ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುನೀತ ಯಾತ್ರೆ’ಗೆ ಯಾತ್ರಿಕರೇ ಬರುತ್ತಿಲ್ಲ!

Last Updated 10 ನವೆಂಬರ್ 2017, 8:34 IST
ಅಕ್ಷರ ಗಾತ್ರ

ಕಲಬುರ್ಗಿ: ಪ್ರವಾಸೋದ್ಯಮ ಇಲಾಖೆ, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಕೆಎಸ್‌ಟಿಡಿಸಿ) ಕಲಬುರ್ಗಿಯಿಂದ ಆರಂಭಿಸಿರುವ ‘ಪುನೀತ ಯಾತ್ರೆ’ಗೆ ಆರಂಭದಲ್ಲಿ ಸ್ಪಂದನೆ ದೊರೆತಿಲ್ಲ. ಕಲಬುರ್ಗಿಯಿಂದ ಎಂಟು ಮಾರ್ಗಗಳ ಪುನೀತ ಯಾತ್ರೆಗೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರು ನವೆಂಬರ್‌ 2ರಂದು ಚಾಲನೆ ನೀಡಿದ್ದು, ವಾರ ಕಳೆದರೂ ಪ್ರವಾಸಿಗರೂ ಟಿಕೆಟ್‌ ಕಾಯ್ದಿರಿಸಿಲ್ಲ. ಒಂದು ಮಾರ್ಗದಲ್ಲಿಯೂ ಚಾಲನೆ ದೊರೆತಿಲ್ಲ.

ಕೆಎಸ್‌ಟಿಡಿಸಿ ಕಲಬುರ್ಗಿಯಲ್ಲಿ ಕಚೇರಿ ತೆರೆದಿದ್ದು, ಟಿಕೆಟ್‌ ನೋಂದಣಿ ಮತ್ತು ನಿರ್ವಹಣೆಗಾಗಿ ನಾಲ್ವರು ಸಿಬ್ಬಂದಿ ನಿಯೋಜಿಸಿದೆ. ಕಲಬುರ್ಗಿಯಿಂದ ಹೊರಡುವ ಈ ಪ್ಯಾಕೇಜ್‌ ಟೂರ್‌ಗಳಿಗೆ ಆರು ಬಸ್‌ಗಳನ್ನು ನಿಯೋಜಿಸಲಾಗಿದೆ. ಸದ್ಯ 15 ಆಸನ ಸಾಮರ್ಥ್ಯದ ಒಂದು ಮಿನಿ ಬಸ್‌, 39 ಆಸನ ಸಾಮರ್ಥ್ಯದ ಏ.ಸಿ. ಡೀಲಕ್ಸ್‌ ಬಸ್‌ ಹಾಗೂ 45 ಆಸನ ಸಾಮರ್ಥ್ಯದ ವೋಲ್ವೊ ಬಸ್‌ನ್ನು ಕಲಬುರ್ಗಿ ಯಾತ್ರಿ ನಿವಾಸದ ಎದುರು ಸನ್ನದ್ಧ ಸ್ಥಿತಿಯಲ್ಲಿ ನಿಲ್ಲಿಸಲಾಗಿದೆ.

ಬಹುವರ್ಷಗಳ ಬೇಡಿಕೆ: ಕಲಬುರ್ಗಿ ನಗರ ಮತ್ತು ಸುತ್ತಲಿನ ಪ್ರದೇಶದಲ್ಲಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಬಹುಮುಖ್ಯವಾಗಿ ‘ಕಲಬುರ್ಗಿ ನಗರ ದರ್ಶನ’ ವಾಹನ ಸೇವೆ ಆರಂಭಿಸಬೇಕು ಎಂಬುದು ಬಹು ವರ್ಷಗಳ ಬೇಡಿಕೆ.

ಈಗ ಚಾಲನೆ ನೀಡಿರುವ 12 ಗಂಟೆಗಳ ಅವಧಿಯ ಒಂದು ದಿನದ ‘ಕಲಬುರ್ಗಿ ನಗರ ವೀಕ್ಷಣೆ ಮತ್ತು ಗಾಣಗಾಪುರ’ ಪ್ಯಾಕೇಜ್‌ ಟೂರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ಎಲ್ಲರಲ್ಲಿಯೂ ಇತ್ತು. ₹135 ದರದಲ್ಲಿ ಗಾಣಗಾಪುರ, ಕಲಬುರ್ಗಿಯ ಶರಣಬಸವೇಶ್ವರ ದೇವಸ್ಥಾನ, ಕೋಟೆ, ವಸ್ತುಸಂಗ್ರಹಾಲಯ, ಖಾಜಾ ಬಂದಾನವಾಜ್‌ ದರ್ಗಾ, ಬ್ರಹ್ಮಾಕುಮಾರಿ ಸಂಸ್ಥೆಯ ಅಮೃತ ಸರೋವರ, ಬುದ್ಧವಿಹಾರಗಳಿಗೆ ಭೇಟಿ ನೀಡುವ ಅವಕಾಶ ಇದೆ.

‘ಈ ಪ್ಯಾಕೇಜ್‌ ಟೂರ್‌ಗೆ ವ್ಯಾಪಕ ಪ್ರಚಾರದ ಅವಶ್ಯವಿದೆ. ಶಾಲಾ–ಕಾಲೇಜುಗಳಿಗೆ ಹೋಗಿ ಕರಪತ್ರ ವಿತರಿಸುತ್ತಿದ್ದೇವೆ. ಪ್ರಚಾರ ಫಲಕಗಳನ್ನು ಅಳವಡಿಸುತ್ತಿದ್ದೇವೆ’ ಎನ್ನುತ್ತಾರೆ ಕೆಎಸ್‌ಟಿಡಿಸಿ ಸ್ಥಳೀಯ ಸಿಬ್ಬಂದಿ.

‘ಕಲಬುರ್ಗಿಯಿಂದ ಪ್ಯಾಕೇಜ್‌ ಟೂರ್‌ನ ಯಾವುದೇ ಸೌಲಭ್ಯ ಇಲ್ಲ. ಪ್ರವಾಸೋದ್ಯಮ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇದೇ ಜಿಲ್ಲೆಯವರು. ತಮ್ಮ ಪ್ರದೇಶದ ಜನರಿಗೂ ಅನುಕೂಲ ದೊರೆಯಲಿ ಎಂಬ ಕಾರಣಕ್ಕೆ ವಿಶೇಷ ಆಸಕ್ತಿ ವಹಿಸಿ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಆರಂಭದಲ್ಲಿ ಹೀಗಾಗುವುದು ಇದು ಸಹಜ. ಎಲ್ಲರಿಗೂ ಮಾಹಿತಿ ಲಭ್ಯವಾದರೆ ಉತ್ತಮ ಸ್ಪಂದನೆ ದೊರೆಯಲಿದೆ. ಇದಕ್ಕೆ ಸ್ವಲ್ಪ ಸಮಯಾವಕಾಶ ಬೇಕು’ ಎಂದು ಅವರು ಹೇಳುತ್ತಾರೆ.

ಶೇ 25ರಷ್ಟು ರಿಯಾಯಿತಿ
ಈ ಎಂಟೂ ಪ್ಯಾಕೇಜ್‌ಗಳನ್ನು ‘ಪುನೀತ ಯಾತ್ರೆ’ ಯೋಜನೆಯಡಿ ಆರಂಭಿಸಲಾಗಿದೆ. ಹೀಗಾಗಿ ಈ ಪ್ಯಾಕೇಜ್‌ ಟೂರ್‌ಗೆ ಶೇ 25ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಮೊದಲ ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಬುಕ್ಕಿಂಗ್‌ಗೆ ಅವಕಾಶ ಇದೆ. ಆನ್‌ಲೈನ್‌ ಬುಕ್ಕಿಂಗ್‌ (www.kstdc.co) ಆರಂಭಿಸಲಾಗಿದೆ. ಕಲಬುರ್ಗಿಯ ಸಾರ್ವಜನಿಕ ಉದ್ಯಾನದ ಬಳಿ ಇರುವ ನಿಗಮದ ಯಾತ್ರಿ ನಿವಾಸದಲ್ಲಿ ಕೌಂಟರ್‌ ಸಹ ತೆರೆಯಲಾಗಿದೆ. ಈ ಕೌಂಟರ್‌ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ.
ಮಾಹಿತಿಗೆ www.kstdc.co/ 080-43344334, 08472-249919, 9611658770 ಸಂಪರ್ಕಿಸಬಹುದು.

ಪ್ಯಾಕೇಜ್‌ ಟೂರ್‌ ಅವಧಿ ದರ
ಕಲಬುರ್ಗಿ ನಗರ ವೀಕ್ಷಣೆ ಮತ್ತು ಗಾಣಗಾಪುರ ನಿತ್ಯ ಬೆಳಿಗ್ಗೆ 7.30ರಿಂದ ಸಂಜೆ 7.30 ₹135
ನಾಗಾವಿ–ಸನ್ನತಿ ಸ್ತೂಪ–ಕೋರಿ ಸಿದ್ದೇಶ್ವರ ದರ್ಶನ ನಿತ್ಯ ಬೆಳಿಗ್ಗೆ 8.30ರಿಂದ ಸಂಜೆ 6.30 ₹295
ಬಸವಣ್ಣನವರ ಪವಿತ್ರ ಕ್ಷೇತ್ರಗಳ ದರ್ಶನ 3 ದಿನ ₹3,270
ಕರ್ನಾಟಕದ ಪ್ರಸಿದ್ಧ ಮಸೀದಿಗಳ ದರ್ಶನ 2 ದಿನ ₹2,550
ತಿರುಪತಿ–ಮಂಗಾಪುರ ತಿರುಪತಿ–ಕಾಳಹಸ್ತಿ–ಶ್ರೀನಿವಾಸ ಮಂಗಾಪುರ 4 ದಿನ ₹2,925
ಶ್ರೀಶೈಲ–ಮಹಾನಂದಿ–ಸಾಕ್ಷಿ ಗಣೇಶ 4ದಿನ ₹2,275
ಶಿರಡಿ–ನಾಸಿಕ್‌–ತ್ರಯಂಬಕೇಶ್ವರ–ಶನಿಸಿಂಗನಾಪುರ 4 ದಿನ ₹2,625
(ಕೆಳಗಿನ ಆರೂ ಪ್ಯಾಕೇಜ್‌ಗಳು ಸಾರಿಗೆ, ವಸತಿ ಮತ್ತು ಶೀಘ್ರ ದರ್ಶನದ ವೆಚ್ಚವನ್ನು ಒಳಗೊಂಡಿವೆ. ಊಟ–ಉಪಾಹಾರದ ವೆಚ್ಚವನ್ನು ಪ್ರಯಾಣಿಕರು ಭರಿಸಬೇಕು)
ಆಧಾರ: ಕೆಎಸ್‌ಟಿಡಿಸಿ
 
* * 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT