ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷಮೆಗಾಗಿ ಬಿಜೆಪಿಯ ಪರಿವರ್ತನಾ ಯಾತ್ರೆ

Last Updated 8 ನವೆಂಬರ್ 2017, 6:26 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ಬಿ.ಎಸ್‌.ಯಡಿಯೂರಪ್ಪ ಜೈಲಿಗೆ ಹೋಗಿದ್ದರು. ಅವರ ಜತೆ ಆಗಿನ ಕೆಲ ಸಚಿವರೂ ಹೋಗಿದ್ದರು. ಈಗ ಪರಿವರ್ತನೆ ಆಗಿದ್ದೇವೆ ಎಂದು ಜನರಿಗೆ ತಿಳಿಸಲು ಅವರು ಪರಿವರ್ತನಾ ಯಾತ್ರೆ ಕೈಗೊಂಡಿದ್ದಾರಾ’ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಪ್ರಶ್ನಿಸಿದರು.

ಚಿಕ್ಕಮಗಳೂರಿನಲ್ಲಿ ಮಂಗಳವಾರ ಕಾಂಗ್ರೆಸ್‌ ಸಮಾವೇಶದಲ್ಲಿ ಮಾತನಾಡಿದ ಅವರು, ‘ಆಗಿರುವ ತಪ್ಪನ್ನು ಮರೆತು, ದಯವಿಟ್ಟು ಕ್ಷಮಿಸಿಬಿಡಿ. ನಾವು ಪರಿವರ್ತನೆ ಆಗಿದ್ದೇವೆ ಎಂದು ಅವರು ಹೇಳಲು ಹೊರಟಿರಬೇಕು. ಯಡಿಯೂರಪ್ಪ ಅವರು ಇದಕ್ಕೆ ಉತ್ತರಿಸಬೇಕು’ ಎಂದು ಕಟಕಿಯಾಡಿದರು.

‘ಸಿದ್ದರಾಮಯ್ಯ ಅವರು ನಾಲ್ಕು ವರ್ಷಗಳಿಂದ ನಿದ್ದೆ ಮಾಡುತ್ತಿದ್ದರು, ಈಗ ಎಚ್ಚೆತ್ತಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದ್ದಾರೆ. ‘ಮನೆ ಮನೆಗೆ ಕಾಂಗ್ರೆಸ್‌’ ಕಿರುಹೊತ್ತಿಗೆಯನ್ನು ಓದಿದರೆ ಕಾಂಗ್ರೆಸ್‌ ಸರ್ಕಾರ ಮತ್ತು ಸಿದ್ದರಾಮಯ್ಯ ರಾಜ್ಯದ ಜನತೆಗೆ ಏನು ಮಾಡಿದ್ದಾರೆ ಎಂಬುದು ತಿಳಿಯುತ್ತದೆ. ಸಿದ್ದರಾಮಯ್ಯ ಅವರು ಭ್ರಷ್ಟ ಎಂಬುದಕ್ಕೆ ಪುರಾವೆ ಇದ್ದರೆ ಜನರ ಮುಂದೆ ಇಡಿ’ ಎಂದು ಸವಾಲು ಹಾಕಿದರು.

ಈ ತಿಂಗಳ ಅಂತ್ಯಕ್ಕೆ ರಾಹುಲ್‌ ಗಾಂಧಿ ಅವರು ಚಿಕ್ಕಮಗಳೂರಿಗೆ ಬರಲಿದ್ದಾರೆ. ದಿನ ನಿಗದಿಯಾಗಿಲ್ಲ. ಕಾಂಗ್ರೆಸ್‌ ಚೈತನ್ಯ ವೃದ್ಧಿಸುವ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರು ಶ್ರಮಿಸಬೇಕು ಎಂದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಮಾತನಾಡಿ, ‘ಬಿಜೆಪಿಯವರು ರಾಹುಲ್‌ ಗಾಂಧಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ನಕರಾತ್ಮಕವಾಗಿ ಬಿಂಬಿಸುತ್ತಿದ್ದಾರೆ. ರಾಹುಲ್‌ ಗಾಂಧಿ ಅವರೊಬ್ಬ ಸಮರ್ಥ ನಾಯಕ. ಸಹಾಯ ಮಾಡಿದ್ದು ಯಾರಿಗೂ ಗೊತ್ತಾಗಬಾರದೆಂದು ಬಯಸುವ ವ್ಯಕ್ತಿ. ನಿರ್ಭಯಾಗೆ ಮಾಡಿದ ಸಹಾಯವನ್ನು ಯಾರಿಗೂ ಹೇಳಬಾರದು ಎಂದು ಪೋಷಕರಿಗೆ ತಿಳಿಸಿದ್ದರು. ಇದು ಅವರ ನಡವಳಿಕೆಗೆ ಒಂದು ನಿದರ್ಶನ’ ಎಂದು ಹೇಳಿದರು.

‘ಕಾಂಗ್ರೆಸ್‌ಗೆ ಇನ್ನು ಉಳಿಗಾಲ ಇಲ್ಲ ಎಂದು ಹೇಳುತ್ತಿದ್ದ ಸಂದರ್ಭದಲ್ಲಿ ಇಂದಿರಾಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ ಜಿಲ್ಲೆ ಚಿಕ್ಕಮಗಳೂರು. ಹೀಗಾಗಿ, ಈ ಜಿಲ್ಲೆ ನಮಗೆ ಅಚ್ಚುಮೆಚ್ಚು. ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬಿಜೆಪಿಯವರು ಟಿಪ್ಪು ಸುಲ್ತಾನ್‌ ಅವರನ್ನು ವಿರೋಧಿಸುತ್ತಾರೆ. ಟಿಪ್ಪು ಈ ನಾಡಿಗೆ ಕೊಡುಗೆಗಳನ್ನು ನೀಡಿದ್ದಾರೆ. ಟಿಪ್ಪು ಬಗ್ಗೆ ರಾಷ್ಟ್ರಪತಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಇದನ್ನು ಅರ್ಥ ಮಾಡಿಕೊಳ್ಳಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT