ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಟ್ಟುವಿಕೆ: ಸರ್ಕಾರದ ಮಾತು ಕೃತಿಗಿಳಿಯಲಿ

Last Updated 2 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ನಾಡು-ನುಡಿಯ ಹಿತಾಸಕ್ತಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಿರುವ ಮಾತುಗಳಲ್ಲಿನ ಕಾಳಜಿ ಮೆಚ್ಚತಕ್ಕಂತಹದ್ದು. ಭಾಷಣದಲ್ಲಿ ಅವರು ಪ್ರಸ್ತಾಪಿಸಿರುವ ಸಂಗತಿಗಳು ಕೇವಲ ಭಾವಾವೇಶದ ಮಾತುಗಳಾಗಿರದೆ, ವರ್ತಮಾನದ ನುಡಿಸಂಕಟಗಳೂ ಆಗಿರುವುದರಿಂದ ಮುಖ್ಯಮಂತ್ರಿಗಳ ಭಾಷಣ ವಸ್ತುನಿಷ್ಠವಾಗಿದೆ.

ಈ ಮಾತುಗಳ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಕನ್ನಡಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತೋರಿಸಿರುವ ಉತ್ಸಾಹವನ್ನು ಗಮನಿಸಬೇಕು. ಮೆಟ್ರೊ ರೈಲುಗಳಲ್ಲಿ ಹಿಂದಿ ಹೇರಿಕೆ, ಕನ್ನಡಧ್ವಜ ಬೇಡಿಕೆ ಕುರಿತಂತೆ ಸರ್ಕಾರ ತಳೆದ ನಿಲುವು ಪ್ರಾದೇಶಿಕ ಹಿತಾಸಕ್ತಿಗೆ ಪೂರಕವಾದುದು.

ಇತ್ತೀಚೆಗಷ್ಟೇ  ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಜ್ಞಾನ ಆಯೋಗದ ಜೊತೆಗೂಡಿ ಸರ್ಕಾರಕ್ಕೆ ನೀಡಿರುವ ವರದಿ, ಸರ್ಕಾರಿ ಶಾಲೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಶಿಫಾರಸುಗಳನ್ನು ಒಳಗೊಂಡಿದೆ. ಬದಲಾಗುತ್ತಿರುವ ಕಾಲಮಾನ ಹಾಗೂ ಕನ್ನಡಿಗರ ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕರ್ನಾಟಕಕ್ಕೆ ಜನಪರ ಭಾಷಾ ನೀತಿಯೊಂದರ ಅಗತ್ಯವನ್ನು ಸಿದ್ದರಾಮಯ್ಯನವರು ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದ್ದಾರೆ.

‘ಪ್ರತಿಯೊಂದು ರಾಜ್ಯಭಾಷೆ ಆ ನೆಲದ ಸಾರ್ವಭೌಮ ಭಾಷೆ ಆಗಿದ್ದು, ಕನ್ನಡದ ಹಿತಾಸಕ್ತಿಯನ್ನು ರಕ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದ್ದಾರೆ. ಮಂತ್ರಿಮಂಡಲದ ನಿರ್ಣಯಗಳು, ಟಿಪ್ಪಣಿಗಳು, ವಿಧಾನಸಭೆಯ ಮುಂದೆ ಬರುವ ಮಸೂದೆಗಳು– ಇವೆಲ್ಲವೂ ಕನ್ನಡದಲ್ಲೇ ಇದ್ದರೆ ಆಡಳಿತದಲ್ಲಿ ಕನ್ನಡ ನೆಲೆಗೊಳ್ಳುತ್ತದೆ ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿಗಳು ತಮ್ಮ ಭಾಷಣದಲ್ಲಿ ಕನ್ನಡದ ಈ ಹೊತ್ತಿನ ತವಕ–ತಲ್ಲಣಗಳನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದರೂ ಕನ್ನಡದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಅವಧಿಯಲ್ಲಿ ಸರ್ಕಾರ ಮಾಡಿದ ಪ್ರಯತ್ನಗಳೇನು ಎನ್ನುವುದನ್ನು ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕಾಗಿದೆ.

ರಾಜ್ಯದಲ್ಲಿ ನೆಲೆಸಿರುವ ಇತರ ಭಾಷಿಕರು ಕನ್ನಡ ಕಲಿಯುವ ವಾತಾವರಣ ಸೃಷ್ಟಿಸಬೇಕು ಎಂದು ಮೂರು ವರ್ಷಗಳ ಹಿಂದೆಯೇ ರಾಜ್ಯೋತ್ಸವ ಭಾಷಣದಲ್ಲಿ ಹೇಳಿದ್ದ ಮಾತನ್ನೇ ಈ ಬಾರಿಯೂ ಮುಖ್ಯಮಂತ್ರಿ ಪ್ರಸ್ತಾಪಿಸಿದ್ದಾರೆ. ಕನ್ನಡಿಗರು ಉದಾರಿಗಳಾಗಿರುವುದು ಬೇಡ ಎಂದವರು ಕರೆ ನೀಡಿದ್ದಾರೆ.

‘ಇಂಗ್ಲಿಷ್ ಶಾಲೆಗಳ ನಿಯಂತ್ರಣ ಸರ್ಕಾರದಿಂದ ಮಾತ್ರ ಸಾಧ್ಯವಿಲ್ಲ, ಈ ಕೆಲಸದಲ್ಲಿ ಸಮುದಾಯವೂ ಪಾಲ್ಗೊಳ್ಳಬೇಕು’ ಎಂದು ಎರಡು ವರ್ಷಗಳ ಹಿಂದೆ ಹೇಳಿದ್ದ ಅವರು, ಕಳೆದ ನವೆಂಬರ್‌ನಲ್ಲಿ ಮಾತೃಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ನೀಡುವಂತಾಗಲು ಸಂವಿಧಾನ ತಿದ್ದುಪಡಿಗೆ ಆಗ್ರಹಿಸಿದ್ದರು. ಈ ಬಾರಿಯೂ ಸಂವಿಧಾನ ತಿದ್ದುಪಡಿಯ ಆಗ್ರಹ ಮುಂದುವರೆದಿದೆ.

ಪ್ರಧಾನಿಗೆ ಮತ್ತೆ ಪತ್ರ ಬರೆಯುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಅವರ ಕಾಳಜಿಯನ್ನು ಮೆಚ್ಚಿಕೊಳ್ಳುತ್ತಲೇ, 125 ಸಿನಿಮಾಗಳಿಗೆ ಸಹಾಯಧನ ನೀಡುವಂತಹ ಜನಪ್ರಿಯ ಕಾರ್ಯಕ್ರಮಗಳಿಂದ ಕನ್ನಡದ ಬೆಳವಣಿಗೆ ಆಗುವುದಿಲ್ಲ ಎನ್ನುವುದನ್ನು ಹೇಳಬೇಕಾಗಿದೆ. ಬೇರುಮಟ್ಟದಲ್ಲಿ ಕನ್ನಡವನ್ನು ಕಟ್ಟುವ ಕೆಲಸ ಆಗಬೇಕಿರುವುದು ಇಂದಿನ ಜರೂರು. ತಳಮಟ್ಟದಲ್ಲಿ ಈ ಕೆಲಸ ಮುಖ್ಯವಾಗಿ ಆಗಬೇಕಾಗಿರುವುದು ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದರಲ್ಲಿ ಹಾಗೂ ಅವುಗಳನ್ನು ಬಲಪಡಿಸುವುದರಲ್ಲಿ.

‘ಒಂದು ಮಗುವಿದ್ದರೂ ಶಾಲೆ ಮುಚ್ಚುವುದಿಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ, ಈ ಮೂರ್ನಾಲ್ಕು ವರ್ಷಗಳಲ್ಲಿ ವಿದ್ಯಾರ್ಥಿಗಳ ಕೊರತೆಯ ನೆಪವೊಡ್ಡಿ ಸುಮಾರು 2800 ಕನ್ನಡ ಶಾಲೆಗಳನ್ನು ಮುಚ್ಚಲಾಗಿದೆ. ಶಾಲೆಗಳನ್ನು ಮುಚ್ಚುವುದಕ್ಕೆ ವಿದ್ಯಾರ್ಥಿಗಳ ಕೊರತೆಯ ನೆಪವನ್ನು ಸರ್ಕಾರ ಹೇಳುತ್ತಿದೆ. ಹಾಗಾದರೆ, ವಿದ್ಯಾರ್ಥಿಗಳನ್ನು ಸರ್ಕಾರಿ ಶಾಲೆಗಳಿಂದ ದೂರವಿಟ್ಟವರು ಯಾರು? ಇನ್ನೂ ಜೀವ ಹಿಡಿದುಕೊಂಡಿರುವ ಹಲವು ಶಾಲೆಗಳನ್ನು ನೋಡಿದರೆ ಪರಿಸ್ಥಿತಿ ಅರ್ಥವಾಗುತ್ತದೆ.

ಈ ಶಾಲೆಗಳಲ್ಲಿ ಮೂಲಸೌಕರ್ಯಗಳೇ ಸರಿಯಾಗಿಲ್ಲ. ಕನ್ನಡ ಶಾಲೆಗಳ ಶಿಥಿಲ ಕಟ್ಟಡಗಳು ಕನ್ನಡದ ಸ್ಥಿತಿಯನ್ನೇ ಸೂಚಿಸುವಂತಿವೆ. ವಾಸ್ತವ ಹೀಗಿದ್ದರೂ ಮುಖ್ಯಮಂತ್ರಿಗಳು ಪೋಷಕರ ಇಂಗ್ಲಿಷ್ ಪ್ರೇಮದ ಕುರಿತು ಪ್ರಸ್ತಾಪಿಸಿರುವುದು ಒಪ್ಪತಕ್ಕಂತಹದ್ದಲ್ಲ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾತ್ರವಲ್ಲ, ಕನ್ನಡದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಇದುವರೆಗಿನ ಎಲ್ಲ ಸರ್ಕಾರಗಳು ವಿಫಲವಾಗಿವೆ.

ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ಸರ್ಕಾರ ಆಡುವ ಮಾತುಗಳು ನವೆಂಬರ್ ನಂತರ ಜೀವ ಕಳೆದುಕೊಳ್ಳುತ್ತವೆ. ಪ್ರಸ್ತುತ ರಾಜ್ಯ ಸರ್ಕಾರದ ಮುಂದೆ ಕನ್ನಡದ ಹಿತಾಸಕ್ತಿಗೆ ಸಂಬಂಧಿಸಿದಂತೆ ಮಾಡಬೇಕಾದ ಕೆಲಸಗಳ ಪಟ್ಟಿಯೇ ಇದೆ.

ಕನ್ನಡದ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಸರ್ಕಾರ ಇಚ್ಛಾಶಕ್ತಿ ಪ್ರದರ್ಶಿಸಬೇಕಿದೆ. ಕನ್ನಡದ ಕುರಿತು ಮಾತನಾಡಿದರಷ್ಟೇ ಸಾಲದು; ಮಾತುಗಳನ್ನು ಕೃತಿರೂಪಕ್ಕೆ ತಂದು ತಾರ್ಕಿಕ ಅಂತ್ಯ ಮುಟ್ಟಿಸುವುದು ಕೂಡ ಸರ್ಕಾರದ ಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT