ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಶಾನದಲ್ಲಾದರೂ ಭೂಮಿ ಕೊಡಿ: ಕಿಲ್ಲನಕೇರಾ

Last Updated 7 ನವೆಂಬರ್ 2017, 9:50 IST
ಅಕ್ಷರ ಗಾತ್ರ

ಯಾದಗಿರಿ: ‘ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಜಿಲ್ಲಾಡಳಿತ ಭವನದ ಹಿಂಭಾಗವೇ ಸ್ಥಳ ಬೇಕೆಂದೇನಿಲ್ಲ. ಸ್ಮಶಾನದಲ್ಲಾದರೂ ಸರಿ ಮೊದಲು ಭೂಮಿ ಕೊಡಿ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಭೀಮರಾಯ ಕಿಲ್ಲನಕೇರಾ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಸರ್ಕಾರವನ್ನು ಒತ್ತಾಯಿಸಿದರು.

‘ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ ಆರಂಭದಲ್ಲಿ ನಗರದ ವರ್ಕನಳ್ಳಿ ರಸ್ತೆಯಲ್ಲಿ 40 ಎಕರೆ ಭೂಮಿ ನೀಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು. ಆದರೆ, ಆಗಿನ ಕಂದಾಯ ಸಚಿವ ಕರುಣಾಕರರೆಡ್ಡಿ 32 ಎಕರೆ ನೀಡುವುದಾಗಿ ಭರವಸೆ ನೀಡಿದ್ದರು. ನಂತರ ಅದರಲ್ಲಿ 10 ಎಕರೆ ಭೂಮಿಯನ್ನು ಸರ್ಕಾರ ಅನ್ಯ ಉದ್ದೇಶಕ್ಕೆ ನೀಡಿತು. ಈಗ ಅಲ್ಲಿ ಉಳಿದಿರುವುದು 23 ಎಕರೆ ಮಾತ್ರ.

ಆದರೆ, ಜಿಲ್ಲಾಡಳಿತ ಭವನದ ಹಿಂಭಾಗ 15 ಎಕರೆ ಭೂಮಿ ಇರುವುದರಿಂದ ನಾವೂ ಪಟ್ಟು ಹಿಡಿದಿದ್ದೇವು. ಆದರೆ, ಸರ್ಕಾರ– ಜನಪ್ರತಿನಿಧಿ– ಅಧಿಕಾರಿಗಳ ಕುತಂತ್ರದಿಂದ ನ್ಯಾಯಾಂಗ ಇಲಾಖೆಗೆ ಅಲ್ಲಿನ ಭೂಮಿ ಸಿಕ್ಕಿಲ್ಲ. ಹಳೆಯ  ನ್ಯಾಯಾಲಯ ಸಂಕೀರ್ಣದಲ್ಲಿ ಕುಳಿತುಕೊಳ್ಳಲು ಸ್ಥಳವಿಲ್ಲ. ಹಾಗಾಗಿ, ಭೂಮಿಯ ಅನಿವಾರ್ಯತೆ ಉಂಟಾಗಿದೆ. ನಮಗೆ ಜಿಲ್ಲಾಡಳಿತ ಭವನದ ಬಳಿಯ ಭೂಮಿಯೇ ಬೇಕು ಎಂಬ ಹಠ ಇಲ್ಲ. ನಗರ ವ್ಯಾಪ್ತಿಯಲ್ಲಿ 23 ಎಕರೆ ಭೂಮಿ ನೀಡಿದರೆ ಸಾಕು’ ಎಂದರು.

ಉಗ್ರ ಹೋರಾಟಕ್ಕೆ ನಿರ್ಧಾರ: ಭೂಮಿ ನೀಡಲು ಮೀನಮೇಷ ಎಣಿಸುತ್ತಿರುವ ಸರ್ಕಾರದ ಕ್ರಮ ಖಂಡಿಸಿ ನ.9ರಿಂದ ಉಗ್ರ ಹೋರಾಟ ನಡೆಸಲು ವಕೀಲರ ಸಂಘ ನಿರ್ಧರಿಸಿದೆ. ‘ಪ್ರತಿಭಟನೆ ಐದನೇ ದಿನಕ್ಕೆ ಕಾಲಿಟ್ಟಿದೆ. ಇದುವರೆಗೂ ಸ್ಥಳೀಯ ಶಾಸಕರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ, ಜಿಲ್ಲಾಧಿಕಾರಿಯೂ ಸಹ ಭೂಮಿ ನೀಡುವ ವಿಚಾರದಲ್ಲಿ ವಾಸ್ತವ ಅಂಶಗಳೇನಿವೆ? ಕಡತ ಯಾವ ಹಂತದಲ್ಲಿದೆ? ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ನಿಲುವು ಏನಿದೆ? ಬೆಳಗಾವಿ ಅಧಿವೇಶನದಲ್ಲಿ ಅನುಮೋದನೆ ಖಚಿತವಾಗಿ ಸಿಗಲಿದೆಯೇ? ಎಂಬುದರ ಬಗ್ಗೆ ತಿಳಿಸಿಲ್ಲ. ಹಾಗಾಗಿ, ವಕೀಲರ ಸಂಘ ಸರ್ಕಾರದ ನಡೆ ಖಂಡಿಸಿ ಉಗ್ರ ಹೋರಾಟ ನಡೆಸಲಿದೆ’ ಎಂದು ಭೀಮರಾಯ ಕಿಲ್ಲನಕೇರಾ ತಿಳಿಸಿದರು.

‘ಬುಧವಾರದರೆಗೂ ಕಾಯುವಂತೆ ಗಡಿನಾಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಚಿಂಚನಸೂರ ತಿಳಿಸಿದ್ದಾರೆ. ಅಷ್ಟರೊಳಗಾಗಿ ಸಿಎಂ ನಿಲುವಿನ ಬಗ್ಗೆ ಮಾಹಿತಿ ನೀಡುವುದಾಗಿ ಅವರು ಹೇಳಿದ್ದಾರೆ. ಅವರ ಪ್ರಯತ್ನವೂ ವಿಫಲವಾದರೆ ಯಾದಗಿರಿ ಬಂದ್‌ಗೆ ಕರೆ ನೀಡುವ ಮೂಲಕ ಉಗ್ರ ಹೋರಾಟ ನಡೆಸಲಾಗುವುದು’ ಎಂದರು.
‘ಎಮ್ಮೆಗಳ ಕೊರಳಿಗೆ ಜನಪ್ರತಿಧಿಗಳ ಚಿತ್ರ ನೇತುಹಾಕಿ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಗುವುದು. ಎಲ್ಲ ಸರ್ಕಾರಿ ಕಚೇರಿಗಳಿಗೆ ಬೀಗಮುದ್ರೆ ಹಾಕಲಾಗುವುದು’ ಎಂದು ತಿಳಿಸಿದರು. ವಕೀಲ ಸಂಘದ ಮಾಜಿ ಅಧ್ಯಕ್ಷ ಎಂ.ಎಂ.ಕಾಂತಿಮನಿ, ಉಪಾಧ್ಯಕ್ಷ ಸಿ.ಎಸ್. ಮಾಲೀಪಾಟೀಲ, ಜಿ. ಭೀಮರಾವ್, ಮಹಮ್ಮದ್ ಗೌಸ್, ಷಫೀಕ್ ಅಹಮ್ಮದ್ ಖುರೇಷಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT