ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರಕ್ಕೆ ಗುತ್ತೇದಾರ ಕೊಡುಗೆ ಏನು?

Last Updated 8 ನವೆಂಬರ್ 2017, 8:31 IST
ಅಕ್ಷರ ಗಾತ್ರ

ಕಲಬುರ್ಗಿ: ‘ನಾನು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಆರೋಪ ಮಾಡುತ್ತಿರುವ ಸುಭಾಷ್‌ ಗುತ್ತೇದಾರ ಅವರು, ಮೂರು ಅವಧಿಗೆ ಶಾಸಕರಾಗಿದ್ದವರು ಅಳಂದ ಕ್ಷೇತ್ರಕ್ಕೆ ಏನು ಕೊಡುಗೆ ನೀಡಿದ್ದಾರೆ’ ಎಂದು ಶಾಸಕ ಬಿ.ಆರ್.ಪಾಟೀಲ ಪ್ರಶ್ನಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಸಕನಾಗಿ ನಾಲ್ಕೂವರೆ ವರ್ಷದಲ್ಲಿ ₹1,200 ಕೋಟಿ ಅನುದಾನ ತರವಲ್ಲಿ ಯಶಸ್ವಿಯಾಗಿದ್ದೇನೆ. ಇದು ಅವರ ಕಣ್ಣಿಗೆ ಕಾಣುತ್ತಿಲ್ಲ. ಗುತ್ತೇದಾರ ಅವರು ಶಾಸಕರಾಗಿದ್ದಾಗ ಕೇವಲ ಎರಡು ಸಲ ವಿಧಾನಸಭೆಯಲ್ಲಿ ಮಾತಾಡಿದ್ದಾರೆ. ಒಮ್ಮೆ ಗನ್ ಮ್ಯಾನ್ ಬೇಕು ಎಂದು, ಮತ್ತೊಮ್ಮೆ ಮದ್ಯ ನಿಷೇಧ ಕೈಬಿಡಿ ಎಂದು ಮಾತಾಡಿದನ್ನು ಬಿಟ್ಟರೆ ಅವರು ಕ್ಷೇತ್ರದ ಬಗ್ಗೆ ಎಂದೂ ಕಾಳಜಿ ತೋರಿಸಲಿಲ್ಲ’ ಎಂದು ಆರೋಪಿಸಿದರು.

‘ಜಿಲ್ಲಾ ಪಂಚಾಯಿತಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಕ್ಷೇತ್ರದಲ್ಲಿ ಎಷ್ಟು ರಸ್ತೆಗಳನ್ನು ನಿರ್ಮಿಸಿದ್ದಾರೆ? ಎಷ್ಟು ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ? ಎಂದು ಕೇಳಿದ ಅವರು, ಈ ಅವಧಿಯಲ್ಲಿ ಕ್ಷೇತ್ರದಲ್ಲಿ ಆದ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಸ್ಥಿತಿ ತಲುಪಿದ್ದಾರೆ’ ಎಂದು ಲೇವಡಿ ಮಾಡಿದರು.

‘ಈ ಹಿಂದೆ ಶಾಸಕನಾಗಿದ್ದಾಗ ಕೆರೆಗಳ ನಿರ್ಮಾಣಕ್ಕೆ ಸರ್ವೆ ಮಾಡಿಸಿದ್ದೆ. ಈಗ 16 ಕೆರೆಗಳ ನಿರ್ಮಾಣಕ್ಕೆ ಅನುದಾನ ಬಂದಿದೆ. ಕೇಂದ್ರದ ಭೂಸ್ವಾಧೀನ ಕಾಯ್ದೆಯಲ್ಲಿ ಆದ ತಿದ್ದುಪಡಿಯಿಂದ ರೈತರ ಭೂಮಿ ವಶಪಡಿಸಿಕೊಳ್ಳಲು  ಅಡ್ಡಿಯಾಗಿದೆ.

  ಹೀಗಾಗಿ ಕೆರೆಗಳ ನಿರ್ಮಾಣ ವಿಳಂಬವಾಗಿದೆ. ಮಹಾರಾಷ್ಟ್ರದ ಶಿರಪುರ ಮಾದರಿಯಲ್ಲಿ ಹಳ್ಳಗಳನ್ನು ಪುನರುಜ್ಜೀವನಗೊಳಿಸಲು ₹20 ಕೋಟಿ ಅನುದಾನವನ್ನು ಸರ್ಕಾರ ನೀಡಿದ್ದು, 4 ಜಾಗದಲ್ಲಿ ಈ ಯೋಜನೆ ಆರಂಭಕ್ಕೆ ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ತಾಲ್ಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ನಿಲ್ಲಬೇಕು ಎಂಬ ವಿಚಾರದಲ್ಲಿ ಪ್ರಯತ್ನ ಮಾಡಿದ್ದೇನೆ. ನಾನು ಪಕ್ಷ ಬದಲಿಸಿದ್ದು ನಿಜ. ಆದರೆ, ಸುಭಾಷ್ ಗುತ್ತೇದಾರ ಅವರ ಹಾಗೆ ಯಾರ ಬೆನ್ನಿಗೂ ಚೂರಿ ಹಾಕಿ ಪಕ್ಷ ಬಿಟ್ಟಿಲ್ಲ. ಹೀಗಾಗಿ ಇನ್ನೊಬ್ಬರ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಡಬೇಕು’ ಎಂದು ಹೇಳಿದರು. ಆಳಂದ ಎಪಿಎಂಸಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಮುಖಂಡರಾದ ವಿಜಯಕುಮಾರ ಹತ್ತರಕಿ, ಗಣೇಶ ಪಾಟೀಲ, ನಾಗೇಂದ್ರ ಕೋರೆ, ರಾಜಶೇಖರ ಯಂಕಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT