ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ವಂಚಿತ ಕಾನಹೊಸಳ್ಳಿ ಗ್ರಾಮ ಪಂಚಾಯ್ತಿ

Last Updated 10 ನವೆಂಬರ್ 2017, 5:43 IST
ಅಕ್ಷರ ಗಾತ್ರ

ಕೂಡ್ಲಿಗಿ: ನಾಲ್ಕು ದಶಕಗಳಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿರುವ ಕಾನ ಹೊಸಳ್ಳಿ ತಾಲ್ಲೂಕಿನಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ ಅಭಿವೃದ್ಧಿಯಲ್ಲಿ ಮಾತ್ರ ಹಿಂದುಳಿದಿದೆ.
ಸಾರ್ವಜನಿಕ ಶೌಚಾಲಯದ ಕೊರತೆ, ಕುಡಿಯುವ ನೀರಿನ ಅಭಾವ, ತಗ್ಗು ಗುಂಡಿಗಳಿಂದ ಕೂಡಿರುವ ಪ್ರಮುಖ ರಸ್ತೆ, ಸ್ವಚ್ಛತೆ ಇಲ್ಲದ ಬಸ್ ನಿಲ್ದಾಣಗಳು ಗ್ರಾಮದ ದುಸ್ಥಿತಿಯನ್ನು ಹೇಳುತ್ತಿವೆ. ಗ್ರಾಮ ಪಂಚಾಯ್ತಿಗೆ ಸುಮಾರು ₹ 24 ಲಕ್ಷ ವಾರ್ಷಿಕ ಆದಾಯವಿದ್ದರೂ ಅಭಿವೃದ್ಧಿ ಮಾತ್ರ ಅಷ್ಟಕ್ಕಷ್ಟೇ ಎಂಬಂತಾಗಿದೆ.

ತಾಲ್ಲೂಕು ಕೇಂದ್ರದಿಂದ 32 ಕಿ.ಮೀ. ದೂರದಲ್ಲಿರುವ ಗ್ರಾಮ ಹೋಬಳಿ ಕೇಂದ್ರ. ಇಲ್ಲಿ ನಾಡ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಪೊಲೀಸ್ ಠಾಣೆ, ರೈತ ಸಂಪರ್ಕ ಕೇಂದ್ರವಿದೆ. ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಪ್ರಮುಖ ಪಟ್ಟಣಗಳಿಗೆ ಸಂಪರ್ಕ ಕಲ್ಪಿಸುವ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿಯೂ ಹಾದು ಹೋಗಿದೆ.

ದಿನ ನಿತ್ಯ ಸಾವಿರಾರು ಜನ ಭೇಟಿ ನೀಡಿದರೂ ಗ್ರಾಮದಲ್ಲಿ ಒಂದೇ ಒಂದು ಸಾರ್ವಜನಿಕ ಶೌಚಾಲಯವಿಲ್ಲ. ಹೀಗಾಗಿ ಜನ ಎಲ್ಲೆಂದರಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುವುದು ಸಾಮಾನ್ಯ ದೃಶ್ಯ. ಮೂರು ಮಹಿಳಾ ಶೌಚಾಲಯಗಳಿದ್ದರರೂ ಬಳಕೆಗೆ ಯೋಗ್ಯವಾಗಿಲ್ಲ.

ಪಂಚಾಯಿತಿ ಕಚೇರಿಯ ಹಳೆ ಕಟ್ಟಡದ ಸಮೀಪವೇ ಗ್ರಾಮ ನೈರ್ಮಲ್ಯೀಕರಣ ಯೋಜನೆಯಲ್ಲಿ 2004ರಲ್ಲಿ ಮಹಿಳಾ ಶೌಚಾಲಯ ಹಾಗೂ ದೋಬಿ ಘಾಟ್ ನಿರ್ಮಿಸಲಾಗಿದೆ. ಆದರೆ ನಿರ್ವಹಣೆ ಕೊರತೆಯಿಂದ ಶೌಚಾಲಯದ ಸುತ್ತ ಬಳ್ಳಾರಿ ಜಾಲಿ ಬೆಳೆದಿದೆ.

‘ನೀರಿನ ಅಭಾವದಿಂದ ಮಹಿಳಾ ಶೌಚಾಲಯ ನಿರ್ವಹಣೆ ಅಸಾಧ್ಯವಾಗಿದೆ. ಆದರೆ ವೈಯಕ್ತಿಕ ಶೌಚಾಲಯಕ್ಕೆ ಅದ್ಯತ ನೀಡಲಾಗುತ್ತಿದ್ದು, ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳುವಂತೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಪಂಚಾಯಿತಿ ಅಧ್ಯಕ್ಷ ಎಂ. ದುರುಗೇಶ್ ತಿಳಿಸಿದರು.

‘ನಿಲ್ದಾಣದ ಬಳಿ ನೀರು ಶುದ್ಧೀಕರಿಸುವ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಬಸ್ ನಿಲ್ದಾಣ ಮತ್ತು ಘಟಕದ ಮಧ್ಯದ ಖಾಲಿ ಜಾಗದಲ್ಲಿಯೇ ಜನ ಮೂತ್ರ ವಿಸರ್ಜಿಸುವುದರಿಂದ ದುರ್ನಾತ ಬೀರುತ್ತಿದೆ. ಕೆಲವು ಚರಂಡಿಗಳನ್ನು ಸ್ವಚ್ಛಗೊಳಿಸಿದ್ದರೂ, ತ್ಯಾಜ್ಯ ತೆರವುಗೊಳಿಸಿಲ್ಲ’ ಎಂದು ಯುವಕ ಬಾಷಾ ಸಬ್ ದೂರುತ್ತಾರೆ.

ನೀರಿನ ಅಭಾವ: ‘ಪಂಚಾಯಿತಿಯ ಕೆಲವು ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ಗ್ರಾಮದಲ್ಲಿ ನೀರು ಶುದ್ಧೀಕರಿಸುವ ಎರಡು ಘಟಕಗಳ ನಿರ್ಮಾಣ ಕಾರ್ಯ ಎರಡು ವರ್ಷದಿಂದ ಸ್ಥಗಿತಗೊಂಡಿವೆ. ಗ್ರಾಮದ ಹೊರ ವಲಯದಲ್ಲಿರುವ ರಸ್ತೆ ಸಾರಿಗೆ ನಿಗಮದ ನಿಲ್ದಾಣಕ್ಕೆ ವೇಗದೂತ ಬಸ್ಸುಗಳು ಮಾತ್ರ ಬರುತ್ತಿವೆ ಆದರೆ ಪ್ರಯಾಣಿಕರು ಅತಿ ವಿರಳ. ಹಳೇ ನಿಲ್ದಾಣದ ಬಳಿಯೇ ಹೊಸ ನಿಲ್ದಾಣ ನಿರ್ಮಿಸಬೇಕು' ಎಂಬುದು ಸಾರ್ವಜನಿಕರ ಒತ್ತಾಯ.

ಎ.ಎಂ. ಸೋಮಶೇಖರಯ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT