ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಮನೆ ಶೀಘ್ರ ಹಂಚಿಕೆ ಮಾಡಿ

Last Updated 11 ನವೆಂಬರ್ 2017, 8:58 IST
ಅಕ್ಷರ ಗಾತ್ರ

ಕನಕಪುರ: ಇಂಧನ ಸಚಿವ ಡಿ.ಕೆ.ಶಿವಕುಮಾರ್‌ ಅವರು ಸಂಸದ ಡಿ.ಕೆ.ಸುರೇಶ್‌ ಅವರೊಂದಿಗೆ ನಗರಸಭೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೆಳೆಕೋಟೆಯಲ್ಲಿ ಬಡವರಿಗಾಗಿ ನಿರ್ಮಿಸುತ್ತಿರುವ ಸ್ಲಂ ಬೋರ್ಡಿನ ಮನೆಗಳನ್ನು ವೀಕ್ಷಣೆ ಮಾಡಿದರು. ಕಾಮ
ಗಾರಿಯನ್ನು ಗುಣಮಟ್ಟದಲ್ಲಿ ಶೀಘ್ರವೇ ಪೂರ್ಣಗೊಳಿಸಿ ಬಡವರಿಗೆ ಹಂಚಿಕೆ ಮಾಡುವಂತೆ ಸೂಚನೆ ನೀಡಿದರು.

ದೇಗುಲಮಠ ರಸ್ತೆಯಲ್ಲಿರುವ ಮುಸ್ಲಿಂ ಸಮುದಾಯದ ಜನತೆಗೆ ಸ್ಲಂ ಬೋರ್ಡಿನಿಂದ ನೂತನವಾಗಿ ಸಮುಚ್ಚಯ ಕಟ್ಟಡ ನಿರ್ಮಾಣಕ್ಕೆ ಗುದ್ದಲಿಪೂಜೆಯನ್ನು ನೆರವೇರಿಸಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿದರು. ಮಳಗಾಳ್‌ ಸೇತುವೆ ಬಳಿ ನಿರ್ಮಾಣವಾಗುತ್ತಿರುವ ಅಂಬೇಡ್ಕರ್‌ ಭವನಕ್ಕೆ ಭೇಟಿ ನೀಡಿ ಸಂಪೂರ್ಣ ಕಟ್ಟಡವನ್ನು ವೀಕ್ಷಿಸಿದರು. ಭವನದ ಮುಂಭಾಗದಲ್ಲಿರುವ ಖಾಲಿ ಜಾಗವನ್ನು ಸಮತಟ್ಟು ಮಾಡಿ ವಿಶಾಲವಾದ ಜಾಗ ಮಾಡುವಂತೆ ತಿಳಿಸಿದರು. ಒಳಾಂಗಣ ಮತ್ತು ಹೊರಾಂಗಣವನ್ನು ಶೀಘ್ರವೇ ಪೂರ್ಣಗೊಳಿಸುವಂತೆ ಹಾಗೂ ಭವನದ ಎಲ್ಲಾ ಕೆಲಸವನ್ನು ಮುಗಿಸುವಂತೆ ನಿರ್ಮಾಣದಾರರಿಗೆ ತಿಳಿಸಿದರು.

ಲಕ್ಷ್ಮಣ್‌ ಲೇಔಟ್‌ನಲ್ಲಿ ನಿರ್ಮಾಣ ಮಾಡುತ್ತಿರುವ ವಾಲ್ಮೀಕಿ ಭವನಕ್ಕೆ ಭೇಟಿ ನೀಡಿ ಕಾಮಗಾರಿಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಾಮಗಾರಿ ಪೂರ್ಣಗೊಳ್ಳುತ್ತಿದ್ದು ಇನ್ನೂ ಹಣ ಬಿಡುಗಡೆಯಾಗಿಲ್ಲವೆಂದು ತಿಳಿಸಿದಾಗ ಶೀಘ್ರವೇ ಸಂಬಂಧಪಟ್ಟವರೊಂದಿಗೆ ಮಾತನಾಡಿ ಹಣ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.

ನಂತರ ಕರಡಿ ಗುಡ್ಡೆ ಬಳಿ ಸೋಮಣ್ಣ ಲೇಔಟ್‌ನಲ್ಲಿ ನಗರಸಭೆ ವ್ಯಾಪ್ತಿಯ ನಿವೇಶನರಹಿತ ಬಡವರಿಗೆ ನಿರ್ಮಾಣ ಮಾಡುತ್ತಿರುವ ಮನೆಗಳನ್ನು ವೀಕ್ಷಣೆ ಮಾಡಿ ಎಲ್ಲಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿರುವ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು, ಹಂಚಿಕೆದಾರರಿಗೆ ಈಗಾಗಲೇ ನೋಂದಣಿಯಾಗಿದ್ದು ಅವರಿಗೆ ಹಸ್ತಾಂತರ ಮಾಡುವ ಕೆಲಸ ಬಾಕಿ ಉಳಿದಿರುವುದಾಗಿ ಆಯುಕ್ತೆ ರಮಾಮಣಿ ತಿಳಿಸಿದರು.

ಮನೆ ಪಡೆಯುವವರು ಹೆಚ್ಚುವರಿ ಕೆಲಸ ಮಾಡಿಕೊಳ್ಳುವ ಅಪೇಕ್ಷೆಯಿದ್ದರೆ ಅವರಿಗೆ ತಿಳಿಸಿ, ಅವರು ಸ್ವಂತ ಖರ್ಚಿನಲ್ಲಿ ಕೆಲಸ ಮಾಡಿಸಿಕೊಳ್ಳಲಿ, ಇಲ್ಲವಾದಲ್ಲಿ ಅವರ ಹೆಸರಿಗೆ ಹಂಚಿಕೆಯಾಗಿರುವ ಮನೆಗಳನ್ನು ನೋಂದಣಿ ನಂಬರ್‌ ಪ್ರಕಾರ ಹಂಚಿಕೆ ಮಾಡಿ ಹಸ್ತಾಂತರ ಮಾಡಿ ಎಂದು ತಿಳಿಸಿದರು.

ಹೌಸಿಂಗ್‌ ಬೋರ್ಡ್‌ ಬಡಾವಣೆಯಲ್ಲಿ ನೂತನವಾಗಿ ನಿರ್ಮಾಣ ಮಾಡಿದ್ದ ವಸತಿ ನಿಲಯಗಳಿಗೆ ಭೇಟಿ ನೀಡಿ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿದರು. ಎಲ್ಲಾ ಕೆಲಸ ಮುಗಿದಿರುವುದರಿಂದ ಶೀಘ್ರವೇ ಉದ್ಘಾಟನೆ ಮಾಡಿ ಇಲಾಖೆಗೆ ಹಸ್ತಾಂತರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಉತ್ತಮ ರೀತಿಯಲ್ಲಿ ವಸತಿ ನಿಲಯ ನಿರ್ಮಾಣ ಮಾಡಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ದಾಖಲಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಂಸದ ಡಿ.ಕೆ.ಸುರೇಶ್‌, ವಿಧಾನ ಪರಿಷತ್‌ ಸದಸ್ಯ ಎಸ್‌.ರವಿ, ತಹಶೀಲ್ದಾರ್‌ ಆರ್‌.ಯೋಗಾನಂದ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾಧಿಕಾರಿ ಶಿವರಾಮ್‌, ನಗರಸಭೆ ಆಯುಕ್ತೆ ರಮಾಮಣಿ, ಅಧ್ಯಕ್ಷ ಕೆ.ಎನ್‌.ದಿಲೀಪ್‌, ಉಪಾಧ್ಯಕ್ಷ ಕೆ.ಜಗನ್ನಾಥ್‌, ತಾಪಂ ಅಧ್ಯಕ್ಷ ರಾಜಶೇಖರ್‌, ಮುಖಂಡ ಎಂ.ಪುರುಷೋತಮ್‌, ರಾಜ್ಯ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಕೆಂಪರಾಜು, ಜಿಲ್ಲಾ ಘಟಕದ ಅಧ್ಯಕ್ಷ ಅನಿಲ್‌ಕುಮಾರ್‌, ತಾಲ್ಲೂಕು ಅಧ್ಯಕ್ಷ ಮಧು, ಜಿಲ್ಲಾ ಮತ್ತು ತಾಪಂ ಸದಸ್ಯರು, ಕಾಂಗ್ರೆಸ್‌ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT