ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಆತ್ಮಹತ್ಯೆ ಪ್ರಕರಣ: ಜಾರ್ಜ್‌ ಬೆಂಬಲಕ್ಕೆ ನಿಂತ ಕಾಂಗ್ರೆಸ್ ನಾಯಕರು

Last Updated 27 ಅಕ್ಟೋಬರ್ 2017, 20:38 IST
ಅಕ್ಷರ ಗಾತ್ರ

ಬೆಂಗಳೂರು: ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ಅವರ ಬೆಂಬಲಕ್ಕೆ ನಿಂತಿದೆ.

ಈ ಪ್ರಕರಣದಲ್ಲಿ ಜಾರ್ಜ್ ಅವರನ್ನು ಒಂದನೇ ಆರೋಪಿ ಸಿಬಿಐ ಹೆಸರಿಸಿದೆ. ‘ಎಂತಹದೇ ಪರಿಸ್ಥಿತಿ ಎದುರಾದರೂ ಸಿಬಿಐ ತನಿಖೆಗೆ ಪೂರ್ಣಗೊಳ್ಳುವವರೆಗೆ ಜಾರ್ಜ್ ರಾಜೀನಾಮೆ ಕೊಡುವುದು ಬೇಡ. ಎಲ್ಲರೂ ಸೇರಿ ಬಿಜೆಪಿಗೆ ತಿರುಗೇಟು ಕೊಡೋಣ’ ಎಂಬ ತೀರ್ಮಾನಕ್ಕೆ ಕಾಂಗ್ರೆಸ್ ನಾಯಕರು ಬಂದಿದ್ದಾರೆ. ಆದರೆ, ಗಣಪತಿ ಆತ್ಮಹತ್ಯೆ ಮಾಡಿಕೊಂಡ ಸಮಯದಲ್ಲಿ ಜಾರ್ಜ್ ರಾಜೀನಾಮೆಗೆ ಆಗ್ರಹಿಸಿ ವಿಧಾನಮಂಡಲದ ಉಭಯಸದನಗಳಲ್ಲಿ ಒಂದಾಗಿ ಅಹೋರಾತ್ರಿ ಧರಣಿ ನಡೆಸಿದ್ದ ಬಿಜೆಪಿ, ಜೆಡಿಎಸ್‌ ಈಗ ಬೇರೆ ಬೇರೆ ನಿಲುವು ತಳೆದಿವೆ.

ಜಾರ್ಜ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ಸರಣಿ ಹೋರಾಟ ಹಮ್ಮಿಕೊಳ್ಳಲು ನಿರ್ಧರಿಸಿದೆ. ಆದರೆ, ‘ಸಚಿವರು ಈಗ ರಾಜೀನಾಮೆ ಕೊಡುವ ಅಗತ್ಯವಿಲ್ಲ. ತನಿಖೆ ಪೂರ್ಣಗೊಂಡು ಆರೋಪ ಸಾಬೀತಾದರೆ ಆನಂತರ ರಾಜೀನಾಮೆ ಕೊಡಲಿ’ ಎಂದು ಜೆಡಿಎಸ್ ಹೇಳಿದೆ.

ಒಗ್ಗಟ್ಟಿನ ಸಭೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ  ಶುಕ್ರವಾರ ಬೆಳಿಗ್ಗೆ ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷರಾದ ಎಸ್.ಆರ್. ಪಾಟೀಲ, ದಿನೇಶ್‌ ಗುಂಡೂರಾವ್, ಹಿರಿಯ ಸಚಿವರಾದ ಟಿ.ಬಿ. ಜಯಚಂದ್ರ, ರಾಮಲಿಂಗಾರೆಡ್ಡಿ, ಕೆ.ಆರ್. ರಮೇಶ್‌ ಕುಮಾರ್, ಡಿ.ಕೆ. ಶಿವಕುಮಾರ್, ಆರ್. ರೋಷನ್ ಬೇಗ್‌, ಎಚ್.ಸಿ. ಮಹದೇವಪ್ಪ, ಎಂ.ಬಿ. ಪಾಟೀಲ ಪಾಲ್ಗೊಂಡಿದ್ದರು. ಎರಡು ತಾಸಿಗೂ ಹೆಚ್ಚು ಅವಧಿ ನಡೆದ ಸಭೆಯಲ್ಲಿ ಜಾರ್ಜ್ ಬೆಂಬಲಕ್ಕೆ ನಿಲ್ಲುವ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಯಿತು.

‘ಜಾರ್ಜ್ ರಾಜೀನಾಮೆ ಕೊಡುವವರೆಗೂ ಹೋರಾಟ ನಡೆಸುವುದಾಗಿ ಬಿಜೆಪಿ ಹೇಳುತ್ತಿದೆ. ಸೇಡಿನ ರಾಜಕಾರಣಕ್ಕೆ ಮುಂದಾಗಿರುವ ಆ ಪಕ್ಷದ ನಾಯಕರು ಸಿಬಿಐ, ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ನಾಯಕರ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇದನ್ನು ಜನರಿಗೆ ಮನವರಿಕೆ ಮಾಡಿ, ಬಿಜೆಪಿಯ ತಂತ್ರಗಾರಿಕೆಯನ್ನು ಬಯಲು ಮಾಡಬೇಕು ಎಂದು ಸಿದ್ದರಾಮಯ್ಯ ಸಭೆಯಲ್ಲಿ ಸೂಚಿಸಿದರು’ ಎಂದು ಮೂಲಗಳು ತಿಳಿಸಿ

ಕೇಂದ್ರ ಸಚಿವರ ರಾಜೀನಾಮೆ ಪಡೆಯಲಿ: ಸಭೆ ಬಳಿಕ ಸಚಿವರ ಜತೆಗೂಡಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಜಾರ್ಜ್‌ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಕೆಲವು ಕೇಂದ್ರ ಸಚಿವರು ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆಗಳಿವೆ. ಮೊದಲು ಅವರ ರಾಜೀನಾಮೆ ಪಡೆಯಲಿ’ ಎಂದು ಬಿಜೆಪಿಗೆ ಸವಾಲು ಹಾಕಿದರು.

‌‘ನರೇಂದ್ರ ಮೋದಿ ಸಂಪುಟದ ಎಂಟು ಸಂಪುಟ ದರ್ಜೆ, ಮೂವರು ರಾಜ್ಯ ಖಾತೆ ಸಚಿವರು ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ವಿರುದ್ಧ ಕೊಲೆ, ಕೊಲೆ ಯತ್ನ, ವಂಚನೆ ಹೀಗೆ ವಿವಿಧ ಕೇಸುಗಳಿವೆ. ಅವರೆಲ್ಲರೂ ಸಚಿವರಾಗಿ ಮುಂದುವರಿದಿಲ್ಲವೇ’ ಎಂದು ಏರಿದ ಧ್ವನಿಯಲ್ಲಿ ಪ್ರಶ್ನಿಸಿದರು.‌

‘ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಜೈಲಿಗೆ ಹೋಗಿ ಬಂದಿದ್ದಾರೆ. ಅವರ ವಿರುದ್ಧ ಏಳು ವಂಚನೆ ಪ್ರಕರಣ, ಫೋರ್ಜರಿ ಸೇರಿದಂತೆ ವಿವಿಧ ಕ್ರಿಮಿನಲ್‌ ಮೊಕದ್ದಮೆಗಳು ಇವೆ. ಜಾರ್ಜ್ ರಾಜೀನಾಮೆ ಕೇಳುವ ನೈತಿಕತೆಯನ್ನು ಬಿಜೆಪಿ ಕಳೆದುಕೊಂಡಿದೆ’ ಎಂದು ಮುಖ್ಯಮಂತ್ರಿ ಹರಿಹಾಯ್ದರು.

ಕುಶಾಲನಗರ ಪೊಲೀಸ್ ಠಾಣೆಯಲ್ಲಿ ವರ್ಷದ ಹಿಂದೆ ದಾಖಲಾಗಿದ್ದ ಎಫ್‌ಐಆರ್‌ನ ಮುಂದುವರಿದ ಭಾಗವಾಗಿ ಸಿಬಿಐ ಎಫ್‌ಐಎರ್‌ ದಾಖಲಿಸಿದೆ. ಅದೇನು ಹೊಸದಲ್ಲ ಎಂದು ಅವರು ಹೇಳಿದರು.

‘ಹಿಂದೆ ಎಫ್ಐಆರ್ ದಾಖಲಾದಾಗ ಗೃಹ ಸಚಿವರಾಗಿದ್ದ ಜಾರ್ಜ್, ಪಾರದರ್ಶಕವಾಗಿ ತನಿಖೆ ನಡೆಯಲಿ ಎಂಬ ಕಾರಣಕ್ಕೆ ಸ್ವಪ್ರೇರಣೆಯಿಂದ ರಾಜೀನಾಮೆ ನೀಡಿದ್ದರು. ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಈ ಪ್ರಕರಣದಲ್ಲಿ ಬಿ ರಿಪೋರ್ಟ್ ಸಲ್ಲಿಸಿತ್ತು. ಆನಂತರ ಅವರು ಸಂಪುಟಕ್ಕೆ ಮರಳಿದ್ದರು. ಹಲವಾರು ಹಂತದ ತನಿಖೆಯಲ್ಲಿ ಜಾರ್ಜ್‌ ತಪ್ಪಿಲ್ಲ ಎಂಬುದು ಸಾಬೀತಾಗಿದೆ. ಹೀಗಿರುವಾಗ ಅವರು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಪ್ರತಿಪಾದಿಸಿದರು.

‘ಸಿಬಿಐ ತನಿಖೆಗೆ ನಿರ್ದೇಶಿಸಿದ್ದ ಸುಪ್ರೀಂಕೋರ್ಟ್ ಎಲ್ಲಿಯೂ ಜಾರ್ಜ್ ಹೆಸರು ಅಥವಾ ಬಿ ರಿಪೋರ್ಟ್‌ ಅನ್ನು ಉಲ್ಲೇಖಿಸಿಲ್ಲ. ಹಿಂದಿನ ತನಿಖೆ ಮುಂದುವರಿಸಿ ಅಥವಾ ಹೊಸದಾಗಿ ತನಿಖೆ ಆರಂಭಿಸಿ ಎಂದಷ್ಟೇ ಹೇಳಿದೆ. ರಾಜಕೀಯ ಕಾರಣಕ್ಕೆ ಬಿಜೆಪಿಯವರು ಇದನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಟೀಕಿಸಿದರು.

**

‘ಸಿಬಿಐ ಅಸ್ತ್ರ ಬಳಸುತ್ತಿರುವ ಮೋದಿ’

‘ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ತಮಗೆ ಬೇಕಾದವರನ್ನು ದೋಷಮುಕ್ತರನ್ನಾಗಿ ಮಾಡಿಸುತ್ತಿದ್ದಾರೆ. ಸಿಬಿಐ ಅನ್ನು ಟೀಕಿಸುತ್ತಿದ್ದ ಬಿಜೆಪಿ ನಾಯಕರು ಈಗ ಅದನ್ನೇ ಎದುರಾಳಿಗಳ ವಿರುದ್ಧ ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಿದ್ದರಾಮಯ್ಯ ದೂರಿದರು.

ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ₹25,000 ಕೋಟಿ ನಷ್ಟವಾಗಿದೆ ಎಂದು ಲೋಕಾಯುಕ್ತರು ತನಿಖಾ ವರದಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ ಸಿಬಿಐ ತನಿಖೆಗೆ ಆದೇಶಿಸಿತ್ತು. ಪ್ರಾಥಮಿಕ ಹಂತದಲ್ಲೇ ಸಿಬಿಐ ತನಿಖೆ ಮುಕ್ತಾಯಗೊಳಿಸಿದೆ. ಇದು ಏನನ್ನು ಸೂಚಿಸುತ್ತದೆ’ ಎಂದೂ ಮುಖ್ಯಮಂತ್ರಿ ಕೇಳಿದರು.

**

ಒಗ್ಗಟ್ಟು ಪ್ರದರ್ಶನಕ್ಕೆ ವೇಣುಗೋಪಾಲ್ ಸೂಚನೆ

ಜಾರ್ಜ್ ಬೆಂಬಲಕ್ಕೆ ನಿಲ್ಲುವ ವಿಷಯದಲ್ಲಿ ಪಕ್ಷ ಹಾಗೂ ಸರ್ಕಾರದ ನಿಲುವಿನಲ್ಲಿ ಕಿಂಚಿತ್ತೂ ವ್ಯತ್ಯಾಸ ಇರದಂತೆ ನೋಡಿಕೊಳ್ಳಬೇಕು. ಬಿಜೆಪಿ ನಾಯಕರ ಟೀಕೆ, ಆಗ್ರಹಕ್ಕೆ ಎಲ್ಲರೂ ಒಟ್ಟಾಗಿ ನಿಂತು ಪ್ರತಿರೋಧ ತೋರಬೇಕು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೇಣುಗೋಪಾಲ್‌ಗೆ ಪ್ರತ್ಯೇಕವಾಗಿ ದೂರವಾಣಿ ಕರೆ ಮಾಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿ. ಪರಮೇಶ್ವರ, ಎಫ್ಐಆರ್‌ ದಾಖಲಾದ ವಿವರ, ಬಿಜೆಪಿಯ ಸಂಭಾವ್ಯ ಹೋರಾಟದ ಬಗ್ಗೆ ಮಾಹಿತಿ ನೀಡಿದರು ಎಂದು ಗೊತ್ತಾಗಿದೆ.

**

ಬಿಜೆಪಿಯವರು ಭಂಡರು, ನಾಚಿಕೆ ಇಲ್ಲದವರು. ಅವರ ಬೆದರಿಕೆಗೆ ಮಣಿಯುವುದಿಲ್ಲ. ರಾಜಕೀಯವಾಗಿ ಎದುರಿಸುತ್ತೇವೆ.


–ಸಿದ್ದರಾಮಯ್ಯ, ಮುಖ್ಯಮಂತ್ರಿ

**

ಸಿಬಿಐ ತನಿಖೆ ಪೂರ್ಣಗೊಂಡು ಸತ್ಯ ಹೊರಬರುವವರೆಗೂ ಜಾರ್ಜ್ ರಾಜೀನಾಮೆ ಅಗತ್ಯವಿಲ್ಲ ಎಂಬುದು ಪಕ್ಷದ ನಿಲುವು


–ಜಿ. ಪರಮೇಶ್ವರ, ಕೆಪಿಸಿಸಿ ಅಧ್ಯಕ್ಷ

**

ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವುದೇ ಬಿಜೆಪಿಯವರ ಕೆಲಸ. ಜಾರ್ಜ್ ವಿಷಯದಲ್ಲೂ ಬಿಜೆಪಿ ಅದನ್ನೇ ಮಾಡುತ್ತಿದೆ.


–ಡಿ.ಕೆ. ಶಿವಕುಮಾರ್, ಇಂಧನ ಸಚಿವ

**

ಆದಾಯ ತೆರಿಗೆ, ಸಿಬಿಐ, ಜಾರಿ ನಿರ್ದೇಶನಾಲಯ ಎಲ್ಲವನ್ನೂ ಎದುರಾಳಿ ಪಕ್ಷದವರ ಮೇಲೆ ಬಳಸುತ್ತಿರುವ ಬಿಜೆಪಿ ನಾಯಕರು ಸರ್ವಾಧಿಕಾರಿಗಳು
–ಎಂ.ಬಿ. ಪಾಟೀಲ, ಜಲಸಂಪನ್ಮೂಲ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT