ಗ್ರಾಮದ ಪಾಲಿನ ದೈವ

ದೇವರಾದರು ಈ ಸಾಹೇಬರು...

ಈ ಅಧಿಕಾರಿ ವೀರಪ್ಪನ್‌ ಸಂಚಿಗೆ ಬಲಿಯಾಗಿ ಈಗ 26 ವರ್ಷಗಳೇ ಗತಿಸಿವೆ. ಆಗಿನಿಂದಲೂ ಗೋಪಿನಾಥಂ ಗ್ರಾಮಸ್ಥರ ಪಾಲಿಗೆ ಅವರು ದೇವರಾಗಿದ್ದು, ಅವರ ಭಾವಚಿತ್ರ ಮಾರಮ್ಮನ ದೇವಸ್ಥಾನದಲ್ಲಿ ರಾರಾಜಿಸುತ್ತಿದೆ.

ದೇವರಾದರು ಈ ಸಾಹೇಬರು...

ಸಾಹೇಬರೇ, ಶರಣಾಗೋದಾದರೆ ಅವನೇ ಬರಲಿ, ನಾವೇಕೆ ಅವನಲ್ಲಿಗೆ ಹೋಗಬೇಕು? ನಿಮಗೆ ಗೊತ್ತಿಲ್ಲ, ಅವ ನಂಬಿಸಿ ಕತ್ತು ಕುಯ್ಯುವವನು ಎಂದು ಎಷ್ಟೋ ಹೇಳಿದೆ. ಅವರು ಕೇಳದೆ ಅವನ ಬಳಿ ಹೋಗಿ ಪ್ರಾಣ ತೆತ್ತರು...’

ನೆಲ್ಲೂರು ಮಾದಯ್ಯನವರ ಮಾತುಗಳಲ್ಲಿ 26 ವರ್ಷದ ಹಿಂದಿನ ಘಟನೆಯ ಕಂಪನ ಇನ್ನೂ ಇದ್ದಂತಿತ್ತು. ಅವರು ಹೇಳುತ್ತಿದ್ದುದು ಕಾವೇರಿ ವನ್ಯಜೀವಿಧಾಮ ಎರಕೆಯಂ ಅರಣ್ಯ ಪ್ರದೇಶದಲ್ಲಿ 1991ರ ನವೆಂಬರ್‌ 10ರಂದು ವೀರಪ್ಪನ್‌ನಿಂದ ಹತರಾದ ಡಿಸಿಎಫ್ ಪಿ.ಶ್ರೀನಿವಾಸ್ ಅವರ ಬಗೆಗೆ. ಕಾಡುಗಳ್ಳ ವೀರಪ್ಪನ್‌ ಕೃತ್ಯಕ್ಕೆ ಶ್ರೀನಿವಾಸ್‌ ಬಲಿಯಾಗಿ ಈಗ ಭರ್ತಿ ಇಪ್ಪತ್ತಾರು ವರ್ಷ. ‘ನಾನು ಶರಣಾಗುತ್ತೇನೆ’ ಎಂದು ಹೇಳಿ ಸಾಹೇಬರನ್ನು ತನ್ನ ಬಳಿ ಕರೆಸಿಕೊಂಡು ಅಮಾನುಷವಾಗಿ ಕೊಂದುಹಾಕಿದ. ಅವರ ಜತೆಗೆ ನನ್ನನ್ನೂ ಬರಲು ಹೇಳಿದ್ದ. ಆದರೆ, ಅಂದು ನಾನು ಹೋಗದಿದ್ದರಿಂದ ಇಂದು ಬದುಕಿ ಉಳಿದಿದ್ದೇನೆ’ ಎಂದು ಹೇಳುವಾಗ ಅವರ ಮಾತಿನಲ್ಲಿ ನೋವು ತುಂಬಿ ತುಳುಕುತ್ತಿತ್ತು.

‘ನವೆಂಬರ್‌ 9ರ ರಾತ್ರಿ 11ಗಂಟೆಗೆ ನಮ್ಮ ಮನೆಗೆ ಬಂದ ಸಾಹೇಬರು, ವೀರಪ್ಪನ್ ನನ್ನ ಬಳಿ ಶರಣಾಗಲಿದ್ದಾನೆ. ಅದಕ್ಕಾಗಿ ನನ್ನನ್ನು ಬರಹೇಳಿದ್ದಾನೆ, ನಾನು ಹೋಗಿ ಬರುತ್ತೇನೆ’ ಎಂದರು. ಅದಕ್ಕೆ ‘ಸರ್, ಅವ ಸರಿಯಿಲ್ಲ. ನಂಬಿಸಿ ಕರೆಸಿಕೊಂಡು ಕೊಲ್ಲುತ್ತಾನೆ. ನನ್ನ ಹೆಂಡತಿಯ ಸಂಬಂಧಿಕರ ಐದು ಜನರನ್ನು ಇದೇ ರೀತಿ ಕರೆಸಿಕೊಂಡು ಕೊಲೆಗೈದ. ನೀವು ಹೋಗುವುದು ನನಗೇಕೋ ಸರಿಕಾಣದು. ನಿಮಗೂ ಅದೇ ಗತಿ ಬರಬಹುದು ಎಂದು ಪರಿಪರಿಯಾಗಿ ಹೇಳಿದೆ. ಆದರೆ ಅವರು ನನ್ನ ಮಾತು ಕೇಳಲಿಲ್ಲ. ಪುಣ್ಯಕೋಟಿಯ ಹಾಗೇ ಹೋಗಿ ಪ್ರಾಣ ಕಳೆದುಕೊಂಡರು’ ಎಂದು ಎರಡೂವರೆ ದಶಕದ ಹಿಂದಿನ ಘಟನೆಯನ್ನು ಬಿಚ್ಚಿಟ್ಟರು.

ಗೋಪಿನಾಥಂ ಗ್ರಾಮದಲ್ಲಿ ಇಂದಿಗೂ ದಿವಂಗತ ಪಿ. ಶ್ರೀನಿವಾಸ್ ಅವರಿಗೆ ಪೂಜನೀಯ ಸ್ಥಾನವಿದೆ. ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯ ನೇತೃತ್ವವಹಿಸಿದ್ದ ಅವರು ಇಲ್ಲಿ ಇರುವಷ್ಟು ದಿನ ಈ ಗ್ರಾಮದ ಜನತೆಯ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇಂದಿಗೂ ಗ್ರಾಮದ ಹಲವು ಮನೆಗಳಲ್ಲಿ ಶ್ರೀನಿವಾಸ್ ಫೋಟೊ ಇರುವುದು ಇದಕ್ಕೆ ಸಾಕ್ಷಿ.

ಶ್ರೀನಿವಾಸ್ ಅವರು ವೀರಪ್ಪನ್ ಸಂಚಿಗೆ ಬಲಿಯಾಗಿ ಹಲವು ವರ್ಷಗಳು ಗತಿಸಿವೆ. ಇಂದಿಗೂ ಗೋಪಿನಾಥಂ ಗ್ರಾಮದಲ್ಲಿ ಅಡ್ಡಾಡಿದರೆ ಅಲ್ಲಿನ ಮಾರಮ್ಮನ ದೇವಸ್ಥಾನ, ನಲವತ್ತಕ್ಕೂ ಹೆಚ್ಚು ಮನೆಗಳು, ರಸ್ತೆ ಸೇರಿದಂತೆ ಅವರು ಕೈಗೊಂಡಿರುವ ಹಲವು ಸಮಾಜಮುಖಿ ಕಾರ್ಯ ಗಳು ಅವರನ್ನು ಇಂದಿಗೂ ಜೀವಂತವಾಗಿರಿಸಿವೆ.

‘ಗುಡಿಸಲಿನಲ್ಲಿ ವಾಸವಾಗಿದ್ದ ನಮ್ಮಂಥವರನ್ನು ಗುರುತಿಸಿ 40 ಮನೆಗಳ ಬಡಾವಣೆಯನ್ನು ನಿರ್ಮಿಸಿಕೊಟ್ಟರು. ನಮ್ಮ ಅಕ್ಕನ ಮನೆಯ ಒಂದು ಕೋಣೆಯಲ್ಲಿ ರೋಗಿಗಳಿಗೆ ಚಿಕಿತ್ಸೆಯನ್ನು ಸಹ ನೀಡುತ್ತಿದ್ದರು. ಹಗಲು ರಾತ್ರಿಯೆನ್ನದೇ ಜನ ಇಲ್ಲಿಗೆ ಬಂದು ಔಷಧಿಗಳನ್ನು ಪಡೆದು ಹೋಗುತ್ತಿದ್ದರು. ಒಂದು ರೂಪಾಯಿ ಯನ್ನೂ ಪಡೆಯದೆ ನಿರ್ಗತಿಕರಿಗೆ ಶಾಶ್ವತ ಸೂರು ಕಟ್ಟಿಸಿಕೊಟ್ಟರು’ ಎಂದು ಸ್ಮರಿಸಿಕೊಳ್ಳುತ್ತಾರೆ ಗ್ರಾಮದ ರಾಜಾಮಣಿ.

‘ಪಾಳು ಬಿದ್ದಿದ್ದ ದೇವಸ್ಥಾನವನ್ನು ಸಾಹೇಬರು ಮುಂದೆ ನಿಂತು ಪುನರ್‌ನಿರ್ಮಿಸಿದರು. ಈ ದೇವಸ್ಥಾನದಲ್ಲಿ ಇಂದಿಗೂ ಅವರ ಭಾವಚಿತ್ರವನ್ನಿಟ್ಟು ಪೂಜಿಸಲಾಗುತ್ತಿದೆ. ಪ್ರತಿ ವರ್ಷ ಮಾರಮ್ಮನ ಹಬ್ಬದಲ್ಲಿ ಅವರ ಹೆಸರಿನಲ್ಲಿ ಅನ್ನದಾನ ಮಾಡುತ್ತೇವೆ. ಹಬ್ಬದ ಆಮಂತ್ರಣ ಪತ್ರದಲ್ಲಿಯೂ ಅವರ ಭಾವಚಿತ್ರ ಹಾಕಿಸುತ್ತೇವೆ’ ಎನ್ನುತ್ತಾರೆ ಗೋಪಿನಾಥಂ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋವಿಂದರಾಜು.

ಗೋಪಿನಾಥಂನಿಂದ ಹೊಗೇನಕಲ್ ಫಾಲ್ಸ್‌ಗೆ ತೆರಳುವ ಮಾರ್ಗಮಧ್ಯದಲ್ಲಿ ಪೊದೆಯನ್ನು ಕತ್ತರಿಸುವಲ್ಲಿ ನಿರತರಾಗಿದ್ದ ವಾಚರ್ ವೀರಪ್ಪ ಹಾಗೂ ಪಳನಿಯಪ್ಪ ಮಾತಿಗೆ ಸಿಕ್ಕರು. ಶ್ರೀನಿವಾಸ್ ಅವರ ಅವಧಿಯಲ್ಲಿ ಕೆಲಸ ಮಾಡುತ್ತಿದ್ದ ಇವರು ಈಗ ನಿವೃತ್ತಿ ಹಂತದಲ್ಲಿದ್ದಾರೆ. ಯಾವಾಗಲೂ ಜೊತೆಯಲ್ಲಿ ನಮ್ಮನ್ನು ಕರೆದುಕೊಂಡು ಹೋಗುತ್ತಿದ್ದ ಸಾಹೇಬರು ಅಂದುಮಾತ್ರ ‘ನೀವು ಬರುವುದು ಬೇಡ, ನಾನೇ ಹೋಗುತ್ತೇನೆ’ ಎಂದು ಹೇಳಿ ಹೋದರು. ಅವರ ಜತೆಯಲ್ಲಿ ಗ್ರಾಮದ ಟಿ.ಪಿ. ಪೆರುಮಾಳ್, ಕೃಷ್ಣ, ಊರುಗೌಡ ಮುನಿಸ್ವಾಮಿ, ವೀರಪ್ಪನ್ ಚಿಕ್ಕಪ್ಪ ಪೊನ್ನುಸ್ವಾಮಿ ತೆರಳಿದ್ದರು. ಮುಂಜಾನೆ 8 ಗಂಟೆಗೆ ಪೆರುಮಾಳ್ ಹಿಂದಿರುಗಿ ಬಂದು ಸಾಹೇಬರ ಸಾವಿನ ಸುದ್ದಿ ಹೇಳಿದ. ‘ವೀರಪ್ಪನ್‌ನಿಂದ ಹಣ ಪಡೆದು ಬಿಡುಗಡೆ ಮಾಡಿದ್ದಾರೆಂಬ ತಮ್ಮ ಮೇಲಿನ ಆರೋಪವನ್ನು ಸುಳ್ಳು ಮಾಡಲು ಆತನನ್ನು ಜೀವಂತವಾಗಿ ಹಿಡಿದು ಆತನಿಂದಲೇ ಇದು ಸುಳ್ಳು ಎಂಬುದನ್ನು ಹೇಳಿಸುವ ಉದ್ದೇಶದಿಂದ ಹೋದವರು ಆತನಿಂದ ಬರ್ಬರವಾಗಿ ಹತ್ಯೆಯಾದರು’ ಎಂದು ಹೇಳುವಾಗ ಅವರ ಕಣ್ಣಾಲಿಗಳು ತುಂಬಿದ್ದವು.

ಮರಳಿ ಕರೆತಂದರು.. ಗೋಪಿನಾಥಂ-ಹೊಗೇನಕಲ್ ಮಾರ್ಗ ಮಧ್ಯೆ 1990ರಲ್ಲಿ ವೀರಪ್ಪನ್ ನಡೆಸಿದ ಗುಂಡಿನ ದಾಳಿಗೆ ಇನ್‌ಸ್ಪೆಕ್ಟರ್‌ ದಿನೇಶ್ ಬಲಿಯಾಗಿದ್ದರು. ಇದನ್ನು ಹತ್ತಿರದಿಂದ ಕಂಡಿದ್ದ ಗ್ರಾಮದ ಜನ ಭಯಭೀತರಾಗಿ ಊರನ್ನೇ ತೊರೆದು ತಮಿಳುನಾಡಿಗೆ ಗುಳೆ ಹೋಗಿದ್ದರು. ಅವರಿಗೆಲ್ಲಾ ಮನಸ್ಥೈರ್ಯ ತುಂಬಿ ಗ್ರಾಮಕ್ಕೆ ಮರಳಿ ಕರೆತಂದಿದ್ದನ್ನು ಜನ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಅದಕ್ಕಾಗಿ ಜನ ಹಬ್ಬದ ದಿನ ಊರಿನ ಹೆಬ್ಬಾಗಿಲಿನಲ್ಲಿ ಇಂದಿಗೂ ಅವರ ದೊಡ್ಡ ಕಟೌಟ್ ಮಾಡಿ ನಿಲ್ಲಿಸುತ್ತಾರೆ.

ಅವರ ಪ್ರಭಾವವೇ ಅಧಿಕಾರಿಗಳಿಗೆ ರಕ್ಷಣೆ... ಇಲ್ಲಿನ ಜನರು ಅರಣ್ಯ ಇಲಾಖೆ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಪಿ. ಶ್ರೀನಿವಾಸ್ ಅವರ ಸೇವೆಯೇ ಕಾರಣ. ಅವರ ಸಮಾಜಮುಖಿ ಕೆಲಸಗಳೇ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಇಂದಿಗೂ ಗೌರವಿಸುವಂತೆ ಮಾಡಿವೆ. ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯ ಜತೆಗೆ ಇಲ್ಲಿನ ಮಕ್ಕಳು ಹಾಗೂ ಯುವಕರಿಗೆ ಅವರು ಮೂಡಿಸುತ್ತಿದ್ದ ಪರಿಸರ ಕಾಳಜಿ ಬಗ್ಗೆ ಜನರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಕಾಳ್ಗಿಚ್ಚಿನ ಸಂದರ್ಭದಲ್ಲಿ ಸ್ವಯಂ ಪ್ರೇರಿತರಾಗಿ ಬಂದು ಬೆಂಕಿ ನಂದಿಸಲು ಇಲಾಖೆಯೊಂದಿಗೆ ಸಹಕರಿಸುತ್ತಾರೆ. ಇಂತಹ ನಿಷ್ಠಾವಂತ ಅಧಿಕಾರಿ ಸೇವೆ ಮಾಡಿದ ಈ ಭಾಗದಲ್ಲಿ ವೃತ್ತಿ ಜೀವನ ಆರಂಭವಾಗಿರುವುದು ನನ್ನ ಭಾಗ್ಯ ಎನ್ನುತ್ತಾರೆ ಈ ಭಾಗದ ಆರ್ಎಫ್ಓ ಶಂಕರ ಡಿ. ಅಂತರಗಟ್ಟಿ.

ಹುತಾತ್ಮರ ದಿನಾಚರಣೆ: ಪ್ರತಿವರ್ಷ ಸೆ.11ರಂದು ಎರಕೆಯಂ ಅರಣ್ಯ ಪ್ರದೇಶದಲ್ಲಿ ಹುತಾತ್ಮರ ದಿನಾಚರಣೆಯನ್ನು ಆಚರಿಸಿ ಕೊಂಡು ಬರಲಾಗುತ್ತಿದೆ. ಅರಣ್ಯಾಧಿಕಾರಿಯಾಗಿ ಇಲ್ಲಿಗೆ ಬಂದು ಗ್ರಾಮದ ವಿಶ್ವಾಸ ಗಳಿಸಿ, ಅಧಿಕಾರಿಯಾಗಿ, ವೈದ್ಯನಾಗಿ ಶ್ರೀನಿವಾಸ್ ಅವರು ಸಲ್ಲಿಸಿದ ಸೇವೆ ಅವರನ್ನು ಜನ ಇಂದಿಗೂ ಸ್ಮರಿಸಿಕೊಳ್ಳುವಂತೆ ಮಾಡಿದೆ. ಅವರ ನೆನಪು ಕೇವಲ ಒಂದು ತಲೆಮಾರಿಗೆ ಮರೆಯಾಗದಂತೆ ಅವರಿಂದ ಸಹಾಯ ಪಡೆದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಅವರ ಬಗ್ಗೆ ಹೇಳಿಕೊಡುತ್ತ ಅವರನ್ನು ಅಮರರನ್ನಾಗಿಸಿದ್ದಾರೆ. ಇಲಾಖೆಯು ಸಹ ಅವರ ಸ್ಮರಣಾರ್ಥ ಪೊನ್ನಾಚಿ ಕ್ರಾಸ್‌ನಿಂದ ಎರಕೆಯಂ ಸಂಪರ್ಕ ಕಲ್ಪಿಸುವ 14 ಕಿ.ಮೀ ಕಾಡುದಾರಿಗೆ ಇವರ ಹೆಸರನ್ನಿಟ್ಟಿದೆ ಎನ್ನುತ್ತಾರೆ ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಡಾ. ಪಿ. ರಮೇಶ್‌ಕುಮಾರ್‌.

Comments
ಈ ವಿಭಾಗದಿಂದ ಇನ್ನಷ್ಟು
ಸ್ವರ್ಗದ ತುಣುಕುಗಳು

ಕರ್ನಾಟಕ ದರ್ಶನ
ಸ್ವರ್ಗದ ತುಣುಕುಗಳು

20 Mar, 2018
ಖುಷಿಯ ದಾರಿಗೆ   ವಿವೇಕದ ದೀಪ

ಕರ್ನಾಟಕ ದರ್ಶನ
ಖುಷಿಯ ದಾರಿಗೆ ವಿವೇಕದ ದೀಪ

20 Mar, 2018
ಬಂತು ಯುದ್ಧ ಟ್ಯಾಂಕ್‌!

ರೋಚಕ ಸಂಗತಿ
ಬಂತು ಯುದ್ಧ ಟ್ಯಾಂಕ್‌!

13 Mar, 2018
ಬಾಯ್ಕಳಕ ಬಯಲಾಟ

ಕರ್ನಾಟಕ ದರ್ಶನ
ಬಾಯ್ಕಳಕ ಬಯಲಾಟ

13 Mar, 2018
ಕೊಳಲಿನ ಹಬ್ಬ

ಕರ್ನಾಟಕ ದರ್ಶನ
ಕೊಳಲಿನ ಹಬ್ಬ

6 Mar, 2018