ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಟು ಜಿಲ್ಲಾಧಿಕಾರಿಗಳಿಗೆ ನೋಟಿಸ್‌

ಭೂಕಬಳಿಕೆ ದಾಖಲೆ ನೀಡಲು ತಗಾದೆ: ವಿಶೇಷ ನ್ಯಾಯಾಲಯ ಕಿಡಿ
Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಭೂಕಬಳಿಕೆ ಪ್ರಕರಣಗಳ ಮಾಹಿತಿ ಹಾಗೂ ದಾಖಲೆ ನೀಡದ್ದಕ್ಕೆ ಎಂಟು ಜಿಲ್ಲಾಧಿಕಾರಿಗಳಿಗೆ ‘ಕರ್ನಾಟಕ ಭೂಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ’ ಮಂಗಳವಾರ ಷೋಕಾಸ್ ನೋಟಿಸ್‌ ನೀಡಿದೆ. ವಾರದೊಳಗೆ ಮಾಹಿತಿ ನೀಡದಿದ್ದರೆ ವಾರಂಟ್‌ ಜಾರಿ ಮಾಡುವುದಾಗಿ ಎಚ್ಚರಿಸಿದೆ.

2016ರ ಆಗಸ್ಟ್‌ 31ರಂದು ಕಾರ್ಯಾರಂಭ ಮಾಡಿದ್ದ ನ್ಯಾಯಾಲಯಕ್ಕೆ ಆರಂಭದಲ್ಲಿ ಬೆರಳೆಣಿಕೆಯ ದೂರುಗಳು ದಾಖಲಾಗಿದ್ದವು. ಕಂದಾಯ ಹಾಗೂ ಅರಣ್ಯ ಇಲಾಖೆಗಳಲ್ಲಿ ದಾಖಲಾಗಿರುವ ಒತ್ತುವರಿ ಪ್ರಕರಣಗಳನ್ನು ನ್ಯಾಯಾಲಯಕ್ಕೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲಾಗಿತ್ತು. ಆದರೆ, ಅಧಿಕಾರಿಗಳು ಉತ್ತರವನ್ನೇ ನೀಡಿರಲಿಲ್ಲ. ಅಧಿಕಾರಿಗಳ ಅಸಹಕಾರ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ನ್ಯಾಯಾಲಯವು ವಿ. ಬಾಲಸುಬ್ರಮಣಿಯನ್ ನೇತೃತ್ವದ ‘ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ವರದಿ’ಯ ಆಧಾರದಲ್ಲಿ ಕ್ರಮ ಕೈಗೊಳ್ಳಲು ನಿರ್ಧರಿಸಿತ್ತು.

ವಿವಿಧ ಜಿಲ್ಲೆಗಳಲ್ಲಿ 12 ಲಕ್ಷ ಎಕರೆ ಸರ್ಕಾರಿ ಭೂಮಿ ಒತ್ತುವರಿಯಾಗಿರುವುದನ್ನು ಕಾರ್ಯಪಡೆ ಗುರುತಿಸಿತ್ತು. ಈ ಭೂಗಳ್ಳರ ಪಟ್ಟಿ ಹಾಗೂ ದಾಖಲೆ ನೀಡುವಂತೆ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ವಲಯ ಅರಣ್ಯಾಧಿಕಾರಿಗಳಿಗೆ ನ್ಯಾಯಾಲಯ ಈ ವರ್ಷದ ಏಪ್ರಿಲ್‌ನಲ್ಲಿ ತಾಕೀತು ಮಾಡಿತ್ತು. ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದರು. ಕಂದಾಯ ಇಲಾಖೆಯಿಂದ ಮಾಹಿತಿ ಬಂದಿರಲಿಲ್ಲ. ದಾಖಲೆಗಳನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತೆ ನಿರ್ದೇಶನ ನೀಡಿತ್ತು. ಇಷ್ಟಾದ ಬಳಿಕವೂ ಬೆಳಗಾವಿ, ಕೊಪ್ಪಳ, ಕಲಬುರ್ಗಿ, ವಿಜಯಪುರ, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೋಲಾರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿರಲಿಲ್ಲ.

ಮಂಗಳವಾರ ನಡೆದ ವಿಚಾರಣೆ ವೇಳೆ ನ್ಯಾಯಾಧೀಶರು, ‘ನ್ಯಾಯಾಲಯದ ಆದೇಶವನ್ನು ಜಿಲ್ಲಾಧಿಕಾರಿಗಳು ಲಘುವಾಗಿ ಪರಿಗಣಿಸಿದ್ದಾರೆ. ಈ ಧೋರಣೆ ಭೂಕಬಳಿಕೆಗೆ ಉತ್ತೇಜನ ನೀಡಿದಂತೆ. ಅವರಿಗೆ ವಾರಂಟ್‌ ನೀಡಿ ಬುದ್ಧಿ ಕಲಿಸಬೇಕು’ ಎಂದರು. ‘ದಾಖಲೆ ನೀಡಲು ಡಿ.ಸಿ.ಗಳಿಗೆ ಒಂದು ಅವಕಾಶ ನೀಡೋಣ’ ಎಂದು ನ್ಯಾಯಾಲಯದ ವಿಶೇಷ ಸರ್ಕಾರಿ ವಕೀಲ ಬಿ.ಎಸ್. ಪಾಟೀಲ್ ಮನವಿ ಮಾಡಿದರು. ಇದಕ್ಕೆ ನ್ಯಾಯಾಲಯ ಒಪ್ಪಿತು. ಇನ್ನು ಮುಂದೆ ಇಂತಹ ವರ್ತನೆಯನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆಯನ್ನೂ ನೀಡಿತು.

‘ಕೋರ್ಟ್‌ಗೆ ಆರಂಭದಲ್ಲಿ ಹೆಚ್ಚಿನ ಪ್ರಕರಣಗಳು ಬರುತ್ತಿರಲಿಲ್ಲ. ಈಗ ಜನರಲ್ಲಿ ಜಾಗೃತಿ ಮೂಡಿದೆ. ಪ್ರತಿ ವಾರ ನೂರಾರು ಪ್ರಕರಣಗಳು ದಾಖಲಾಗುತ್ತಿವೆ. ನ್ಯಾಯಾಲಯ ಪ್ರತಿನಿತ್ಯ 100 ಪ್ರಕರಣಗಳ ವಿಚಾರಣೆ ನಡೆಸುತ್ತಿದೆ’ ಎಂದು ಬಿ.ಎಸ್‌. ಪಾಟೀಲ ತಿಳಿಸಿದರು.

***

15,000 ದೂರು– 3,000 ನೋಂದಣಿ

ಭೂಕಬಳಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಈವರೆಗೆ 15,000 ದೂರುಗಳು ಬಂದಿವೆ. ಈ ಪೈಕಿ 3,000 ದೂರುಗಳಷ್ಟೇ ನೋಂದಣಿಯಾಗಿವೆ. ಸಿಬ್ಬಂದಿ ಕೊರತೆಯಿಂದಾಗಿ ನೋಂದಣಿ ವಿಳಂಬವಾಗುತ್ತಿದೆ.

ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾರಾಯಣ ನ್ಯಾಯಾಲಯಕ್ಕೆ ಅಧ್ಯಕ್ಷರು. ತಲಾ ಇಬ್ಬರು ನ್ಯಾಯಾಂಗ ಹಾಗೂ ಕಂದಾಯ ಸದಸ್ಯರು ಇದ್ದಾರೆ. ಇಲ್ಲಿನ ಸಿಬ್ಬಂದಿ ಸಂಖ್ಯೆ 35. ಪ್ರಕರಣದ ನೋಂದಣಿಗೆ ಇಬ್ಬರಷ್ಟೇ ಇದ್ದಾರೆ. ಹೀಗಾಗಿ ನೋಂದಣಿ ವಿಳಂಬವಾಗುತ್ತಿದೆ. ಹೆಚ್ಚುವರಿ ಸಿಬ್ಬಂದಿಯನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದರೆ, ಈವರೆಗೆ ಸಿಬ್ಬಂದಿ ಒದಗಿಸಲು ಸರ್ಕಾರ ಆಸಕ್ತಿ ತೋರಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT