ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಸ್ಯೆಗಳಿಂದ ಮುಕ್ತಿ ಕಾಣದ ‘ಸಿದ್ಧಾರ್ಥ ನಗರ’

Last Updated 8 ನವೆಂಬರ್ 2017, 9:09 IST
ಅಕ್ಷರ ಗಾತ್ರ

ಮದ್ದೂರು: ಎತ್ತ ನೋಡಿದಡತ್ತ ಕಸದ ರಾಶಿ, ಕೊರಕಲು ಬಿದ್ದ ರಸ್ತೆಗಳು, ಹೂಳು ತುಂಬಿಕೊಂಡು ಗಬ್ಬು ನಾರುತ್ತಿರುವ ಚರಂಡಿಗಳು. ರಸ್ತೆಯಲ್ಲಿಯೇ ಹರಿಯುವ ಚರಂಡಿ ನೀರು. ಇದು ಪಟ್ಟಣದ ಅಶುಚಿತ್ವ, ಅನೈರ್ಮಲ್ಯದ ಆಗರ ಎನಿಸಿರುವ ಸಿದ್ಧಾರ್ಥ ನಗರದ ದೃಶ್ಯಗಳು. ಪಟ್ಟಣದ ಪುರಸಭೆ 14 ಮತ್ತು 15ನೇ ವಾರ್ಡ್‌ಗಳಿಗೆ ಸೇರುವ ಈ ನಗರ ಕೆಮ್ಮಣ್ಣುನಾಲೆಗೆ ಹೊಂದಿಕೊಂಡಂತಿದೆ. ಒಟ್ಟು 8 ಅಡ್ಡರಸ್ತೆಗಳನ್ನು ಹೊಂದಿರುವ ಇದು ಹೆಸರಿಗಷ್ಟೇ ನಗರವೇ ಹೊರತು ಇಂದಿಗೂ ಮೂಲಸೌಕರ್ಯಗಳಿಂದ ದೂರವಾಗಿದೆ.

ಇಲ್ಲಿ ಬಹುತೇಕ ಬಡ ಕೂಲಿಕಾರ್ಮಿಕರೇ ಇದ್ದಾರೆ. ಇಂದಿಗೂ ಈ ನಗರದಲ್ಲಿ ಶೇ30ರಷ್ಟು ಮಂದಿ ಗುಡಿಸಲುವಾಸಿಗಳಾಗಿದ್ದಾರೆ. ಇಲ್ಲಿಯ ಬಹುತೇಕ ಅಡ್ಡರಸ್ತೆಗಳಲ್ಲಿ ಅಸಮರ್ಪಕ, ಅವೈಜ್ಞಾನಿಕವಾಗಿ ಚರಂಡಿಗಳನ್ನು ನಿರ್ಮಸಲಾಗಿದೆ. ಬಹುತೇಕ ಚರಂಡಿಗಳ ಚಪ್ಪಡಿಗಳು ಕುಸಿದಿವೆ. ಚರಂಡಿಗಳಲ್ಲಿ ಹೂಳು, ಕಸ ತುಂಬಿಕೊಂಡು ಅಲ್ಲಲ್ಲಿ ನೀರು ನಿಂತು ಸಾಂಕ್ರಾಮಿಕ ರೋಗಗಳ ವಾಹಕವಾಗಿವೆ. ಮಳೆ ಬಂದಾಗ ಚರಂಡಿಗಳ ನೀರು ನೇರವಾಗಿ ಗುಡಿಸಲು, ಮನೆಗಳಿಗೆ ನುಗ್ಗುತ್ತವೆ.

ಹೀಗಾಗಿ ಇಲ್ಲಿಯ ಜನರಿಗೆ ರಾತ್ರಿ ಪೂರ್ಣ ಜಾಗರಣೆ ನಿಶ್ಚಿತ. ಎರಡು–ಮೂರು ತಿಂಗಳಾದರೂ ಇಲ್ಲಿಯ ಚರಂಡಿಗಳನ್ನು ಪುರಸಭೆ ಸಿಬ್ಬಂದಿ ಶುಚಿಗೊಳಿಸದ ಕಾರಣ ಅಲ್ಲಲ್ಲಿ ಚರಂಡಿ ನೀರು ನಿಂತು ರಸ್ತೆಯಲ್ಲಿ ಹರಿಯುತ್ತಿದೆ. ಜನರು ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ದೂರುತ್ತಾರೆ ಇಲ್ಲಿಯ ನಾಮನಿರ್ದೇಶಿತ ಪುರಸಭಾ ಸದಸ್ಯ ಮರಿದೇವರು.

ಸಿದ್ಧಾರ್ಥನಗರದ ಕೆಮ್ಮಣ್ಣುನಾಲೆ ರಸ್ತೆಯಲ್ಲಿ ಮುಖ್ಯಚರಂಡಿಯೊಂದನ್ನು ನಿರ್ಮಿಸಲಾಗಿದೆ. ಇಲ್ಲಿ ಹೂಳು ತುಂಬಿಕೊಂಡಿರುವ ಕಾರಣ ನೀರು ಸರಾಗವಾಗಿ ಹರಿಯುತ್ತಿಲ್ಲ. ಇಲ್ಲಿನ ಬಹುತೇಕ ಖಾಲಿ ನಿವೇಶನಗಳಲ್ಲಿ ಕಸದ ರಾಶಿ ತಂದು ಸುರಿಯಲಾಗಿದೆ. ಸರಿಯಾಗಿ ವಿಲೇವಾರಿ ಆಗದ ಕಾರಣ ವಿಷಜಂತುಗಳ ಆವಾಸಸ್ಥಾನವಾಗಿ ಮಾರ್ಪಟ್ಟಿದೆ. ಇನ್ನು ಈ ನಗರದ ಬಹುತೇಕ ರಸ್ತೆಗಳಲ್ಲಿ ಕೊರಕಲು ಉಂಟಾಗಿದ್ದು, ಸುಗಮ ಸಂಚಾರಕ್ಕೆ ಅಡಚಣೆಯಾಗಿದೆ.

ಸಿದ್ದಾರ್ಥನಗರದಲ್ಲಿ ನೀರಿಗೆ ಸಮಸ್ಯೆಯಿಲ್ಲ. ಆದರೆ ಶುದ್ಧ ಕುಡಿಯುವ ನೀರು ಸಿಗುವುದು ಕಷ್ಟ. ಹೀಗಾಗಿ ಇಲ್ಲಿಯ ಜನತೆಗೆ ಅನಾರೋಗ್ಯ ಕಾಡುತ್ತಿದೆ. ಸಿದ್ಧಾರ್ಥ ನಗರ ಹಾಗೂ ಚನ್ನೇಗೌಡ ಬಡಾವಣೆಗೆ ಈ ಸಾಲಿನಲ್ಲಿ ವಿಶೇಷ ಆರ್ಥಿಕಾಭಿವೃದ್ಧಿ ಯೋಜನೆಯ ಅಡಿಯಲ್ಲಿ ಚರಂಡಿ, ರಸ್ತೆ ಹಾಗೂ ಕುಡಿಯುವ ನೀರು ಕಾಮಗಾರಿಗಾಗಿ ಒಟ್ಟು ₹ 3 ಕೋಟಿ ಬಿಡುಗಡೆಯಾಗಿದೆ.

ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಶೀಘ್ರದಲ್ಲಿ ಕಾಮಗಾರಿ ಆರಂಭಗೊಂಡು ಇಲ್ಲಿಯ ಸಮಸ್ಯೆಗಳು ನಿವಾರಣೆಯಾಗಲಿವೆ ಎನ್ನುತ್ತಾರೆ ಪುರಸಭೆ ಮಾಜಿ ಅಧ್ಯಕ್ಷೆ ಭಾಗ್ಯಾ ಸತೀಶ್‌. ಆದರೆ, ಇದುವರೆಗೆ ಕಾಮಗಾರಿ ಆರಂಭಗೊಳ್ಳದ ಕಾರಣ ಸಿದ್ಧಾರ್ಥ ನಗರಕ್ಕೆ ಇಂದಿಗೂ ಮೂಲಸೌಕರ್ಯ ಸಮಸ್ಯೆಗಳಿಂದ ಮೋಕ್ಷ ಸಿಕ್ಕಿಲ್ಲ ಎನ್ನುವುದು ಇಲ್ಲಿಯ ಜನರ ದೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT