ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌರವನ ಹೆಸರಿನಲ್ಲೊಂದು ನಿರಾಡಂಬರ ಸಿನಿಮಾ!

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಎಸ್. ಮಹೇಂದರ್ ಕನ್ನಡ ಸಿನಿಮಾ ವೀಕ್ಷಕರಿಗೆ ಚಿರಪರಿಚಿತರು. ರಾಜಕೀಯದಲ್ಲಿ ಸಕ್ರಿಯರಾಗಿದ್ದ, ಚುನಾವಣೆಗೆ ಸ್ಪರ್ಧಿಸಿದ್ದ, ಸಿನಿಮಾ ಕ್ಷೇತ್ರದಲ್ಲಿ ಕೊಂಚಕಾಲ ತಟಸ್ಥರಾಗಿದ್ದ ಮಹೇಂದರ್‌ ಈಗ ಮತ್ತೊಂದು ಸಿನಿಮಾ ನಿರ್ದೇಶಿಸಿದ್ದಾರೆ. ಅದಕ್ಕೆ ‘ಒನ್ಸ್‌ ಮೋರ್‌ ಕೌರವ’ ಎಂದು ಹೆಸರಿಟ್ಟಿದ್ದಾರೆ.

‘... ಕೌರವ’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ಸಿನಿಮಾ ಬಿಡುಗಡೆಯ ಗಡಿಬಿಡಿಯ ನಡುವೆ ಮಹೇಂದರ್ ಅವರು ‘ಚಂದನವನ’ಕ್ಕೆ ನೀಡಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ:

* ‘... ಕೌರವ’ ಸಿನಿಮಾ ಹುಟ್ಟಿದ ಕಥೆ ಹೇಳುವಿರಾ?
ರಾಜಕೀಯದಲ್ಲಿ ಕೆಲವು ಕಾಲ ತೊಡಗಿಸಿಕೊಂಡಿದ್ದ ನನಗೆ ಸಿನಿಮಾದಿಂದ ದೂರವಾಗುವುದು ಬೇಡ ಎಂದು ಸಂದೇಶ್‌ ನಾಗರಾಜ್‌ ಹೇಳಿದ್ದರು. ನಾನು ‘ಮಹಾಕಾಳಿ’ ಚಿತ್ರದ ಚಿತ್ರೀಕರಣದಲ್ಲಿ ಇದ್ದಾಗ ನರೇಶ್ ಗೌಡ ಅವರ ಭೇಟಿ ಆಯಿತು. ಅದರಲ್ಲಿ ನರೇಶ್‌ ಒಂದು ಚಿಕ್ಕ ಪಾತ್ರ ನಿಭಾಯಿಸಿದ್ದರು. ಅವರ ಜೊತೆ ಮಾತನಾಡುತ್ತಿದ್ದಾಗ, ನಾವೇ ಒಂದು ಸಿನಿಮಾ ಯಾಕೆ ಮಾಡಬಾರದು ಎಂದರು.

ಒಂದು ಕಥೆ ಇದ್ದರೆ ಹೇಳಿ, ನಿಮ್ಮದೇ ಮಾದರಿಯ ಸಿನಿಮಾ ಮಾಡಬೇಕು ಎಂದಿದ್ದರು ನರೇಶ್. ನನಗೆ ಹೊಸಬರ ಜೊತೆ ಕೆಲಸ ಮಾಡುವುದು ಮೊದಲಿನಿಂದಲೂ ಇಷ್ಟದ ಕೆಲಸ. ಏಕೆಂದರೆ, ಹೊಸಬರ ಜೊತೆ ಕೆಲಸ ಮಾಡುವಾಗ ನನ್ನ ಮೇಲೆ ಯಾವುದೇ ಒತ್ತಡಗಳು ಇರುವುದಿಲ್ಲ, ನಾನು ಅಂದುಕೊಂಡ ರೀತಿಯಲ್ಲಿ ಸಿನಿಮಾ ಮಾಡಬಹುದು. ಹಾಗೆಯೇ ನನ್ನ ಆಲೋಚನೆಯನ್ನು ನರೇಶ್ ಅವರಿಗೆ ಹೇಳಿದೆ. ನರೇಶ್ ಅವರಿಗೆ ಅದು ಇಷ್ಟವಾಯಿತು. ಸಿನಿಮಾ ಆರಂಭ ಆಯಿತು.

* ನಿಮ್ಮ ಸಿನಿಮಾಗಳನ್ನು ಕಾವೇರಿ ನದಿ ತೀರದ ಪ್ರದೇಶಗಳಲ್ಲೇ ಹೆಚ್ಚಾಗಿ ಚಿತ್ರೀಕರಿಸುವುದು ಏಕೆ?
ನಾನು ಆ ಭಾಗದವನು. ಕಣ್ಣಿಗೆ ಶ್ರೀಮಂತ ದೃಶ್ಯಗಳನ್ನು ಕಟ್ಟಿಕೊಡುವ ಅನೇಕ ಸ್ಥಳಗಳು ಆ ಭಾಗದಲ್ಲಿ ಇವೆ. ನನಗೆ ವಿದೇಶಗಳಿಗೆ ಹೋಗಿ ಚಿತ್ರೀಕರಣ ಮಾಡುವುದರಲ್ಲಿ, ಅದರಿಂದ ಸಿನಿಮಾ ಗೆಲ್ಲುತ್ತದೆ ಎಂಬುದರಲ್ಲಿ ನಂಬಿಕೆ ಇಲ್ಲ.

ನಾನು ಮಾಡುವುದು ವಿದೇಶದಲ್ಲಿ ಚಿತ್ರೀಕರಣ ಅಗತ್ಯ ಇರುವ ಸಿನಿಮಾ ಗಳಲ್ಲ. ಕಾವೇರಿ ನದಿ ತೀರದ ಪ್ರದೇಶಗಳು ನನಗೆ ಸಾಕಷ್ಟು ಗೊತ್ತಿವೆ. ನಾನು ಮೊದಲಿನಿಂದಲೂ ಈ ಪ್ರದೇಶಗಳನ್ನು ನನ್ನ ಸಿನಿಮಾಗಳಲ್ಲಿ ಬಳಸಿ ಕೊಂಡಿದ್ದೇನೆ. ಅವುಗಳನ್ನು ಜನ ಇಷ್ಟಪಟ್ಟಿದ್ದಾರೆ. ನಮ್ಮ ಪ್ರಾದೇಶಿಕತೆಗಿಂತ ಹೆಚ್ಚು ಉತ್ತಮವಾದ ಕಮರ್ಷಿಯಲ್ ಅಂಶಗಳು ಬೇರೆಲ್ಲೂ ಸಿಗಲಾರವು ಎಂದು ನಾನು ನಂಬಿದ್ದೇನೆ.

ಆಡಂಬರ ಇಲ್ಲದ, ಸರಳವಾಗಿ ಕಥೆ ಹೇಳುವ ಸಿನಿಮಾಗಳು ಈಗ ಗೆಲ್ಲುತ್ತಿವೆ ಎಂದು ನೀವು ಹೇಳಿದ್ದೀರಿ. ನಿಮಗೆ ಏಕೆ ಹಾಗೆ ಅನಿಸಿತು?
ಸಿನಿಮಾ ವೀಕ್ಷಕರಿಗೆ ಈಗ ಒಂದು ಪ್ರಜ್ಞೆ ಬರುತ್ತಿದೆ. ಮೊದಲು ಉತ್ಪ್ರೇಕ್ಷಿತ ರಂಜನೆಯನ್ನು ಬಹಳ ಇಷ್ಟಪಡುತ್ತಿದ್ದರು ಕೆಲವು ವರ್ಗಗಳ ವೀಕ್ಷಕರು. ಅವರು ರಂಜನೆಯನ್ನೇ ಬಹುವಾಗಿ ಬಯಸುತ್ತಿದ್ದರು. ಈಗ ಅಂತಹ ಪ್ರೇಕ್ಷಕರ ಸಂಖ್ಯೆ ಕಡಿಮೆ ಆಗುತ್ತಿದೆ. ಇಂದು ಹಳ್ಳಿಗಳಲ್ಲಿ ಸಿನಿಮಾ ಮಂದಿರಗಳು ಇಲ್ಲ. ಈಗ ಸಿನಿಮಾ ನೋಡುತ್ತಿರುವವರು ಸುಶಿಕ್ಷಿತರು, ಪ್ರಜ್ಞಾವಂತರು. ಅವರಿಗೆ ಬಹುತೇಕ ವಿಚಾರಗಳು ಗೊತ್ತಿರುತ್ತವೆ.

‘ಬಾಹುಬಲಿ’ ಸಿನಿಮಾದಲ್ಲಿ ಬಳಸಿಕೊಂಡ ತಂತ್ರಜ್ಞಾನಗಳ ಬಗ್ಗೆ ವೀಕ್ಷಕರಿಗೆ ಗೊತ್ತು. ಆದರೂ, ಸಿನಿಮಾವನ್ನು ಜನ ಇಷ್ಟಪಟ್ಟರು. ತಂತ್ರಜ್ಞಾನವನ್ನು ಪೂರಕವಾಗಿ ಮಾತ್ರ ಬಳಸಿಕೊಂಡಿದ್ದಾರೆ ಆ ಸಿನಿಮಾದಲ್ಲಿ. ಅದನ್ನು ವೈಭವೀಕರಿಸಿಲ್ಲ. ಇದನ್ನೊಂದು ಉದಾಹರಣೆಯಾಗಿ ಹೇಳಿದೆ. ಇರುವುದನ್ನು ನೇರವಾಗಿ ಹೇಳಿ, ಸುತ್ತಿ–ಬಳಸಿ ಹೇಳಬೇಡಿ ಎನ್ನುತ್ತಿದ್ದಾರೆ ಇಂದಿನ ವೀಕ್ಷಕರು.

* ಹಾಗಾದರೆ, ಸಹಜ ಮತ್ತು ಸರಳವಾದ ಅಂಶಗಳು ನಿಮ್ಮ ಸಿನಿಮಾದಲ್ಲಿ ಎಷ್ಟರಮಟ್ಟಿಗೆ ಇವೆ?
ಸಿನಿಮಾದ ಕಥೆ ಸಹಜವಾಗಿ ಸಾಗುತ್ತದೆ. ಆದರೆ, ಹೊಸ ನಟ ಇರುವ ಕಾರಣ ರಂಜನೆ ತುಸು ಬೇಕಾಗುತ್ತದೆ, ಅದು ಈ ಸಿನಿಮಾದಲ್ಲಿ ಇದೆ. ಇಲ್ಲಿ ನಾನು ಹೊಸಬರನ್ನು ಪರಿಚಯಿಸುತ್ತಿದ್ದೇನೆ. ಅಷ್ಟನ್ನು ಹೊರತುಪಡಿಸಿದರೆ ಸಹಜವಾಗಿ ಸಿನಿಮಾ ಮಾಡಿದ್ದೇನೆ. ಉತ್ಪ್ರೇಕ್ಷಿತ ರಂಜನೆ ನಮ್ಮ ಸಿನಿಮಾದಲ್ಲಿ ಇಲ್ಲ, ಮನಸ್ಸಿಗೆ ಕಚಗುಳಿ ಇಡುವಂತಹ ರಂಜನೆ ಇದೆ.

ಶಾರುಖ್‌ಖಾನ್‌ ಅವರು ರಜನಿಕಾಂತ್‌ ಬಗ್ಗೆ ಒಂದು ಮಾತು ಹೇಳಿದ್ದರು. ನಾಯಕನಾದವನು ಸಿನಿಮಾ ವೀಕ್ಷಕರನ್ನು ರಂಜಿಸಬೇಕು. ಅದು ರಜನಿಗೆ ಮಾತ್ರ ಗೊತ್ತು ಎಂದು. ಜನ ‘ಆಹ್‌...’ ಎನ್ನುವುದೊಂದು ಸಿನಿಮಾದಲ್ಲಿ ಇರಲೇಬೇಕು.

*ಕನ್ನಡದಲ್ಲಿ ಬರುತ್ತಿರುವ ಹೊಸಬರ, ಹೊಸ ರೀತಿಯ ಚಿತ್ರಗಳ ಬಗ್ಗೆ ನಿಮ್ಮ ಮಾತು ಏನು?
ಕನ್ನಡದಲ್ಲಿ ಈಗ ಬರುತ್ತಿರುವ ಹೊಸ ರೀತಿಯ ಚಿತ್ರಗಳು ಸ್ವಾಗತಾರ್ಹ. ನಾವು ಅಂದುಕೊಂಡಿದ್ದನ್ನು ತೆರೆಯ ಮೇಲೆ ತರುವಂತೆ ಆಗಬೇಕು. ಜನ ಹೊಸಬರನ್ನು ಒಪ್ಪಿಕೊಳ್ಳುವಂತೆ ಆಗಬೇಕು ಎಂದು ನಾವು ಬಯಸುತ್ತಿದ್ದೆವು. ಅದು ಈಗ ಆಗುತ್ತಿದೆ. ಬಹಳ ಖುಷಿಯ ಸಂಗತಿ ಇದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT