ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲಾತಿಗೆ ಮಠಾಧೀಶರು ಮುಂದಾಗಲಿ

Last Updated 9 ನವೆಂಬರ್ 2017, 5:54 IST
ಅಕ್ಷರ ಗಾತ್ರ

ಹೊಸದುರ್ಗ: ರಾಜಕಾರಣಕ್ಕೆ ಮಠಗಳು ಹತ್ತಿರವಾಗಿದ್ದು, ನನೆಗುದಿಗೆ ಬಿದ್ದಿರುವ ಶೇ 33ರಷ್ಟು ಮಹಿಳಾ ಮೀಸಲಾತಿ ಮಸೂದೆ ಅನುಷ್ಠಾನಕ್ಕೆ ತರಲು ಮಠಾಧೀಶರು ಮುಂದಾಗಬೇಕು ಎಂದು ಲೇಖಕಿ ಡಾ.ಕೆ.ಷರೀಫಾ ಒತ್ತಾಯಿಸಿದರು.

ತಾಲ್ಲೂಕಿನ ಸಾಣೇಹಳ್ಳಿ ತರಳಬಾಳು ಶಾಖಾ ಮಂದಿರದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ನಾಟಕೋತ್ಸವದ 5ನೇ ದಿನವಾದ ಬುಧವಾರ ಸಂಜೆ ಸಮಾರಂಭದಲ್ಲಿ ಮಹಿಳಾ ರಾಜಕಾರಣ ಕುರಿತು ಉಪನ್ಯಾಸ ನೀಡಿದರು.

ಸಮಾನತೆ ಸಾಧಿಸಲು ರಾಜಕಾರಣದಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಡುವುದು ಹೆಚ್ಚು ಸೂಕ್ತ. ಒಂದು ಕಡೆ ಮಹಿಳೆಯನ್ನು ದೈವತ್ವಕ್ಕೆ ಏರಿಸಿ ಇನ್ನೊಂದು ಕಡೆ ಅವರಿಗೆ ಅಧಿಕಾರ ಕೊಡದೆ ಮೂಲೆಗುಂಪಾಗಿಸುವುದು ಪುರುಷರು ಮಾಡುವ ಮೋಸವೇ ಸರಿ.

ರಾಜಕೀಯ ನೇತಾರರು ಸಾರ್ವಜನಿಕವಾಗಿ ಮಹಿಳೆಯರ ಕಾರ್ಯಕ್ಷೇತ್ರ ಅಡುಗೆ ಮನೆ ಎಂದು ಹೇಳುತ್ತಾ ನಮ್ಮನ್ನು ಹಿಯ್ಯಾಳಿಸುವುದು ಸರಿಯಲ್ಲ. ಲಾಲೂಪ್ರಸಾದ್ ಯಾದವ್ ಅಧಿಕಾರ ಬಿಡುವ ಸಂದರ್ಭದಲ್ಲಿ ಮಾತ್ರ ಪತ್ನಿ ರಾಬ್ಡೀ ದೇವಿಗೆ ಅಧಿಕಾರ ಕೊಟ್ಟರೇ ಹೊರತು, ಆಕೆ ಮಹಿಳೆ ಎಂದಲ್ಲ ಎಂದು ತಿಳಿಸಿದರು.

ಎಲ್ಲಾ ರಾಜಕೀಯ ಪಕ್ಷಗಳು ಶೇ 33 ಮಹಿಳಾ ಮೀಸಲಾತಿ ಬಗೆಗಿನ ಧೋರಣೆ ಕಣ್ಣೊರೆಸುವ ತಂತ್ರವಾಗಿದೆ. ಕೇಂದ್ರದ ಮೋದಿ ಸರ್ಕಾರ ಹಿಂದೆ ವಿರೋಧಪಕ್ಷದಲ್ಲಿದ್ದಾಗ ಈ ಮಸೂದೆಗೆ ಬೆಂಬಲ ಸೂಚಿಸಿದ್ದರು.

ಆದರೆ ಈಗ ಪೂರ್ಣ ಪ್ರಮಾಣದಲ್ಲಿ ಬಹುಮತ ಇರುವಾಗ ಆ ಮಸೂದೆ ಜಾರಿಗೆ ತರುವಲ್ಲಿ ಯೋಚಿಸುತ್ತಿಲ್ಲ. ಮಹಿಳೆಯ ಶಕ್ತಿ ಸ್ವತಃ ಮಹಿಳೆಗೆ ತಿಳಿಯುತ್ತಿಲ್ಲ. ಚುನಾಯಿತ ಮಹಿಳೆಯರು ಧೈರ್ಯದಿಂದ ರಾಜಕಾರಣ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.

‘ಆರೋಗ್ಯವೇ ಭಾಗ್ಯ’ ಕುರಿತು ಡಾ.ಶಶಿಕಲಾ ಕೃಷ್ಣಮೂರ್ತಿ ಉಪನ್ಯಾಸ ನೀಡಿದರು. ಬೆಳಗಾವಿ ನಾಗನೂರು ಮಠದ ಸಿದ್ಧರಾಮ ಸ್ವಾಮೀಜಿ, ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿನೇತೃತ್ವ ವಹಿಸಿ ಮಾತನಾಡಿದರು.

ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ಜಿ.ಲೋಕೇಶ್, ತಂಜಾವೂರಿನ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ಸದಸ್ಯ ತೋ.ನಂಜುಂಡಸ್ವಾಮಿ, ಬೆಂಗಳೂರಿನ ಕಲಾ ನಿರ್ದೇಶಕ ಶಶಿಧರ ಅಡಪ, ಶಾಸಕ ಶಾಂತನಗೌಡ ಮಾತನಾಡಿದರು.

ಶಾಸಕ ಬಿ.ಜಿ.ಗೋವಿಂದಪ್ಪ ಅವರೂ ಹಾಜರಿದ್ದರು. ಅಣ್ಣಿಗೆರೆ ಯಶಸ್ವಿನಿ ಯೋಗ ಸಂಸ್ಥೆ ಹಾಗೂ ತರಳಬಾಳು ಜಗದ್ಗುರು ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ನೃತ್ಯರೂಪಕ ಅಭಿನಯಿಸಿದರು. ಶೇಷಗಿರಿ ಗಜಾನನ ಯುವಕ ಮಂಡಳಿಯವರು ‘ವಾಲಿ ವಧೆ’ ನಾಟಕ ಪ್ರದರ್ಶಿಸಿದರು.

ಮಹಿಳೆಯರು ಜಾಗೃತರಾಗಲಿ:  ಮಹಿಳೆಗೆ ನಿಜವಾದ ಸ್ಥಾನಮಾನ ದೊರೆತದ್ದು 12 ನೇ ಶತಮಾನದಲ್ಲಿ. ಪುರುಷರಂತೆ ಎಲ್ಲಾ ಕ್ಷೇತ್ರದಲ್ಲಿ ಸ್ವಾತಂತ್ರ್ಯವನ್ನು ಪಡೆದು ತನ್ನ ವ್ಯಕ್ತಿತ್ವವನ್ನು ಕಟ್ಟಿಕೊಂಡಿದ್ದಳು. ಇವತ್ತು ಪುರುಷರಿಗಿಂತ ಕಡಿಮೆ ಇಲ್ಲ ಎನ್ನುವಷ್ಟು ಸಾಧನೆಯನ್ನು ಮಹಿಳೆ ಮಾಡುತ್ತಿದ್ದಾಳೆ. ಮೀಸಲಾತಿ ಕಾರಣದಿಂದ ಕೆಲವು ಮಹಿಳೆಯರು ರಾಜಕೀಯಸ್ಥಾನ ಪಡೆದರೂ ಅವರ ಸ್ಥಾನದ ದುರ್ಬಳಕೆ ಪುರುಷರಿಂದ ಆಗುತ್ತಿದೆ.

ಈ ನಿಟ್ಟಿನಲ್ಲಿ ಮಹಿಳೆಯರು ಜಾಗೃತರಾಗಿ ತಮ್ಮ ಹಕ್ಕನ್ನು ತಾವೇ ಪಡೆದುಕೊಳ್ಳುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT