ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನಲ್ಲಿ ಅಂತರಂಗದ ಶುದ್ಧಿ ಮುಖ್ಯ’

Last Updated 5 ನವೆಂಬರ್ 2017, 9:03 IST
ಅಕ್ಷರ ಗಾತ್ರ

ರಾಮನಗರ: ‘ಚಂಚಲವಾದ ಮನಸ್ಸನ್ನು ಸನ್ಮಾರ್ಗದ ಕಡೆಗೆ ಕೊಂಡೊಯ್ಯುವ ಕೆಲಸ ಭಗವಂತ ಸ್ಮರಣೆಯಿಂದ ಮಾತ್ರ ಸಾಧ್ಯ’ ಎಂದು ಸಿದ್ದಗಂಗಾ ಕ್ಷೇತ್ರದ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸಿದ್ದಲಿಂಗೇಶ್ವರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ, ಮಾರಮ್ಮದೇವಿ ಪುನರ್ ಪ್ರತಿಷ್ಠಾಪನೆ, ಮಲ್ಲೇಶ್ವರ ಸ್ವಾಮಿ ದೇವಸ್ಥಾನದ ವಿಮಾನಗೋಪುರ ಕಳಾಸಾರೋಹಣ ಮತ್ತು ಕುಂಬಾಭಿಷೇಕ, ಮಲ್ಲೇಶ್ವರಸ್ವಾಮಿ ರಜತ ಭವನ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಭಗವಂತನಿಗೆ ಹೊರಗಿನ ಶುದ್ಧಿಗಿಂತ ಭಕ್ತಿ ತುಂಬಿದ ಮನಸ್ಸನ್ನು ಮೀಸಲಾಗಿಡಬೇಕು. ಈ ಅಹಿಂಸೆ, ಶಾಂತಿ ಭಾವದ ಮನಸ್ಸು ಪವಿತ್ರವಾದ ಮನಸ್ಸನ್ನು ಸೃಷ್ಟಿ ಮಾಡುತ್ತದೆ. ಇದಕ್ಕೆ ಮಾಧ್ಯಮವಾಗಿ ಭಜನೆಗಳು, ದೇವರ ನಾಮಸ್ಮರಣೆ ಕಾರ್ಯನಿರ್ವಹಿಸುತ್ತವೆ’ ಎಂದರು.

ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ‘ಮನುಷ್ಯನಿಗೆ ದೇವರ ಮೇಲೆ ನಂಬಿಕೆ , ವಿಶ್ವಾಸ ಇರಬೇಕು. ದೇವರನ್ನು ಕಂಡುಕೊಳ್ಳುವ ಶಕ್ತಿ ಮಾನವನಿಗೆ ಬೇಕು. ಇದಕ್ಕೆ ದೇವಾಲಯ ಮಾಧ್ಯಮವಾಗಿ ಕೆಲಸ ಮಾಡುತ್ತವೆ’ ಎಂದರು.

ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಸ್ವಾಮೀಜಿ ಮಾತನಾಡಿ ‘ಮನುಷ್ಯ ಜನ್ಮ ಶ್ರೇಷ್ಠ ಜನ್ಮ. ಭಗವಂತ ಮನುಷ್ಯನಿಗೆ ಇಚ್ಛಾಶಕ್ತಿ, ಆಲೋಚನಾ ಶಕ್ತಿ ಮತ್ತು ಕ್ರಿಯಾ ಶಕ್ತಿಯನ್ನು ನೀಡಿದ್ದಾನೆ. ಅದನ್ನು ಬಳಸಿಕೊಂಡು ಜೀವನವನ್ನು ಸಾರ್ಥಕಗೊಳಿಸಿಕೊಳ್ಳಬೇಕು’ ಎಂದರು. ಕುಣಿಗಲ್ ತಾಲ್ಲೂಕಿನ ಉರಿಗದ್ದಿಗೇಶ್ವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿ, ಶಾಸಕ ಎಚ್.ಸಿ.ಬಾಲಕೃಷ್ಣ ಮಾತನಾಡಿದರು.

ಉಪನ್ಯಾಸ: ನಿವೃತ್ತ ಬ್ರಿಗೇಡಿಯರ್ ವಿನೋದ್‌ ಕುಮಾರ್ ಆಡಪ್ಪ ದೇಶದ ಪ್ರಗತಿಯಲ್ಲಿ ಸೇನಾದಳಗಳ ಮಹತ್ವ ಕುರಿತಂತೆ ಉಪನ್ಯಾಸ ನೀಡಿದರು. ‘ದೇಶ ಪ್ರಗತಿಯಾಗಬೇಕಾದರೆ ಸೇನೆಗಳ ಪಾತ್ರ ಬಹಳ ಮಹತ್ವಾಗಿದೆ. ನಮ್ಮಲ್ಲಿ ಒಗ್ಗಟ್ಟು ಮತ್ತು ಬಲವಾದ ಸೈನ್ಯ ಇಲ್ಲದ ಕಾರಣದಿಂದಲೇ ನಮ್ಮ ಮೇಲೆ ಪರಕೀಯರು ದಾಳಿ ಮಾಡಿ ನಮ್ಮ ಸಂಪತ್ತು ದೋಚಿದರು. ಬ್ರಿಟಿಷರು ಆಳ್ವಿಕೆ ನಡೆಸಿದರು. ಆದರೆ 1962ರಲ್ಲಿ ಚೀನಾ ನಮ್ಮ ಮೇಲೆ ನಡೆಸಿದ ಯುದ್ಧ ದೇಶಕ್ಕೆ ಸೇನಾ ಬಲದ ಅಗತ್ಯವನ್ನು ತಿಳಿಸಿಕೊಟ್ಟಿತು’ ಎಂದರು.

‘ದೇಶದ ಸೇನೆ ಒಂದು ಹರಿತವಾದ ಖಡ್ಗವಿದ್ದಂತೆ, ಅಂತಿಮ ಅಸ್ತ್ರವಾಗಿ ಸೇನೆಯನ್ನು ಯಾಗಾಗಲೇ ಬಳಕೆ ಮಾಡಿದರೂ ಖಡ್ಗ ಹರಿತವಾಗಿಯೇ ಇರಬೇಕು’ ಎಂದರು. ತಾವು ಕಾರ್ಯನಿರ್ವಹಿಸಿದ ಸಿಕ್ಕಿಂ ಮತ್ತು ಜಮ್ಮು ಕಾಶ್ಮೀರದ ತಮ್ಮ ಸೇನಾ ಕಾರ್ಯಾಚರಣೆ ಅನುಭವವನ್ನು ಸಮ್ಮೇಳನದಲ್ಲಿ ಹಂಚಿಕೊಂಡರು.

ಫಿರಂಗೀಶ್ವರ ಮಠದ ಶಿವರುದ್ರ ಶಿವಾಚಾರ್ಯ ಸ್ವಾಮೀಜಿ, ವಿರಕ್ತ ಮಠದ ಶಿವರುದ್ರ ಸ್ವಾಮೀಜಿ, ಬೇವೂರು ಮಲ್ಲಿಕಾರ್ಜುನಸ್ವಾಮಿ ಮಠದ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಆಯೋಜಕರಾದ ಲೋಕೇಶ್ ದಂಪತಿಯನ್ನು ಅಭಿನಂದಿಸಲಾಯಿತು. ಮುಖಂಡರಾದ ವಿಜಯಕುಮಾರ್, ದೇವರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT