ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾರ್ಥ ರಾಜಕಾರಣಕ್ಕಾಗಿ ಟಿಪ್ಪು ಟೀಕೆ

Last Updated 11 ನವೆಂಬರ್ 2017, 5:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಟಿಪ್ಪು ಸುಲ್ತಾನ್‌ ಅವರು ರಾಜ್ಯಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ಆದರೆ ಕೆಲವರು ತಮ್ಮ ಸ್ವಾರ್ಥದ ರಾಜಕಾರಣಕ್ಕಾಗಿ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಿಸುತ್ತಿರುವುದನ್ನು ಟೀಕಿಸುತ್ತಿದ್ದಾರೆ’ ಎಂದು ಶಾಸಕ ಡಾ.ಕೆ.ಸುಧಾಕರ್‌ ಹೇಳಿದರು. ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದೇಶದ ಸ್ವಾತಂತ್ರ್ಯಕ್ಕಾಗಿ ಹಿಂದೂಗಳು ಮಾತ್ರ ಹೋರಾಡಿಲ್ಲ. ಎಲ್ಲ ಸಮುದಾಯಗಳು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಶ್ರಮಿಸಿವೆ. ಒಬ್ಬ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರನಾಗಿದ್ದ ಟಿಪ್ಪು ಬ್ರಿಟಿಷರೊಂದಿಗೆ ದಿಟ್ಟತನ, ಶೌರ್ಯದಿಂದ ಹೋರಾಡಿ ಮಡಿದರು’ ಎಂದು ಅಭಿಪ್ರಾಯಪಟ್ಟರು.

‘ಟಿಪ್ಪು ಅವರು ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣ, ಸಂಗೀತ, ಸಾಹಿತ್ಯದ ಜತೆಗೆ ಯುದ್ಧದ ತರಬೇತಿ ಪಡೆದಿದ್ದರು. ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ ಟಿಪ್ಪು ತಮ್ಮ ಸ್ವಾಭಿಮಾನ ಬಿಟ್ಟುಕೊಡದೆ ಮಕ್ಕಳನ್ನು ಅಡವಿಟ್ಟು ಹೋರಾಡಿದ್ದು ಅವರ ಉತ್ಕಟ ದೇಶಪ್ರೇಮವನ್ನು ಬಿಂಬಿಸುತ್ತದೆ. ಇಂತಹ ದೇಶಪ್ರೇಮಿಯ ಜಯಂತಿ ಆಚರಣೆಗೆ ವಿರೋಧಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ರಾಜ್ಯ ಸರ್ಕಾರ ಎಲ್ಲ ಜಯಂತಿಗಳಂತೆ ಪ್ರತಿ ವರ್ಷ ಟಿಪ್ಪು ಜಯಂತಿ ಆಚರಿಸಲು ನಿರ್ಧರಿಸಿದೆ. ಆದರೆ ಬಿಜೆಪಿಯ ಕೆಲ ನಾಯಕರು ಮುಂದಿನ ವರ್ಷ ನಾವು ಅಧಿಕಾರಕ್ಕೆ ಬಂದರೆ ಈ ಜಯಂತಿ ರದ್ದು ಮಾಡುತ್ತೇವೆ ಎಂಬ ಹಗಲು ಕನಸು ಕಾಣುತ್ತಿದ್ದಾರೆ. ರಾಜಕೀಯವಾಗಿ ಈ ಜಯಂತಿಯನ್ನು ವಿರೋಧಿಸುತ್ತಿರುವವರು ರಾಜ್ಯದಲ್ಲಿ ಕೋಮುವಾದ, ಕಲಹ, ವೈಷಮ್ಯಗಳನ್ನು ಸೃಷ್ಟಿಸಲು ಮುಂದಾಗುತ್ತಿದ್ದಾರೆ’ ಎಂದು ಆರೋಪಿಸಿದರು.

ಚಿಂತಾಮಣಿಯ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಎಂ.ಎನ್.ರಘು ತಮ್ಮ ಉಪನ್ಯಾಸದಲ್ಲಿ, ‘ನೂರು ದಿನ ಇಲಿಯಾಗಿ ಬದುಕುವುದಕ್ಕಿಂತ ಒಂದು ದಿನ ಹುಲಿಯಾಗಿ ಬದುಕಬೇಕು ಎಂದು ಪ್ರತಿಪಾದಿಸುತ್ತಿದ್ದ ಟಿಪ್ಪು ಅದೇ ರೀತಿ ಬದುಕಿದವರು. ಬ್ರಿಟಿಷರಿಗೆ ದುಃಸ್ವಪ್ನವಾಗಿ ಕಾಡಿದ ಟಿಪ್ಪು ಕೊನೆಯವರೆಗೂ ಅವರಲ್ಲಿ ಭೀತಿ ಮೂಡಿಸಿದ್ದ’ ಎಂದು ಹೇಳಿದರು.

‘ಟಿಪ್ಪು ತಂದೆ ಹೈದರಾಲಿ ಅವರು ರಾಕೇಟುಗಳನ್ನು ಅಭಿವೃದ್ಧಿಪಡಿಸಿ ಅದರ ಒಂದು ಪಡೆಯನ್ನೇ ಇಟ್ಟಿದ್ದರೆ, ಟಿಪ್ಪು ಕಬ್ಬಿಣದ ಹೊರಕವಚ ಹೊಂದಿದ ಮೈಸೂರು ರಾಕೇಟುಗಳನ್ನು ಅಭಿವೃದ್ಧಿಪಡಿಸಿದ್ದರು. ಆ ಕಾಲಘಟ್ಟದಲ್ಲಿ ಬ್ರಿಟಿಷರ ಬಳಿ ಕೂಡ ಈ ರಾಕೇಟ್ ತಂತ್ರಜ್ಞಾನ ಇರಲಿಲ್ಲ. ಆದ್ದರಿಂದಲೇ ಟಿಪ್ಪು ಮೊದಲ ಯುದ್ಧಗಳನ್ನು ಗೆಲ್ಲಲು ಸಾಧ್ಯವಾಯಿತು’ ಎಂದು ತಿಳಿಸಿದರು.

‘ಟಿಪ್ಪು ಆಡಳಿತಾವಧಿಯಲ್ಲಿ ನೀರಾವರಿಗೆ ಆದ್ಯತೆ ನೀಡಲಾಗಿತ್ತು. ರೇಷ್ಮೆ ಬೆಳೆ ಪರಿಚಯಿಸುವ ಕೆಲಸವಾಯಿತು. ಇದರಿಂದ ರೈತರಿಗೆ ತುಂಬಾ ಅನುಕೂಲವಾಗಿದೆ. ಮೈಸೂರನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ. ಜಿಲ್ಲೆಯಲ್ಲಿ ಕೂಡ ಇಂದಿಗೂ ಟಿಪ್ಪುವಿಗೆ ಸಂಬಂಧಿಸಿದ ಎರಡು ಕೋಟೆಗಳಿವೆ’ ಎಂದರು.

ವಾರ್ತಾ ಇಲಾಖೆಯಿಂದ ಹೊರತಂದ ಟಿಪ್ಪು ಸುಲ್ತಾನ್‌ ಕುರಿತಾದ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಪಿ.ಎನ್‌.ಕೇಶವರೆಡ್ಡಿ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎನ್.ಅನುರಾಧಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಎಂ,ಮುನಿಯಪ್ಪ, ತಹಶೀಲ್ದಾರ್‌ ಕೆ.ನರಸಿಂಹಮೂರ್ತಿ, ಡಿವೈಎಸ್‌ಪಿ ಪ್ರಭುಶಂಕರ್‌, ನಗರಸಭೆ ಸದಸ್ಯ ರಫೀಕ್‌, ಸಾಹಿತಿ ಸುಭಾನ್‌ ಪ್ರಿಯಾ, ಮುಖಂಡರಾದ ಅಮಾನುಲ್ಲಾ, ಜಾವಿದ್‌, ಅಜೀ ಸಾಬ್‌, ನರಸಿಂಹಮೂರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT