ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರಿಂದ ಕಾಯಿಲೆ ಬಹಿರಂಗಗೊಂಡಾಗ...

Last Updated 28 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

‘The life so short, the craft so long to learn’. (ಜೀವನ ತುಂಬಾ ಚಿಕ್ಕದು, ಆದರೆ ಕಲಿಕೆ ಮಾತ್ರ ನಿರಂತರ...) ವೈದ್ಯಶಾಸ್ತ್ರದ ಪಿತಾಮಹ ಹಿಪೊಕ್ರಟಿಸ್ ಹೇಳಿದ ಮಾತಿದು. ಜಗತ್ತಿನಲ್ಲಿ ಅಸಂಖ್ಯ ವೃತ್ತಿಗಳಿವೆ. ಅವುಗಳಲ್ಲಿ ಕೆಲವು ಕೌಶಲ್ಯವನ್ನಷ್ಟೇ ಬೇಡಿದರೆ ಮತ್ತೆ ಕೆಲವು ಬುದ್ಧಿವಂತಿಕೆ, ಪಾಂಡಿತ್ಯವನ್ನು ಬೇಡುತ್ತವೆ. ಕೆಲವು ವೃತ್ತಿಗಳಲ್ಲಿ ಯಶಸ್ವಿಯಾಗಬೇಕಾದರೆ ಕೌಶಲ್ಯ, ಬುದ್ಧಿವಂತಿಕೆ, ಪಾಂಡಿತ್ಯ ಮತ್ತು ಮಾನವೀಯತೆ ಒಟ್ಟಿಗೆ ಇರಬೇಕಾಗುತ್ತದೆ. ಅಂಥವುಗಳಲ್ಲಿ ಶ್ರೇಷ್ಠ ಮತ್ತು ಗೌರವಯುತವಾದುದು ವೈದ್ಯಕೀಯ ವೃತ್ತಿ. ಉನ್ನತ ಮಟ್ಟದ ಕೌಶಲ್ಯದ ಜೊತೆಗೆ ಸೇವೆಯ ಸವಾಲನ್ನು ಅದು ಒಳಗೊಂಡಿರುತ್ತದೆ. ವೈದ್ಯರ ಮತ್ತು ಶುಶ್ರೂಷಕರ ಪ್ರಾಮುಖ್ಯ ನಮಗೆ ತಿಳಿಯುವುದೇ ಜೀವನ್ಮರಣದ ಪ್ರಶ್ನೆ ಎದ್ದಾಗ. 1986ರಲ್ಲಿ ಇಂತಹ ಶ್ರೇಷ್ಠ ವೃತ್ತಿನಿರತರನ್ನು ಜರ್ಜರಿತಗೊಳಿಸಿದ ಒಂದು ಘಟನೆ ಸಂಭವಿಸಿತು. ಅದರಿಂದ ಪಾರಾಗಲು ಅವರು ಏರ್ಪಡಿಸಿಕೊಂಡ ಸ್ಥಿತಿಯಲ್ಲಿ ನನ್ನನ್ನೂ ಒಳಪಡಿಸಿಕೊಂಡರು. ವೈದ್ಯರ ಮೇಲೆ ಬೀರಿದಷ್ಟೇ ಪ್ರಭಾವ ನನ್ನ ಮೇಲೂ ಬೀರಿದ ಘಟನೆ ಅದು. ಈ ಕಾರಣದಿಂದಾಗಿ ನನ್ನ ನೆನಪಿನ ಕೋಶದಲ್ಲಿ ಸದಾ ಉಳಿಯುವಂತಾಗಿದೆ.

1986ರ ಫೆಬ್ರುವರಿ ತಿಂಗಳ ಒಂದು ದಿನ ವಿಕ್ಟೋರಿಯಾ ಆಸ್ಪತ್ರೆಯ ವಿಧಿವೈದ್ಯಶಾಸ್ತ್ರ ವಿಭಾಗದ ಡಾ.ಬಿ.ಸಿ. ಚಂದ್ರಗೌಡರು ಫೋನಾಯಿಸಿದರು. ತುಂಬಾ ತುರ್ತಾದ ವಿಷಯವನ್ನು ನನಗೆ ತಿಳಿಸಬೇಕಿರುವುದರಿಂದ ಡಾ.ಎಂ.ರಾಮುರವರು ನನ್ನೊಂದಿಗೆ ಸಮಯ ನಿಗದಿಮಾಡಲು ಕೇಳಿಕೊಳ್ಳುತ್ತಿರುವುದಾಗಿ ಹೇಳಿದರು. ನನಗೆ ಡಾ.ರಾಮು ಮತ್ತು ಚಂದ್ರಗೌಡರ ಕುರಿತು ಅಪಾರ ಗೌರವವಿತ್ತು. ಡಾ.ರಾಮುರವರು ವಿಕ್ಟೋರಿಯಾ ಆಸ್ಪತ್ರೆಯ ವಿಧಿವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿವೃತ್ತಿ ಹೊಂದಿದ ನಂತರ ಎಂ.ಎಸ್.ರಾಮಯ್ಯ ಆಸ್ಪತ್ರೆಯ ವಿಧಿವೈದ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ 1990-1997ರವರೆಗೆ ಇದ್ದವರು. ಹಿತವಾಗಿ ನಡೆದುಕೊಳ್ಳುವ ಗುಣದಿಂದಾಗಿ ಅಪಾರ ಜನಮನ್ನಣೆ ಪಡೆದಿದ್ದರು. ಮೇಲಾಗಿ ಬದುಕಿನ ಒಳಚಲನೆಗಳನ್ನು ಅರಿತಿದ್ದರು. ಅವರಲ್ಲಿ ನನಗಿದ್ದ ಗೌರವಸೂಚಕವಾಗಿ ಕೂಡಲೆ ಸಿಗುತ್ತೇನೆಂದು ತಿಳಿಸಿದೆ. ಅದೇ ದಿನ ಸಂಜೆ ಚಂದ್ರಗೌಡರ ಮನೆಯಲ್ಲಿ ಮೂವರೂ ಸೇರಿದೆವು.

ಡಾ.ರಾಮುರವರು ನೇರವಾಗಿ ವಿಷಯ ಪ್ರಸ್ತಾಪಿಸುತ್ತಾ, ತಮ್ಮ ವೈದ್ಯವೃತ್ತಿಗೆ ಸವಾಲಾದ ಸಮಸ್ಯೆ ಉದ್ಭವಿಸಿರುವುದನ್ನು ವಿವರಿಸಿದರು. ‘ಎರಡು ದಿನಗಳ ಹಿಂದೆ ಬೆಂಗಳೂರು ನಗರದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ಶಾಶ್ವತಯ್ಯ ಎಂಬುವರು ಡಾ.ಕೃಪಾನಂದರ ವಿರುದ್ಧ ಕೊಟ್ಟ ದೂರನ್ನು ಆಧರಿಸಿ ಅಪರಾಧ ಪ್ರಕರಣವೊಂದು ದಾಖಲಾಗಿದೆ. ಇದು ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಕಾರಣ, ವೈದ್ಯ ವೃತ್ತಿನಿರತರಲ್ಲಿ ಭಯದ ಸುಂಟರಗಾಳಿ ಬೀಸತೊಡಗಿದೆ. ಈ ದೂರಿಗೆ ಕರ್ನಾಟಕ ವೈದ್ಯಕೀಯ ಸಂಘ ಸೇರಿದಂತೆ ಹಲವಾರು ವೈದ್ಯರಿಂದ ವಿರೋಧ ವ್ಯಕ್ತವಾಗಿದೆ. ಒಂದು ವೇಳೆ ಈ ದೂರಿನಲ್ಲಿ ಇರುವ ಅಂಶಗಳು ನಿಜವೆಂದು ಸಾಬೀತಾದರೆ ವೈದ್ಯರುಗಳಿಗೆ ವೃತ್ತಿ ನಿರ್ವಹಣೆ ಅಸಾಧ್ಯವಾಗುವ ಕಾರಣ ಎಲ್ಲರೂ ಚಡಪಡಿಸುತ್ತಿದ್ದಾರೆ’ ಎಂದು ತಿಳಿಸಿದರು.

ಶಾಶ್ವತಯ್ಯನವರು ನೀಡಿರುವ ದೂರಿನ ಪ್ರತಿಯೊಂದನ್ನು ಪಡೆದುಕೊಂಡ ನಾನು ಮಾರನೆಯ ದಿನ ಅವರೊಂದಿಗೆ ಸಮಾಲೋಚಿಸುವುದಾಗಿ ತಿಳಿಸಿದೆ. ಈ ವಿಷಯದ ಸಮಾಲೋಚನೆಯಲ್ಲಿ ಹಲವು ವೈದ್ಯರು ಭಾಗವಹಿಸಲು ಕಾತರದಿಂದ ಕಾಯುತ್ತಿರುವುದಾಗಿ ಡಾ. ರಾಮು ತಿಳಿಸಿದರು. ಎಲ್ಲರ ಜೊತೆಗೂ ಸಮಾಲೋಚನೆಗೆ ಸಿದ್ಧನಿರುವುದಾಗಿ ನಾನು ಹೇಳಿದೆ.

ಡಾ. ರಾಮು ಅವರು ನನಗೆ ಕೊಟ್ಟಿದ್ದ ದೂರಿನ ನಕಲು ಪ್ರತಿಯನ್ನು ಆ ರಾತ್ರಿಯೇ ತಳಸ್ಪರ್ಶಿಯಾಗಿ ಗಮನಿಸಿಕೊಂಡೆ. ಶಾಶ್ವತಯ್ಯ ಇಪ್ಪತ್ತೇಳು ವಯಸ್ಸಿನ ಯುವಕ. ಶ್ರೀಮಂತರ ಮಗ. ಆತನ ಮದುವೆ ಸತ್ಯಕುಮಾರಿ ಎಂಬುವಳೊಂದಿಗೆ ನಡೆಯಲು ಮಾತುಕತೆ ಮುಗಿದಿತ್ತು. ಮದುವೆಯ ದಿನಾಂಕವನ್ನು ನಿಗದಿಪಡಿಸಿ ಇತರ ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉಳಿದಿತ್ತು.

ಈ ಮಧ್ಯೆ ಶಾಶ್ವತಯ್ಯ ಇದ್ದಕ್ಕಿದ್ದಂತೆ ನಿಶ್ಯಕ್ತಿಗೆ ಒಳಗಾದ. ಅವರ ದೂರದ ಸಂಬಂಧಿಯಾಗಿದ್ದ ಡಾಕ್ಟರ್ ಗುಣತೇಜ ವಿಕ್ಟೋರಿಯ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಶಾಶ್ವತಯ್ಯನನ್ನು ಕೂಡಲೇ ಒಳರೋಗಿಯಾಗಿ ದಾಖಲಿಸಿಕೊಂಡು ಡಾ.ಕೃಪಾನಂದ ಎಂಬ ಪರಿಣತ ವೈದ್ಯರಿಂದ ಚಿಕಿತ್ಸೆ ಕೊಡಿಸುವ ಏರ್ಪಾಟು ಮಾಡಿದರು. ಇದರಿಂದ ಗಾಬರಿಗೊಂಡ ಸತ್ಯಕುಮಾರಿ ಮತ್ತು ಹತ್ತಿರದ ಬಂಧುಗಳು ಒಳರೋಗಿಯನ್ನು ನೋಡಲು ಬಂದುಹೋಗತೊಡಗಿದರು. ಸತ್ಯಕುಮಾರಿ ಹೆಚ್ಚು ಕಾಲ ಅಲ್ಲಿಯೇ ಇರತೊಡಗಿದಳು. ಡಾ.ಕೃಪಾನಂದ ಶಾಶ್ವತಯ್ಯನ ಕಾಯಿಲೆಯ ವಿವರಗಳನ್ನು ಅವನ ತಂದೆಗೆ ವಿವರಿಸುತ್ತಿದ್ದರು. ಇದನ್ನು ಹತ್ತಿರದಿಂದ ಗಮನಿಸಿಕೊಳ್ಳುತ್ತಿದ್ದ ಸತ್ಯಕುಮಾರಿಗೂ ವಿಚಾರಗಳು ಗೊತ್ತಾಗುತ್ತಿದ್ದವು.

ಶಾಶ್ವತಯ್ಯನ ರಕ್ತಪರೀಕ್ಷೆಯ ವರದಿಯನ್ನು ನೋಡಿದ ಡಾ.ಕೃಪಾನಂದರು ತಬ್ಬಿಬ್ಬುಗೊಂಡರು. ರಕ್ತಪರೀಕ್ಷೆಯ ದಾಖಲೆಯಲ್ಲಿ ಶಾಶ್ವತಯ್ಯನಿಗೆ ಎಚ್.ಐ.ವಿ. ಪಾಸಿಟಿವ್ ಆಗಿರುವ ವರದಿ ಇತ್ತು. ಶಾಶ್ವತಯ್ಯನ ಬಂಧುಗಳು ರಕ್ತಪರೀಕ್ಷಾ ವರದಿ ಬಗ್ಗೆ ವಿವರಣೆ ಕೇಳಿದರೂ ರೋಗಿಯ ವೈಯಕ್ತಿಕ ವಿಷಯಗಳ ಗೌಪ್ಯತೆ ಕಾಪಾಡುವ ಉದ್ದೇಶದಿಂದ ಡಾ.ಕೃಪಾನಂದ ಅವರು ಅದನ್ನು ಹೇಳಲಿಲ್ಲ. ಆದರೆ ಆತನ ಹತ್ತಿರದ ಬಂಧುಗಳಾದ ಡಾ.ಗುಣತೇಜ ಅವರಿಗೆ ವಿಷಯವನ್ನು ಹೇಳಿದರು. ಕೆಲವು ದಿನಗಳವರೆಗೆ ವಿಚಾರದ ಗೌಪ್ಯತೆಯನ್ನು ಕಾಪಾಡಲು ಸಾಧ್ಯವಾಯಿತಾದರೂ ರೋಗಿಗೂ, ಅವನ ಬಂಧುಬಳಗಕ್ಕೂ ಅದು ಗೊತ್ತಾಗೇಬಿಟ್ಟಿತು.

ವಿಚಾರ ಗೊತ್ತಾಗುತ್ತಿದ್ದಂತೆ ಶಾಶ್ವತಯ್ಯನ ಪೋಷಕರು ಹಾಗೂ ಬಂಧುಗಳಿಗೆ ಹಠಾತ್ತನೆ ಪ್ರಪಾತಕ್ಕೆ ಬಿದ್ದ ಅನುಭವವಾಯಿತು. ಕೆಲವೇ ದಿನಗಳಲ್ಲಿ ಅವನನ್ನು ವಿಚಾರಿಸಲು ಬರುತ್ತಿದ್ದವರ ಸಂಖ್ಯೆ ಇಳಿಮುಖವಾಯಿತು. ಸತ್ಯಕುಮಾರಿಯ ಮುದ್ದು ಮುಖ ಜೋತುಬಿದ್ದಿತು; ಮುಖಕಾಂತಿ ಮಸುಕಾಯಿತು; ಕಣ್ಣಲ್ಲಿನ ಮುಗ್ಧ ಹೊಳಪು ಮಾಯವಾಯಿತು. ಅವಳ ತಾಯಿತಂದೆಗೆ ಹೊರಬಿದ್ದ ಸತ್ಯದಿಂದ ಕೆಂಡಮುಟ್ಟಿದ ಅನುಭವವಾಯಿತು. ರೋಗಿಯು ನಿಶ್ಯಕ್ತಿಯಿಂದ ಚೇತರಿಸಿಕೊಂಡು ಹೊರಗೆ ಬಂದಾಗ ತನಗಿರುವ ಏಡ್ಸ್ ಕಾಯಿಲೆಯ ವಿಚಾರ ಎಲ್ಲರಿಗೂ ತಿಳಿದಿದ್ದು ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿರುವ ಅನುಭವವಾಯಿತು. ಸತ್ಯಕುಮಾರಿಯೊಂದಿಗಿನ ಮದುವೆಯ ಸಂಬಂಧದಲ್ಲಾಗಿದ್ದ ಮಾತುಕತೆಗಳು ಮುರಿದುಬಿದ್ದವು. ಅವಳು ಮತ್ತು ಅವಳ ಕಡೆಯವರು ಶಾಶ್ವತಯ್ಯನನ್ನು ಸಂಪೂರ್ಣವಾಗಿ ದೂರವಿರಿಸಿದರು.

ಶಾಶ್ವತಯ್ಯನಿಗೆ ಎಚ್‌ಐವಿ ಸೋಂಕು ಇರುವ ವಿಚಾರ ಯಾರಿಂದ ಹೊರಬಿತ್ತೆಂಬುದು ನಿಗೂಢವಾಗಿಯೇ ಉಳಿಯಿತು. ಆದರೂ ಇದಕ್ಕೆ ಕಾರಣ ಡಾ.ಕೃಪಾನಂದರೇ ಎಂದು ಶಾಶ್ವತಯ್ಯ ಭಾವಿಸಿದ. ಶಾಶ್ವತಯ್ಯ ಮತ್ತು ಅವನ ತಂದೆ ತಮ್ಮ ಸುತ್ತ ಏರ್ಪಡುತ್ತಿದ್ದ ಅವಮಾನಕರ ಮತ್ತು ಹಾನಿಕರ ಪರಿಸ್ಥಿಯನ್ನು ತಡೆಗಟ್ಟಲು ವಕೀಲರೊಬ್ಬರನ್ನು ಕಂಡು ಒಂದು ದೂರನ್ನು ಸಿದ್ಧಪಡಿಸಿದರು. ಆ ದೂರಿನಂತೆ ಡಾ.ಕೃಪಾನಂದ ಅವರು ತಮ್ಮ ವೃತ್ತಿಯಲ್ಲಿ ಗೌಪ್ಯತೆ, ಅಂತರಂಗ ರಹಸ್ಯ ಮತ್ತು ಖಾಸಗಿ ಹಕ್ಕನ್ನು ಉಲ್ಲಂಘಿಸಿದ್ದು, ತಮಗೆ ಅಪಮಾನ ಮತ್ತು ಮೋಸಮಾಡಿರುವುದಾಗಿ ತಿಳಿಸಿದ್ದರು.

ಇಷ್ಟು ವಿವರ ನನಗೆ ತಿಳಿಯಿತು.

ವೈದ್ಯರೊಂದಿಗೆ ಸಮಾಲೋಚನೆಗೆ ಗೊತ್ತುಪಡಿಸಿದ್ದ ಸ್ಥಳಕ್ಕೆ ನಾನು ಹೋದೆ. ಸುಮಾರು ಮೂವತ್ತು ವೈದ್ಯರು ಅಲ್ಲಿದ್ದರು. ‘ಈ ರೀತಿಯಾಗಿ ವೈದ್ಯರ ಮೇಲೆ ರೋಗಿಗಳು ಮಾಡುವ ಆರೋಪದ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾದರೆ ವೈದ್ಯರುಗಳು ಕರ್ತವ್ಯ ನಿರ್ವಹಿಸುವ ಕಾಲದಲ್ಲಿ ಆತಂಕ ಮತ್ತು ನಿರಾಧಾರ ಆರೋಪಗಳಿಗೆ ದಿನನಿತ್ಯ ಗುರಿಯಾಗಬೇಕಾಗುತ್ತದೆ. ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸಿದಾಗ ಹಲವಾರು ವಿಚಿತ್ರಕಾರಿ ವಿಚಾರಗಳು ತಿಳಿದುಬರುವುದುಂಟು; ಅವುಗಳು ಬಯಲಾದವೆಂಬ ಕಾರಣಕ್ಕೆ ವೈದ್ಯರನ್ನು ಶಿಕ್ಷಾರ್ಹ ಅಪರಾಧಗಳ ವಿಚಾರಣೆಗಳಿಗೆ ಗುರಿಪಡಿಸುವುದೆಂದರೆ ಅವರ ಕರ್ತವ್ಯ ನಿರ್ವಹಣೆಯಲ್ಲಿ ಉಸಿರುಗಟ್ಟಿಸುವ ಪರಿಸ್ಥಿತಿಗೆ ತಳ್ಳುವುದು ಎಂದರ್ಥ. ಇದರಿಂದ ವೈದ್ಯರಿಗೆ ನಿವಾರಣೋಪಾಯಗಳಿಲ್ಲದೆ ಮಾನಸಿಕ ಕಿರುಕುಳಕ್ಕೂ ಒಳಗಾಗುತ್ತಾರೆ, ಸಂಶಯ ಮತ್ತು ಭೀತಿಯ ವಾತಾವರಣದಲ್ಲಿ ಕರ್ತವ್ಯ ನಿರ್ವಹಿಸಬೇಕಾಗಿ ಬಂದು ಕಾರ್ಯದಕ್ಷತೆಯು ಕುಗ್ಗುತ್ತದೆ’ ಎಂಬ ವಿಚಾರಗಳನ್ನು ಚರ್ಚೆಗೆ ಒಳಪಡಿಸಿದರು. ಅವರನ್ನು ಕಾಡುತ್ತಿದ್ದ ವಿಚಾರಗಳಿಗೆ ದೂರಿನ ಹಿನ್ನೆಲೆಯಲ್ಲಿ ಕೆಲವು ಸ್ಪಷ್ಟನೆಗಳನ್ನು ನಾನು ಕೊಡಬೇಕಾದುದು ಉಳಿಯಿತು. ಸಮಾಲೋಚನೆಯ ಒಳಗೆ ನಾನು ಪ್ರವೇಶ ಮಾಡಿದೆ.

‌‘ಸಾವಿರಾರು ವರ್ಷಗಳ ಕಾಲ ಅಂದರೆ ಕ್ರಿಸ್ತಪೂರ್ವ ನಾನ್ನೂರರಿಂದ ವೈದ್ಯಶಾಸ್ತ್ರದ ಪಿತಾಮಹನೆಂದೇ ಪರಿಗಣಿತವಾಗಿರುವ ಹಿಪೊಕ್ರಟಿಸನ ನೀತಿಶಾಸ್ತ್ರವನ್ನು ಜಗತ್ತಿನಾದ್ಯಂತ ವೈದ್ಯರುಗಳು ಪಾಲಿಸಿಕೊಂಡು ಬರುತ್ತಿರುವುದುಂಟು. ಆ ನೀತಿಶಾಸ್ತ್ರ ಅರ್ಥಾತ್ ನೀತಿಸಂಹಿತೆಯ ಒಂದು ಭಾಗದಲ್ಲಿ ಉಲ್ಲೇಖಿಸಿರುವಂತೆ, ‘ವೈದ್ಯರು ರೋಗಿಯ ಕುರಿತು ಕಂಡುಕೊಂಡಿರುವ ಮತ್ತು ಕೇಳಿರುವ ಅವನ ವೈಯಕ್ತಿಕ ಜೀವನದ ಬಗ್ಗೆ ಮತ್ತು ದೇಹಪ್ರಕೃತಿಯ ಬಗ್ಗೆ ಏನನ್ನೂ ಬಹಿರಂಗಪಡಿಸುವುದು ದ್ರೋಹವಾಗುತ್ತದೆ. ರೋಗಿಯನ್ನು ಕುರಿತ ಮಾಹಿತಿಯನ್ನು ಬಹಿರಂಗಪಡಿಸದೆ ಗೌಪ್ಯವಾಗಿಡುವುದು ಅವನ ಕರ್ತವ್ಯ. ಬಹಿರಂಗಪಡಿಸಿ ಮಾಡುವ ದ್ರೋಹವು ವೈದ್ಯನ ಹಣೆಯಬರಹಕ್ಕೆ ಬಿಟ್ಟಿದ್ದಾಗಿರುತ್ತದೆ...’

ನಂತರದ ಕಾಲಮಾನದಲ್ಲಿ ಅಂದರೆ 1948ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಹಿಪೊಕ್ರಟಿಸನ ನೀತಿಸಂಹಿತೆಯನ್ನು ಸ್ವಲ್ಪಮಟ್ಟಿಗೆ ಮಾರ್ಪಾಟು ಮಾಡಿಕೊಂಡಿತು. ಅದನ್ನೇ 1956ರಲ್ಲಿ ಭಾರತೀಯ ವೈದ್ಯಕೀಯ ಪರಿಷತ್ತು ಅನುಸರಿಸಿತು. ಇವುಗಳನ್ನು ಪರಿಶೀಲಿಸಿಕೊಂಡಾಗ ವೈದ್ಯವೃತ್ತಿಯ ಬದ್ಧತೆಗೆ ಸಂಬಂಧಪಟ್ಟವುಗಳಾಗಿ ಕಂಡುಬರುತ್ತವೆ. ರೋಗಿಯು ಅವುಗಳನ್ನು ತನ್ನ ಹಕ್ಕಾಗಿ ಚಲಾಯಿಸುವಂತಿಲ್ಲ. ಕಾರಣ ಅವು ಅಪರಾಧಗಳಾಗುವುದಿಲ್ಲ. ಭಾರತ ದಂಡ ಸಂಹಿತೆಯ 269 ಮತ್ತು 270ರ ಕಲಂಗಳಲ್ಲಿ ರೋಗಿಯು ಏಡ್ಸ್‌ನಂಥ ಮಾರಕ ರೋಗದಿಂದ ಪೀಡಿತನಾಗಿದ್ದರೆ ಅದನ್ನು ಬಹಿರಂಗಪಡಿಸುವವನು, ಮುಂದೆ ರೋಗಿಯೊಂದಿಗೆ ನಿಕಟಸಂಪರ್ಕ ಹೊಂದಿ ಅಂತಹ ಮಾರಕ ರೋಗಕ್ಕೆ ತುತ್ತಾಗುವವನಿಗೆ ಜೀವದಾನ ಮಾಡಿದಂತಾಗುತ್ತದೆ. ಅದನ್ನು ಹೊಂದಿರುವವನು ಅಥವಾ ಗೊತ್ತಿರುವವನು ಬಹಿರಂಗಪಡಿಸಿ ಗೊತ್ತು ಮಾಡದೆ ಹೋದರೆ ಅಪರಾಧವೆಸಗಿದಂತಾಗುತ್ತದೆ. ಶಾಶ್ವತಯ್ಯನು ಕೆಲವು ವಾರಗಳಲ್ಲೋ ಅಥವಾ ತಿಂಗಳುಗಳಲ್ಲೋ ಸತ್ಯಕುಮಾರಿಯನ್ನು ವರಿಸುವವನಿದ್ದ. ಬಳಿಕ ಸತ್ಯಕುಮಾರಿಯೂ ಎಚ್.ಐ.ವಿ ಪೀಡಿತಳಾಗಿ ಸಾಯುವವರೆಗೂ ನರಳುವ ಸ್ಥಿತಿ ಬರಬಹುದಿತ್ತು. ಡಾ. ಕೃಪಾನಂದ ಅವರು ಶಾಶ್ವತಯ್ಯನು ಎಚ್.ಐ.ವಿ. ಪೀಡಿತನಾಗಿರುವ ವಿಷಯವನ್ನು ಬಹಿರಂಗಪಡಿಸಿದರೋ ಅಥವಾ ಅದನ್ನು ಇನ್ಯಾರಾದರೂ ಮಾಡಿದರೋ ಎಂಬುದು ಮುಖ್ಯ ವಿಚಾರವಲ್ಲ. ಡಾ.ಕೃಪಾನಂದ ಅವರಿಂದಲೇ ಇದು ಬಹಿರಂಗಗೊಂಡಿದೆಯೆಂದು ಭಾವಿಸಿದಾಗಲೂ ಕಲಂ 269 ಮತ್ತು 270 ಐಪಿಸಿಯ ರಕ್ಷಣೆ ದೊರಕುವುದುಂಟು.

ಹಿಂದು ವಿವಾಹ ಕಾಯ್ದೆ 1955, ಪಾರ್ಸಿ ವಿವಾಹ ಮತ್ತು ವಿಚ್ಛೇದನ ಕಾಯ್ದೆ 1936, ಭಾರತೀಯ ವಿಚ್ಛೇದನ ಕಾಯ್ದೆ 1869, ವಿಶೇಷ ವಿವಾಹ ಕಾಯ್ದೆ 1954 ಮತ್ತು ಮುಸ್ಲಿಂ ವಿವಾಹ ವಿಸರ್ಜನೆ ಕಾಯ್ದೆ 1939, ಇವುಗಳಡಿಯಲ್ಲಿ, ಮದುವೆಯಾದ ನಂತರ ಪುರುಷನು ಷಂಡನೆಂದು ಕಂಡು ಬಂದರೆ; ಗುಣಪಡಿಸಲಾಗದ ಕಾಯಿಲೆಯಿಂದ ನರಳುತ್ತಿದ್ದರೆ; ಗುಹ್ಯ ರೋಗಗಳಿಂದ ಬಳಲುತ್ತಿದ್ದರೆ; ಅದು ಎರಡನೆ ಮದುವೆಯೆಂದಾದಾಗ; ಅಂತಹ ಮದುವೆಯನ್ನು ವಿಸರ್ಜಿಸಿ ಮಹಿಳೆಗೆ ವಿವಾಹ ವಿಚ್ಛೇದನ ಪಡೆಯಲು ಸಹಾಯಕವಾಗುವ ಕಲಂಗಳು ಇವೆ. ಶಾಶ್ವತಯ್ಯನಿಗೆ ಸಂಬಂಧಿಸಿದ ಪ್ರಕರಣದಲ್ಲಿ ಅವನ ಮದುವೆಗೆ ಮುಂಚೆಯೇ ಸತ್ಯಕುಮಾರಿಯನ್ನು ಮಾರಕರೋಗ ಪೀಡಿತಳಾಗುವುದನ್ನು ತಪ್ಪಿಸಿದ ಡಾ.ಕೃಪಾನಂದರು ಅಭಿನಂದನಾರ್ಹರು. ಈ ಕೂಡಲೇ ಡಾ.ಕೃಪಾನಂದ ಅವರಿಗೆ ಅಗತ್ಯವಿರುವುದು ನಿರೀಕ್ಷಣಾ ಜಾಮೀನನ್ನು ಪಡೆಯುವುದು. ತನಿಖೆ ಮುಗಿದು ದೋಷಾರೋಪಣಾ ವರದಿಯನ್ನು ನ್ಯಾಯಾಲಯದಲ್ಲಿ ಸಲ್ಲಿಸಿದ ನಂತರ ಕರ್ನಾಟಕ ಸರ್ಕಾರಕ್ಕೆ ಅಭಿಯೋಜನೆಯನ್ನು ಕೈಬಿಡಲು ಮನವಿ ಪತ್ರ ಸಲ್ಲಿಸುವುದು ಸೂಕ್ತ ಎಂದು ತಿಳಿಸಿದೆ.

ನನ್ನ ಮಾತುಗಳನ್ನು ಮುಗಿಸುತ್ತಿದ್ದಂತೆಯೇ ಡಾ.ರಾಮು ಅವರು ನಿರೀಕ್ಷಣಾ ಜಾಮೀನನ್ನು ಕೊಡಿಸಿಕೊಡಲು ನನ್ನನ್ನು ಕೇಳಿಕೊಂಡರು. ಅದರಂತೆ ಸಮಾಲೋಚನಾ ಸಭೆಯಲ್ಲಿ ತಿಳಿಸಿದ ವಾದ ಸರಣಿಯನ್ನೇ ಕೋರ್ಟ್‌ನಲ್ಲಿಯೂ ಮಂಡಿಸಿದೆ. ನನ್ನ ವಾದವನ್ನು ಮಾನ್ಯ ಮಾಡಿದ ಸೆಷನ್ಸ್‌ ಕೋರ್ಟ್‌ ಡಾ.ಕೃಪಾನಂದ ಅವರಿಗೆ ನಿರೀಕ್ಷಣಾ ಜಾಮೀನು ನೀಡಿತು.

ಪ್ರಕರಣದಲ್ಲಿ ತನಿಖೆ ಮುಗಿದು ಅಂತಿಮ ದೋಷಾರೋಪ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾದ ಮೇಲೆ ನಾನು ಡಾಕ್ಟರುಗಳಿಗೆ ತಿಳಿಸಿದ್ದಂತೆ ಸರ್ಕಾರಕ್ಕೆ ಅಭಿಯೋಜನೆಯನ್ನು ವಾಪಸು ಪಡೆಯಲು ಮನವಿ ಪತ್ರ ಸಲ್ಲಿಸಿದರು. ಸರ್ಕಾರ ಅವರ ಮನವಿ ಪತ್ರಕ್ಕೆ ಮನ್ನಣೆ ಕೊಟ್ಟು, ಸಂಬಂಧಪಟ್ಟ ಪಬ್ಲಿಕ್ ಪ್ರಾಸಿಕ್ಯೂಟರವರಿಗೆ ಕೇಸನ್ನು ನ್ಯಾಯಾಲಯದಿಂದ ವಾಪಸು ಪಡೆಯಲು ಆದೇಶಿಸಿತು. ಅದರಂತೆ ನ್ಯಾಯಾಲಯದಲ್ಲಿ ಅಭಿಯೋಜಕರಿಂದ ದಂಡ ಪ್ರಕ್ರಿಯಾ ಸಂಹಿತೆಯ ಕಲಂ 321ರಂತೆ ಅರ್ಜಿ ಸಲ್ಲಿಕೆಯಾಗಿ ನ್ಯಾಯಾಲಯವು ಪ್ರಕರಣವನ್ನು ವಾಪಸು ಪಡೆಯಲು ಅನುಮತಿಸಿತು.

ಈ ಪ್ರಕರಣದಲ್ಲಿ ಒಂದು ರೀತಿಯಲ್ಲಿ ಶಾಶ್ವತಯ್ಯನು ಅದೃಷ್ಟವಂತನೆಂದೇ ಹೇಳಬೇಕು. ಕಾರಣ ಅವನಿಗೆ ತಾನು ಎಚ್.ಐ.ವಿ.ಯಿಂದ ಬಳಲುತ್ತಿರುವುದು ಗೊತ್ತಾದದ್ದು ಅದೇ ಮೊದಲು. ಸತ್ಯಕುಮಾರಿಯೊಂದಿಗೆ ಮದುವೆಯ ಮಾತುಕತೆ ನಡೆಯುವ ಮುನ್ನ ಅವನಿಗಿದ್ದ ಎಚ್.ಐ.ವಿ. ಕಾಯಿಲೆಯ ಅರಿವಿದ್ದಿದ್ದರೆ ಅವನು ಭಾರತ ದಂಡ ಸಂಹಿತೆಯ ಕಲಂ 269 ಮತ್ತು 270ರ ಅನುಸಾರ ಕಾನೂನು ಕ್ರಮಕ್ಕೆ ಒಳಪಡಬೇಕಾಗುತ್ತಿತ್ತು. ಸತ್ಯಕುಮಾರಿಯ ಭವಿಷ್ಯದೊಂದಿಗೆ ಚಲ್ಲಾಟವಾಡಲು ಮುಂದಾಗಿದ್ದಕ್ಕೆ ಮತ್ತು ಸ್ವಂತ ಅನುಕೂಲದ ಆಲೋಚನೆಯಲ್ಲಿ ಮುಳುಗಿದ ಅಪರಾಧಕ್ಕಾಗಿ ಶಿಕ್ಷೆ ಅನುಭವಿಸುವ ಸಾಧ್ಯತೆಯೂ ಇತ್ತು...!

(ಕೆಲವು ಹೆಸರುಗಳನ್ನು ಬದಲಾಯಿಸಲಾಗಿದೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT