ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟಾವಿಗೆ ಸಿದ್ಧವಾಯ್ತು ರಾಗಿ ಬೆಳೆ

Last Updated 5 ನವೆಂಬರ್ 2017, 9:05 IST
ಅಕ್ಷರ ಗಾತ್ರ

ರಾಮನಗರ: ಸತತ ನಾಲ್ಕು ವರ್ಷ ಬರದಿಂದ ಕಂಗೆಟ್ಟಿರುವ ಜಿಲ್ಲೆಯ ರೈತರು ಈ ಬಾರಿ ಬಂಪರ್‌ ರಾಗಿ ಬೆಳೆಯ ನಿರೀಕ್ಷೆಯಲ್ಲಿದ್ದು, ಕಟಾವಿಗೆ ಸಿದ್ಧತೆ ನಡೆಸಿದ್ದಾರೆ. ಈ ಬಾರಿ ನಿರೀಕ್ಷೆಯ ಪ್ರಮಾಣ ದಲ್ಲಿಯೇ ರಾಗಿ ಬಿತ್ತನೆ ಆಗಿದ್ದು, ಅದರಲ್ಲಿ ಶೇ 80–90 ಭಾಗದಷ್ಟು ಫಸಲು ಇದೀಗ ಕಟಾವಿನ ಹಂತಕ್ಕೆ ಬಂದಿದೆ. ಹೊಲಗಳಲ್ಲಿ ಮೈ ತುಂಬಿಕೊಂಡಿರುವ ತೆನೆಗಳ ತೂಗಾಟವನ್ನು ನೋಡುವುದೇ ಒಂದು ಸೊಗಸು ಎನ್ನುವಂತಿದೆ.

ಜಿಲ್ಲೆಯಲ್ಲಿ ಈ ಮುಂಗಾರು ಹಂಗಾಮಿನಲ್ಲಿ ಒಟ್ಟು 74,350 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬೆಳೆಯುವ ಗುರಿಯನ್ನು ಹೊಂದಲಾಗಿತ್ತು. ಇದರಲ್ಲಿ 74,214 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಆಗಿದೆ. ಕನಕಪುರದಲ್ಲಿ ಅತಿ ಹೆಚ್ಚು 29 ಸಾವಿರ ಹೆಕ್ಟೇರ್, ಚನ್ನಪಟ್ಟಣದಲ್ಲಿ 10 ಸಾವಿರ, ಮಾಗಡಿಯಲ್ಲಿ 22 ಸಾವಿರ ಮತ್ತು ರಾಮನಗರದಲ್ಲಿ 11 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿಯನ್ನು ಬೆಳೆಯಲಾಗಿದೆ. ಆದರೆ ಎಡೆ ಬಿಡದೆ ಸುರಿದ ಮಳೆಯಿಂದಾಗಿ ಅಲ್ಪ ಪ್ರಮಾಣ ದಲ್ಲಿ ರಾಗಿ ಬೆಳೆ ನಷ್ಟವಾಗಿರುವ ಸಾಧ್ಯತೆ ಇದೆ.

ಚಂಡಮಾರುತಗಳ ಭೀತಿ: ಹಿಂಗಾರು ಹಂಗಾಮಿನ ಮಳೆಗಳು ಬಹುತೇಕ ಸಂದರ್ಭಗಳಲ್ಲಿ ಚಂಡ ಮಾರುತಗಳ ಪ್ರಭಾವದಿಂದ ಎಡೆಬಿಡದೆ ಸುರಿದ ಉದಾಹರಣೆಗಳಿವೆ. ಈ ಬಾರಿಯೂ ಇದೇರೀತಿ ಆದರೆ ಕೈ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ.

ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೋಡ ಕವಿದ ವಾತಾವರಣ ಇತ್ತು. ಆದರೆ ಜೋರಾದ ಮಳೆ ಆಗಿಲ್ಲ. ಒಂದು ವೇಳೆ ಹಿಂಗಾರು ಮಳೆ ಜಿಡಿಮಳೆಯಂತೆ ಪರಿವರ್ತನೆಯಾಗಿ ಮೂರ್ನಾಲ್ಕು ದಿನ ಸುರಿದರೆ ಕೊಯ್ಲು ಮಾಡಿದ ರಾಗಿ ಮುಗ್ಗು ಹಿಡಿದು, ಮೊಳಕೆ ಒಡೆಯುತ್ತದೆ. ಇನ್ನೂ ಕೊಯ್ಲು ಮಾಡದ ರಾಗಿ ಸಂಪೂರ್ಣವಾಗಿ ಬಾಗಿ ನೆಲ ಕಚ್ಚಿ ಹಾಳಾಗುತ್ತದೆ. ಆದ್ದರಿಂದ ಹಿಂಗಾರು ಮಳೆ ಅಬ್ಬರಿಸದಿದ್ದರೆ ಸಾಕು ಎಂದು ರೈತರು ಪ್ರಾರ್ಥಿಸತೊಡಗಿದ್ದಾರೆ.

ವಾಡಿಕೆಗಿಂತ ಹೆಚ್ಚು: ಜಿಲ್ಲೆಯಲ್ಲಿ ಮುಂಗಾರಿನಲ್ಲಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಜೂನ್ 1ರಿಂದ ಅಕ್ಟೋಬರ್‌ 30ವರೆಗೆ 599 ಮಿಲಿಮೀಟರ್‌ ಮಳೆಯ ನಿರೀಕ್ಷೆ ಇತ್ತು. ಅದಕ್ಕೆ ಪ್ರತಿಯಾಗಿ 790 ಮಿ.ಮೀ. ಮಳೆಯಾಗಿದ್ದು, ಶೇ 32ರಷ್ಟು ಹೆಚ್ಚುವರಿ ಮಳೆ ದಾಖಲಾಗಿದೆ. ಈ ಅವಧಿಯಲ್ಲಿ ಕನಕಪುರ ತಾಲೂಕಿ ನಲ್ಲಿ 862 ಮಿ.ಮೀ, ಚನ್ನಪಟ್ಟಣದಲ್ಲಿ 847 ಮಿ.ಮೀ, ಮಾಗಡಿಯಲ್ಲಿ 819 ಮಿ.ಮೀ ಮತ್ತು ರಾಮನಗರದಲ್ಲಿ 898 ಮಿ.ಮೀ. ಮಳೆ ಸುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT