ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟಡ ಕಾರ್ಮಿಕರಿಗೆ ಬಲು ಬೇಡಿಕೆ

Last Updated 6 ನವೆಂಬರ್ 2017, 5:38 IST
ಅಕ್ಷರ ಗಾತ್ರ

ಚಾಮರಾಜನಗರ: ನಗರದಲ್ಲಿ ಆರಂಭ ವಾಗಿರುವ ಅಭಿವೃದ್ಧಿ ಕಾರ್ಯಗಳು ಒಂದೆಡೆ ಜನರಲ್ಲಿ ಸಂಕಟ, ಕಳವಳ ಉಂಟುಮಾಡಿದ್ದರೆ, ಕೊನೆಗೂ ಸುಸಜ್ಜಿತ ರಸ್ತೆ ಚರಂಡಿಗಳು ನಿರ್ಮಾಣವಾಗಿ ದೂಳಿನಿಂದ ಮುಕ್ತಿ ಸಿಗಲಿದೆ ಎಂಬ ವಿಶ್ವಾಸವನ್ನೂ ಮೂಡಿಸಿದೆ. ಆದರೆ, ಸಮರೋಪಾದಿಯಲ್ಲಿ ನಡೆಯುತ್ತಿರುವ ಕಾರ್ಯಗಳು ಕಾರ್ಮಿಕರಿಗೆ ಕೈತುಂಬಾ ಕೆಲಸ ನೀಡಿವೆ.

ಕಳೆದ ಒಂದು ತಿಂಗಳಿನಿಂದ ನಗರದಲ್ಲಿ ರಸ್ತೆ ವಿಸ್ತರಣೆಗಾಗಿ ವಿವಿಧೆಡೆ ಕಟ್ಟಡಗಳನ್ನು ಒಡೆಯುವ ಮತ್ತು ಪುನರ್ ನಿರ್ಮಾಣ ಮಾಡುವ ಕಾರ್ಯಗಳು ಸಾಗುತ್ತಿವೆ. ಇದು ಕಾರ್ಮಿಕರಿಗೆ ಏಕಾಏಕಿ ಬೇಡಿಕೆ ಸೃಷ್ಟಿಸಿದೆ. ಇದರ ಪರಿಣಾಮ ಅವರ ವೇತನವೂ ಏರಿಕೆಯಾಗಿದೆ.

ಡಿವಿಯೇಷನ್‌ ರಸ್ತೆಯ ವಿಸ್ತರಣೆಗಾಗಿ ಕಾರ್ಯಾಚರಣೆ ಆರಂಭವಾಗಿತ್ತು. ಆಗ ಜಿಲ್ಲಾಡಳಿತವೇ ಜೆಸಿಬಿ ಯಂತ್ರಗಳ ಮೂಲಕ ಕಟ್ಟಡಗಳನ್ನು ತೆರವುಗೊಳಿಸಿತ್ತು. ಜೆಸಿಬಿ ಯಂತ್ರಗಳಿಂದ ಕಟ್ಟಡದ ಇತರೆ ಭಾಗಗಳಿಗೂ ಹಾನಿಯಾಗುವ ಸಂಭವವಿರುವುದರಿಂದ ಈಗ ಅಂಗಡಿ ಬೀದಿಯ ಕಟ್ಟಡ ಮಾಲೀಕರು ತಾವೇ ಹಣ ತೆತ್ತು ನಿಗದಿತ ಗುರುತಿನವರೆಗೆ ಒಡೆಸಿಕೊಳ್ಳುತ್ತಿದ್ದಾರೆ. ಕೆಲವರು ಕಾರ್ಮಿಕರನ್ನು ಕರೆಸಿದ್ದರೆ, ಹೆಚ್ಚಿನವರು ಸಿವಿಲ್‌ ಗುತ್ತಿಗೆದಾರರ ಮೊರೆ ಹೋಗಿದ್ದಾರೆ. ಹೆಚ್ಚು ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಹತ್ತಾರು ಅಂಗಡಿಗಳನ್ನು ಒಡೆಸಲು ಒಟ್ಟಿಗೆ ಗುತ್ತಿಗೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ.

ಕಾರ್ಮಿಕರಿಗೆ ಉದ್ಯೋಗ: ಕಟ್ಟಡ ಕಾರ್ಮಿಕರಿಗೆ ನಿಯಮಿತವಾಗಿ ಕೆಲಸ ಸಿಗುತ್ತಿರಲಿಲ್ಲ. ಆದರೆ, ಕೆಲವು ದಿನಗಳಿಂದ ಅವರಿಗೆ ಬೇಡಿಕೆ ಉಂಟಾಗಿದೆ. ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಿಂದ ನೂರಾರು ಕಾರ್ಮಿಕರು ನಗರಕ್ಕೆ ಬರುತ್ತಿದ್ದಾರೆ.

ಕಾಂಕ್ರೀಟ್‌ ಒಡೆಯುವುದು, ಕಬ್ಬಿಣ ಬೇರ್ಪಡಿಸುವುದು, ಗಾರೆ ಕೆಲಸ, ಮರಗೆಲಸದವರಿಗೆ ಮತ್ತು ಎಲೆಕ್ಟ್ರಿಷಿಯನ್‌ಗಳಿಗೆ ಬಿಡುವಿಲ್ಲದ ಕೆಲಸ ದಕ್ಕಿದೆ. ಅವರು ಕೇಳಿದಷ್ಟು ಹಣ ನೀಡಲು ಕಟ್ಟಡ ಮಾಲೀಕರು ಹಿಂದೇಟು ಹಾಕುತ್ತಿಲ್ಲ. ಹೀಗಾಗಿ ₹300– ₹400 ತೆಗೆದುಕೊಳ್ಳುತ್ತಿದ್ದ ಕಾರ್ಮಿಕರು ₹500ರವರೆಗೂ ಬೇಡಿಕೆ ಇರಿಸುತ್ತಿದ್ದಾರೆ. ಬೆಳಿಗ್ಗೆಯಿಂದ ರಾತ್ರಿವರೆಗೂ ದುಡಿಯುವ ಕೆಲಸಗಾರರಿಗೆ ಹೆಚ್ಚುವರಿ ಅವಧಿಯ ಭತ್ಯೆಯನ್ನೂ ನೀಡಲಾಗುತ್ತಿದೆ.

ಕಟ್ಟಡಕ್ಕೆ ಹಾನಿಯಾಗದಂತೆ ತುಂಡರಿಸಲು ಮೈಸೂರಿನಿಂದ ಪರಿಣತ ಕಾರ್ಮಿಕರನ್ನು ಹೆಚ್ಚು ವೇತನ ನೀಡಿ ಕರೆಯಿಸಲಾಗುತ್ತಿದೆ. ಆದರೆ, ಸದ್ಯ ಅಗತ್ಯಕ್ಕೆ ತಕ್ಕಷ್ಟು ಕಾರ್ಮಿಕರು ಸಿಗುತ್ತಿಲ್ಲ. ‘ಕಟ್ಟಡಗಳನ್ನು ಒಡೆಸಲು ಹೆಚ್ಚು ಕಾಲಾವಕಾಶವಿಲ್ಲ. ಒಂದು ವಾರದಲ್ಲಿ ಎಲ್ಲ ಕೆಲಸ ಮುಗಿಸಬೇಕು. ನೂರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಲ್ಲಿ ಪರಿಣತರ ಸಂಖ್ಯೆ ತೀರಾ ಕಡಿಮೆ. ಒಮ್ಮೆಲೆ ಎಲ್ಲ ಕಡೆ ಕೆಲಸ ಶುರುವಾಗಿರುವುದರಿಂದ ಕಾರ್ಮಿಕರು ಸಾಲುತ್ತಿಲ್ಲ’ ಎನ್ನುತ್ತಾರೆ ಗುತ್ತಿಗೆದಾರರು.

‘ಮಾಮೂಲಿ ಕಾಂಕ್ರೀಟ್‌ ಕಟ್ಟಡಗಳನ್ನು ಕಟರ್‌ ಮತ್ತು ಸುತ್ತಿಗೆ ಮೂಲಕ ಒಡೆಯಬಹುದು. ಅಂಗಡಿ ಬೀದಿಯಲ್ಲಿ ದಶಕಗಳಷ್ಟು ಹಳೆಯ ಕಟ್ಟಡಗಳು ಹೆಚ್ಚಿವೆ. ಇವುಗಳನ್ನು ಒಡೆಯುವಾಗ ಹೆಚ್ಚು ಜಾಗ್ರತೆ ವಹಿಸಬೇಕು. ತುಸು ಎಡವಿದರೂ ಒಂದು ಭಾಗವೇ ಕುಸಿದು ಬೀಳುವ ಅಪಾಯವಿರುತ್ತದೆ.

ಅಲ್ಲದೆ, ಇತ್ತೀಚೆಗೆ ಬದಲಿಸಲಾದ ಕಟ್ಟಡಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಸಲಾಗಿದೆ. ಅವುಗಳಿಗೆ ಲೇಸರ್‌ ಕಟರ್‌ ಬಳಕೆ ಅತ್ಯವಶ್ಯಕ. ಮೈಸೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಇದರೆ ಪರಿಣತರಿದ್ದಾರೆ. ಅವರೂ ಲಭ್ಯವಾಗುತ್ತಿಲ್ಲ. ಎರಡು ಮೂರು ದಿನಗಳಲ್ಲಿ ಅವರನ್ನು ಕರೆಸುತ್ತೇವೆ’ ಎಂದು ಸಿವಿಲ್‌ ಗುತ್ತಿಗೆದಾರ ಸುಭಾಷ್‌ ತಿಳಿಸಿದರು.
ಕಟ್ಟಡ ಒಡೆಯಲು ಮಾಮೂಲಿ ಕೆಲಸಕ್ಕೆ ಚದರ ಅಡಿಗೆ ₹40–50, ಕಟರ್‌ ಯಂತ್ರಗಳಾದರೆ ₹100 ದರವಿದೆ. ಲೇಸರ್‌ ಕಟರ್‌ಗೆ ₹1,00–1,250ರವರೆಗೂ ದರ ವಿಧಿಸಲಾಗುತ್ತದೆ.

ಕೂಲಿ ಕಾರ್ಮಿಕರು ಕಟ್ಟಡ ಒಡೆದ ಬಳಿಕ ಕಬ್ಬಿಣವನ್ನು ಆಯ್ದುಕೊಂಡು ಗುಜರಿ ಅಂಗಡಿಗಳಿಗೆ ಮಾರುತ್ತಿದ್ದಾರೆ. ಹೀಗಾಗಿ, ಕೆಲ ದಿನಗಳ ಹಿಂದೆ ಕೆ.ಜಿಗೆ ₹60ರಷ್ಟಿದ್ದ ಹಳೆ ಕಬ್ಬಿಣದ ಬೆಲೆ ಈಗ ₹20ಕ್ಕೆ ಇಳಿದಿದೆ. ಕಟ್ಟಡ ಒಡೆಯುವ ಕೆಲಸ ಪೂರ್ಣಗೊಳ್ಳುತ್ತಿದ್ದಂತೆ, ಗಾರೆ ಮತ್ತು ಮರಗೆಲಸದವರಿಗೆ ಬೇಡಿಕೆ ಇನ್ನಷ್ಟು ಹೆಚ್ಚಲಿದೆ. ನಗರದಲ್ಲಿ ‘ಕೆಡಹುವ ಮತ್ತು ಕಟ್ಟುವ’ ಕಾರ್ಯ ಪೂರ್ಣಗೊಳ್ಳುವವರೆಗೂ ಕಟ್ಟಡ ಕಾರ್ಮಿಕರಿಗೆ ದುಡಿಮೆಗೆ ತೊಂದರೆ ಇಲ್ಲ ಎನ್ನುತ್ತಾರೆ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT