ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಲಾವಿದರಿಗೆ ಭಾವನೆಗಳು ಮುಖ್ಯ’

Last Updated 10 ನವೆಂಬರ್ 2017, 5:40 IST
ಅಕ್ಷರ ಗಾತ್ರ

ಬೆಳಗಾವಿ: ಸಾಹಿತಿಗಳಿಗೆ ಭಾಷಾ ಪಾಂಡಿತ್ಯ ಅವಶ್ಯಕತೆ ಇದ್ದಂತೆ ಚಿತ್ರಕಲಾವಿದರಿಗೆ ಭಾವನೆಗಳು ಅವಶ್ಯ ಎಂದು ಹಿರಿಯ ಸಾಹಿತಿ, ಕಲಾವಿದ ಚಂದ್ರಕಾಂತ ಕುಸನೂರ ಹೇಳಿದರು. ಇಲ್ಲಿನ ಶಿವಬಸವ ನಗರದಲ್ಲಿರುವ ಎಸ್.ಜಿ.ಬಿ.ಐ.ಟಿ ಕಾಲೇಜು ಆವರಣದ ಪ್ರಭುದೇವ ಸಭಾಗೃಹದಲ್ಲಿ ಧಾರವಾಡದ ಡಿ.ವಿ. ಹಾಲಭಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ನಾಗನೂರ ರುದ್ರಾಕ್ಷಿ ಮಠದ ಸಂಯುಕ್ತಾಶ್ರಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಚಿತ್ರಕಲಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾನು ಕನ್ನಡದಲ್ಲಿ ಶಿಕ್ಷಣ ಪಡೆದಿಲ್ಲ, ಆದರೂ ಕನ್ನಡದಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದೇನೆ. ಹಾನಗಲ್ ಕುಮಾರ ಸ್ವಾಮೀಜಿಗಳ ಜೀವನ ಚರಿತ್ರೆಯನ್ನು ಕನ್ನಡದಿಂದ ಮರಾಠಿ ಭಾಷೆಗೆ ಅನುವಾದಿಸಿದ್ದೇನೆ. ಹೊಸ ವಿಷಯವನ್ನು ಕಲಿತುಕೊಳ್ಳಲು ನನ್ನಲ್ಲಿದ್ದ ಆಸಕ್ತಿಯಿಂದಾಗಿ ಇದು ಸಾಧ್ಯವಾಯಿತು. ಸಾಧನೆಗೆ ಆಸಕ್ತಿ ಹಾಗೂ ಪರಿಶ್ರಮ ಅಗತ್ಯ ಎಂದು ಅವರು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಹಿರಿಯ ಸಾಹಿತಿ, ಪತ್ರಕರ್ತ ಸರಜೂ ಕಾಟ್ಕರ ಮಾತನಾಡಿ, ದಿವಂಗತ ಡಿ.ವಿ. ಹಾಲಭಾವಿ ಅವರು 1935ರಲ್ಲಿ ಧಾರವಾಡದಲ್ಲಿ ಕಲಾಶಾಲೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಬದುಕು ಕಟ್ಟಿಕೊಳ್ಳಲು ಕಾರಣರಾದರು.

ಹಾಲಭಾವಿ ಅವರು ಚಿತ್ರಕಲೆಗಾಗಿ ತಮ್ಮ ಜೀವನದುದ್ದಕ್ಕೂ ಶ್ರಮಿಸಿದ್ದರು ಎಂದು ಸ್ಮರಿಸಿದರು. ಬೆಳಗಾವಿಯಲ್ಲಿ ಸಾಕಷ್ಟು ಜನರು ಕಲಾವಿದ್ದರಿದ್ದು, ಚಿತ್ರಕಲೆಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಒಂದು ಆರ್ಟ್ ಗ್ಯಾಲರಿ ನಿರ್ಮಾಣವಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಡಿ.ವಿ. ಹಾಲಭಾವಿ ಟ್ರಸ್ಟ್‌ನ ಅಧ್ಯಕ್ಷರು ಹಾಗೂ ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಮಾತನಾಡಿ, ಹಾಲಭಾವಿ ಅವರು ತಮ್ಮ ಸ್ವಂತ ಹಣದಿಂದಲೇ ಧಾರವಾಡದಲ್ಲಿ ಕಲಾಶಾಲೆಯನ್ನು ಕಟ್ಟಿ, ನಡೆಸಿಕೊಂಡು ಬಂದಿದ್ದರು. ಚಿತ್ರಕಲೆ ಮತ್ತು ಕಲಾವಿದರನ್ನು ಬೆಳೆಸುವುದೇ ಅವರ ಮುಖ್ಯ ಉದ್ದೇಶವಾಗಿತ್ತು ಎಂದು ಹೇಳಿದರು.

ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಮಾತನಾಡಿ, ತ್ರಿವೇಣಿ ಸಂಗಮವಾದ ಸಾಹಿತ್ಯ, ಸಂಗೀತ ಹಾಗೂ ಕಲೆ ಮನಸ್ಸಿಗೆ ಆನಂದವನ್ನುಂಟು ಮಾಡುವ ಸಾಧನಗಳಾಗಿವೆ. ಜೊತೆಗೆ ಸಂಸ್ಕೃತಿಯ ಪ್ರತಿಬಿಂಬಗಳಾಗಿವೆ ಎಂದರು.

ರಾಜ್ಯದ ಎಲ್ಲ ಶಾಲಾ, ಕಾಲೇಜುಗಳಲ್ಲಿ ಖಾಲಿ ಇರುವ ಚಿತ್ರಕಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ನಗರದಲ್ಲಿರುವ ತಮ್ಮ ಮಠದ ಆವರಣದಲ್ಲಿ ರಂಗಮಂದಿರ ಹಾಗೂ ಆರ್ಟ್ ಗ್ಯಾಲರಿ ನಿರ್ಮಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ನಾಗನೂರು ರುದ್ರಾಕ್ಷಿ ಮಠದ ಮಹಾಂತ ದೇವರು ಪ್ರಾಸ್ತಾವಿಕ ಮಾತನಾಡಿದರು. ಸಿದ್ಧರಾಮೇಶ್ವರ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿಯರು ನಾಡಗೀತೆ ಹಾಡಿದರು. ಧಾರವಾಡದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಹಾಗೂ ಡಿ.ವಿ. ಹಾಲಭಾವಿ ಟ್ರಸ್ಟ್‌ನ ಸದಸ್ಯ ಕಾರ್ಯದರ್ಶಿಯಾದ ಸಿದ್ಧಲಿಂಗೇಶ ರಂಗಣ್ಣವರ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯರಾದ ಧಾರವಾಡದ ಸುರೇಶ ಹಾಲಭಾವಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT