ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

10–11–1967

Last Updated 9 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಖ್ಯಾತ ಫೋಟೋಗ್ರಾಫರ್‌ ಟಿ.ಎಸ್‌. ಸತ್ಯನ್‌ ಅವರಿಗೆ ಬಹುಮಾನ (ಪ್ರಜಾವಾಣಿ ಪ್ರತಿನಿಧಿಯಿಂದ)
ನವದೆಹಲಿ, ನ. 9–
ಮೈಸೂರಿನ ಇಬ್ಬರು ಪ್ರಸಿದ್ಧ ಛಾಯಾಚಿತ್ರಗ್ರಾಹಿಗಳಾದ ಡೆಕ್ಕನ್‌ ಹೆರಾಲ್ಡ್‌ ಪತ್ರಿಕೆಯ ಶ್ರೀ ಟಿ.ಎಸ್‌. ಸತ್ಯನ್‌ ಮತ್ತು ಭಾರತ ಸರಕಾರದ ಛಾಯಾಚಿತ್ರ ವಿಭಾಗದ ಶ್ರೀ ಟಿ. ಕಾಸೀನಾಥ ಅವರಿಗೆ ನವದೆಹಲಿಯಲ್ಲಿ ಕ್ಯಾಮೆರಾ ಸೊಸೈಟಿ ಏರ್ಪಡಿಸಿದ ಛಾಯಚಿತ್ರ ಪ್ರದರ್ಶನ ಸ್ಪರ್ಧೆಯಲ್ಲಿ ಮೊದಲಿನ ಎರಡು ಪ‍್ರಶಸ್ತಿಗಳು ದೊರಕಿವೆ.

ಲಲಿತ ಕಲಾ ಗ್ಯಾಲರಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಈ ಇಬ್ಬರು ಛಾಯಾಚಿತ್ರ ಕಲಾವಿದರು ಮತ್ತು ಇತರ ವಿಜೇತರಿಗೆ ರಾಷ್ಟ್ರಪತಿ ಡಾ. ಜಾಕಿರ್‌ ಹಿಸೇನ್‌ ಅವರು ನಗದು ಹಣ ಮತ್ತು ಸರ್ಟಿಫೀಕೇಟ್‌ ಆಫ್‌ ಎಕ್ಸ್‌ಲೇನ್ಸ್‌ ಪತ್ರವನ್ನು ನೀಡಿದರು.

ಹರಿ–ಗಿರಿ ಜನರಿಗೆ ಹುದ್ದೆ ಮೀಸಲು: ನಿಯಮಪಾಲನೆಗೆ ಆದೇಶ
ಬೆಂಗಳೂರು, ನ. 9–
ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡುವಾಗ ಹರಿಜನ ಗಿರಿಜನರಿಗೆ ಕಾದಿಸಿರುವ ಹುದ್ದೆಗಳ ಶೇಕಡಾವಾರು ಸಂಖ್ಯೆಗೆ ಸಂಬಂಧಿಸಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಇಲಾಖೆಗಳ ಮುಖ್ಯಾಧಿಕಾರಿಗಳಿಗೆ ಎಚ್ಚರಿಕೆ ನೀಡಲು ಇಂದು ನಡೆದ ಮಂತ್ರಿಮಂಡಲ ನಿರ್ಧರಿಸಿತು.

ಮಹಾಜನ್‌ ತೀರ್ಪನ್ನು ಒಪ್ಪಿಕೊಳ್ಳಲು ಡಾ. ಅಣೆ ಕರೆ
ಜಮ್‌ಷಡ್‌ಪುರ, ನ 9–
ಮಹಾಜನ್‌ ಆಯೋಗದ ವರದಿಯನ್ನು ನ್ಯಾಯವಾದ ತೀರ್ಪೆಂದು ಒಪ್ಪಿಕೊಳ್ಳಬೇಕೆಂದು ಬಿಹಾರದ ಮಾಜಿ ರಾಜ್ಯಪಾಲರೂ, ವಿದರ್ಭದ ಹಿರಿಯ ನಾಯಕರೂ ಆದ ಡಾ. ಎಮ್‌.ಎಸ್‌. ಅಣೆ ಅವರು ಮಹಾರಾಷ್ಟ್ರೀಯರಿಗೆ ಇಂದು ಮನವಿ ಮಾಡಿಕೊಂಡರು.

ಕೇಂದ್ರದ ನಿರ್ಧಾರದೊಡನೆ ಸಂಸತ್‌ ಮುಂದೆ ಮಹಾಜನ್‌ ವರದಿ ಮಂಡನೆಯಾಗಲಿ
ಬೆಂಗಳೂರು, ನ. 9–
ವಿವಾದ ಅಂತ್ಯವಾಗಬೇಕೆಂಬ ದೃಷ್ಟಿಯಿಂದ ಮಹಾಜನ್‌ ಗಡಿ ಆಯೋಗದ ವರದಿಯನ್ನು ಒಪ್ಪಿ ಕಾರ್ಯರೂಪಕ್ಕೆ ತರಬೇಕೆಂಬ ಮುಖ್ಯಮಂತ್ರಿಗಳ ನಿಲುವನ್ನು ಇಂದು ನಡೆದ ರಾಜ್ಯ ಮಂತ್ರಿ ಮಂಡಲದ ಸಭೆ ಪೂರ್ಣವಾಗಿ ಅನುಮೋದಿಸಿತು.

ಮಹಾಜನ್‌ ತರ್ಕ ಅರ್ಥಶೂನ್ಯವೆಂದು ಇ.ಎಂ.ಎಸ್‌.
ತಿರುವನಂತಪುರ, ನ. 9–
‘ಸುಪ್ರೀಂಕೋರ್ಟಿನ ಮಾಜಿ ನ್ಯಾಯಾಧೀಶರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಕಾಸರಗೋಡು ಪ್ರದೇಶದಲ್ಲಿ ಮಾತನಾಡುವ ಮಲೆಯಾಳಿಯು ಕೇರಳದ ಇತರ ಕಡೆ ಮಾತನಾಡುವ ಮಲೆಯಾಳಿಗಿಂತ ಬೇರೆಯಾದುದೆಂಬ ಆಧಾರದ ಮೇಲೆ ಮೈಸೂರಿನಲ್ಲಿ ಕಾಸರಗೋಡಿನ ಕೆಲವು ಮಲೆಯಾಳಿ ಬಹುಸಂಖ್ಯಾತ ಗ್ರಮಾಗಳನ್ನು ವಿಲೀನಗೊಳಿಸಲು ಶ್ರೀ ಮಹಾಜನ್‌ ಮುಂದಿಟ್ಟಿರುವ ತರ್ಕ ಅರ್ಥರಹಿತವಾದುದು’ ಎಂದು ಕೇರಳದ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್‌. ನಂಬೂದಿರಿಪಾಡ್‌ ಅವರು ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೃಷ್ಣ ಹಥೀಸಿಂಗ್‌ ಅವರ ನಿಧನ
ಮುಂಬೈ, ನ. 9–
ದಿವಂಗತ ಪ್ರಧಾನಮಂತ್ರಿ ನೆಹರೂರವರ ಸೋದರಿ ಶ್ರೀಮತಿ ಕೃಷ್ಣ ಹಥೀಸಿಂಗ್‌ರವರು ಇಂದು ಬೆಳಿಗ್ಗೆ ಲಂಡನ್ನಿನಲ್ಲಿ ನಿಧನ ಹೊಂದಿದರೆಂದು ಇಲ್ಲಿಗೆ ಸುದ್ದಿ ಬಂದಿದೆ. ಅವರಿಗೆ 60 ವರ್ಷ ವಯಸ್ಸಾಗಿತ್ತು.

ಖಾಸಗಿ ಭೇಟಿಯ ಮೇಲೆ ಲಂಡನ್ನಿಗೆ ಹೋಗಿದ್ದ ಶ್ರೀಮತಿ ಹಥೀಸಿಂಗ್‌ ಅವರು ಭಾರತೀಯ ವ್ಯಾಪಾರಿ ಶ್ರೀ ಎಸ್‌. ಕಪೂರ್‌ ಅವರ ಮನೆಯಲ್ಲಿ ತಂಗಿದ್ದರು. ಅವರು ಇಂದು ಲಂಡನ್ನಿನಿಂದ ಹೊರಡುವವರಿದ್ದರೆಂದೂ ಭಾರತೀಯ ಹೈಕಮಿಷನ್ನಿನ ವೃತ್ತಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT