆಯಿಲ್ಲದಿದ್ದರೂ ಮೂರು, ಮೂರೂವರೆ ತಾಸುಗಳ ಅವಧಿಗೆ ಹಾಡುವವರಿದ್ದರು. ಸಂಗೀತ ಕಛೇರಿ ನಡೆಸಿಕೊಡಲಾಗುತ್ತಿತ್ತು. ವಾದ್ಯ ಸಂಗೀತವನ್ನು ಬೆರಳೆಣಿಕೆಯಷ್ಟು ಮಂದಿ ಸಹ ಕಲಿಯಲು ಮುಂದಾಗುತ್ತಿಲ್ಲ. ಸಂಗೀತೋಪಾಸನೆ ಆರಂಭಿಸಿದ ಕೆಲವೇ ದಿನಗಳಲ್ಲಿ ಅಭ್ಯಾಸಕ್ಕೆ ಮಂಗಳ ಹಾಡುವವರೆಷ್ಟೊ!

ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಐ.ಟಿ., ಬಿ.ಟಿ., ಎಂಜಿನಿಯರಿಂಗ್, ವೈದ್ಯಕೀಯ, ಎಂ.ಬಿ.ಎ.ಗಳತ್ತ ದೃಷ್ಟಿ ಹರಿಸುತ್ತಾರೆಯೇ ಹೊರತು ಸಂಗೀತದತ್ತ ಅವರ ಒಲವೇಕಿಲ್ಲ? ತಬಲ, ವೀಣೆ, ಕೊಳಲು, ಘಟಂ, ಸಾರಂಗಿ, ಜಲತರಂಗ್, ಹಾರ್ಮೋನಿಯಂ, ಮೃದಂಗ- ಈ ನಡುವೆಯೇ ಭೇದ ಅರಸುವ ಪ್ರವೃತ್ತಿಯೂ ಇಲ್ಲದಿಲ್ಲ. ಹಾಗೆ ನೋಡಿದರೆ ಪಿಟೀಲು ಹೇಳಿಕೇಳಿ ಪಾಶ್ಚಿಮಾತ್ಯ ವಾದ್ಯ. ಅದನ್ನು ಕರ್ನಾಟಕ ಸಂಗೀತಕ್ಕೆ ಅದೆಷ್ಟು ಸೊಗಸಾಗಿ ಹೊಂದಿಸಲಾಯಿತು, ಅದು ಹೊಂದಿಕೊಂಡಿತು ಎನ್ನುವುದು ಮುಖ್ಯವಾಗುತ್ತದೆ.

ಪರಂಪರೆ ಉಳಿಸಿಕೊಂಡೇ ಪ್ರಯೋಗವೆಂದರೆ ಇದೇ ಅಲ್ಲವೆ? ಮ್ಯಾಂಡೊಲಿನ್ ವಾದನ ಇನ್ನೊಂದು ಉದಾಹರಣೆ. ಗುರುಕುಲ ಪದ್ಧತಿಯ ಸಂಗೀತ ಕಲಿಕೆ ಇತಿಹಾಸದ ಪುಟಗಳನ್ನು ಸೇರಿದೆ. ಇಂದಿಗೂ ಅಲ್ಲಲ್ಲಿ ಅಪರೂಪಕ್ಕಾದರೂ ಕೆಲ ನಿದರ್ಶನಗಳು ಲಭ್ಯ. ಕೇರಳದ ಪಿಟೀಲು ವಾದಕರೊಬ್ಬರಿಗೆ ಈಗಾಗಲೇ ಸಾಕಷ್ಟು ಯಶಸ್ಸು, ಕೀರ್ತಿ ಪ್ರಾಪ್ತವಾಗಿದೆ. ಆದರೆ ನೈಪುಣ್ಯಕ್ಕೆ ಆಗಸವೇ ಮಿತಿ. ಅವರು ವಾರಕ್ಕೊಮ್ಮೆ ತಿರುವನಂತಪುರದಿಂದ ಮೈಸೂರಿಗೆ ವಿಮಾನದಲ್ಲಿ ಬಂದು ನುರಿತ ಪಿಟೀಲು ವಿದ್ವಾಂಸರೊಬ್ಬರ ಬಳಿ ವಾದನ ಕೌಶಲದ ಹಲವು ಸೂಕ್ಷ್ಮಗಳನ್ನು ಪರಿಚಯಿಸಿಕೊಳ್ಳುತ್ತಾರಂತೆ. ಶಾಸ್ತ್ರೀಯತೆಯ ಅಭಿರುಚಿ ರೂಢಿಸಿಕೊಂಡರೆ ಸಂಗೀತ ತಾನೇ ತಾನಾಗಿ ಆಸ್ವಾದನೆಗೆ ನಿಲುಕೀತು. ಹಾಡ್ತಾ ಹಾಡ್ತಾ ರಾಗ ಎನ್ನುವಂತೆ ಕೇಳ್ತಾ ಕೇಳ್ತಾ ಗಾನಾನುಭೋಗ. ಸಂಗೀತ ಕಛೇರಿಗಳಲ್ಲಿ ಸಭಿಕರ ನಿರಾಸಕ್ತಿ, ತನ್ಮಯತೆಯ ಕೊರತೆ ತಾವೂ ಆಲಿಸದೆ ಇತರರನ್ನೂ ಕೇಳಗೊಡದಂತಾಗಿಸುತ್ತದೆ.

Comments
ಈ ವಿಭಾಗದಿಂದ ಇನ್ನಷ್ಟು

ಸಂಗತ
ಮೈಸೂರು ‘ಸಿನಿಮಾ ಭಾಗ್ಯ’ ವಂಚನೆ ಅಕ್ಷಮ್ಯ

ಸಿನಿಮಾ ಎಂಬುದು ಇಪ್ಪತ್ತನೇ ಶತಮಾನದಲ್ಲಿ ತಂತ್ರಜ್ಞಾನ, ದೃಶ್ಯ-ಶಬ್ದ ಕಲೆಗಾರಿಕೆಯ ಹೆಣಿಗೆಯಲ್ಲಿ ಕಲಾಭಿವ್ಯಕ್ತಿಯಾಗಿಯೂ, ರಂಜನೆಯ ಮಾಧ್ಯಮವಾಗಿಯೂ ರೂಪ ಪಡೆಯಿತು. ಬೇರೆಲ್ಲಾ ಕಲಾಭಿವ್ಯಕ್ತಿ ಹಾಗೂ ರಂಜನೋದ್ಯಮಗಳಿಗಿಂತ ಹೆಚ್ಚು...

17 Jan, 2018
ತಿಳಿವಳಿಕೆ ಕೊರತೆ ಮತ್ತು ಪರಿಣಾಮ

ಚರ್ಚೆ
ತಿಳಿವಳಿಕೆ ಕೊರತೆ ಮತ್ತು ಪರಿಣಾಮ

16 Jan, 2018

ಚರ್ಚೆ
ನಾವು ಮತ್ತು ನಮ್ಮ ದೇಶ

ಹಿಂದೂ ಧರ್ಮ ಇತ್ತೀಚಿನದು ಎನ್ನುವುದಾದರೆ ಇದಕ್ಕೂ ಮೊದಲು ಸಾವಿರಾರು ವರ್ಷಗಳಿಂದ ಇಲ್ಲಿ ಬದುಕಿದ ಜನರಿಗೆ ಯಾವ ಧರ್ಮವೂ ಇರಲೇ ಇಲ್ಲವೇ? ವೇದ ಕಾಲದಲ್ಲಿ ಯಾವ...

15 Jan, 2018

ಸಂಗತ
ವೈಚಾರಿಕ ಸ್ಪಷ್ಟತೆ ಇಲ್ಲದ ವಾದ

ಭಾರತದ ಅನೇಕ ರಾಜರು ಸೋತದ್ದು ಕುದುರೆಗಳ ಕೊರತೆಯಿಂದಾಗಿ. ಕುದುರೆ ಸೈನ್ಯದ ಕೊರತೆಯಿಂದಾಗಿ ಆನೆಗಳ ಸೈನ್ಯವಿಟ್ಟುಕೊಂಡು, ಕುದುರೆ ಸೈನ್ಯವನ್ನೇ ಹೊಂದಿದ್ದ ಮುಸ್ಲಿಂ ಅರಸರ ಸೈನ್ಯದಿಂದ. ಹಾಗಿರುವಾಗ...

12 Jan, 2018

ಸಂಗತ
ರಾಜಕಾರಣಿ ರಜನಿ ಮೌನ ಮುರಿಯಲೇಬೇಕು

ರಾಜಕಾರಣದ ಕಲೆ ಕಲಿಯುವುದಕ್ಕೆ ಮೊದಲು ಸಾಕಷ್ಟು ದೂರ ಸಾಗಬೇಕಿದೆ ಎಂಬುದಕ್ಕೆ ರಜನಿಕಾಂತ್‌ ಅವರ ಮೌನ ಪುರಾವೆಯಾಗಿದೆ. ತಾವೊಬ್ಬ ಮುತ್ಸದ್ದಿ ಎಂಬ ಛಾಪು ಮೂಡಿಸುವುದಕ್ಕೆ ಇದು...

11 Jan, 2018