ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲೆಂಜಿಂಗ್‌ ಪಾತ್ರ ನಂಗಿಷ್ಟ

Last Updated 10 ನವೆಂಬರ್ 2017, 7:35 IST
ಅಕ್ಷರ ಗಾತ್ರ

ಏಕಾಏಕಿ ಪಾತ್ರ ಬದಲಾವಣೆ ಆದದ್ದು ಏಕೆ?

ಸತಿ ದಹನದ ನಂತರ ಮರುಜನ್ಮ ತಾಳುವ ಪಾರ್ವತಿಯ ರೂಪದಲ್ಲಿ ಬದಲಾವಣೆ ಬೇಕಿತ್ತು. ಹಾಗಾಗಿ ಮತ್ತೊಬ್ಬರು ಪಾತ್ರ ನಿರ್ವಹಿಸುತ್ತಿದ್ದರು. ಸತಿಯೇ ಬೇರೆ. ಪಾರ್ವತಿಯೇ ಬೇರೆ. ಇಬ್ಬರೂ ಆದಿಶಕ್ತಿಯ ಅವತಾರ. ಸತಿ ದಹನ ದೃಶ್ಯದ ಶೂಟಿಂಗ್‌ ನಡೆಯುವಾಗ ನಿಜವಾಗಲೂ ಅಳು ಬಂದಿತ್ತು. ಅಷ್ಟರಮಟ್ಟಿಗೆ ಪಾತ್ರದಲ್ಲಿ ಮುಳುಗಿದ್ದೆ. ವೀಕ್ಷಕರ ಅಭಿಮಾನದ ಕಾರಣ ಮತ್ತೆ ಪಾರ್ವತಿ ಪಾತ್ರ ನಿರ್ವಹಿಸುತ್ತಿರುವುದು ಖುಷಿ ಕೊಟ್ಟಿದೆ.

ಪೌರಾಣಿಕ ಪಾತ್ರದ ಸವಾಲುಗಳೇನು?

ಪೌರಾಣಿಕ ಪಾತ್ರ ನಿಜಕ್ಕೂ ಸವಾಲಿನದು. ಅದರಲ್ಲೂ ದೇವರ ಪಾತ್ರ ನಿರ್ವಹಿಸುವುದು ಸುಲಭವಲ್ಲ. ಭಾಷೆ ಮೇಲೆ ಅಪಾರ ಹಿಡಿತವಿರಬೇಕು. ಅದಕ್ಕಾಗಿ ಅಧ್ಯಯನ ಬಹಳ ಮುಖ್ಯ. ಪಾತ್ರವನ್ನು ಆಳವಾಗಿ ಅರ್ಥ ಮಾಡಿಕೊಂಡರೆ ಮಾತ್ರವೇ ಸರಾಗ ಅಭಿನಯ ಸಾಧ್ಯ. ‘ಸತಿ’ ಪಾತ್ರ ನಿರ್ವಹಿಸುವಾಗ ಆ ಕುರಿತು ಹೆಚ್ಚು ಓದುತ್ತಿದ್ದೆ. ‘ದೇವೋಂಕೆ ದೇವ್‌ ಮಹಾದೇವ್‌’ ಹಿಂದಿ ಧಾರಾವಾಹಿಯ ಪ್ರತಿ ಸಂಚಿಕೆಯನ್ನೂ ಗಮನಿಸುತ್ತಿದ್ದೆ. ನಿರ್ದೇಶಕ ನಿತಿನ್‌ ಗೋಪಿ ಅವರ ಸಹಕಾರದಿಂದಾಗಿ ‘ಸತಿ’ ಪಾತ್ರದ ಆಳ–ಅಗಲ ಅರಿತಿದ್ದೆ. ‘ಸತಿ’ ಪಾತ್ರ ಹಠ, ಸಿಟ್ಟು, ಕೋಪವನ್ನು ಒಳಗೊಂಡಿತ್ತು. ಆದರೆ, ‘ಪಾರ್ವತಿ’ ಪಾತ್ರ ಇದಕ್ಕೆ ತದ್ವಿರುದ್ಧ. ತುಂಬಾ ಗಾಂಭೀರ್ಯ ಮತ್ತು ಜವಾಬ್ದಾರಿಯನ್ನು ಬೇಡುವ ಪಾತ್ರ.

ಭಾರೀ ವಸ್ತ್ರ, ಆಭರಣಗಳು ಅಭಿನಯಕ್ಕೆ ಅಡಚಣೆ ಎನಿಸುವುದಿಲ್ಲವೇ?

ಖಂಡಿತಾ ಇಲ್ಲ. ನಾನು ಭರತನಾಟ್ಯ ಕಲಾವಿದೆಯಾಗಿರುವ ಕಾರಣ ಇವೆಲ್ಲದರ ಅಭ್ಯಾಸವಿದೆ. ಪಾತ್ರದೊಳಗೆ ಸಂಪೂರ್ಣ ಮುಳುಗಿದಾಗ ಇದೆಲ್ಲ ಅಡೆತಡೆ ಎನಿಸುವುದೇ ಇಲ್ಲ.

ನಿಮ್ಮನ್ನು, ಧಾರಾವಾಹಿಯನ್ನು ಜನ ಗುರುತಿಸುತ್ತಾರಾ?

ಶಿವ– ಪಾರ್ವತಿ ಕಥೆ ಕನ್ನಡದಲ್ಲಿ ಪ್ರಸಾರವಾಗುತ್ತಿರುವುದು ಇದೇ ಮೊದಲು. ಹಿರಿಯರು, ಮಕ್ಕಳು, ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ನೋಡಬಹುದಾದ ಧಾರಾವಾಹಿ. ನಮ್ಮ ಊರಿನವರಂತೂ ನನ್ನನ್ನು ದೇವತೆಯಂತೆಯೇ ಕಾಣುತ್ತಾರೆ. ‘ಮಾತೆ ಆಶೀರ್ವಾದ ಮಾಡಿ’ ಎಂದು ಕಾಲಿಗೆ ನಮಸ್ಕರಿಸಲು ಬರುತ್ತಾರೆ. ಇದು ನನ್ನ ಮೊದಲ ಧಾರಾವಾಹಿ. ಉತ್ತಮ ಹೆಸರು ತಂದುಕೊಟ್ಟಿದೆ. ತುಂಬಾ ಸಂತೋಷದಿಂದ ಅಭಿನಯಿಸುತ್ತಿದ್ದೇನೆ.

ಪಾತ್ರದ ಬಿಡುವಿನಲ್ಲಿ ಏನ್‌ ಮಾಡಿದ್ರಿ?

ಸಿನಿಮಾದಲ್ಲಿ ಅಭಿನಯಿಸುವುದು ನನ್ನ ಕನಸಾಗಿತ್ತು. ಆದರೆ, ಸತಿ ಪಾತ್ರದ ಕುರಿತು ಕೇಳಿದಾಗ ತುಂಬಾ ಹೆಮ್ಮೆಯಿಂದಲೇ ಒಪ್ಪಿಕೊಂಡಿದ್ದೆ. ಪಾತ್ರದ ಬಿಡುವಿನ ಸಂದರ್ಭದಲ್ಲಿ ಉಪೇಂದ್ರ ಅವರ ‘ಎ+’ ಸಿನಿಮಾದಲ್ಲಿ ನಾಯಕಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇನ್ನೆರಡು ತಿಂಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತೆಲುಗು ಧಾರಾವಾಹಿಯೊಂದರಲ್ಲೂ ಅಭಿನಯಿಸುತ್ತಿದ್ದೇನೆ. ಸಿನಿಮಾ ಅಥವಾ ಧಾರಾವಾಹಿಯ ನಾಯಕ ನಟ ಯಾರು ಎಂಬುದಕ್ಕಿಂತಲೂ ಕಥೆಗೆ ನಾನು ಹೆಚ್ಚು ಪ್ರಾಮುಖ್ಯ ನೀಡುತ್ತೇನೆ.

ಪಾತ್ರದ ಹಿಂದಿನ ಪ್ರೇರಣೆ ಏನು?

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ನನ್ನ ಹುಟ್ಟೂರು. ಅಪ್ಪ ಶಿವ. ಅಮ್ಮ ಭವಾನಿ. ನಮ್ಮ ಇಡೀ ಕುಟುಂಬದವರು ಶಿವನ ಭಕ್ತರು. ನನಗೆ ದೇವರ ಬಗ್ಗೆ ನಂಬಿಕೆ ಇಲ್ಲ. ಆದರೆ, ಶಿವ ಎಂದರೆ ತುಂಬಾ ಆಕರ್ಷಣೆ. ನನ್ನ ನಿಜ ಜೀವನಕ್ಕೂ ಸತಿ ಪಾತ್ರಕ್ಕೂ ಏನೋ ಸಾಮ್ಯತೆ ಇದೆ ಎಂದೆನಿಸುತ್ತದೆ. ಅಭಿನಯದ ಬಗ್ಗೆ ಮನೆಯಲ್ಲಿ ಸದಾ ನನ್ನನ್ನು ಎಚ್ಚರಿಸುತ್ತಿರುತ್ತಾರೆ. ಸರಿ– ತಪ್ಪುಗಳ ಬಗ್ಗೆ ಸಲಹೆಗಳನ್ನು ನೀಡುತ್ತಾರೆ. ನಮ್ಮ ಕುಟುಂಬದವರೇ ನನಗೆ ಪ್ರೇರಣೆ.

ಪಾತ್ರಕ್ಕೆ ಆಯ್ಕೆಯಾದ ಬಗ್ಗೆ ಹೇಳಿ.

ಕಾಲೇಜು ದಿನಗಳಲ್ಲಿ ಕ್ರೀಡೆ ಮತ್ತು ಎನ್‌.ಸಿ.ಸಿ ಬಗ್ಗೆ ಹೆಚ್ಚು ಒಲವು ಇತ್ತು. ಅಭಿನಯದ ಕುರಿತು ಏನೂ ಗೊತ್ತಿರಲಿಲ್ಲ. ಕೊಕ್ಕೊ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಆಡಿ ಚಿನ್ನ ಗೆದ್ದಿದ್ದೇನೆ. ಎನ್‌.ಸಿ.ಸಿಯಲ್ಲಿ ಭಾಗವಹಿಸಿ ‘ಸೀನಿಯರ್‌ ಅಂಡರ್‌ ಆಫೀಸರ್‌’ ಎಂಬ ಹೆಸರು ಪಡೆದುಕೊಂಡಿದ್ದೇನೆ. ನಂತರ ರೂಪದರ್ಶಿಯಾಗಿ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಗೌರವಗಳಿಗೆ ಪಾತ್ರಳಾಗಿದ್ದೇನೆ. ‘ಕರ್ಮ’ ಕಿರುಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿತು. ಆ ಮೂಲಕ ‘ಹರಹರ ಮಹಾದೇವ’ ಧಾರಾವಾಹಿಯ ‘ಸತಿ’ ಪಾತ್ರಕ್ಕೆ ಆಯ್ಕೆಯಾದೆ. ಚಾಲೆಂಜಿಂಗ್‌ ಕೆಲಸಗಳನ್ನು ನಿರ್ವಹಿಸುವುದು ನನಗೆ ಇಷ್ಟ.

ಧಾರಾವಾಹಿಯ ಕಥೆ ಎಲ್ಲಿಗೆ ಬಂದಿದೆ?

ಶಿವ – ಪಾರ್ವತಿಯರ ಬೆವರಿನ ಮಿಲನದಿಂದಾಗಿ ಅಂಧಕಾಸುರ ಜನ್ಮ ತಾಳಿದ್ದಾನೆ. ಮುಂದೆ ಮಲ್ಲ ಮಣಿಯ ಸಂಹಾರಕ್ಕೆ ಕಾಳಿ ಅವತಾರ ತಾಳಲಿದ್ದೇನೆ. ಈ ದೃಶ್ಯಗಳ ಚಿತ್ರೀಕರಣದ ಕ್ಷಣಗಳು ಬಹಳ ಉತ್ತಮ ಅನುಭವ ತಂದುಕೊಟ್ಟಿವೆ. ಮುಂದೆ ಏನಾಗುತ್ತೆ ಎಂದು ವಿವರಿಸಿಬಿಟ್ಟರೆ ಕುತೂಹಲವಿರುವುದಿಲ್ಲ. ಕಾದು ನೋಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT