ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ

Last Updated 10 ನವೆಂಬರ್ 2017, 6:08 IST
ಅಕ್ಷರ ಗಾತ್ರ

ಚಾಮರಾಜನಗರ: ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಿಸುವುದನ್ನು ಖಂಡಿಸಿ ಗುರುವಾರ ನಗರದಲ್ಲಿ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಯಿತು. ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಆರಂಭಿಸಿದ ಕಾರ್ಯಕರ್ತರು, ಜಿಲ್ಲಾಡಳಿತ ಭವನಕ್ಕೆ ತೆರಳಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ನೂರೊಂದುಶೆಟ್ಟಿ ಮಾತನಾಡಿ, ಮತಾಂಧನಾಗಿದ್ದ ಟಿಪ್ಪು, ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿದ್ದಾನೆ. ಹಿಂದೂಗಳನ್ನು ಹತ್ಯೆಗೈದಿದ್ದಾನೆ. ಕೊಡವ ಮನೆತನಗಳ ಮೇಲೆ ದಾಳಿ ಮಾಡಿ ಅವರನ್ನು ಕೊಲೆ ಮಾಡಿದ್ದಾನೆ. ಇಂತಹ ವ್ಯಕ್ತಿಯ ಹೆಸರಿನಲ್ಲಿ ಜಯಂತಿ ಆಚರಣೆ ಮಾಡುವುದು ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.

ತೀವ್ರ ವೀರೋಧದ ನಡುವೆಯೂ ರಾಜ್ಯ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಣೆ ಮಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹಠಮಾರಿತನ ಹಾಗೂ ಉಡಾಫೆತನದಿಂದ ರಾಜ್ಯದಲ್ಲಿ ಅಶಾಂತಿ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಿರೋಧ ಮಾಡುವವರಿಗೆ ಟಿಪ್ಪುವಿನ ಇತಿಹಾಸ ತಿಳಿದಿಲ್ಲ ಎಂದು ಸಿದ್ದರಾಮಯ್ಯ ಅವರು ಮಾಧ್ಯಮದ ಮೂಲಕ ಹೇಳುತ್ತಿದ್ದಾರೆ. ಮೊದಲು ಅವರು ಟಿಪ್ಪುವಿನ ಇತಿಹಾಸ ತಿಳಿಯಬೇಕು. ಟಿಪ್ಪು ಮಲಬಾರ್‌ ಪ್ರಾಂತ್ಯ ಹಾಗೂ ತಮಿಳುನಾಡು ಭಾಗದಲ್ಲಿ ಸಾವಿರಾರು ಹಿಂದೂಗಳನ್ನು ಮತಾಂತರಗೊಳಿಸಿದ್ದಾನೆ. 8000ಕ್ಕೂ ಹೆಚ್ಚು ಹಿಂದೂ ದೇವಾಲಯ ಧ್ವಂಸಗೊಳಿಸಿದ್ದಾನೆ ಎಂದರು.

ಟಿಪ್ಪು ಜಯಂತಿಯಂದು ಯಾವುದೇ ಸಭೆ, ಸಮಾರಂಭಗಳು ಹಾಗೂ ಪ್ರತಿಭಟನೆ ಮಾಡುವಂತಿಲ್ಲ ಎಂದು ಸಿದ್ದರಾಮಯ್ಯ ಅವರು ಗೃಹ ಸಚಿವರ ಮೂಲಕ ಆದೇಶ ಹೊರಡಿಸಿ ಹಿಂದೂಪರ ಸಂಘಟನೆಗಳ ಹೋರಾಟ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಡಳಿತ ಪಕ್ಷದ ವಿರುದ್ಧ ಹೋರಾಟ, ಸಭೆ ನಡೆಸುವುದು ಕೂಡ ಒಂದು ಪ್ರಮುಖ ಅಂಗವಾಗಿದೆ. ಸರ್ಕಾರ ಇದಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.

ಧರ್ಮ ವಿರೋಧಿ ಟಿಪ್ಪುವನ್ನು ಸ್ವಾತಂತ್ರ್ಯ ಸೇನಾನಿಯೆಂದು ಸರ್ಕಾರ ಹೇಳಿಕೆ ನೀಡುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡುತ್ತಿದೆ ಎಂದು ದೂರಿದರು. ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ, ಬಿಜೆಪಿ, ಆಜಾದ್‌ ಹಿಂದೂ ಸೇನೆ, ವಾಲ್ಮೀಕಿ ಯುವ ಸೇನೆ, ಭಗೀರಥ ಸೇನೆ, ದ.ರಾ. ಬೇಂದ್ರೆ ಸಂಘ, ಕರ್ನಾಟಕ ರಕ್ಷಣಾ ಸೇನೆ ಹಾಗೂ ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಬಳಿಕ, ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಉಪವಿಭಾಗಾಧಿಕಾರಿ ಫೌಜಿಯಾ ತರನಮ್‌ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಪ್ರೊ.ಕೆ.ಆರ್. ಮಲ್ಲಿಕಾರ್ಜುನಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಪಿ.ಬಿ. ಶಾಂತಮೂರ್ತಿ, ಆರ್. ಮಹದೇವು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಪಿ.ಎನ್. ದಯಾನಿಧಿ, ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಎನ್. ಬಾಲರಾಜು, ಮುಖಂಡರಾದ ಕೆಲ್ಲಂಬಳ್ಳಿ ಸೋಮನಾಯಕ, ಮಹದೇವನಾಯಕ, ಸುಂದರ್‌ರಾಜ್‌, ಪೃಥ್ವಿರಾಜ್‌, ಪ್ರಣಯ್‌, ನಾಗಶ್ರೀ, ಚಂದ್ರಕಲಾಬಾಯಿ, ರಂಗಸ್ವಾಮಿ, ಮಂಜುನಾಥ್‌, ಜಯಮ್ಮ, ರಾಜಮಣಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT