ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರಳು ಗಣಿಗಾರಿಕೆ ನಿಯಮಾವಳಿಗೆ ತಿದ್ದುಪಡಿ

ವಿದೇಶದಿಂದ ಮರಳು ಆಮದಿಗೆ ಅವಕಾಶ: ಸಂಪುಟ ಅಸ್ತು
Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಾಣಿಸಿಕೊಂಡಿರುವ ಮರಳಿನ ಸಮಸ್ಯೆ ನೀಗಿಸುವ ಸಲುವಾಗಿ ಹೊರದೇಶಗಳಿಂದ ಮರಳು ಆಮದು ಮಾಡಿಕೊಳ್ಳಲು ಅವಕಾಶವಾಗುವಂತೆ ನಿಯಮಗಳ ತಿದ್ದುಪಡಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

‘ಸ್ವಾಭಾವಿಕ ನದಿ ಮೂಲದಿಂದ ಮರಳು ಸಿಗದೇ ಇರುವುರಿಂದ ಎಂ– ಸ್ಯಾಂಡ್‌ (ಮ್ಯಾನುಫ್ಯಾಕ್ಚರ್ಡ್‌ ಮರಳು) ಘಟಕ ಸ್ಥಾಪನೆಗೆ ಅನುಕೂಲವಾಗವಂತೆಯೂ ನಿಯಮಗಳಲ್ಲಿ ತಿದ್ದುಪಡಿ ಮಾಡಲಾಗಿದೆ’ ಎಂದು ಸಭೆಯ ಬಳಿಕ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು.

‘ಎಂ– ಸ್ಯಾಂಡ್‌ ಘಟಕಗಳಿಗೆ ಪರವಾನಗಿ ನೀಡಲು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿತ್ತು. ಆದರೆ, ಹಲವು ಕಾರಣಗಳಿಂದ ರಾಜ್ಯದಾದ್ಯಂತ ಎರಡು ಸಾವಿರ ಅರ್ಜಿಗಳು ವಿಲೇವಾರಿ ಆಗಿಲ್ಲ. ಹೀಗಾಗಿ, ಪರವಾನಗಿ ನೀಡುವ ಅಧಿಕಾರವನ್ನು ಭೂ ಮತ್ತು ಗಣಿ ವಿಜ್ಞಾನ ಇಲಾಖೆ ನಿರ್ದೇಶಕರಿಗೆ ನೀಡಿ ನಿಯಮ ತಿದ್ದುಪಡಿ ಮಾಡಲಾಗಿದೆ’ ಎಂದರು.

‘ಮರಳು ಆಮದು ಮಾಡಿಕೊಳ್ಳಲು ‘ಸಣ್ಣ ಖನಿಜಗಳ ರಿಯಾಯಿತಿ’ ನಿಯಮಗಳಲ್ಲಿ ಅವಕಾಶ ಇರಲಿಲ್ಲ. ಅದಕ್ಕೆ ಅನುಕೂಲ ಮಾಡಿಕೊಡಲು ಕೆಲವು ಬದಲಾವಣೆಗಳನ್ನು ತರಲಾಗಿದೆ. ಮರಳು ಆಮದಿಗೆ ಎಂಎಸ್‌ಐಎಲ್ ಮುಂದೆ ಬಂದಿದೆ’ ಎಂದರು.

ಸಾಂಪ್ರದಾಯಿಕವಾಗಿ ಕಲ್ಲು ಒಡೆಯುವ ಕಸುಬು ಮಾಡುತ್ತಿರುವವರಿಗೆ ಸಂಘಗಳನ್ನು ರಚಿಸಿಕೊಂಡು ಗುತ್ತಿಗೆ ಪರವಾನಗಿ ಪಡೆದುಕೊಳ್ಳಲು ಮತ್ತೆ ಮೂರು ತಿಂಗಳ ಅವಕಾಶ ನೀಡಲು ಒಪ್ಪಿಗೆ ನೀಡಲಾಗಿದೆ.

‘ಕರಾವಳಿಯ ಜಿಲ್ಲೆಗಳಾದ ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ನಿರ್ಬಂಧಿತ ವಲಯ (ಸಿಆರ್‌ಝೆಡ್‌) ದಲ್ಲಿವೆ. ಈ ಜಿಲ್ಲೆಗಳಲ್ಲಿ ನದಿ ಮೂಲಗಳಿಂದ ದೋಣಿಗಳಲ್ಲಿ ಸಾಂಪ್ರದಾಯಿಕವಾಗಿ ಮರಳು ತೆಗೆಯಲು ಸಾಧ್ಯವಾಗುವಂತೆ ನಿಯಮಗಳಲ್ಲಿ ಅವಕಾಶ ಮಾಡಲಾಗಿದೆ’ ಎಂದೂ ಅವರು ವಿವರಿಸಿದರು.

‘ಕಂಬಳಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ‘ಪ್ರಾಣಿ ಹಿಂಸೆ ತಡೆ ತಿದ್ದುಪಡಿ ಮಸೂದೆ-2017'ಕ್ಕೆ ಈಗಾಗಲೇ ರಾಷ್ಟ್ರಪತಿ ಅಂಕಿತ ಹಾಕಿದ್ದು, ಈ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲು ಸಂಪುಟ ಒಪ್ಪಿಗೆ ನೀಡಿದೆ’ ಎಂದೂ ಜಯಚಂದ್ರ ತಿಳಿಸಿದರು.

ಇತರ ನಿರ್ಣಯಗಳು
* ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ₹ 267.67 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆ ಅನುಷ್ಠಾನಗೊಳಿಸಲು ಒಪ್ಪಿಗೆ.

* ಮಂಡ್ಯದ ನೂತನ ಏಕೀಕೃತ ವಿಶ್ವವಿದ್ಯಾಲಯಕ್ಕೆ ಸಂಬಂಧಪಟ್ಟ ಕಟ್ಟಡ ಕಾಮಗಾರಿಗಳನ್ನು ₹ 42 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮೋದನೆ

* ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಭವನ ನಿರ್ಮಾಣ ಕಾಮಗಾರಿ ₹ 8 ಕೋಟಿ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಅನುಮೋದನೆ

* 12 ಲಕ್ಷದಷ್ಟಿರುವ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು ಮತ್ತು ಅವರ ಅವಲಂಬಿತರಿಗೆ ‘ಶ್ರಮ ಸಾಮರ್ಥ್ಯ’ ಯೋಜನೆಯಡಿ ತರಬೇತಿ ಹಾಗೂ ಉಪಕರ ಪೆಟ್ಟಿಗೆ ನೀಡುವ ಕಾರ್ಯಕ್ರಮ ಅನುಷ್ಠಾನ. 2017–18ರಲ್ಲಿ 37,440 ಜನರಿಗೆ ₹ 99.88 ಕೋಟಿ ವೆಚ್ ಮಾಡಲು ಒಪ್ಪಿಗೆ

* ಅವ್ಯವಹಾರ ನಡೆದ ಆರೋಪ ಸಾಬೀತಾದ ಕಾರಣ ಕಾರ್ಮಿಕ ಇಲಾಖೆ ರಾಜ್ಯ ವಿಮಾ ಚಿಕಿತ್ಸಾಲಯದ ಹಿರಿಯ ತಜ್ಞೆ ಡಾ. ಬಿ.ಎನ್. ಪದ್ಮಾವತಿ ಅವರನ್ನು ಸೇವೆಯಿಂದ ಕಡ್ಡಾಯ ನಿವೃತ್ತಿಗೊಳಿಸಲು ಒಪ್ಪಿಗೆ

* ರಷ್ಯಾದ ಮೆ. ಕಾರ್ಪೊರೇಷನ್ ಟ್ರಾನ್ಸ್ ಟ್ರಾಯ್ ವಿರುದ್ಧ ಕೆಶಿಪ್ ವತಿಯಿಂದ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೊಕದ್ದಮೆಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಒಪ್ಪಿಗೆ

* ಯಾದಗಿರಿಯಲ್ಲಿ 10 ಎಕರೆ ಜಮೀನನ್ನು ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣಕ್ಕೆ ಉಚಿತವಾಗಿ ಮಂಜೂರು ಮಾಡಲು ತೀರ್ಮಾನ

* ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿವಿಧ ಗ್ರಾಮಗಳ 431.11 ಎಕರೆ ಸರ್ಕಾರಿ ಗೋಮಾಳ ಮತ್ತು ಸರ್ಕಾರಿ ಖರಾಬು ಜಮೀನುಗಳನ್ನು ಒಂದು ಲಕ್ಷ ಬಹುಮಹಡಿ ವಸತಿ ಯೋಜನೆ ಅನುಷ್ಠಾನಗೊಳಿಸಲು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮಕ್ಕೆ ನೀಡಲು ಒಪ್ಪಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT