ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಪತಿ ಬ್ರಹ್ಮರಥೋತ್ಸವ ಸಂಭ್ರಮ

Last Updated 8 ನವೆಂಬರ್ 2017, 8:52 IST
ಅಕ್ಷರ ಗಾತ್ರ

ಕುಶಾಲನಗರ: ಪಟ್ಟಣದ ಹೃದಯ ಭಾಗದಲ್ಲಿರುವ ಐತಿಹಾಸಿಕ ಗಣಪತಿ ದೇವಾಲಯದ ವಾರ್ಷಿಕ ಬ್ರಹ್ಮರಥೋತ್ಸವ ಮಂಗಳವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯೊಂದಿಗೆ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದಲ್ಲಿ ಬೆಳಿಗ್ಗೆ ಯಿಂದಲೇ ಅಭಿಷೇಕ, ಅರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಪೂಜಾ ಕೈಂಕಾರ್ಯಗಳು ನೆರವೇರಿದವು. ಗಣಪತಿ ವಿಗ್ರಹವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು.

ಮಧ್ಯಾಹ್ನ 1 ಗಂಟೆಗೆ ಸರಿಯಾಗಿ ಗಣಪತಿ ವಿಗ್ರಹವನ್ನು ರಥದಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ರಥಬಲಿಯೊಂದಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ನವದಂಪತಿಗಳು ಅಲಂಕೃತ ರಥಕ್ಕೆ ಹಣ್ಣು– ಜವನ ಎಸೆದು ಭಕ್ತಿ ಮೆರೆದರು. ಮೆರವಣಿಗೆ ಆರಂಭಗೊಂಡ ಬಳಿಕ ಹರಕೆ ಹೊತ್ತ ಭಕ್ತರು ಇಡುಗಾಯಿ ಒಡೆಯುವ ದೃಶ್ಯ ಎಲ್ಲೆಡೆ ಕಂಡುಬಂದಿತು.

ಅಯ್ಯಪ್ಪ ಸ್ವಾಮಿ ವ್ರತಾಚರಣೆಯ ಭಕ್ತರು ರಥದ ಮುಂದೆ ಕರ್ಪೂರದ ಆರತಿ ಬೆಳಗಿ ಜಯಘೋಷ ಮೊಳಗಿಸಿದರು. ರಥವನ್ನು ಎಳೆಯುವ ಸಂದರ್ಭ ವ್ಯಾಪಾರಸ್ಥರು ಮಜ್ಜಿಗೆ ಹಾಗೂ ಪಾನಕ ಹಾಗೂ ಸಿಹಿಯನ್ನು ವಿತರಿಸಿದರು. ರಥೋತ್ಸವಕ್ಕೆ ಮೈಸೂರು ಮತ್ತು ಹಾಸನ ಜಿಲ್ಲೆಗಳ ಗಡಿ ಭಾಗದ ಜನರು ಸೇರಿದಂತೆ ಜಿಲ್ಲೆಯ ಇತರೆಡೆಗಳಿಂದ ಸಹಸ್ರಾರು ಜನರು ಪಾಲ್ಗೊಂಡು ರಥವನ್ನು ಎಳೆದು ಪುನೀತರಾದರು. ಬಸವಪಟ್ಟಣದ ವೇದಬ್ರಹ್ಮ ಸುಬ್ಬುಕೃಷ್ಣ ದೀಕ್ಷಿತ್ ನೇತೃತ್ವದಲ್ಲಿ ದೇವಾಲಯದ ಪ್ರಧಾನ ಅರ್ಚಕ ಆರ್.ಕೆ.ನಾಗೇಂದ್ರ ಬಾಬು ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆದವು.

ರಥೋತ್ಸವ ಮತ್ತು ಜಾತ್ರೋತ್ಸವವು ದೇವಾಲಯ ಸಮಿತಿ ಅಧ್ಯಕ್ಷ ವಿ.ಎನ್.ವಸಂತಕುಮಾರ್, ಕಾರ್ಯದರ್ಶಿ ಎಸ್.ಕೆ.ಶ್ರೀನಿವಾಸ್ ರಾವ್ ಮತ್ತು ಖಜಾಂಜಿ ಎಂ.ಕೆ.ದಿನೇಶ್ ನೇತೃತ್ವದಲ್ಲಿ ನೆರವೇರಿದವು. ಗಣಪತಿ ಅನ್ನಸಂತರ್ಪಣಾ ಸಮಿತಿಯಿಂದ ಗಾಯತ್ರಿ ಕಲ್ಯಾಣಮಂಟಪದ ಆವರಣದಲ್ಲಿ ಭಕ್ತರಿಗೆ ಅನ್ನಸಂತರ್ಪಣೆ ವ್ಯವಸ್ಥೆ ಕಲ್ಪಿಸಲಾಗಿತ್ತು.
ಸಮಿತಿಯ ಸಮಿತಿಯ ಉಪಾಧ್ಯಕ್ಷ ಆರ್.ಬಾಬು, ಸಹಕಾರ್ಯದರ್ಶಿ ಬಿ.ಕೆ.ಮುತ್ತಣ್ಣ, ನಿರ್ದೇಶಕರಾದ ಎಸ್.ಎನ್.ನರಸಿಂಹಮೂರ್ತಿ, ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ್, ವಿ.ಡಿ.ಪುಂಡರೀಕಾಕ್ಷ, ಎಚ್.ಎನ್.ರಾಮಚಂದ್ರ, ಪ.ಪಂ.ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಶರವಣಕುಮಾರ್, ಸದಸ್ಯ ಡಿ.ಕೆ.ತಿಮ್ಮಪ್ಪ,ಮುಖ್ಯಾಧಿಕಾರಿ ಶ್ರೀಧರ್, ಆರೋಗ್ಯಾಧಿಕಾರಿ ಸತೀಶ್ ಹಾಜರಿದ್ದರು.

ರಥೋತ್ಸವದ ಸಂದರ್ಭ ಡಿವೈಎಸ್ಪಿ ಸಂಪತ್ ಕುಮಾರ್ ವೃತ್ತ ನಿರೀಕ್ಷಕ ಕ್ಯಾತೇಗೌಡ ನೇತೃತ್ವದಲ್ಲಿ ಠಾಣಾಧಿಕಾರಿಗಳಾ ಜಗದೀಶ್ ಮತ್ತು ಮಹೇಶ್ ಭದ್ರತೆಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಗಮನ ಸೆಳೆದ ಗಾಂಧಿ ವೇಷಧಾರಿ: ರಥೋತ್ಸವದ ವೇಳೆ ಆಂಧ್ರಪ್ರದೇಶದ ಚಿತ್ತೂರು ಗ್ರಾಮದ ಕನ್ನಯ್ಯ ಎಂಬ ವ್ಯಕ್ತಿ ಗಾಂಧಿ ವೇಷಧರಿಸಿ ಜಾತ್ರೆಯ ಒಳಗೆ ಸಂಚರಿಸುತ್ತ ಎಲ್ಲರ ಗಮನ ಸೆಳೆದರು.

ಗೋಪ್ರದರ್ಶನ: ರಥೋತ್ಸವದ ಅಂಗವಾಗಿ 97ನೇ ಗೋಪ್ರದರ್ಶನ ಮತ್ತು ಜಾತ್ರೆ ಗುಂಡೂರಾವ್ ಬಡಾವಣೆ ಆವರಣದಲ್ಲಿ ನಡೆಯಲಿದ್ದು, ಉತ್ತಮ ರಾಸುಗಳ ಆಯ್ಕೆಯು ನ. 17ರಂದು ಶುಕ್ರವಾರ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ರಥೋತ್ಸವದ ಅಂಗವಾಗಿ ಜಾತ್ರಾ ಮೈದಾನದಲ್ಲಿ ನಿರ್ಮಿಸಲಾಗುವ ಸಾಂಸ್ಕೃತಿಕ ವೇದಿಕೆಯಲ್ಲಿ ನ. 8ರಿಂದ ನ. 18ರವರೆಗೆ ರಾತ್ರಿ 7 ಗಂಟೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT