ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16ನೇ ಶತಮಾನ ಕಂಡ ಶಕ್ತಿ ಕನಕದಾಸ

Last Updated 7 ನವೆಂಬರ್ 2017, 8:43 IST
ಅಕ್ಷರ ಗಾತ್ರ

ಕೊಪ್ಪಳ: ಕನಕದಾಸರು 16ನೇ ಶತಮಾನ ಕಂಡ ವ್ಯಕ್ತಿ ಹಾಗೂ ಶಕ್ತಿ ಆಗಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹೇಳಿದರು. ನಗರದ ಸಾಹಿತ್ಯಭವನದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾಡಳಿತದ ಆಶ್ರಯದಲ್ಲಿ ನಡೆದ ಕನಕದಾಸ ಜಯಂತಿ ಉದ್ಘಾಟಿಸಿ ಅವರು ಮಾತನಾಡಿದರು.

‘ಕನಕದಾಸರು ಸಮಾಜದಲ್ಲಿರುವ ಮೌಢ್ಯ, ಜಾತಿ–ಧರ್ಮ ಹಾಗೂ ಧಾರ್ಮಿಕ ಮೂಢನಂಬಿಕೆಗಳ ವಿರುದ್ಧ ಸಾಹಿತ್ಯದ ಮೂಲಕ ಹೋರಾಡಿದರು. ಸಮಾಜದ ಉದ್ಧಾರಕ್ಕಾಗಿ ತಮ್ಮ ವೈಯಕ್ತಿಕ ಜೀವನವನ್ನು ತ್ಯಾಗ ಮಾಡಿದರು. ಇವರು ಕವಿ, ಸಂತ ಹಾಗೂ ದಾಸ, ಸಾಹಿತಿಯಾಗಿ ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. 16ನೇ ಶತಮಾನದ ದಾಸ ಸಾಹಿತ್ಯ ಹಾಗೂ 12ನೇ ಶತಮಾನದ ಶರಣ ಸಾಹಿತ್ಯದ ಮೂಲಕ ಶರಣರು ಹಾಗೂ ದಾಸರು ಜನರಿಗೆ ಮಾರ್ಗದರ್ಶನ ನೀಡಿದ್ದಾರೆ. ಇವರು ಮಾನವ ಜೀವನಕ್ಕೆ ಸರ್ವರಿಗೂ ಸಮ ಬಾಳು ಹಾಗೂ ಸರ್ವರಿಗೂ ಸಮಪಾಲು ನೀಡಲು ಹೋರಾಡಿದವರು’ ಎಂದರು.

‘ಕಾವ್ಯ ಹಾಗೂ ಸಾಹಿತ್ಯದ ಮೂಲಕ ಕನಕದಾಸರು ಸಮಾನತೆಗಾಗಿ ಅದ್ಭುತ ವಿಚಾರಗಳನ್ನು ನೀಡಿದ್ದಾರೆ. ಇದಕ್ಕೆ ರಾಮಧಾನ್ಯ ಚರಿತೆ ಮತ್ತು ಮೋಹನ ತರಂಗಿಣಿ ಎಂಬ ಕಾವ್ಯಗಳು ಸಾಕ್ಷಿಯಾಗಿವೆ. ವರ್ಣಬೇಧ ನೀತಿ ಮೂಲಕ ಮೇಲು–ಕೀಳು ಎಂಬ ಬೇಧಭಾವವನ್ನು ತೊಲಗಿಸಲು ಸ್ವಷ್ಟ ಸಂದೇಶ ನೀಡಿದ್ದಾರೆ.

ದಾರ್ಶನಿಕರನ್ನು ಜಾತಿ, ಧರ್ಮದಿಂದ ಅಳೆಯಬಾರದು. ಇವರು ಮನುಕುಲದ ಆಸ್ತಿ ಆಗಿದ್ದಾರೆ. ಹಾಗಾಗಿ ಎಲ್ಲರೂ ಇವರ ಆಚಾರ–ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

‘ಬಸವೇಶ್ವರರು ಯಾವ ಜಾತಿಗೂ ಸೇರಿದವರಲ್ಲ. ಅದಕ್ಕಾಗಿ ಅವರ ಭಾವಚಿತ್ರವನ್ನು ಸರ್ಕಾರಿ ಕಚೇರಿಗಳಲ್ಲಿ ಹಾಕಲು ಹೇಳಲಾಗಿದೆ. ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರನ್ನು ಇಡಲು ಚಿಂತನೆ ನಡೆದಿದೆ.

ಅಲ್ಲದೆ ಬೆಳಗಾವಿಯ ಕಿತ್ತೂರ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಗೊಳ್ಳಿ ರಾಯಣ್ಣ ಅವರ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರವನ್ನು ನ.17ರಂದು ಉದ್ಘಾಟಿಸಲಾಗುವುದು. ಅಂದು ರಾಣಿ ಚನ್ನಮ್ಮ ಹಾಗೂ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ ಉದ್ಘಾಟಿಸಲಾಗುವುದು’ ಎಂದರು.‌

ಉಪನ್ಯಾಸಕ ಡಾ.ವಿಠ್ಠಲರಾವ್‌ ಗಾಯಕವಾಡ ಮಾತನಾಡಿ, ‘ಕನಕದಾಸರು ಸಮಾಜ ಪರಿವರ್ತನೆಯ ಹರಿಕಾರರು. ಇವರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಜನಿಸಿದರು. ಇವರು ಬೇಲೂರಿನ ವೈಕುಂಠರಾಯರು ಹಾಗೂ ಹಂಪಿಯ ವ್ಯಾಸರಾಯರ ಶಿಷ್ಯರಾಗಿದ್ದರು.

ಬಳಿಕ ಇವರು ಹಂಪಿಯ ವಿಜಯ ನಗರ ಸಾಮ್ರಾಜ್ಯದಲ್ಲಿ ಢಾಣಾಯಕರಾಗಿ ಸೇವೆ ಸಲ್ಲಿಸಿದರು. ಅಳಿಯ ರಾಮರಾಯರ ಕಾಲದಲ್ಲಿ ಸೇವೆಯನ್ನು ತ್ಯಜಿಸಿದರು. ಇವರು ವೈರಾಗಿಯಾದರು. ಯಾವುದೇ ಸ್ವಾರ್ಥಕ್ಕಾಗಿ ಮತ್ತು ಮೋಕ್ಷಕ್ಕಾಗಿ ವೈರಾಗಿಯಾಗಲಿಲ್ಲ. ಬಸವಾದಿ ಶರಣರು ಹಾಗೂ ದಾಸರು ಕೂಡಾ ವೈಯಕ್ತಿಕ ಮೋಕ್ಷಕ್ಕಾಗಿ ಹಣಿಯಾಗಲಿಲ್ಲ’ ಎಂದು ವಿವರಿಸಿದರು.

ಶಾಸಕ ರಾಘವೇಂದ್ರ ಹಿಟ್ನಾಳ್‌ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್‌, ತಾಲ್ಲೂಕು ‍ಪಂಚಾಯಿತಿ ಅಧ್ಯಕ್ಷ ಬಾಲಚಂದ್ರನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ರುದ್ರೇಶ್‌ ಘಾಳಿ, ನಗರಸಭೆ ಸದಸ್ಯರಾದ ರಾಮಣ್ಣ ಹದ್ದಿನ್‌, ಮುತ್ತುರಾಜ್‌ ಕುಷ್ಟಗಿ, ಪ್ರಾಣೇಶ್‌ ಮಾದಿನೂರು, ಬಾಳಪ್ಪ ಬಾರಕೇರ, ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ಸಮಾಜದ ಮುಖಂಡರಾದ ಮುದಿಯಪ್ಪ ಕವಲೂರು, ಜಡಿಯಪ್ಪ ಬಂಗಾಳಿ ಇದ್ದರು. ತಹಶೀಲ್ದಾರ್‌ ಗುರುಬಸವರಾಜ್‌ ಸ್ವಾಗತಿಸಿದರು. ಸಿ.ವಿ.ಜಡಿಯವರ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT