ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್ ವಹಿವಾಟಿಗೆ ವ್ಯಾಪಾರಿಗಳ ಅರೆಮನಸು

Last Updated 8 ನವೆಂಬರ್ 2017, 8:40 IST
ಅಕ್ಷರ ಗಾತ್ರ

ಕಲಬುರ್ಗಿ: ₹500, ₹1,000 ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿ ವರ್ಷವಾದರೂ ಇಲ್ಲಿನ ಸೂಪರ್‌ ಮಾರ್ಕೆಟ್‌ನಲ್ಲಿನ ವಹಿವಾಟು ಚೇತರಿಸಿಕೊಂಡಿಲ್ಲ. ಜಿಲ್ಲೆಯ ಜನತೆಗೆ ಇಲ್ಲಿಯ ಮಾರುಕಟ್ಟೆ ಅಚ್ಚುಮೆಚ್ಚು.

ಗೃಹ ಬಳಕೆ ವಸ್ತುಗಳು ಹಾಗೂ ಜವಳಿ ವ್ಯಾಪಾರಕ್ಕೆ ಇದು ಹೆಸರುವಾಸಿ. ಕಿರಾಣಿ, ಮೊಬೈಲ್‌, ತರಕಾರಿ, ಹಣ್ಣು, ಪಾದರಕ್ಷೆ, ಎಲೆಕ್ಟ್ರಾನಿಕ್ಸ್‌ ಸೇರಿದಂತೆ ನಾನಾ ಐಷಾರಾಮಿ ವಸ್ತುಗಳು ಇಲ್ಲಿ ಮಾರಾಟವಾಗುತ್ತವೆ. ಸಗಟು ಹಾಗೂ ಚಿಲ್ಲರೆ ವ್ಯಾಪಾರವೂ ಬೃಹತ್‌ ಪ್ರಮಾಣದಲ್ಲಿ ನಡೆಯುತ್ತದೆ. ಆದರೆ, ನೋಟು ರದ್ದತಿಯ ಛಾಯೆ ಇನ್ನೂ ಸಂಪೂರ್ಣವಾಗಿ ಕರಗಿಲ್ಲ.

ಬಹುತೇಕ ವ್ಯಾಪಾರಿಗಳು ನಗದು ವಹಿವಾಟು ನಡೆಸುತ್ತಾರೆ. ಸೇವಾ ತೆರಿಗೆಯಿಂದಾಗಿ ಎಟಿಎಂ, ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಮೂಲಕ ಹಣ ಪಾವತಿಗೆ ಬಹಳಷ್ಟು ವ್ಯಾಪಾರಿಗಳು ಅಸಮ್ಮತಿ ಸೂಚಿಸುತ್ತಾರೆ. ಇದರಿಂದ ಗ್ರಾಹಕರು ದೊಡ್ಡ ಮೊತ್ತದ ಖರೀದಿಗೆ ಹಿಂದೇಟು ಹಾಕುವಂತಾಗಿದೆ. ‘2016ರ ನವೆಂಬರ್‌ 8ರ ನಂತರ ವ್ಯಾಪಾರದಲ್ಲಿ ಉಂಟಾಗಿದ್ದ ಇಳಿಕೆ ಇತ್ತೀಚೆಗೆ ಏರುಮುಖವಾಗಿದೆ. ಆದರೆ, ನಗದು ರಹಿತ ವಹಿವಾಟಿಗೆ ಹೊಂದಿಕೊಳ್ಳಲು ಇನ್ನಷ್ಟು ಸಮಯಬೇಕು’ ಎನ್ನುತ್ತಾರೆ ಜವಳಿ ವ್ಯಾಪಾರಿ ಬಸವರಾಜ ನೀಲೂರ.

ದಾಲ್‌ಮಿಲ್‌ಗೆ ಸಂಕಷ್ಟ, ಚಿನ್ನ ಖರೀದಿ ಇಳಿಕೆ: ತೊಗರಿ ಕಣಜ ಖ್ಯಾತಿಯ ಜಿಲ್ಲೆಯಲ್ಲಿ ದಾಲ್‌ಮಿಲ್‌ಗಳು ನಷ್ಟದ ಭೀತಿಯಲ್ಲಿವೆ. ಶೇ 30ರಷ್ಟು ದಾಲ್‌ಮಿಲ್‌ಗಳು ನೋಟು ರದ್ದತಿಯ ನಂತರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ‘ದಾಲ್‌ಮಿಲ್‌ಗಳಲ್ಲಿ ನಗದು ರೂಪದಲ್ಲಿ ನಡೆಯುತ್ತಿದ್ದ ವಹಿವಾಟಿಗೆ ದಿಢೀರ್‌ ನಗದು ಕೊರತೆ ಎದುರಾಗಿತ್ತು. ಅವುಗಳ ಕಾರ್ಯನಿರ್ವಹಣೆ ಸಹಜ ಸ್ಥಿತಿಗೆ ಬರಲು ಇನ್ನೂ ಎರಡು ವರ್ಷ ಬೇಕು’ ಎನ್ನುತ್ತಾರೆ ಎಚ್‌ಕೆಸಿಸಿಐ ಅಧ್ಯಕ್ಷ ಸೋಮಶೇಖರ ಟೆಂಗಳಿ.

ನೋಟು ರದ್ದತಿಯ ನಂತರ ಚಿನ್ನದ ಖರೀದಿ ಇಳಿಮುಖವಾಗಿದೆ. ಚಿನ್ನದ ಮೇಲಿನ ತೆರಿಗೆಯನ್ನು ಶೇ 1ರಿಂದ 5ಕ್ಕೆ ಏರಿಸಲಾಗಿದೆ. ₹2 ಲಕ್ಷ ಮೇಲ್ಪಟ್ಟ ಖರೀದಿಗೆ ಪಾನ್‌ ಸಂಖ್ಯೆ ನೀಡುವುದನ್ನು ಕಡ್ಡಾಯ ಮಾಡಲಾಗಿದೆ. ಈ ನೀತಿಯೂ ಚಿನ್ನದ ವಹಿವಾಟು ಕುಸಿತಕ್ಕೆ ಕಾರಣವಾಗಿದೆ.

‘ನೋಟು ರದ್ದುಪಡಿಸಿದ ಆರಂಭದಲ್ಲಿ ಕೆಲವರು ಕಪ್ಪು ಹಣವನ್ನು ಬಿಳಿ ಮಾಡಲು ಆಭರಣ ಖರೀದಿಗೆ ಪ್ರಯತ್ನಿಸಿದ್ದರು. ಆ ನಂತರ ಪಾನ್‌ ಸಂಖ್ಯೆಯ ಮಿತಿ ಹೇರಿದ್ದರಿಂದ ವಹಿವಾಟು ಕುಸಿಯಿತು. ಇದರ ಪರಿಣಾಮ ಈಗಲೂ ಇದೆ’ ಎನ್ನುತ್ತಾರೆ ಚಿನ್ನದ ವ್ಯಾಪಾರಿಯೂ ಆಗಿರುವ ಸೋಮಶೇಖರ ಟೆಂಗಳಿ.

ಡಿಜಿಟಲ್‌ ವಹಿವಾಟು: ನಗರದ ಬ್ಯಾಂಕ್‌ ಶಾಖೆಗಳಲ್ಲಿ ನಗದು ಪೂರೈಕೆ ಪರಿಸ್ಥಿತಿ ಸುಧಾರಿಸಿದೆ. ಆದರೆ, ಎಟಿಎಂಗಳಲ್ಲಿ ಈಗಲೂ ‘ನಗದು ಬರ’ ಈಗಲೂ ಕಂಡು ಬರುತ್ತಿದೆ.
ಮೊಬೈಲ್‌ ವಾಲೆಟ್‌ ಸಂಸ್ಥೆಗಳು ತಮ್ಮ ವಹಿವಾಟು ಕೊಂಚ ವಿಸ್ತರಿಸಿಕೊಂಡಿವೆ. ಆದರೆ, ಜನ ಸಹ ನಗದುರಹಿತ ವಹಿವಾಟು (ಡಿಟಿಜಲ್‌) ಬದಲಿಗೆ ನೋಟುಗಳ ವಿನಿಮಯದತ್ತ ಮತ್ತೆ ಮುಖ ಮಾಡಿದ್ದಾರೆ. ತರಕಾರಿ, ದಿನಸಿ, ಔಷಧ ಖರೀದಿಯಲ್ಲಿ ನಗದು ಕೈ ಬದಲಾಯಿಸುವ ಪ್ರವೃತ್ತಿ ಮಾಮೂಲಿಗೆ ಬಂದಿದೆ.

ಮೊಬೈಲ್‌ ವಾಲೆಟ್‌ಗಳ ಬಳಕೆಯ ಮಾಹಿತಿ ಜಿಲ್ಲೆಯ ಗ್ರಾಮೀಣ ಜನರಿಗೆ ಇಲ್ಲ. ‘ಪೇಟಿಎಂ’ ಮಾತ್ರ ನಗರದಲ್ಲಿ ಕೊಂಚ ಜನಪ್ರಿಯವಾಗಿದ್ದು, ಜೆಸ್ಕಾಂ ಬಿಲ್‌ ಪಾವತಿ ಹಾಗೂ ಸಿನಿಮಾ ಟಿಕೆಟ್‌ ಕಾಯ್ದಿರಿಸಲು ಪೇಟಿಎಂ ಬಳಲಾಗುತ್ತಿದೆ. ಬ್ಯಾಂಕಿಂಗ್‌ ವಲಯದಲ್ಲಿ ‘ಭೀಮ್‌’ ಆ್ಯಪ್‌ ಸದ್ದು ಮಾಡುತ್ತಿದೆ.

‘ಡಿಜಿಟಲ್‌ ಪಾವತಿ, ಮೊಬೈಲ್‌ ವಾಲೆಟ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌ ವಹಿವಾಟು ಕುರಿತು ಜನರಲ್ಲಿ ಇನ್ನೂ ಆತಂಕ ಮನೆ ಮಾಡಿದೆ. ಇದರಿಂದಾಗಿ ಈ ವಹಿವಾಟು ವೇಗ ಪಡೆದಿಲ್ಲ. ಗ್ರಾಹಕರ ಆತಂಕ ನಿವಾರಿಸಲು ನಮ್ಮ ಬ್ಯಾಂಕ್‌ ಗ್ರಾಮ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಿದೆ’ ಎನ್ನುತ್ತಾರೆ ಇಲ್ಲಿನ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಪ್ರಾದೇಶಿಕ ವ್ಯವಹಾರಗಳ ಕಾರ್ಯಾಲಯದ ವ್ಯವಸ್ಥಾಪಕ ಜಿ.ಶ್ರೀನಿವಾಸ ರಾವ್‌. ‘ಬ್ಯಾಂಕ್‌ನ ಸೇವಾ ತೆರಿಗೆ, ವಹಿವಾಟು ತೆರಿಗೆಗಳು ವರ್ತಕರ ಪಾಲಿಗೆ ಹೊಸ ತಲೆನೋವುಗಳಾಗಿವೆ’ ಎಂಬುದು ಗ್ರಾಹಕ ಅರುಣ್‌ ಮುನ್ನೊಳ್ಳಿ ಅವರ ಅಭಿಪ್ರಾಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT