ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಅಧಿವೇಶನಕ್ಕೆ ಭರದ ಸಿದ್ಧತೆ

Last Updated 9 ನವೆಂಬರ್ 2017, 5:18 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಇದೇ ತಿಂಗಳ 13ರಿಂದ ನಡೆಯಲಿರುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೆ ಸಿದ್ಧತೆಗಳು ಭರದಿಂದ ಸಾಗಿವೆ. ದುರಸ್ತಿ ಕಾಮಗಾರಿ, ಸುಣ್ಣ ಬಣ್ಣ ಬಳಿಯುವುದು, ವಿದ್ಯುತ್ ದೀಪಗಳ ಅಲಂಕಾರ, ಉದ್ಯಾನ ನಿರ್ವಹಣೆ ಹಾಗೂ ಪ್ರತಿಭಟನಾ ಸ್ಥಳಗಳಲ್ಲಿ ಟೆಂಟ್‌ ನಿರ್ಮಿಸುವ ಕಾರ್ಯಗಳು ಬಿಡುವಿಲ್ಲದೇ ಸಾಗಿವೆ. ಭಾನುವಾರದ ವೇಳೆಗೆ ಸುವರ್ಣ ವಿಧಾನಸೌಧ ಸರ್ವರೀತಿಯಲ್ಲಿ ಸಿದ್ಧಗೊಳ್ಳಲಿದೆ.

ಅಧಿವೇಶನವು ಹತ್ತು ದಿನಗಳ ಕಾಲ ನಡೆಯಲಿದೆ. ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ವಿಧಾನಪರಿಷತ್‌ನ ಸಭಾಪತಿ ಡಿ.ಎಚ್‌.ಶಂಕರಮೂರ್ತಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರು, ಶಾಸಕು, ಅಧಿಕಾರಿಗಳು ಸೇರಿದಂತೆ 4,000ಕ್ಕೂ ಹೆಚ್ಚು ಜನ ಭಾಗವಹಿಸಲಿದ್ದಾರೆ.

ಅಧಿವೇಶನದಲ್ಲಿ ಪಾಲ್ಗೊಳ್ಳುವವರ ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಜಿಲ್ಲಾಡಳಿತ ವಹಿಸಿಕೊಂಡಿದೆ. ವಿಧಾನಸೌಧದ ಸಿವಿಲ್‌ ಕಾಮಗಾರಿಗಳನ್ನು ಹಾಗೂ ಸ್ವಚ್ಛತಾ ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆ ವಹಿಸಿಕೊಂಡಿದೆ. ಕಲಾಪಗಳ ನಿರ್ವಹಣೆ, ಊಟದ ವ್ಯವಸ್ಥೆ ಸೇರಿದಂತೆ ಇನ್ನುಳಿದ ಕಾರ್ಯಗಳ ಉಸ್ತುವಾರಿಯನ್ನು ವಿಧಾನಸಭೆ ಸಚಿವಾಲಯ ವಹಿಸಿಕೊಂಡಿದೆ.

₹ 2 ಕೋಟಿ ಮುಂಗಡ: ಕಲಾಪದಲ್ಲಿ ಪಾಲ್ಗೊಳ್ಳಲು ಆಗಮಿಸುವವರಿಗೆ ಬೆಳಗಾವಿ, ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೋಟೆಲ್‌ಗಳು, ಸರ್ಕಾರಿ ವಸತಿಗೃಹಗಳು, ವಿಶ್ವವಿದ್ಯಾಲಯಗಳ ವಸತಿಗೃಹಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅಂದಾಜು 1,600 ಕೊಠಡಿಗಳನ್ನು ಜಿಲ್ಲಾಡಳಿತ ಬಾಡಿಗೆಗೆ ಪಡೆದುಕೊಂಡಿದೆ. ಸಾರಿಗೆ ಸೌಕರ್ಯ ಕಲ್ಪಿಸಲು ಇಲಾಖೆಗಳ ವಾಹನಗಳಲ್ಲದೇ, ಖಾಸಗಿ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದುಕೊಳ್ಳಲಾಗಿದೆ. 95 ಇನ್ನೋವಾ ಕಾರು ಹಾಗೂ 20 ಸ್ವಿಫ್ಟ್‌–ಬೊಲೆರೊ ಪಡೆಯಲಾಗಿದೆ.

‘ಕಳೆದ ವರ್ಷದಂತೆ ಈ ಸಲವೂ ವಸತಿ ಹಾಗೂ ಸಾರಿಗೆ ವ್ಯವಸ್ಥೆಯನ್ನು ಜಿಲ್ಲಾಡಳಿತವೇ ವಹಿಸಿಕೊಂಡಿದೆ. ಇದಕ್ಕಾಗಿ ಸರ್ಕಾರವು ಈಗಾಗಲೇ ₹ 2 ಕೋಟಿ ಮುಂಗಡ ಹಣ ನೀಡಿದೆ. ಅಧಿವೇಶನಕ್ಕಾಗಿ ₹ 6 ಕೋಟಿ ವೆಚ್ಚ ತಗಲುವ ಅಂದಾಜಿದೆ’ ಎಂದು ಜಿಲ್ಲಾಧಿಕಾರಿ ಎಸ್‌.ಜಿಯಾವುಲ್ಲಾ ಹೇಳಿದರು.

ಲೇಸರ್‌ ಶೋ: ಲೇಸರ್‌ ಶೋ ಹಮ್ಮಿಕೊಂಡಿರುವುದು ಈ ಸಲದ ವಿಶೇಷವಾಗಿದೆ. ಅಧಿವೇಶನ ನಡೆಯುವ ದಿನಗಳಲ್ಲಿ ಸಂಜೆ ವೇಳೆ ಲೇಸರ್‌ ಶೋ ಹಮ್ಮಿಕೊಳ್ಳಲು ಸಿದ್ಧತೆಗಳು ನಡೆದಿವೆ. ಅಂದಾಜು ₹ 40 ಲಕ್ಷ ವೆಚ್ಚದಲ್ಲಿ ಟೆಂಡರ್‌ ನೀಡಿದ್ದು, ಲೈಟ್‌ ಹಾಗೂ ಸೌಂಡ್‌ ಅಳವಡಿಸಲಾಗುತ್ತಿದೆ.

‘ಕೇವಲ ಅಧಿವೇಶನ ವೇಳೆಯಲ್ಲಿ ಮಾತ್ರವಲ್ಲ ಪ್ರತಿ ಶನಿವಾರ ಹಾಗೂ ಭಾನುವಾರ ಲೇಸರ್‌ ಶೋ ನಡೆಸಲು ನಾವು ಉತ್ಸುಕರಾಗಿದ್ದೇವೆ. ಸರ್ಕಾರಕ್ಕೆ ಪ್ರಸ್ತಾವ ಕೂಡ ಕಳುಹಿಸಿದ್ದೇವೆ. ಸರ್ಕಾರ ಒಪ್ಪಿಕೊಂಡರೆ ನಡೆಸಿಕೊಡುತ್ತೇವೆ’ ಎಂದು ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಬಿ. ದಾಮಣ್ಣವರ ಹೇಳಿದರು.
ಸುವರ್ಣ ವಿಧಾನಸೌಧದ ದುರಸ್ತಿ ಕಾರ್ಯಗಳು, ಉದ್ಯಾನ ನಿರ್ವಹಣೆ, ಮ್ಯಾಟ್‌ ಬದಲಾಯಿಸುವುದು, ಎಲೆಕ್ಟ್ರಿಕಲ್‌ ಹಾಗೂ ನೀರು ಪೂರೈಕೆ ಸೇರಿದಂತೆ ಎಲ್ಲ ಕಾರ್ಯಗಳು ಅಂತಿಮ ಹಂತದಲ್ಲಿವೆ. ಶನಿವಾರ ಸಂಜೆ ಅಥವಾ ಭಾನುವಾರದ ವೇಳೆಗೆ ಎಲ್ಲ ಕಾರ್ಯಗಳು ಪೂರ್ಣಗೊಳ್ಳಲಿವೆ ಎಂದು ತಿಳಿಸಿದರು.

ಪ್ರತಿದಿನ ಪ್ರತಿಭಟನೆಗಳು: ವಿವಿಧ ಸಮಸ್ಯೆಗಳತ್ತ ಸರ್ಕಾರದ ಗಮನ ಸೆಳೆಯಲು ಅಧಿವೇಶನದ ವೇಳೆ ಪ್ರತಿಭಟನೆ ಹಮ್ಮಿಕೊಳ್ಳಲು ಹತ್ತಾರು ಸಂಘಟನೆಗಳು ನಿರ್ಧರಿಸಿವೆ. ನಗರ ಪೊಲೀಸ್‌ ಆಯುಕ್ತರಿಂದ ಈಗಾಗಲೇ ಅನುಮತಿ ಕೂಡ ಪಡೆದುಕೊಂಡಿವೆ. ಪ್ರತಿಭಟನೆ ನಡೆಸಲು ಕೆ.ಕೆ. ಕೊಪ್ಪ ಹಾಗೂ ಹಾಲಗಾದ ಸುವರ್ಣ ಗಾರ್ಡನ್‌ ಬಳಿ ಸ್ಥಳ ನಿಗದಿಪಡಿಸಲಾಗಿದೆ. ಇಲ್ಲಿ ಟೆಂಟ್‌ ಹಾಕಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಹಾಗೂ ತಾತ್ಕಾಲಿಕ ಶೌಚಾಲಯ ಗೃಹಗಳ ನಿರ್ಮಾಣ ಮಾಡಲಾಗಿದೆ. ಸೂಕ್ತ ಬಂದೋಬಸ್ತ್‌ಗಾಗಿ ಸುಮಾರು 5,000 ಪೊಲೀಸರನ್ನು ನಿಯೋಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT