ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದು, ಜಿಎಸ್‌ಟಿ: ಸಂಪನ್ಮೂಲ ಸಂಗ್ರಹ ಇಳಿಮುಖ

Last Updated 7 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ನೋಟು ರದ್ದತಿ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಬಳಿಕ ರಾಜ್ಯ ಸರ್ಕಾರಕ್ಕೆ ತೆರಿಗೆ, ತೆರಿಗೆಯೇತರ ಮೂಲದಿಂದ ಬರುವ ಆದಾಯ ಇಳಿಮುಖವಾಗಿದೆ.

ರಾಜ್ಯ ಸರ್ಕಾರಕ್ಕೆ ಈ ಆರ್ಥಿಕ ಸಾಲಿನಲ್ಲಿ ಎಲ್ಲ ಮೂಲದಿಂದ ₹1,44,892 ಕೋಟಿ ಸಂಗ್ರಹವಾಗಬೇಕು. ಸೆಪ್ಟೆಂಬರ್ ಅಂತ್ಯಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಅವಧಿಯವರೆಗೆ ₹67,894 ಕೋಟಿ ಸಂಗ್ರಹವಾಗಿದೆ. ಎರಡನೇ ತ್ರೈಮಾಸಿಕ ಅವಧಿ ಮುಗಿಯುವ ಹೊತ್ತಿಗೆ ಆಯವ್ಯಯ ಅಂದಾಜಿನ ಶೇ 49 ರಷ್ಟು ವಸೂಲಿಯಾಗುವುದು ರೂಢಿ. ಆದರೆ, ಈ ವರ್ಷ ಶೇ 46.9 ರಷ್ಟು ಮೊತ್ತ ಸಂಗ್ರಹವಾಗಿದ್ದು, ಶೇ 2.1ರಷ್ಟು ಕಡಿಮೆಯಾಗಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

ಒಂದು ದಶಕದ ಈಚೆಗಿನ ಅಂಕಿ ಅಂಶ ಗಮನಿಸಿದರೆ ವರ್ಷದಿಂದ ವರ್ಷಕ್ಕೆ ತೆರಿಗೆ ಸಂಗ್ರಹದ ವಾರ್ಷಿಕ ಬೆಳವಣಿಗೆ ದರ ಸಾಮಾನ್ಯವಾಗಿ ಶೇ 20ರಿಂದ ಶೇ 29ರಷ್ಟು ಹೆಚ್ಚಳವಾಗುತ್ತಿತ್ತು. 2014ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಬೆಳವಣಿಗೆ ದರ ಶೇ 21ರಷ್ಟಿತ್ತು. 2016ರಲ್ಲಿ ಶೇ 16.9ರಷ್ಟಿತ್ತು. ಆದರೆ, ನೋಟು ರದ್ದತಿ ಮತ್ತು ಜಿಎಸ್‌ಟಿಯಿಂದಾಗಿ ಈ ದರ ಶೇ 7.1ಕ್ಕೆ ಕುಸಿದಿದೆ ಎಂದು ಮೂಲಗಳು ವಿವರಿಸಿವೆ.

ಮದ್ಯ ಮಾರಾಟದಿಂದ ಈ ವರ್ಷ ₹18,050 ಕೋಟಿ ಸಂಗ್ರಹವಾಗಬೇಕಿದೆ. ಸೆ‍ಪ್ಟೆಂಬರ್ ಅಂತ್ಯದವರೆಗೆ ₹8,539 ಕೋಟಿ ಸಂಗ್ರಹವಾಗಿದೆ. ಮೋಟಾರು ವಾಹನ ತೆರಿಗೆಯ ನಿರೀಕ್ಷಿತ ಗುರಿ ₹6,006 ಕೋಟಿ, ಸೆಪ್ಟೆಂಬರ್ ಅಂತ್ಯಕ್ಕೆ ₹2870 ಕೋಟಿ ಸಂಗ್ರಹವಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 50ರಷ್ಟು ಮೊತ್ತ ಸಂಗ್ರಹವಾಗಿದ್ದರೆ, ಈ ಬಾರಿ ಶೇ 47ರಷ್ಟು ಸಂಗ್ರಹವಾಗಿದೆ.

ನೋಟು ರದ್ದತಿ ಬಳಿಕ ನಿವೇಶನ, ಮನೆ, ಫ್ಲ್ಯಾಟ್‌ ಹಾಗೂ ಭೂಮಿ ಮಾರಾಟ ಕಡಿಮೆ ಆಗಿದೆ. ನೋಂದಣಿ ಮತ್ತು ಮುದ್ರಾಂಕ ತೆರಿಗೆ ರೂಪದಲ್ಲಿ ₹9,000 ಕೋಟಿ ಸಂಗ್ರಹಿಸುವ ಗುರಿಯಿದ್ದು, ಆರು ತಿಂಗಳಲ್ಲಿ ಶೇ 45ರಷ್ಟು ಅಂದರೆ ₹4,127 ಕೋಟಿ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ₹4,006 ಕೋಟಿ ಸಂಗ್ರಹವಾಗಿತ್ತು.

ತೆರಿಗೆಯೇತರ ಆದಾಯ ಕುಸಿತ:
ಬಳಕೆದಾರರ ಶುಲ್ಕ, ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕ ಉದ್ಯಮಗಳಿಂದ ಬರಬೇಕಾದ ಬಡ್ಡಿ ಮತ್ತು ಬಾಕಿ ವಸೂಲಿಯಿಂದ ಸಂಗ್ರಹವಾಗಬೇಕಿದ್ದ ತೆರಿಗೆಯೇತರ ಆದಾಯದಲ್ಲಿ ನಕಾರಾತ್ಮಕ ಬೆಳವಣಿಗೆ ಕಾಣಿಸಿದೆ. ಈ ವರ್ಷ ₹6,945 ಕೋಟಿ ಸಂಗ್ರಹವಾಗಬೇಕಿದ್ದು, ಮೊದಲ ಆರು ತಿಂಗಳಿನಲ್ಲಿ ₹2601 ಕೋಟಿ ವಸೂಲಾಗಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ ₹3182 ಕೋಟಿ ಸಂಗ್ರಹವಾಗಿತ್ತು. ಅಲ್ಲಿಗೆ ₹581 ಕೋಟಿ ಕೊರತೆಯಾಗಿದೆ.

ಕೇಂದ್ರ ಸರ್ಕಾರದ ಸಹಾಯಧನದ ಪ್ರಮಾಣ ಕಳೆದ ವರ್ಷ ಇದೇ ಅವಧಿಯಲ್ಲಿ ₹8,866 ಕೋಟಿ ಬಂದಿತ್ತು. ಈ ವರ್ಷ ₹8,368 ಕೋಟಿ ಬಂದಿದೆ. ಈ ಮೂಲದಿಂದ ಆರು ತಿಂಗಳಲ್ಲಿ ₹496 ಕೋಟಿ ಕೊರತೆ ಕಾಣಿಸಿದೆ ಎಂದು ಆರ್ಥಿಕ ಇಲಾಖೆ ಮೂಲಗಳು ತಿಳಿಸಿವೆ.

***

ಸಂಪನ್ಮೂಲ ಸಂಗ್ರಹದಲ್ಲಿ ಶೇಕಡಾವಾರು ಏರಿಕೆ ದರ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ)

ತೆರಿಗೆ ವಿಧ, 2016, 2017
ಸ್ವಂತ ತೆರಿಗೆ, 11.5,8.8
ವಾಣಿಜ್ಯ ತೆರಿಗೆ,13.3, 7.9
ಅಬಕಾರಿ ತೆರಿಗೆ,8.2, 5.9
ಮೋಟಾರು ವಾಹನ ತೆರಿಗೆ,19.1 11.1
ನೋಂದಣಿ, ಮುದ್ರಾಂಕ,7.0 3.0
ತೆರಿಗೆಯೇತರ ಆದಾಯ,43.8, –18.3

......

ಆದಾಯ ಸಂಗ್ರಹದ ಬೆಳವಣಿಗೆ ದರ(ಎರಡನೆ ತ್ರೈಮಾಸಿಕಕ್ಕೆ)

2014 21.6
2015 11.3
2016 16.9
2017 07.1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT