ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘...ಕೌರವ’ನಿಗೆ ಹಳೆಯ ಸಿನಿಮಾ ನೆನಪಿನ ಹಂಗು!

Last Updated 3 ನವೆಂಬರ್ 2017, 13:10 IST
ಅಕ್ಷರ ಗಾತ್ರ

ಸಿನಿಮಾ: ಒನ್ಸ್‌ ಮೋರ್ ಕೌರವ

ನಿರ್ದೇಶನ: ಎಸ್. ಮಹೇಂದರ್

ನಿರ್ಮಾಪಕ: ನರೇಶ್ ಗೌಡ

ತಾರಾಗಣ: ನರೇಶ್ ಗೌಡ, ಅನುಷಾ, ದೇವರಾಜ್, ಅನು ಪ್ರಭಾಕರ್

ಸಂಗೀತ: ಶ್ರೀಧರ್ ವಿ. ಸಂಭ್ರಮ್

ಒನ್ಸ್ ಮೋರ್ ಕೌರವ. ಇದು ಎಸ್. ಮಹೇಂದರ್ ನಿರ್ದೇಶನದ ಸಿನಿಮಾ. ಮಹೇಂದರ್ ಅವರು ತುಸು ದಿನಗಳ ಬಿಡುವಿನ ನಂತರ ಮಾಡಿರುವ ಸಿನಿಮಾ ಇದು. ಈ ಬಿಡುವು ಮಹೇಂದರ್ ಅವರಲ್ಲಿ ಹೊಸ ಆಲೋಚನೆ, ಕಥೆಯನ್ನು ಸಿನಿಮಾ ಮೂಲಕ ಹೇಳುವಲ್ಲಿ ಒಂದು ತಾಜಾತನ ಮೂಡಲು ಕಾರಣ ಆಯಿತೇ ಎಂಬ ಪ್ರಶ್ನೆಯನ್ನಿಟ್ಟುಕೊಂಡು ಸಿನಿಮಾ ಪರದೆಯ ಮುಂದೆ ಕುಳಿತುಕೊಳ್ಳಬಹುದು.

ಕಾವೇರಿ ನದಿ ತೀರದ ಪ್ರದೇಶಗಳು ಮಹೇಂದರ್ ಅವರಿಗೆ ಇಷ್ಟವಂತೆ. ಅವರ ಅನೇಕ ಸಿನಿಮಾಗಳ ಚಿತ್ರೀಕರಣ ಈ ಪ್ರದೇಶದಲ್ಲೇ ನಡೆದಿದೆ. ‘... ಕೌರವ’ ಸಿನಿಮಾದ ಕಥೆ ಕೂಡ ಈ ಪ್ರದೇಶದಲ್ಲೇ ನಡೆದಿದೆ. ಕಥೆ ನಡೆದಿರುವ ಊರನ್ನು ನಿರ್ದೇಶಕರು ‘ಹುಲಿಗುಡ್ಡ’ ಎಂದು ಕರೆದಿದ್ದಾರೆ.

ಕಿರಣ್‌ (ನರೇಶ್ ಗೌಡ) ಒಬ್ಬ ನಿಷ್ಠಾವಂತ, ಪ್ರಾಮಾಣಿಕ ಪೊಲೀಸ್ ಅಧಿಕಾರಿ. ಬೇರೆ ಬೇರೆ ಧರ್ಮಗಳಿಗೆ ಸೇರಿದ ಯುವಕ–ಯುವತಿಯರ ಪ್ರೇಮದ ಕಾರಣದಿಂದಾಗಿ ಹುಲಿಗುಡ್ಡದಲ್ಲಿ ಕೋಮುಗಲಭೆ ಉಂಟಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತ ಪೊಲೀಸ್ ಇಲಾಖೆ, ಕಾನೂನು–ಸುವ್ಯವಸ್ಥೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಲು ಕಿರಣ್‌ನನ್ನು ಆ ಊರಿಗೆ ವರ್ಗಾವಣೆ ಮಾಡುತ್ತದೆ. ಇದು ಕಥೆಯ ಆರಂಭ.

ಈ ಸಿನಿಮಾ ಮೂಲಕ ಸೃಷ್ಟಿಯಾಗಿರುವ ಊರಿನ ಶ್ರೀಮಂತರಿಬ್ಬರು ದುಷ್ಟರಾಗಿರುತ್ತಾರೆ – ಕನ್ನಡದ ಅನೇಕ ಚಿತ್ರಗಳಲ್ಲಿ ಚಿತ್ರಿತವಾಗಿರುವಂತೆಯೇ! ಈ ಇಬ್ಬರು ವ್ಯಕ್ತಿಗಳು ಬಡವರಿಗೆ ಸೇರಬೇಕಿರುವ ಸವಲತ್ತುಗಳನ್ನು ತಾವೇ ಕಬಳಿಸುತ್ತಿರುತ್ತಾರೆ. ಇದು ಕಿರಣ್‌ ಗಮನಕ್ಕೆ ಬರುತ್ತದೆ. ಅಲ್ಲಿಂದ ಮುಂದೆ ಕಿರಣ್‌ ಹಾಗೂ ಆ ಇಬ್ಬರ ನಡುವೆ ಸಮರ ಶುರುವಾಗುತ್ತದೆ. ಅಂದಹಾಗೆ, ಕಿರಣ್‌ ಪ್ರಾಮಾಣಿಕ ಹಾಗೂ ನಿಷ್ಠಾವಂತ ಪೊಲೀಸ್ ಅಧಿಕಾರಿ ಮಾತ್ರವೇ ಆಗಿರುವುದಿಲ್ಲ. ಆತ ದೌರ್ಬಲ್ಯಗಳು ಇಲ್ಲದ ವ್ಯಕ್ತಿಯೂ ಆಗಿರುತ್ತಾನೆ!

ಕಿರಣ್‌ಗೆ ಹುಲಿಗುಡ್ಡದ ಯುವತಿಯೊಬ್ಬಳಲ್ಲಿ ಪ್ರೇಮ ಅಂಕುರಿಸುತ್ತದೆ. ಆದರೆ ಇದು ಮಾಮೂಲಿನಂತೆ ಮದುವೆಯಲ್ಲಿ ಕೊನೆಗೊಳ್ಳುವ ಪ್ರೇಮ ಆಗಿರುವುದಿಲ್ಲ. ಅಂತಹ ಪ್ರೇಮ ಇದಲ್ಲ ಎಂಬುದು ಸಿನಿಮಾದ ಕೊನೆಯವರೆಗೆ ಗೊತ್ತಾಗುವುದೂ ಇಲ್ಲ.

ಪ್ರಥಮಾರ್ಧದ ಕೊನೆಯವರೆಗೆ ನಿರೀಕ್ಷಿತ ರೀತಿಯಲ್ಲೇ ಸಾಗುವ ಸಿನಿಮಾ, ತಿರುವು ಪಡೆದುಕೊಳ್ಳುವುದು ದ್ವಿತೀಯಾರ್ಧದಲ್ಲಿ. ಕಿರಣ್‌ಗೆ ತನ್ನ ಹುಟ್ಟೂರು ಯಾವುದು ಎಂಬುದು ಆ ವೇಳೆಗೆ ಗೊತ್ತಾಗಿರುತ್ತದೆ. ಗುರಿ ಏನು ಎಂಬುದೂ ಸ್ಪಷ್ಟವಾಗಿರುತ್ತದೆ. ಮುಂದಿನದನ್ನು ಸಿನಿಮಾ ವೀಕ್ಷಿಸಿ ತಿಳಿಯಬಹುದು. ಪೊಲೀಸ್‌ ಅಧಿಕಾರಿಯು ದುಷ್ಟ ಪಾತ್ರಗಳ ಜೊತೆ ಹೊಡೆದಾಟ ನಡೆಸಿ, ತನ್ನ ಪ್ರೇಯಸಿಯ ಎದುರಿನಲ್ಲೇ ಅವರನ್ನೆಲ್ಲ ಮುಗಿಸಿಹಾಕುವ ಮಾದರಿಯ ಸಿನಿಮಾ ಇದಲ್ಲ. ಸಿನಿಮಾದ ಅಂತ್ಯವನ್ನು ನಿರ್ದೇಶಕರು ತುಸು ವಿಭಿನ್ನವಾಗಿ ಕಟ್ಟಿಕೊಟ್ಟಿದ್ದಾರೆ ಎನ್ನಬಹುದು.

ಕಾವೇರಿ ತೀರದ ಸುಂದರ ದೃಶ್ಯಗಳನ್ನು ನೋಡುವ ಅವಕಾಶ ಸಿನಿಮಾ ಕಥೆಯ ಜೊತೆ ಬೋನಸ್ ರೂಪದಲ್ಲಿ ಸಿಗುತ್ತದೆ. ಆದರೆ, ಕಥೆಯನ್ನು ಹೇಳಿರುವ ರೀತಿ, ಅದರಲ್ಲಿ ಬರುವ ಪಾತ್ರಗಳು, ಸನ್ನಿವೇಶಗಳು, ದೃಶ್ಯಗಳು ಹಾಗೂ ಒಂದಿಷ್ಟು ಸಂಭಾಷಣೆಗಳು ಹಳೆಯ ಕನ್ನಡ ಸಿನಿಮಾಗಳನ್ನೇ ಮತ್ತೆ ಮತ್ತೆ ನೆನಪಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT