ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ಕಣ್ಗಾವಲಿನಲ್ಲಿ ಸೌಲಭ್ಯ

Last Updated 11 ನವೆಂಬರ್ 2017, 8:33 IST
ಅಕ್ಷರ ಗಾತ್ರ

ಮಂಗಳೂರು: ಸ್ಮಾರ್ಟ್‌ ಸಿಟಿ ಯೋಜನೆಯ ಬಹುಮುಖ್ಯ ಭಾಗವಾಗಿರುವ ಪಾನ್‌ ಸಿಟಿ ಯೋಜನೆಯ ಅನುಷ್ಠಾನಕ್ಕೆ ಸಿದ್ಧತೆಗಳು ಆರಂಭವಾಗಿವೆ. ತಂತ್ರಜ್ಞಾನದ ಕಣ್ಗಾವಲಿನಲ್ಲಿ ಸಂಚಾರ, ಸೌಕರ್ಯಗಳು ನಗರದ ನಾಗರಿಕರಿಗೆ ದೊರೆಯಲಿದೆ.

ಹೌದು, ನಗರದ ರಸ್ತೆಯಲ್ಲಿ ಹೆಜ್ಜೆಗೊಂದರಂತೆ ಸಿಸಿಟಿವಿ ಕ್ಯಾಮೆರಾಗಳು, ಸಂಚಾರ ವ್ಯವಸ್ಥೆಗೆ ಧಕ್ಕೆ ತಂದರೆ ಸ್ವಯಂಚಾಲಿತ ಕ್ರಮ, ನಳ್ಳಿಯಲ್ಲಿ ನೀರು ಬಾರದಿದ್ದರೆ, ಅದನ್ನು ಪತ್ತೆ ಹಚ್ಚಲು ತಂತ್ರಜ್ಞಾನದ ಕಣ್ಗಾವಲು, ನಳ್ಳಿ ಲೀಕೇಜ್‌ ಆದರೂ ತಂತ್ರಜ್ಞಾನದ ಮೂಲಕವೇ ಹುಡುಕಾಟ, ಬಸ್‌ಗಳ ಟ್ರ್ಯಾಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ, ತುರ್ತು ಪಬ್ಲಿಕ್‌ ರೆಸ್ಪಾನ್ಸ್‌ ಬಟನ್‌ ಅಳವಡಿಕೆ, ಹೀಗೆ ಹತ್ತು ಹಲವು ಸೌಲಭ್ಯಗಳನ್ನು ಒದಗಿಸುವ ‘ಸೆಂಟ್ರಲ್‌ ಕಮಾಂಡ್‌ ಸೆಂಟರ್‌’ ಆರಂಭಕ್ಕೆ ಇದೀಗ ವೇದಿಕೆ ಸಿದ್ಧವಾಗಿದೆ.

ಕೇಂದ್ರ ಸರ್ಕಾರದ ‘ಸ್ಮಾರ್ಟ್‌ ಸಿಟಿ’ ನಿರ್ವಹಣೆಯ ದೃಷ್ಟಿಯಿಂದ ‘ಸೆಂಟ್ರಲ್‌ ಕಮಾಂಡ್‌ ಸೆಂಟರ್‌’ ಅನ್ನು ಸುಮಾರು ₹60 ಕೋಟಿ ವೆಚ್ಚದಲ್ಲಿ ನಗರದ ಪಾಲಿಕೆಯ ಕಟ್ಟಡದ 3ನೇ ಮಹಡಿಯಲ್ಲಿ ಸಿದ್ಧಗೊಳ್ಳಲಿದೆ. ಈ ಸೆಂಟರ್‌ ನಿರ್ಮಾಣಕ್ಕೆ ಯೋಜನಾ ವರದಿ ಸಿದ್ಧಗೊಳಿಸಿದ್ದು, ತಾಂತ್ರಿಕ ಒಪ್ಪಿಗೆಗಾಗಿ ಕೆಯುಐಡಿಎಫ್‌ಸಿಗೆ ಸಲ್ಲಿಸಲಾಗಿದೆ. ಒಪ್ಪಿಗೆ ದೊರೆತ ಬಳಿಕ, ಬೆಂಗಳೂರಿನ ಉನ್ನತ ಮಟ್ಟದ ಸಮಿತಿಯಿಂದ ಆಡಳಿತಾತ್ಮಕ ಅನುಮತಿ ಪಡೆಯಲಾಗುತ್ತದೆ. ಬಳಿಕ ಟೆಂಡರ್‌ ಕರೆದು ಈ ಸೆಂಟರ್‌ ಕಾರ್ಯಾರಂಭ ಮಾಡಲಿದೆ. ಟೆಂಡರ್‌ ಪಡೆದವರು 5 ವರ್ಷ ಈ ಕೇಂದ್ರದ ನಿರ್ವಹಣೆ ಮಾಡಿ, ನಂತರ ಪಾಲಿಕೆಗೆ ಹಸ್ತಾಂತರಿಸಲಾಗುತ್ತದೆ.

ಸೆಂಟ್ರಲ್‌ ಕಮಾಂಡ್‌ ಸೆಂಟರ್‌ನಲ್ಲಿ ಇರಬೇಕಾದ ಎಲ್ಲ ರೀತಿಯ ವಿಶ್ವದರ್ಜೆಯ ಸಾಫ್ಟ್‌ವೇರ್‌, ಎಲ್‌ಇಡಿ ಟಿವಿ ಸೇರಿದಂತೆ ಅಗತ್ಯ ತಾಂತ್ರಿಕ ಉಪಕರಣಗಳನ್ನು, ಗುತ್ತಿಗೆ ವಹಿಸಿಕೊಂಡ ಕಂಪೆನಿಯೇ ಸಿದ್ಧಪಡಿಸಲಿದೆ. ಇಲ್ಲಿ ಕಾರ್ಯ ನಿರ್ವಹಿಸುವ ನುರಿತ ತಾಂತ್ರಿಕ ಸಿಬ್ಬಂದಿಯನ್ನೂ ಗುತ್ತಿಗೆ ಸಂಸ್ಥೆಯೇ 5 ವರ್ಷಗಳವರೆಗೆ ನಿರ್ವಹಣೆ ಮಾಡಲಿದೆ.
ಕೇಂದ್ರಿಕೃತ ವ್ಯವಸ್ಥೆ: ಸ್ಮಾರ್ಟ್‌ ಸಿಟಿಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಹಂಪನಕಟ್ಟೆ, ರಥಬೀದಿ, ಬಂದರು ವ್ಯಾಪ್ತಿ ಸೇರಿದಂತೆ ಒಟ್ಟು 1,628 ಎಕರೆ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಇದರ ಜತೆಗೆ ನಗರದ ಉಳಿದ ಭಾಗಗಳಿಗೂ ತಾಂತ್ರಿಕ ಸೌಕರ್ಯಗಳನ್ನು ಪಾನ್‌ ಸಿಟಿ ಯೋಜನೆಯ ಮೂಲಕ ಅಳವಡಿಸಲಾಗುತ್ತದೆ. ಇದರ ಭಾಗವಾಗಿ ನಗರ ವ್ಯಾಪ್ತಿಯ ಬಹುಮುಖ್ಯ ಸಾರ್ವಜನಿಕ ಸ್ಥಳಗಳ ಸಿಸಿಟಿವಿ ಕ್ಯಾಮೆರಾಗಳು ಸೆಂಟ್ರಲ್‌ ಕಮಾಂಡ್‌ ಸೆಂಟರ್‌ನ ಜತೆಗೆ ಜೋಡಣೆಯಾಗಲಿದೆ. ಬಳಿಕ, ನಗರದ ಮಾಲ್‌ಗಳು, ಪುರಭವನ, ಪಾಲಿಕೆ, ಪಾರ್ಕ್‌, ಅಂಗಡಿಗಳು, ಸಭಾಗೃಹ ಸಹಿತ ಸಾರ್ವಜನಿಕ ವ್ಯಾಪ್ತಿಯಲ್ಲಿ ಬಳಕೆಯಲ್ಲಿರುವ ಎಲ್ಲ ಸಿಸಿಟಿವಿ ಕ್ಯಾಮೆರಾಗಳನ್ನು ಈ ಕೇಂದ್ರಕ್ಕೆ ಜೋಡಣೆ ಮಾಡಲಾಗುತ್ತಿದೆ.

ಈಗಾಗಲೇ ಭೂಗತ ಕೇಬಲ್‌ ಅಳವಡಿಕೆ ಕಾರ್ಯವನ್ನು ನಗರದ ವಿವಿಧೆಡೆ ಆರಂಭಿಸಲಾಗಿದ್ದು, ಭೂಗತವಾಗುವ ವಿದ್ಯುತ್ ಹಾಗೂ ಇತರ ಕೇಬಲ್‌ಗಳಲ್ಲಿ ಯಾವುದೇ ವ್ಯತ್ಯಾಸ ಉಂಟಾದಲ್ಲಿ ಈ ಕೇಂದ್ರಕ್ಕೆ ಸ್ಪಷ್ಟ ಮಾಹಿತಿ ದೊರೆಯಲಿದೆ. ತೊಂದರೆ ಉಂಟಾಗಿರುವ ನಿರ್ದಿಷ್ಟ ಸ್ಥಳವನ್ನು ಪತ್ತೆ ಮಾಡುವುದು ಸುಲಭವಾಗಲಿದೆ.

ಸ್ಮಾರ್ಟ್‌ ನೀರು ಪೂರೈಕೆ: ನಗರದಲ್ಲಿ ಮೇಲಿಂದ ಮೇಲೆ ನೀರು ಪೋಲಾಗುವ ದೂರುಗಳು ಕೇಳಿ ಬರುತ್ತಲೇ ಇವೆ. ಆದರೆ, ಇನ್ನು ಮುಂದೆ, ಎಲ್ಲಿಯೇ ಸೋರಿಕೆಯಾದರೂ ತಕ್ಷಣವೇ ಮಾಹಿತಿ ರವಾನೆ ಆಗುತ್ತದೆ.

ನಗರದ ನಳ್ಳಿಗಳನ್ನೂ ಸ್ಮಾರ್ಟ್‌ ಮಾಡಲು ಸಿದ್ಧತೆ ನಡೆಯುತ್ತಿದ್ದು, ಎಲ್ಲ ನಳ್ಳಿಗಳ ಲಿಂಕ್‌ಗಳನ್ನು ತಂತ್ರಜ್ಞಾನದ ಮೂಲಕ ಸೆಂಟ್ರಲ್‌ ಕಮಾಂಡ್‌ ಸೆಂಟರ್‌ಗೆ ತಲುಪಿಸಲಾಗುತ್ತದೆ. ನೀರು ಪೋಲಾದರೆ, ಪೈಪ್‌ನಲ್ಲಿ ದೋಷ ಕಂಡುಬಂದರೆ ತಕ್ಷಣವೇ ಅದರ ಮಾಹಿತಿ ಸೆಂಟರ್‌ಗೆ ತಲುಪಲಿದ್ದು, ಅಲ್ಲಿಂದಲೇ ಸರಿಪಡಿಸಲಾಗುತ್ತದೆ.
ಕುಡಿಯುವ ನೀರನ್ನು ಪ್ರತ್ಯೇಕ ನಳ್ಳಿಯ ಮೂಲಕ ನೀಡಿದರೆ, ಇತರ ಬಳಕೆಗೆ ಸಂಸ್ಕರಿತ ನೀರನ್ನು ನೀಡುವ ಪ್ರತ್ಯೇಕ ನಳ್ಳಿ ವ್ಯವಸ್ಥೆ ಜಾರಿಗೂ ಕ್ರಿಯಾ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT