ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮವೇ ಆಭರಣ

Last Updated 8 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಂಚತಂತ್ರದ ಶ್ಲೋಕವೊಂದು ಹೀಗಿದೆ:

ಭಯೇ ವಾ ಯದಿ ವಾ ಹರ್ಷೇ ಸಂಪ್ರಾಪ್ತೇ ಯೋ ವಿಮರ್ಶಯೇತ್‌ |

ಕೃತ್ಯಂ ನ ಕುರುತೇ ವೇಗಾತ್‌ ನ ಸ ಸಂತಾಪಮಾಪ್ನುಯಾತ್||

‘ಭಯ ಉಂಟಾದಾಗ ಅಥವಾ ಸಂತೋಷ ಉಂಟಾದಾಗ ಯಾವನು ನಿಧಾನವಾಗಿ ಯೋಚಿಸುತ್ತಾನೆಯೋ, ಆ ಕೂಡಲೇ ಯಾವನು ಕೆಲಸ ಮಾಡುವುದಿಲ್ಲವೋ, ಅವನು ದುಃಖವನ್ನು ಹೊಂದುವುದಿಲ್ಲ.’

ಇದು ಈ ಶ್ಲೋಕದ ಭಾವಾರ್ಥ.

ಈ ಶ್ಲೋಕ ನಮ್ಮ ಕಾಲಕ್ಕೆ ಹೇಳಿ ಬರೆಸಿದಂತೆ. ಎಲ್ಲಕ್ಕೂ ಕೂಡಲೇ ಪ್ರತಿಕ್ರಿಯಿಸುವುದು ನಮ್ಮ ಕಾಲದ ಮನೋಧರ್ಮ. ರೈಲಿನಲ್ಲೋ ಬಸ್ಸಿನಲ್ಲೋ ಸಂಚರಿಸುತ್ತಿದ್ದೇವೆ, ಎಂದಿಟ್ಟುಕೊಳ್ಳಿ. ಆಗ ಏನು ಒಂದು ಸಣ್ಣ ಸಮಸ್ಯೆ ಎದುರಾಯಿತು. ನಮಗೆ ಭಯ ಉಂಟಾಗುವುದು ಸಹಜ. ಆಗ ಏನು ಮಾಡುತ್ತೇವೆ? ಗಾಬರಿಯಿಂದ ಕೂಗುವುದು, ಓಡುವುದು – ಹೀಗೆ ಆ ಕ್ಷಣವೇ ಏನೇನನ್ನೋ ಮಾಡುತ್ತೇವೆ. ಇದರಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟು, ಕೊನೆಗೆ ದುರಂತಕ್ಕೆ ದಾರಿಯಾಗುತ್ತದೆ.

ಈಗ ಇನ್ನೊಂದು ಸಂದರ್ಭವನ್ನು ನೋಡೋಣ. ಕಾಲೇಜಿನ ಸ್ನೇಹಿತರೆಲ್ಲರೂ ಸೇರಿ ಪ್ರವಾಸಕ್ಕೆ ಹೋಗಿದ್ದಾರೆ. ಸ್ನೇಹಿತರು, ಪ್ರವಾಸ, ಮಜಾ–ಇಂಥ ಸಂತೋಷದ ವಾತಾವರಣ ಇದ್ದಾಗ ಬುದ್ಧಿ ಎಲ್ಲೆಲ್ಲೋ ಹಾರಾಡುತ್ತಿರುತ್ತದೆ. ಅಲ್ಲಿಗೆ ಯಾರೋ ಒಬ್ಬರು, ವೃದ್ಧರೋ ಯುವಕರೋ – ಯಾರೋ ಬಂದರು ಎಂದಿಟ್ಟುಕೊಳ್ಳಿ. ಗದ್ದಲವನ್ನು ತಾಳಲಾರದೆ ಏನೋ ಒಂದು ಸಲಹೆಯನ್ನು ಕೊಟ್ಟರು. ಆ ಕಾಲೇಜಿನ ಗುಂಪಿಗೆ ‘ಈ ಮಾತುಗಳು ನಮ್ಮ ಸಂತೋಷಕ್ಕೆ ಅಡ್ಡಿಯಾಗುತ್ತಿದೆಯಲ್ಲ’ ಎಂದು ಅನಿಸುತ್ತದೆ. ಸಂತೋಷದ ಅಮಲು ಅವರನ್ನು ಆ ಕ್ಷಣವೇ ದಿಕ್ಕು ತಪ್ಪಿಸುತ್ತದೆ. ಮಾತಿಗೆ ಮಾತು ಬೆಳೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಕೊನೆಗೆ ದುರಂತದಲ್ಲಿ ಮುಗಿಯುತ್ತದೆ.

ಮೇಲಿನ ಎರಡು ಸಂದರ್ಭಗಳಲ್ಲಿ – ಮೊದಲನೆಯದು ಭಯದ ಸಂದರ್ಭ; ಎರಡನೆಯದು – ಸಂತೋಷದ ಸಂದರ್ಭ. ಈ ಎರಡು ಸಂದರ್ಭಗಳಲ್ಲಿ ನಾವು ಎಚ್ಚರ ತಪ್ಪಿ ನಡೆದುಕೊಂಡರೆ ಅನಾಹುತವಾಗುವುದು ನಿಶ್ಚಿತ ಎನ್ನುತ್ತಿದೆ, ಪಂಚತಂತ್ರ.

ನಮಗೆ ಭಯ ಉಂಟಾದಾಗ ಅಥವಾ ಸಂತೋಷವುಂಟಾದಾಗ ನಮ್ಮ ಬುದ್ಧಿ ತನ್ನ ಕೆಲಸವನ್ನು ಮಾಡದೆ ತಣ್ಣಗಿರುತ್ತದೆ. ಅಂಥ ಸಂದರ್ಭದಲ್ಲಿ ನಾವು ಯಾವುದಾದರೊಂದು ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಯೋಚಿಸಬೇಕಾಗುತ್ತದೆ. ಆದರೆ ನಾವು ಹೀಗೆ ನಡೆದುಕೊಳ್ಳದೆ ಅವಿವೇಕದಿಂದಲೂ ದುಡುಕಿನಿಂದಲೂ ನಡೆದುಕೊಂಡು ಅಪಾಯಗಳನ್ನು ಆಹ್ವಾನಿಸುತ್ತಿರುತ್ತವೆ. ಸಾಮಾನ್ಯವಾಗಿ ಭಯವುಂಟಾಗುವುದು ‘ನಾನು ಒಬ್ಬನೇ; ಪರಿಸ್ಥಿತಿಯನ್ನು ಎದುರಿಸುವಲ್ಲಿ ನಾನು ಒಂಟಿ’ ಎಂಬಂಥ ಪರಿಸ್ಥಿತಿಗಳಲ್ಲಿ. ಇನ್ನು ಸಂತೋಷವುಂಟಾಗುವುದು ‘ಇಡಿಯ ಜಗತ್ತೇ ನಾನು; ನನ್ನೊಂದಿಗೆ ಜಗತ್ತೇ ಇದೆ’ ಎಂಬ ಸಂದರ್ಭದಲ್ಲಿ. ಈ ಎರಡು ಸ್ಥಿತಿಗಳು ಕೂಡ ವಿಪರೀತವಾದ ಮಾನಸಿಕತೆಗಳೇ ಹೌದು.

ನಾವು, ಮನುಷ್ಯರು, ಯಾವಾಗಲೂ ಪೂರ್ಣವಾಗಿ ಒಂಟಿಯಾಗಿಯೂ ಇರುವುದಿಲ್ಲ; ಹೀಗೆಂದು ಯಾವಾಗಲೂ ಸಮೂಹದಲ್ಲೂ ಇರುವುದಿಲ್ಲ. ಇದು ನಾವು ಭೌತಿಕವಾಗಿ ಒಂಟಿಯಾಗಿದ್ದೇವೆ ಅಥವಾ ಗುಂಪಿನಲ್ಲಿದ್ದೇವೆ ಎನ್ನುವುದಲ್ಲ; ನಮ್ಮ ಮನೋಧರ್ಮವನ್ನು ಕುರಿತ ನಿಲುವುಗಳು. ಆದುದರಿಂದ ನಮಗೆ ಭಯವಾದಾಗ ನಾವು ಒಂಟಿಯಾಗಿದ್ದೇವೆ ಎಂದು ಅಂದುಕೊಂಡರೂ ನಮ್ಮ ಜೊತೆಯಲ್ಲಿ ಹಲವರು ಇರುತ್ತಾರೆ; ನಿಸರ್ಗದ ಹಲವು ವಿವರಗಳೂ ನಮ್ಮ ಜೊತೆಗಿರುತ್ತವೆ. ಅಂತೆಯೇ ನಮಗೆ ಸಂತೋಷವಾದಾಗ ಇಡಿಯ ಜಗತ್ತು ನನ್ನೊಂದಿಗಿದೆ ಎಂದು ಅಂದುಕೊಂಡರೂ ನಾವು ಒಂಟಿಯಾಗಿಯೇ ಇರುತ್ತೇವೆ; ಜೊತೆಯಿರುವುದು ನಮ್ಮ ಸಂತೋಷದೊಂದಿಗೆಯೇ ಹೊರತು ನಮ್ಮೊಂದಿಗಲ್ಲ.

ಹೀಗಾಗಿ ಭಯ ಮತ್ತು ಸಂತೋಷಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳುವಂಥ ಮರೆವಿಗೆ ಪಕ್ಕಾಗಬಾರದು. ಭಯದ ತಬ್ಬಿಬ್ಬುತನ ಮತ್ತು ಸಂತೋಷದ ಅಹಂಕಾರ – ಎರಡನ್ನೂ ನಮ್ಮ ಮೇಲೆ ಸವಾರಿ ಮಾಡಲು ನಾವು ಅವಕಾಶವನ್ನು ಕೊಡಲೇಬಾರದು. ಈ ಎರಡು ಸಂದರ್ಭದಲ್ಲೂ ‘ನಾನು’ ಎನ್ನುವುದು ಎಚ್ಚರವಾಗಿದ್ದುಕೊಂಡು ‘ನಾವು’ ಎನ್ನುವುದನ್ನು ಮರೆಸುತ್ತಿರುತ್ತದೆ. ಸ್ವಾರ್ಥದಿಂದ ಯೋಚಿಸುವುದು ಈ ಕಾಲದ ಸಹಜ ನಡಿಗೆಯಾಗಿದೆ. ಆದರೆ ವ್ಯಷ್ಟಿ ಎನ್ನುವುದು ಸಮಷ್ಟಿಯ ಹಿತದ ಆರೈಕೆಯಲ್ಲಿಯೇ ಬೆಳೆಯುವಂಥದ್ದು ಎನ್ನುವುದನ್ನು ನಾವು ಮರೆಯಬಾರದು. ಇಂಥ ವಿವೇಕ ನಮಗೆ ಮೂಡಬೇಕಾದರೆ ಭಯದಲ್ಲೂ ಸಂತೋಷದಲ್ಲೂ ನಾವು ಸಂಯಮದಿಂದ ವರ್ತಿಸುವುದನ್ನು ಕಲಿಯಬೇಕಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT