ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿ ಇಂದು: ಜಿಲ್ಲೆಯಾದ್ಯಂತ ಹೈಅಲರ್ಟ್‌

Last Updated 10 ನವೆಂಬರ್ 2017, 9:03 IST
ಅಕ್ಷರ ಗಾತ್ರ

ಮಂಡ್ಯ: ‘ಶುಕ್ರವಾರ ನಡೆಯುವ ಟಿಪ್ಪು ಜಯಂತಿ ಅಂಗವಾಗಿ ಜಿಲ್ಲೆಯಾದ್ಯಂತ ಕಟ್ಟುನಿಟ್ಟಿನ ಭದ್ರತಾ ಕ್ರಮ ಕೈಗೊಳ್ಳಲಾಗಿದ್ದು ಸೂಕ್ಷ್ಮ ಪ್ರದೇಶಗಳಲ್ಲಿ ಗುರುವಾರ ಸಂಜೆ 6ರಿಂದ ಶನಿವಾರ (ಅ.11) ಬೆಳಿಗ್ಗೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಹೇಳಿದರು.

‘ಜಯಂತ್ಯುತ್ಸವ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ 24x7 ನಿಗಾ ವಹಿಸಲಾಗಿದೆ. ಬೆಂಗಳೂರು– ಮೈಸೂರು ಹೆದ್ದಾರಿಯಲ್ಲಿ ಚೆಕ್‌ ಪೋಸ್ಟ್‌ ತೆರೆಯಲಾಗಿದ್ದು ಒಳಬರುವ ಹಾಗೂ ಹೊರ ಹೋಗುವ ಎಲ್ಲ ವಾಹನಗಳನ್ನು ತಪಾಸಣೆ ನಡೆಸಿ ಬಿಡಲಾಗುತ್ತಿದೆ.

ಅತಿ ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲಾಗಿರುವ ಮಂಡ್ಯ ಗ್ರಾಮೀಣ, ಶ್ರೀರಂಗಪಟ್ಟಣ ಹಾಗೂ ಬೆಳ್ಳೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈಗಾಗಲೇ ಕರ್ನಾಟಕ ಪೊಲೀಸ್‌ ಕಾಯ್ದೆ ಕಲಮು 35ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರಿಸ್ಥಿತಿಯನ್ನು ನೋಡಿಕೊಂಡು ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಕಾಯ್ದೆ ಅನ್ವಯ ನಗರ, ಪಟ್ಟಣ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಮೆರವಣಿಗೆ ನಿಷೇಧಿಸಲಾಗಿದೆ. ಶಾಂತಿ, ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಘೋಷಣೆ ಕೂಗುವುದು, ಫಲಕ ಪ್ರದರ್ಶನ ಮಾಡುವುದು ಕಂಡು ಬಂದರೆ ಅಂತಹ ವ್ಯಕ್ತಿಗಳನ್ನು ಕೂಡಲೇ ಬಂಧಿಸಲಾಗುವುದು. ಅಪಾಯಕಾರಿ ಆಯುಧಗಳನ್ನು ಹಿಡಿದು ಓಡಾಡುವುದು, ಸ್ಫೋಟಕಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ. ಜೋರಾಗಿ ಮೈಕ್‌ನಲ್ಲಿ ಮಾತನಾಡುವುದು, ಡಿಜೆ ಕಾರ್ಯಕ್ರಮ ನಡೆಸುವಂತಿಲ್ಲ. ಅನುಮಾನಾಸ್ಪದವಾಗಿ ಓಡಾಡುವವರನ್ನು ಪೊಲೀಸರು ಬಂಧಿಸಲಿದ್ದಾರೆ’ ಎಂದು ಹೇಳಿದರು.

ಪೊಲೀಸರ ಪಥ ಸಂಚಲನ: ‘ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಪಥಸಂಚಲನ ನಡೆಸುತ್ತಿದ್ದಾರೆ. ಎಲ್ಲ ಚೆಕ್‌ ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು ವಾಹನಗಳ ಓಡಾಟ ಹಾಗೂ ವ್ಯಕ್ತಿಗಳ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ. ಅಲ್ಲದೆ ವಿಡಿಯೊ ಚಿತ್ರೀಕರಣ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಮಟ್ಟದಲ್ಲಿ ಎಲ್ಲ ಧರ್ಮಗಳ ಮುಖಂಡರನ್ನು ಆಹ್ವಾನಿಸಿ ಶಾಂತಿ ಸಮಿತಿ ಸಭೆ ನಡೆಸಲಾಗಿದೆ. ಸೌಹಾರ್ದ ಕಾಪಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಅಲ್ಲದೆ ವಿಭಾಗೀಯ ಮಟ್ಟದಲ್ಲಿ ಹಾಗೂ ಪೊಲೀಸ್‌ ಠಾಣೆಗಳಲ್ಲಿ ಪ್ರತ್ಯೇಕವಾಗಿ ಶಾಂತಿ ಸಭೆ ನಡೆಸಲಾಗಿದೆ’ ಎಂದು ಹೇಳಿದರು.

‘ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಮುಂಜಾಗೃತಾ ಕ್ರಮವಾಗಿ 150 ಪ್ರಕರಣಗಳನ್ನು ದಾಖಲಿಸಲಾಗಿದೆ. ಪರಿಸ್ಥಿತಿ ಎದುರಿಸಲು ಆಂಬುಲೆನ್ಸ್‌, ಅಗ್ನಿಶಾಮಕ ದಳ, ಬಾಂಬ್‌ ನಿಗ್ರಹ ದಳದ ಸಿಬ್ಬಂದಿಗೆ ತುರ್ತು ಸಂದರ್ಭದಲ್ಲಿ ಕಾರ್ಯಪ್ರವೃತ್ತರಾಗಲು ಸೂಚನೆ ನೀಡಲಾಗಿದೆ. ಜಯಂತಿ ಅಂಗವಾಗಿ ಸದ್ಯ ಯಾರನ್ನೂ ವಶಕ್ಕೆ ತೆಗೆದುಕೊಂಡಿಲ್ಲ. ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವವರನ್ನು ಬಂಧಿಸಲಾಗುವುದು’ ಎಂದು ಹೇಳಿದರು.

ಡಿಜಿಪಿ ಸೂಚನೆ: ‘ಈಚೆಗೆ ಕಚೇರಿಗೆ ಭೇಟಿ ನೀಡಿದ್ದ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾದ ನೀಲಮಣಿ ರಾಜು ಅವರು ಟಿಪ್ಪು ಜಯಂತಿಗೆ ಸೂಕ್ತ ಭದ್ರತೆ ಕೈಗೊಳ್ಳಲು ಸಲಹೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕಳೆದ ಬಾರಿ ಯಾವ ರೀತಿಯಲ್ಲಿ ಜಯಂತಿ ನಡೆಯಿತು. ಈಗ ಪರಿಸ್ಥಿತಿ ಹೇಗಿದೆ ಎಂಬ ಬಗ್ಗೆ ಮಾಹಿತಿ ಪಡೆದಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಪ್ರಮುಖ ಆಚರಣೆಗಳು ಹಾಗೂ ಉತ್ಸವಗಳ ಬಗ್ಗೆ ಅವರ ಸಲಹೆ ಸೂಚನೆ ನೀಡಿದರು’ ಎಂದರು.

ಗಣಿ ಗಲಾಟೆ, ಕಟ್ಟುನಿಟ್ಟಿನ ಕ್ರಮ: ‘ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಗಣಿಗಾರಿಕೆ ಮೇಲೆ ತಾತ್ಕಾಲಿಕ ನಿಷೇಧ ಹೇರಲಾಗಿದೆ. ಜಿಲ್ಲಾಧಿಕಾರಿ ಆದೇಶದಂತೆ ಗಣಿ ಚಟುವಟಕೆಗಳನ್ನು ನಡೆಸದಂತೆ ಗಣಿ ಪ್ರದೇಶದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಗಣಿ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದ್ದು ಟ್ರಕ್‌ ಗಳ ಕಲ್ಲು ಸಾಗಣೆ ರದ್ದು ಮಾಡಲಾಗಿದೆ. ಜಿಲ್ಲಾಡಳಿತ ಕೈಗೊಳ್ಳುವ ನಿರ್ಧಾರದಂತೆ ಮುಂದೆಯೂ ಭದ್ರತೆ ವಹಿಸಲಾಗುವುದು’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT