ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವಾಲಯಕ್ಕೆ ಕಾಯಕಲ್ಪದ ಮೆರಗು

Last Updated 5 ನವೆಂಬರ್ 2017, 6:24 IST
ಅಕ್ಷರ ಗಾತ್ರ

ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಹೋಬಳಿಯ ಬಿಳ್ಳೂರು ಗ್ರಾಮದ ಹೊರವಲಯದಲ್ಲಿರುವ ಚೋಳರ ಕಾಲದ ಸ್ತಂಭ ಲಕ್ಷ್ಮೀ ನರಸಿಂಹಸ್ವಾಮಿ ದೇಗುಲ ಸದ್ಯ ಜೀರ್ಣೋದ್ಧಾರಗೊಂಡು ಹೊಸ ಮೆರಗು ಪಡೆದಿದೆ. ದೇವಾಲಯ ಆವರಣದ ಉದ್ಯಾನದಲ್ಲಿ ನೂತನವಾಗಿ ಸ್ಥಾಪಿಸಿರುವ ಧ್ಯಾನ ನಿರತ ಭಂಗಿಯ ಶಿವನ 31 ಅಡಿ ಮೂರ್ತಿ, 35 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಮತ್ತು ಸಂಗೀತ ಕಾರಂಜಿ ಪುರಾತನ ದೇವಾಲಯಕ್ಕೆ ಹೊಸ ಕಳೆ ನೀಡುವ ಜತೆಗೆ ಭಕ್ತರನ್ನು ಆಕರ್ಷಿಸುತ್ತಿವೆ.

ವಿಜಯನಗರ ಸಾಮ್ರಾಜ್ಯದ ದೊರೆ ಶ್ರೀಕೃಷ್ಣದೇವಾರಾಯನ ಕಾಲದಲ್ಲಿ ಬಾಗೇಪಲ್ಲಿ ತಾಲ್ಲೂಕಿನ ಬಿಳ್ಳೂರು ಗ್ರಾಮವು ಆಂಧ್ರದ ರಾಯಲಸೀಮಾ ಪ್ರದೇಶದ ಮದನಪಲ್ಲಿ ತಾಲ್ಲೂಕಿನ ವ್ಯಾಪ್ತಿಗೆ ಒಳಪಟ್ಟಿತ್ತು. ಕಾಲಕ್ರಮೇಣ ಭಾಷಾವಾರು ಪ್ರಾಂತ್ಯಗಳಾಗಿ ವಿಂಗಡಿಸಿದಾಗ ಬಿಳ್ಳೂರು ಕರ್ನಾಟಕಕ್ಕೆ ಸೇರ್ಪಡೆಯಾಯಿತು.

ಗ್ರಾಮದ ಪೂರ್ವದಿಕ್ಕಿನಲ್ಲಿರುವ ಕಿರಿದಾದ ಬೆಟ್ಟದ ಮೇಲೆ ಚೋಳರು ಕ್ರಿ.ಶ.1200ರಲ್ಲಿ ನಿರ್ಮಿಸಿದ ಈ ದೇಗುಲ ಶಿಲ್ಪಕಲೆಯ ಬೀಡಾಗಿದೆ. ಕಲ್ಲಿನಲ್ಲಿ ಕೆತ್ತಿದ್ದ ಬಗೆ ಬಗೆಯ ಕುಸುರಿ ಕೆಲಸಗಳು ನೋಡುಗರಿಗೆ ವಿಸ್ಮಯ ಮೂಡಿಸುತ್ತವೆ. ಜೀರ್ಣೋದ್ಧಾರದ ಬಳಿಕ ಈ ದೇವಾಲಯದಲ್ಲಿ ಪದ್ಮಾವತಿ ಸಮೇತ ವೆಂಕಟರಮಣಸ್ವಾಮಿ ವಿಗ್ರಹವನ್ನು ಸಹ ಪ್ರತಿಷ್ಠಾಪನೆ ಮಾಡಲಾಗಿದೆ.

15 ಚದರಡಿಯ ಗರ್ಭಗುಡಿ, 20 ಚದರಡಿಯ ಸುಖಾಸನ, 45 ಚದರಡಿ ಹೊರಾಂಗಣ ಮಂಟಪ ಹೊಂದಿರುವ ಈ ದೇಗುಲದಲ್ಲಿ ಕಲ್ಲಿನ ಕಂಬಗಳಲ್ಲಿ ಕಂಡುಬರುವ ನವಿರು ಕಲಾ ನೈಪುಣ್ಯತೆ ಬೆರಗು ಮೂಡಿಸುತ್ತದೆ.

‘ಗರ್ಭಗುಡಿಯಲ್ಲಿ ಧ್ವಜಸ್ತಂಭದಂತೆ ಕಾಣುವ ಕಂಬವು ಉದ್ಭವ ಮೂರ್ತಿ ಎಂದು ಹೇಳಲಾಗುತ್ತದೆ. ಈ ಸ್ತಂಭವು ದಿನೇ -ದಿನೇ ಬೆಳೆಯುತ್ತಿರುವ ಕಾರಣಕ್ಕೆ 15 ಅಡಿ ಎತ್ತರದಲ್ಲಿ ಬೆಳೆದ ಹೊತ್ತಿನಲ್ಲಿ ಸ್ತಂಭದ ಮೇಲೆ ಗಡಾರಿ ಇಳಿಸಲಾಗಿದೆ. ಅಲ್ಲಿಗೆ ಈ ಏಕಶಿಲಾ ಸ್ತಂಭ ಬೆಳೆಯುವುದು ಸ್ಥಗಿತಗೊಳಿಸಿತು’ ಎಂಬ ನಂಬಿಕೆ ಭಕ್ತರದು.

ಈ ದೇಗುಲಕ್ಕೆ ಹೋಗುವ ರಸ್ತೆ ಮಾರ್ಗದಲ್ಲಿ ಚೋಳರ ಕಾಲದಲ್ಲಿ ನಿರ್ಮಿಸಿರುವ ಅತ್ಯಂತ ಪುರಾತನ ಈಶ್ವರನ ದೇವಸ್ಥಾನ, ಲಕ್ಷ್ಮಿನಾರಾಯಣಸ್ವಾಮಿ ದೇವಾಲಯಗಳಿವೆ. ಶೃಂಗೇರಿ ಮಠದ ವ್ಯಾಸರಾಯರು ಪ್ರತಿಷ್ಠಾಪನೆ ಮಾಡಿರುವ ಬಯಲಾಂಜನೇಯಸ್ವಾಮಿಯ ದರ್ಶನಮಾಡಿ ಬೆಟ್ಟವನ್ನು ಏರುತ್ತಿದ್ದಂತೆ ಪುರಾತನವಾದ ಕಲ್ಯಾಣ ಮಂಟಪಗಳು ಗಮನ ಸೆಳೆಯುತ್ತವೆ. ಸ್ತಂಭ ಲಕ್ಕ್ಷ್ಮಿನರಸಿಂಹಸ್ವಾಮಿ ದೇವಾಲಯದ ಕಡೆಗೆ ಮುಖ ಮಾಡಿರುವ 18 ಅಡಿ ಎತ್ತರದ ಆಂಜನೇಯಸ್ವಾಮಿಯ ಮೂರ್ತಿ ಆಸ್ತಿಕ ಗಣದ ಆರಾಧ್ಯ ದೈವವಾಗಿದೆ.

ಇಲ್ಲಿ ಪ್ರತಿವರ್ಷ ರಾಮನವಮಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಮತ್ತು ಪೂಜೆಗಳನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರತಿ ಪಾಲ್ಗುಣ ಮಾಸ, ಕದಿರಿ ಹುಣ್ಣಿಮೆಯಂದು ಇಲ್ಲಿ ಬ್ರಹ್ಮರಥೋತ್ಸವವನ್ನು ಆಚರಿಸುವ ಉದ್ದೇಶವಿದೆ ಎಂದು ಸ್ತಂಭ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ಆಡಳಿತ ಮಂಡಳಿಯವರು ಹೇಳುತ್ತಾರೆ.
ಮನಸ್ಸಿಗೆ ನೆಮ್ಮದಿ, ಆಹ್ಲಾದಕತೆ, ಕಣ್ಣಿಗೆ ಇತಿಹಾಸ ವೈಭವನ್ನು ಕಟ್ಟಿಕೊಡುವ ಸ್ತಂಭ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯ ಸದ್ಯ ಪ್ರವಾಸಿ ತಾಣವಾಗಿ ರೂಪುಗೊಳ್ಳುತ್ತಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT