ನಾ ಕಂಡ ಬದುಕು

ಬವಣೆಯ ಬೆಂಕಿಯಲ್ಲಿ ಪಲ್ಲವಿಸಿದ ಬದುಕು

ವರ್ಷಗಟ್ಟಲೆ, ದಶಕಗಟ್ಟಲೆ ಒಂದೇ ಕ್ಷೇತ್ರದಲ್ಲಿ ಕಾಯಕಯೋಗಿಗಳಾಗಿ ದುಡಿದ ಎಷ್ಟೋ ಸಾಧಕರು ನಮ್ಮ ನಡುವೆ ಇದ್ದಾರೆ. ತಮ್ಮ ಕರ್ಮಭೂಮಿ ಮತ್ತು ಬದುಕಿನ ಆಪ್ತ ಕ್ಷಣಗಳನ್ನು ಅವರು ‘ನಾ ಕಂಡ ಬದುಕು’ ಅಂಕಣದಲ್ಲಿ ಮೆಲುಕು ಹಾಕಲಿದ್ದಾರೆ. ಈ ವಾರ ಹಿರಿಯ ಸಾಹಿತಿ ದೊಡ್ಡರಂಗೇಗೌಡ ನಮ್ಮೊಂದಿಗೆ...

ನಿಂತ ನೀರಾಗ ಬಾರದು ಬದುಕು’ ಎಂಬುದೇ ನನ್ನ ಸಾಹಿತ್ಯದ ಗುರುಗಳು ಕಲಿಸಿದ ಮೊದಲ ಪಾಠ. ಬದುಕಿಗೆ ಇಂಥ ಬೆಳಕನ್ನು ಪಡೆದ ನಾನು ಮುಂದೆ ‘ನಿನ್ನ ಬದುಕಿನ ಏಳಿಗೆಗೆ ನೀನೇ ರೂವಾರಿ’ ಎಂಬ ಸ್ವಾನುಭವವನ್ನೂ ಪಡೆದು ಆ ತಿಳಿವಿನ ಹೊಂಬೆಳಕಲ್ಲಿ ಮುಂದಡಿ ಇಡುತ್ತಾ ಹೋದೆ.

1960ರಿಂದ 1964ರವರೆಗೆ ತುಮಕೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಪಿಯುಸಿ ಹಾಗೂ ಬಿ.ಎಸ್ಸಿ ಅಧ್ಯಯನ; ವಿಜ್ಞಾನದ ವಿದ್ಯಾರ್ಥಿ. ಲೋಕಸೇವಾನಿರತ ಜಿ.ಎಂ. ಸಿದ್ಧರಾಮಣ್ಣ ಅವರ ಉಚಿತ ವಿದ್ಯಾರ್ಥಿನಿಲಯದಲ್ಲಿ ಉಚಿತ ಊಟ, ವಸತಿ ಪಡೆದ ಭಾಗ್ಯಶಾಲಿ. ಹೀಗಾಗಿ ಬಿ.ಎಸ್ಸಿ. ಓದು ನಿರಾತಂಕ.

ಪದವಿ ವಿದ್ಯಾಭ್ಯಾಸ ಮುಗಿದ ಮೇಲೆಯೇ ಬದುಕಿನ ಸವಾಲು ಶುರುವಾದದ್ದು. ಸಣ್ಣಪುಟ್ಟ ಖರ್ಚುಗಳನ್ನು ತೂಗಿಸಲು, ಜೀವನವನ್ನು ನಿಭಾಯಿಸಲೆಂದು ಸಂಜೆ ಐದು ಗಂಟೆಯಿಂದ ಆರೂವರೆವರೆಗೆ ಹತ್ತು ಮಕ್ಕಳಿಗೆ ಪಾಠ ಹೇಳುತ್ತಿದ್ದೆ. ಗೆಳೆಯರೆಲ್ಲಾ ಆಟ ಆಡುತ್ತಿದ್ದರೆ ನಾನು ನನ್ನ ಜೀವನ ನಿರ್ವಹಣೆಗೆ ಕಷ್ಟ ಪಡುತ್ತಿದ್ದೆ. ಕಷ್ಟ ಎನ್ನುವುದಕ್ಕಿಂತ ಅದೆಲ್ಲಾ ನನಗೆ ಇಷ್ಟದ ವಿಷಯವೇ ಆಗಿತ್ತು ಎನ್ನಿ.

ಬಿ.ಎಸ್ಸಿ. ಮುಗಿಯುತ್ತಿದ್ದಂತೆ ಅಂಚೆ ಇಲಾಖೆಯಲ್ಲಿ ಕೆಲಸ ಸಿಕ್ಕಿತು. ಹುಬ್ಬಳ್ಳಿಯಲ್ಲಿ ಸಾರ್ಟರ್ ಆಗಿ ವೃತ್ತಿ ಜೀವನ ಆರಂಭಿಸಿದೆ. ಆಗ ನನ್ನ ಸಂಬಳ ಒಂದು ನೂರ ನಾಲ್ಕು ರೂಪಾಯಿ. ಒಂದೇ ವರ್ಷದಲ್ಲಿ ಬೆಂಗಳೂರಿಗೆ ವರ್ಗ ಆಯಿತು.

1965ರ ಜುಲೈಗೆ ಬೆಂಗಳೂರು ಶಹರದಲ್ಲಿ ಕಾಲಿಟ್ಟೆ. ಕೈಯಲ್ಲಿದ್ದುದು ಒಂದು ಆರ್ಡಿನರಿ ಪೆಟ್ಟಿಗೆ. ಅದರಲ್ಲಿ ಎರಡು ಜೊತೆ ಬಟ್ಟೆ. ಒಂದು ಡೈರಿ. ಜೊತೆಗೆ ನಾಲ್ಕೈದು ಕವನ ಸಂಕಲನಗಳು, ಕುವೆಂಪು, ಬೇಂದ್ರೆ, ಕೆ.ಎಸ್‍.ನ. ಮತ್ತು ಅಡಿಗರ ಕೃತಿಗಳು. ಬರುವ ಸಂಬಳ ಸಾಕಾಗುತ್ತಿರಲಿಲ್ಲ. ನನ್ನ ತಮ್ಮಂದಿರು ಇಬ್ಬರು ನನ್ನ ಜೊತೆಗೇ ಬಂದು ನೆಲೆಸಿದರು. ಒಬ್ಬಳು ತಂಗಿಯೂ ಇದ್ದಳು. ಎಲ್ಲರ ಜವಾಬ್ದಾರಿ ನನ್ನ ಮೇಲೆ. ತುಂಬಾ ಕಷ್ಟವಾಗಿತ್ತು ನಮ್ಮ ಬದುಕು. ಅದನ್ನು ‘ಬವಣೆಯ ಪರ್ವ’ ಎಂದೇ ಕರೆಯಬಹುದಾಗಿತ್ತು.

ನನ್ನ ಉಸಿರನ್ನೇ ಪಣವಾಗಿಟ್ಟು ಓವರ್ ಟೈಂ ಕೆಲಸ ಮಾಡಲು ಪ್ರಾರಂಭಿಸಿದೆ. ಬೆಂಗಳೂರು ರೈಲ್ವೇ ನಿಲ್ದಾಣದಲ್ಲಿ (ಆರ್‌.ಎಂ.ಎಸ್‌) ನನ್ನ ನೌಕರಿ. ಆಗಿನ ರೈಲು ನಿಲ್ದಾಣ ಹೆಂಚಿನ ಮಾಳಿಗೆಯದು. ಹಳೇ ಮಾದರಿ, ತೀರಾ ಚಿಕ್ಕದಾಗಿತ್ತು. ಮೂರು ಹೊತ್ತೂ ರೈಲು ಎಂಜಿನ್‌ಗಳ ಹೊಗೆಯದೇ ದರ್ಬಾರು. ನಮ್ಮದೋ ಸರಳ ಜೀವನ. ಟೀ ಕುಡಿಯುವುದು. ಬನ್ ತಿನ್ನುವುದು. ಮತ್ತೆ ಕೆಲಸ ನಿಭಾಯಿಸುವುದು.

ಆರ್.ಎಂ.ಎಸ್. ಸಾರ್ಟಿಂಗ್ ಎಂದರೆ ಪತ್ರ ವಿಂಗಡಣೆ. ಬೇರೆಡೆಯಿಂದ ಟ್ರೇಗೆ ಬಂದು ಬೀಳುತ್ತಿದ್ದ ಪತ್ರಗಳ ರಾಶಿಯನ್ನು ವಿಂಗಡಣೆಕಾರರು ಸರಿಯಾಗಿ ವಿಂಗಡಿಸಿದರೇ ಜಗತ್ತಿನ ಮೂಲೆಮೂಲೆಗೆ ಪತ್ರ ತಲುಪುತ್ತಿದ್ದುದು. ಆ ಕೆಲಸವನ್ನು ನಾನು ಚೆನ್ನಾಗಿ ನಿಭಾಯಿಸುತ್ತಿದ್ದೆ. ಯಾವ ಪ್ರದೇಶಗಳ ಟ್ರೇ ಎಲ್ಲಿರುತ್ತದೆ ಎಂಬುದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ಬಿಟ್ಟಿತ್ತು. ಪಟಪಟಾಂತ ಎಲ್ಲವನ್ನು ವಿಂಗಡಿಸಿ ಮುಗಿಸಿಬಿಡುತ್ತಿದ್ದೆ. ಈಗ ಅದೆಲ್ಲಾ ನೆನಪಾದರೆ ಖುಷಿ ಎನಿಸುತ್ತದೆ.

ಆಗ ಮೊಬೈಲ್‍ಗಳಿರಲಿಲ್ಲ. ಸಂಪರ್ಕಕ್ಕೆ ಪೋಸ್ಟಲ್ ಆರ್.ಎಂ.ಎಸ್. ಅವಲಂಬನೆ. ಹೀಗಾಗಿ ಕಚೇರಿ ತುಂಬ ಪತ್ರಗಳ ಮೂಟೆಗಳು; ದಂಡಿ ದಂಡಿ ಮೂಟೆಗಳ ಬೆಟ್ಟಗಳು. ನಿಂತೇ ಸಾರ್ಟ್ ಮಾಡಬೇಕಿತ್ತು. ಒಂದಿನ್ನೂರು ಪಿಜನ್ ಹೋಲ್ಸ್ ಸ್ಟ್ಯಾಂಡ್ ಇರುತ್ತಿದ್ದವು. ಅಲ್ಲಿ ಪ್ರತಿ ಪಿಜನ್ ಹೋಲ್‌ಗೆ (ನಿರ್ದಿಷ್ಟ ಮಾರ್ಗಕ್ಕೆ ಕಳುಹಿಸಬೇಕಾದ ಪತ್ರಗಳನ್ನು ಇರಿಸುವ ಸ್ಥಳ) ಪ್ರತ್ಯೇಕ ಹೆಸರು. ಮೈಸೂರು, ತುಮಕೂರು, ದಾವಣಗೆರೆ, ಹುಬ್ಬಳ್ಳಿ, ಚಿತ್ರದುರ್ಗ, ಬಿಜಾಪುರ, ಗುಲ್ಬರ್ಗ, ಬೀದರ್, ಹೀಗೆ...

ಬಿಡುವೇ ಇಲ್ಲದ ಕೆಲಸ. ತೂಕಡಿಸುವಂತೆಯೂ ಇಲ್ಲ. ರಾತ್ರಿಯೆಲ್ಲಾ ಕೆಲಸ ಮಾಡಿ ಬೆಳಿಗ್ಗೆ ಮನೆಗೆ ಹೋಗಿ ಇಡ್ಲಿ ತಿಂದು ಮಲಗುತ್ತಿದ್ದೆ. ‘ಎಷ್ಟು ದಿನ ಹೀಗೆ ನಿನ್ನ ದುಡಿಮೆ? ಪರ್ಯಾಯವಾದ ಬದುಕನ್ನು ಕಟ್ಟಿ ಕೊಳ್ಳಲಾಗದೇನು?’ ಎಂಬ ಆತ್ಮವಿಮರ್ಶೆ ಮಾಡಿಕೊಂಡೆ.

ಇನ್ನು ಮುಂದೆ ಒಂದು ಗಂಟೆ ಮಾತ್ರ ನಿದ್ದೆ ಮಾಡಿ (ಅಥವಾ ಒಂದೂವರೆ ಗಂಟೆ ಗಡದ್ದು ನಿದ್ದೆ ಹೋಗಿ) ಎಚ್ಚರವಾದ ಕೂಡಲೇ ಎದ್ದು ಯಾಕೆ ಕಾಲೇಜಿಗೆ ಹೋಗಿ ನನ್ನ ವಿದ್ಯಾಭ್ಯಾಸ ಮುಂದುವರೆಸಬಾರದು ಎನಿಸಿತು. ಈ ಯೋಚನೆ ಮನಸ್ಸಿನೊಳಗೆ ಬಂದಿದ್ದೇ ತಡ ಸೆಂಟ್ರಲ್ ಕಾಲೇಜಿಗೆ ಹೋಗಿ ಬಿ.ಎ. ಆನರ್ಸ್ (ಕನ್ನಡ ಭಾಷೆ ಮತ್ತು ಸಾಹಿತ್ಯದ ಅಧ್ಯಯನ) ಅರ್ಜಿ ತಂದೆ. ಭರ್ತಿ ಮಾಡಿದೆ. ಕನ್ನಡ ವಿಭಾಗಕ್ಕೆ ಕೊಟ್ಟೆ. ಆಗ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದವರು ಡಾ.ರಂ.ಶ್ರೀ.ಮುಗಳಿ (‘ರಸಿಕರ ರಂಗ’). ರಾತ್ರಿಯ ಹೊತ್ತು ಆರ್.ಎಂ.ಎಸ್. ನೌಕರಿ. ಬೆಳಿಗ್ಗೆ ಸೆಂಟ್ರಲ್ ಕಾಲೇಜು ವಿದ್ಯಾರ್ಥಿ. ಹೀಗೆ ಐದು ವರ್ಷ ನಿರಂತರ ಓದಿದೆ.

ಆ ಅನುಭವವೇ ಅಪೂರ್ವ. ನಮಗೆ ಎಂತೆಂಥ ಮೇಷ್ಟ್ರುಗಳಿದ್ದರು ಗೊತ್ತಾ? ಪ್ರೊ.ಜೆ.ಪಿ.ರಾಜರತ್ನಂ, ಡಾ.ಜಿ.ಎಸ್.ಶಿವರುದ್ರಪ್ಪ, ಡಾ.ಎಂ.ಚಿದಾನಂದಮೂರ್ತಿ, ಪಿ.ಲಂಕೇಶ್, ಡಾ.ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ, ಡಾ.ಹಂಪನಾ... ಒಬ್ಬರೇ ಇಬ್ಬರೇ. ಗುರು ಪರಂಪರೆ ದೊಡ್ಡದು. ಓದುವುದು, ಬರೆಯುವುದು... ಪುಸ್ತಕದ ಕೀಟವಾಗಿ ಹೋಗಿದ್ದೆ ಆಗ. ನಿರಂತರ ನಿದ್ದೆಗೆಟ್ಟಿದ್ದರಿಂದ ಅಂಚಿ ಕಡ್ಡಿಯಂತಾಯ್ತು ದೇಹ. ಸೊಣಕಲು ಕಡ್ಡಿ. ನುಗ್ಗೆಕಾಯಿ ರೀತಿ. ಎಂಥದ್ದೇ ಸನ್ನಿವೇಶ ಬಂದರೂ ಹಠ ಬಿಡಲಿಲ್ಲ.

ಒಂದಿದ್ದರೆ ಒಂದಿಲ್ಲ. ರಾಜಾಜಿನಗರದ ನಾಲ್ಕನೇ ಬ್ಲಾಕ್‌ನಿಂದ ರೂಟ್‌ ನಂಬರ್ 76 ಸಂಚರಿಸುತ್ತಿತ್ತು. ಕೇವಲ ಹತ್ತು ಪೈಸೆ ಚಾರ್ಜು. ಅದನ್ನು ಉಳಿಸಲೆಂದು ನಡೆದೇ ಓಡಾಡುತ್ತಿದ್ದೆ. ಬಿಡುವು ಸಿಕ್ಕಾಗ ಜಿ.ಎಸ್.ಎಸ್, ಲಂಕೇಶ್, ಎನ್.ಎಸ್.ಎಲ್, ನಿಸಾರ್ ಅಹ್ಮದ್ ಅವರ ಹತ್ತಿರ ಕಾವ್ಯ ಸೃಜನೆ ಬಗ್ಗೆ ತಿಳಿದುಕೊಳ್ಳುತ್ತಾ ಹೋದೆ. ಬರೆದದ್ದೂ ಬರೆದದ್ದೇ. ಕಥೆ, ಕವಿತೆ, ನಾಟಕ ವಿಮರ್ಶೆ, ಎಲ್ಲ ಎಲ್ಲವೂ ಆಗ ಧಾರೆಯಾಯ್ತು.

ಆ ಗುರುಪರಂಪರೆ ನನಗೆ ಸಾಹಿತ್ಯದ ಆಳ-ಅಗಲ ತೋರಿತ್ತು. ವಿಶಾಲ ವಿಶ್ವಮಾನವತೆಯನ್ನೇ ತಿಳಿಸಿತ್ತು. ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿತ್ತು. ವೈ.ಎನ್.ಕೆ, ವೈಕುಂಠರಾಜು, ಜಿ.ಎನ್. ರಂಗನಾಥರಾವ್, ಜಿ.ಎಸ್. ಸದಾಶಿವ ಅವರ ಸಂಪರ್ಕ ಮತ್ತು ಖಾದ್ರಿಯವರ ಮಾರ್ಗದರ್ಶನ ಪಡೆದೆ. ಸಿ.ವಿ.ರಾಜಗೋಪಾಲ್ ಅವರಿಂದ ಅನೇಕ ವಿಷಯ ಕಲಿತೆ.

ಬೆಂಗಳೂರು ಆಗ ಇಷ್ಟು ಬೆಳೆದಿರಲಿಲ್ಲ. ಇಷ್ಟು ಕಾರುಗಳೂ ಓಡಾಡುತ್ತಿರಲಿಲ್ಲ. ಕೆಂಪೇಗೌಡ ರಸ್ತೆ, ಮಹಾತ್ಮ ಗಾಂಧಿ ರಸ್ತೆಗಳಲ್ಲಿ ಆರಾಮವಾಗಿ ಓಡಾಡುತ್ತಿದ್ದೆವು. ವಿದ್ಯಾರ್ಥಿ ಭವನ್ ದೊಸೆ ಆಸೆ. ಕಾಮತ್ ಹೋಟೆಲ್ ಟೀ. ಅದೇ ಒಂದು ದೊಡ್ಡ ಬಯಕೆ. ಅಗಣಿತ ಚರ್ಚೆಗಳು. ನೆನಪಿನಲ್ಲಿ ಉಳಿದಿರುವ ಕವಿ ಗೋಷ್ಠಿಗಳು. ಬೆಂಗಳೂರು ಬುದ್ಧಿಜೀವಿಗಳ ಆಗರ. ಪ್ರತಿಭಾವಂತರ ಶಹರ ಇದು. ಕಲಾವಿದರ ನೆಲೆವೀಡು. ವಿಚಾರವಂತರ ಪಡೆಯೇ ಇಲ್ಲಿದೆ ಅನಿಸಿತ್ತು.

ಇದನ್ನು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ. ಬಳೆಪೇಟೆ ಚಿಕ್ಕಪೇಟೆಗಳಲ್ಲಿ ಹತ್ತಿ ಬಟ್ಟೆ ತೂಕಕ್ಕೆ ಪಡೆದು ನಾನು ದಿರಿಸು ಹೊಲಿಸಿಕೊಂಡದ್ದೂ ಉಂಟು. ಆ ದಿನಗಳಲ್ಲಿ ಏನೋ ಸಾಧಿಸಬೇಕೆಂಬ ಗುರಿ. ಜಿನ್‍ಪಾಲ್ ಸಾತ್ರ್(ಸಾತ್ರ್ರೆ) ನನ್ನ ನೆಚ್ಚಿನ ಲೇಖಕ. ಆಗ ಒಂದು ಹತ್ತು ಹನ್ನೆರಡು ವರ್ಷ ಯಾವ ದೇವರಿಗೂ ಕೈ ಮುಗಿದದ್ದಿಲ್ಲ. ಕಾಯಕದಲ್ಲಿ ನಂಬಿಕೆ. ಶ್ರಮಜೀವನ. ಅಡಿಗರ ಕಾವ್ಯದ ಆರಾಧಕ. ಯು.ಆರ್. ಅನಂತಮೂರ್ತಿ ನೆಚ್ಚಿನ ಲೇಖಕ. ನವ್ಯದ ಭರಾಟೆ ಇತ್ತು. ಎಲ್ಲ ಮರೆಸಬಲ್ಲ ಹೊಂಗನಸು ಇತ್ತು. ಅದೇ ಜೀವನ!

ಬಸ್ಸಿಗೆ ಕಾಯುತ್ತಲೇ ಇರಲಿಲ್ಲ. ಬೆಂಗಳೂರಿನ ತುಂಬೆಲ್ಲ ನನ್ನ ಕಾಲ್ನಡಿಗೆಯ ನೆನಪಿದೆ. ಈಗ ನಡೆಯ ಹೋದರೆ ವಾಹನಗಳೂ ದಟ್ಟವೋ! ಪುಟ್ಟ ಪಥವನ್ನೂ ಬಿಡುವುದಿಲ್ಲ ಟೂ ವೀಲರ್ಸ್! ಆಗ ಇಷ್ಟು ಕಾರುಗಳು ಓಡಾಡಿದ್ದಿಲ್ಲ. ‘ಟ್ರಾಫಿಕ್ ಜಾಂ’ ಪದವನ್ನೇ ಆಗ ಕೇಳಿರಲಿಲ್ಲ. ವಿಧಾನ ಸೌಧದ ಮುಂದಿನ ಪಾರ್ಕಿನಲ್ಲಿ ಕಡ್ಲೆಕಾಯಿ ತಿನ್ನಬಹುದಿತ್ತು. ಸೌತೇಕಾಯಿ ಸವಿಯ ಬಹುದಿತ್ತು. ಚಿಕ್ಕಪೇಟೆಯ್ಲೂ ಆರಾಮವಾಗಿ ಓಡಾಡಬಹುದಿತ್ತು. ಈಗ ಟೌನ್‍ಹಾಲ್ ಬಳಿ ರಸ್ತೆ ದಾಟಲು ಕನಿಷ್ಠ ಇಪ್ಪತ್ತು ನಿಮಿಷ ಬೇಕು. ಎಂಥ ಮಹಾನಗರಿ ಆಗಿಬಿಟ್ಟಿದೆ ಈ ಬೆಂಗಳೂರು ಈಗ. ಆಗ ಕಬ್ಬನ್ ಪಾರ್ಕಿನಲ್ಲಿ ರಾತ್ರಿ ಹನ್ನೊಂದು ಗಂಟೆ ವೇಳೆಯಲ್ಲೂ ನಡೆದು ಬರಬಹುದಿತ್ತು. ಈಗ ಅದೊಂದು ಕನಸು ಅಷ್ಟೆ. ಟೆನ್ ಕಮಾಂಡ್‌ಮೆಂಟ್ಸ್, ಸೌಂಡ್ ಆಫ್ ಮ್ಯೂಸಿಕ್, ಡಾ.ಜಿವಾಗೊ, ಮೆಕೆನಾಸ್ ಗೋಲ್ಡ್ ನೋಡಿಕೊಂಡು ಪಾರ್ಕ್‌ನಲ್ಲಿ ನಡೆದು ಬಂದದ್ದು ಇನ್ನೂ ನೆನಪಿದೆ. ಈಗ ಎಲ್ಲವೂ ಬದಲಾಗಿದೆ. ಜಿಗುಟಾಗಿದೆ. ಒಗಟಾಗಿದೆ. ಆಗ ಇತ್ತು ಹಿತ. ಈಗ ಏಕೋ ಏನೋ ಈ ನಮ್ಮ ನಲ್ಮೆಯ ನಗರ ಅಹಿತ!

**

ಆಕೆಯ ನೆನಪೇ ಹಿತ

ನಾನು ಸೆಂಟ್ರಲ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಪರಿಚಯವಾದಾಕೆ ಕೆ. ರಾಜೇಶ್ವರಿ. ವಾದ, ಭಾಷಣ ಯಾವುದೇ ಇರಲಿ, ಎಲ್ಲರನ್ನೂ ಮೀರಿಸಬಲ್ಲ ವಾಗ್ಮಿ. ಆಕೆಯನ್ನು ಪ್ರೀತಿಸಿ ‘ಆರ್ಯ ಸಮಾಜ’ದಲ್ಲಿ ಸೆಂಟ್ರಲ್ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕರುಗಳ ಸಮ್ಮುಖದಲ್ಲಿ ಸರಳವಾಗಿ ಮದುವೆ ಆದೆವು. ಆಗಿನ ಕಾಲಕ್ಕೆ ಅದು ಕ್ರಾಂತಿಕಾರಿ ಹೆಜ್ಜೆ.

ಹೊಸಕೋಟೆಯಲ್ಲಿ ವನವಾಸ, ಅಜ್ಞಾತವಾಸಗಳನ್ನು 13 ವರ್ಷ ಕಾಲ ಮುಗಿಸಿ ಮತ್ತೆ ಬೆಂಗಳೂರಿನಲ್ಲಿ ನೆಲಸಿದೆವು. ನನ್ನ ಇಬ್ಬರು ಮಕ್ಕಳು ಕನ್ನಡ ಎಂ.ಎ. ಮಾಡಿ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗ ಡಾ. ಡಿ. ಭರತ್, ಪಿಎಚ್‌ಡಿ ಪದವಿ ಪಡೆದಿದ್ದಾನೆ. ಹತ್ತು ಕೃತಿಗಳನ್ನು ರಚಿಸಿದ್ದಾನೆ. ಮಗಳು ಡಿ. ಸ್ಮಿತಾ ಒಳ್ಳೆಯ ವಿಮರ್ಶಕಿ, ಕನ್ನಡ ಅಧ್ಯಾಪಕಿ. ನನ್ನಾಕೆ ನನ್ನಗಲಿ ಮೂರು ವರ್ಷವಾಯಿತು.

ನೆಮ್ಮದಿಯ ಬದುಕು

32 ವರ್ಷಗಳ ಕಾಲ ಕನ್ನಡ ಅಧ್ಯಾಪಕನಾಗಿ ಕೆಲಸ ಮಾಡಿದೆ. ಹಂತ ಹಂತವಾಗಿ ಮೇಲೇರಿ ಪ್ರಾಧ್ಯಾಪಕನಾಗಿ ಪ್ರಾಂಶುಪಾಲನಾಗಿ ಕೆಲಸ ಮಾಡಿ (1972–2004) ನಿವೃತ್ತನಾದೆ. ನಿವೃತ್ತಿಯ ಮಾರನೇ ದಿನ ಶೇಷಾದ್ರಿಪುರಂ ಸ್ನಾತಕೋತ್ತರ ಕನ್ನಡ ಅಧ್ಯಯನ ಕೇಂದ್ರದಲ್ಲಿ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿ ಎಂ.ಫಿಲ್. ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿ ಯಶಸ್ವೀ ಪ್ರಾಧ್ಯಾಪಕ ಅನ್ನಿಸಿಕೊಂಡೆ.

ಶನಿವಾರ, ಭಾನುವಾರ ಕನ್ನಡ ಚಲನಚಿತ್ರಗಳಿಗೆ ಗೀತೆಗಳನ್ನು ಬರೆದೆ. (ಈಗ 560 ಗೀತೆಗಳಾಗಿವೆ). ಹನ್ನೊಂದು ಚಿತ್ರಗಳಿಗೆ ಸಂಭಾಷಣೆ ಬರೆದೆ. 70 ಧಾರಾವಾಹಿಗಳಿಗೆ ನಾನು ಶೀರ್ಷಿಕೆ ಗೀತೆ ಬರೆದಿದ್ದೇನೆ.

ಇಸ್ರೇಲ್‌ನಲ್ಲಿ ಪ್ರವಾಸ ಮಾಡಿ ಅಲ್ಲಿನ ಕೃಷಿ ಕುರಿತು ಬೇಸಾಯಗಾರರನ್ನು ಕುರಿತು ‘ಇಸ್ರೇಲಿನಲ್ಲಿ ಕೃಷಿ’ ಸಾಕ್ಷ್ಯ ಚಿತ್ರ ಮಾಡಿದ್ದೇನೆ. (ಸಹಕರಿಸಿದವರು ಆತ್ಮೀಯ ಅತ್ತಿಕಟ್ಟೆ ಜಗದೀಶ್). ಈಗ ‘ಸೆಂಚುರಿ ಫಿಲಂ ಇನ್‌ಸ್ಟಿಟ್ಯೂಟ್’ ನಲ್ಲಿ ಪ್ರಾಂಶುಪಾಲನಾಗಿ ಕೆಲಸ ಮಾಡುತ್ತಿದ್ದೇನೆ.

ಈಗ ನನ್ನ ಆತ್ಮಕಥನ ‘ಬೆಳಕು ಕಂಡ ಬದುಕು’ ಪುಸ್ತಕ ರೂಪದಲ್ಲಿ ಬರುತ್ತಿದೆ. ಹೊಸ ದಿಗಂತದಲ್ಲಿ 101 ಕಂತು ಅಂಕಣ ಬರಹವಾಗಿ, ಧಾರಾವಾಹಿಯಾಗಿ ಜನಮನ ರಂಜಿಸಿದೆ.

ಮಕ್ಕಳ ಜೊತೆ, ಮೊಮ್ಮಕ್ಕಳ ಜೊತೆ (ಭೂಮಿ, ಸೂರ್ಯ, ಪಾವೈ (ಖುಷಿ), ಪವನ್) ಆಟವಾಡಿಕೊಂಡು, ಓದಿಕೊಂಡು, ಬರೆದುಕೊಂಡು ವಿಶ್ರಾಂತ ಜೀವನವನ್ನು ಬಹಳ ನೆಮ್ಮದಿಯಿಂದ ಕಳೆಯುತ್ತಿದ್ದೇನೆ.

Comments
ಈ ವಿಭಾಗದಿಂದ ಇನ್ನಷ್ಟು
ಕರಣ್‌ಗೆ ಟೀಶರ್ಟ್‌ ಲವ್‌!

ಬಾಲಿವುಡ್‌
ಕರಣ್‌ಗೆ ಟೀಶರ್ಟ್‌ ಲವ್‌!

24 Mar, 2018
ಕಂಗನಾ 31ನೇ ಹುಟ್ಟುಹಬ್ಬಕ್ಕೆ 31 ಸಸಿಗಳು

ಬಾಲಿವುಡ್‌
ಕಂಗನಾ 31ನೇ ಹುಟ್ಟುಹಬ್ಬಕ್ಕೆ 31 ಸಸಿಗಳು

24 Mar, 2018
‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ನಾಳೆ

ರಾಮಾಯಣ
‘ಶ್ರೀರಾಮ ಪಾದುಕಾ ಪಟ್ಟಾಭಿಷೇಕ’ ನಾಳೆ

24 Mar, 2018
ವೈಯಾಲಿಕಾವಲ್‌ನಲ್ಲಿ ರಾಮನವಮಿ ಸಂಭ್ರಮ

ಸೀತಾ ಕಲ್ಯಾಣ
ವೈಯಾಲಿಕಾವಲ್‌ನಲ್ಲಿ ರಾಮನವಮಿ ಸಂಭ್ರಮ

24 Mar, 2018
ನಮ್ಮ ಬದುಕು ಅವರ ಸರಕು

ಸಾಮಾಜಿಕ ಮಾಧ್ಯಮ
ನಮ್ಮ ಬದುಕು ಅವರ ಸರಕು

24 Mar, 2018