ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರ ಮತದಾರರ ನೋಂದಣಿ ಮಂದಗತಿ

Last Updated 7 ನವೆಂಬರ್ 2017, 7:15 IST
ಅಕ್ಷರ ಗಾತ್ರ

ಕಲಬುರ್ಗಿ: ವಿಧಾನ ಪರಿಷತ್‌ನ ಈಶಾನ್ಯ ಪದವೀಧರರ ಮತಕ್ಷೇತ್ರದ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಪ್ರಕ್ರಿಯೆ ಅತ್ಯಂತ ಮಂದಗತಿಯಲ್ಲಿ ಸಾಗಿದೆ.
ಅರ್ಜಿ ಸಲ್ಲಿಸಲು ಮಂಗಳವಾರ (ನವೆಂಬರ್‌ 7) ಕೊನೆಯ ದಿನವಾಗಿದ್ದು, ಕೊನೆ ಕ್ಷಣದಲ್ಲಿ ನೋಂದಣಿಗೆ ಧಾವಂತ ಹೆಚ್ಚಿದೆ.

ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯನ್ನು ಪ್ರತಿ ಚುನಾಚಣೆಯ ಮೊದಲು ಹೊಸದಾಗಿ ತಯಾರಿಸಲಾಗುತ್ತದೆ. ಹಿಂದಿನ ಮತದಾರರ ಪಟ್ಟಿಯಲ್ಲಿರುವವರು, ಹೊಸದಾಗಿ ಹೆಸರು ನೋಂದಾಯಿಸಿಕೊಳ್ಳುವವರು ಎಲ್ಲರೂ ಹೊಸ ಅರ್ಜಿ (ನಮೂನೆ–18) ಸಲ್ಲಿಸುವುದು ಕಡ್ಡಾಯ.

ಕಲಬುರ್ಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆ ಹಾಗೂ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಒಳಗೊಂಡ ದೊಡ್ಡ ಕ್ಷೇತ್ರ ಇದಾಗಿದೆ.
ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಮತದಾರರ ನೋಂದಣಾಧಿಕಾರಿಯಾಗಿದ್ದು, ಕ್ಷೇತ್ರ ವ್ಯಾಪ್ತಿಯ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾರರು ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿದ್ದಾರೆ.

ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ಕಚೇರಿಗಳಲ್ಲಿ, ಉಳಿದೆಡೆ ತಹಶೀಲ್ದಾರರ ಕಚೇರಿಯಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ. ‘ಹೈದರಾಬಾದ್‌ ಕರ್ನಾಟಕಲ್ಲಿ ಎಷ್ಟು ಜನ ಪದವೀಧರರು ಇದ್ದಾರೆ ಎಂಬ ನಿಖರ ಮಾಹಿತಿ ಇಲ್ಲ. ನಾನೇ 1.25 ಲಕ್ಷ ಅರ್ಜಿ ನಮೂನೆಗಳನ್ನು ಮುದ್ರಿಸಿ ನಮ್ಮ ಪಕ್ಷದವರ ಮೂಲಕ ಅವುಗಳನ್ನು ಕ್ಷೇತ್ರದ ಎಲ್ಲ ತಾಲ್ಲೂಕುಗಳಿಗೆ ಕಳಿಸಿದ್ದೇನೆ. ಆದರೂ, ನೋಂದಣಿ ಪ್ರಕ್ರಿಯೆ ನಿರೀಕ್ಷಿಸಿದಷ್ಟು ಆಗಿಲ್ಲ’ ಎನ್ನುತ್ತಾರೆ ಸ್ಪರ್ಧಾ ಆಕಾಂಕ್ಷಿಯೊಬ್ಬರು.

ಅವಕಾಶ ಇದೆ: ‘ಮತದಾರರ ನೋಂದಣಿ ಅವಧಿ ವಿಸ್ತರಿಸುವ ಬೇಡಿಕೆಯ ಬಗ್ಗೆ ರಾಜ್ಯ ಚುನಾವಣಾ ಆಯೋಗ ನಿರ್ಧಾರ ಕೈಗೊಳ್ಳಬೇಕು. ಈಗ ಎಷ್ಟು ಜನ ನೋಂದಣಿ ಮಾಡುತ್ತಾರೋ ಅವರ ಕರಡು ಪಟ್ಟಿ ಪ್ರಕಟಿಸುತ್ತೇವೆ. ತಿದ್ದುಪಡಿ, ಹೊಸ ಹೆಸರು ಸೇರ್ಪಡೆಗೆ ಅವಕಾಶ ಇದ್ದೇ ಇದೆ. ಇದು ನಿರಂತರ ಪ್ರಕ್ರಿಯೆ. 2018ರ ಜೂನ್‌ನಲ್ಲಿ ಚುನಾವಣೆ ನಡೆಯಲಿದೆ’ ಎನ್ನುವುದು ಈ ಕ್ಷೇತ್ರದ ಮತದಾರರ ನೋಂದಣಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ಹರ್ಷ ಗುಪ್ತ ಅವರ ವಿವರಣೆ.

ಇವರು ಅರ್ಹರು
ಭಾರತದ ಪ್ರಜೆಯಾಗಿರಬೇಕು. ಆಯಾ ಮತಕ್ಷೇತ್ರದಲ್ಲಿ ವಾಸವಾಗಿರಬೇಕು. 1ನೇ ನವೆಂಬರ್ 2017ಕ್ಕೆ ಮುಂಚೆ (ಅರ್ಹತಾ ದಿನಾಂಕ) ಕನಿಷ್ಠ ಮೂರು ವರ್ಷಗಳಷ್ಟು ಮೊದಲು ಭಾರತದಲ್ಲಿರುವ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು. ಇಂತಹವರು ಮತದಾರರ ಪಟ್ಟಿಯಲ್ಲಿ
ಹೆಸರನ್ನು ಸೇರಿಸಲು ಅರ್ಹರು.

ಯಾವ ದಾಖಲೆ ಸಲ್ಲಿಸಬೇಕು?
ವಿಶ್ವವಿದ್ಯಾಲಯ ಅಥವಾ ಸಂಬಂಧಪಟ್ಟ ಸಂಸ್ಥೆಯಿಂದ ನೀಡಲಾದ ಪದವಿ, ಡಿಪ್ಲೊಮಾ, ಸಂಬಂಧಿಸಿದ ಕೋರ್ಸ್‌ಗಳ ದೃಢೀಕರಿಸಿದ ನಕಲು ಪ್ರತಿ ನೀಡಬೇಕು.
ಮಾಹಿತಿಗೆ www.ceokarnataka.kar.nic.in ಸಂಪರ್ಕಿಸಬಹುದು

‘ನೋಂದಣಿ ಶೇ15ರಷ್ಟೂ ಆಗಿಲ್ಲ!’
‘2012ರ ಚುನಾವಣೆಯಲ್ಲಿ 99,141 ಮತದಾರರು ನೋಂದಾಯಿಸಿಕೊಂಡಿದ್ದರು. ಈ ಬಾರಿ ಈ ವರೆಗೆ ಅಂದಾಜು 15 ಸಾವಿರದಷ್ಟು ಮತದಾರರು ಮಾತ್ರ ನೋಂದಣಿ ಮಾಡಿಕೊಂಡಿರಬಹುದು. ನೋಂದಣಿಯ ಪ್ರಮಾಣ ಶೇ 15ರಷ್ಟೂ ಆಗಿಲ್ಲ’ ಎಂದು ಈ ಕ್ಷೇತ್ರ ಪ್ರತಿನಿಧಿಸುತ್ತಿರುವ ಅಮರನಾಥ ಪಾಟೀಲ ಹೇಳಿದರು.

‘ನೋಂದಣಿ ಅವಧಿಯಲ್ಲಿ ಹಬ್ಬ, ಸರ್ಕಾರಿ ರಜೆ ಹೆಚ್ಚಿಗೆ ಬಂದಿವೆ. ಶಾಲಾ–ಕಾಲೇಜುಗಳಿಗೂ ರಜೆ ಇತ್ತು. ಪದವೀಧರರಿಗೆ ಸರಿಯಾದ ಮಾಹಿತಿ ತಲುಪಿಲ್ಲ. ನೋಂದಣಿ ದಿನಾಂಕ ವಿಸ್ತರಿಸಿದರೆ ಅನುಕೂಲ’ ಎಂದರು.

‘ಅರ್ಜಿಯೊಂದಿಗೆ ಸಲ್ಲಿಸುವ ಪ್ರಮಾಣಪತ್ರಗಳ ಪ್ರತಿಗಳಿಗೆ ನೋಟರಿ ಅಥವಾ ಪತ್ರಾಂಕಿತ ಅಧಿಕಾರಿಯ ದೃಢೀಕರಣ ಬೇಕು. ಕೆಲವೆಡೆ ನೋಟರಿ ದೃಢೀಕರಿಸಿದ ಅರ್ಜಿಗಳನ್ನು ಸ್ವೀಕರಿಸಲಿಲ್ಲ. ಆರಂಭದಲ್ಲಿ ಒಂದೇ ಭಾವಚಿತ್ರ ಕೊಡಿ ಎಂದವರು ನಂತರ ಎರಡು ಭಾವಚಿತ್ರ ಬೇಕು ಎಂದರು. ನಾನು ಎಲ್ಲ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಮಾಡಿದ ನಂತರ ಈ ಸಮಸ್ಯೆ ನಿವಾರಣೆಯಾಗಿದೆ’ ಎಂದು ಅವರು ಹೇಳಿದರು.

‘ಕಳೆದ ಬಾರಿಯ ಮತದಾರರ ಯಾದಿಯನ್ನು ತೆಗೆದುಕೊಂಡು ಮನೆ ಮನೆಗೆ ಹೋಗಿ ನೋಂದಣಿ ಮಾಡಬೇಕಿತ್ತು. ಅದೂ ಆಗಲಿಲ್ಲ. ಇದು ನೋಂದಣಿ ಪ್ರಮಾಣ ಕಡಿಮೆಯಾಗಲು ಕಾರಣ’ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT