ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ–ಷಾ ನಿದ್ದೆಗೆಡಿಸಿರುವ ಸಿದ್ದರಾಮಯ್ಯ

Last Updated 11 ನವೆಂಬರ್ 2017, 9:40 IST
ಅಕ್ಷರ ಗಾತ್ರ

ಇಂಡಿ (ವಿಜಯಪುರ): ‘ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕೈಗೊಂಡ ಅನೇಕ ಅಭಿವೃದ್ಧಿ ಯೋಜನೆಗಳು ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ನಿದ್ದೆಗೆಡಿಸಿವೆ’ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಪಟ್ಟಣದಲ್ಲಿ ಶುಕ್ರವಾರ ನಡೆದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಸಾಧನೆಯಿಂದ ಕಂಗಾಲಾಗಿರುವ ಬಿಜೆಪಿ ಪ್ರಮುಖರು, ಕಾಂಗ್ರೆಸ್‌ನ ಮುಖಂಡರ ವಿರುದ್ಧ ಹಲವು ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದ್ಯಾವುದಕ್ಕೂ ನಾವು ಅಂಜಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರ ಜನಪರ ಯೋಜನೆ ಜನರ ಮನಸ್ಸಿಗೆ ಮುಟ್ಟಿವೆ. ಈ ವಿಷಯ ಬಿಜೆಪಿ ನಾಯಕರಿಗೆ ಗೊತ್ತಿದೆ. ಹೀಗಾಗಿ ದುಬಾರಿ ಬಸ್ ಖರೀದಿಸಿ, ಪರಿವರ್ತನಾ ರ‍್ಯಾಲಿ ನಡೆಸಿ, ಪ್ರಚಾರ ಮಾಡುತ್ತಿದ್ದಾರೆ, ಕೇಂದ್ರ ಸರ್ಕಾರ ತನ್ನ ಅಧಿಕಾರ ದುರಪಯೋಗಪಡಿಸಿಕೊಂಡು, ಆದಾಯ ತೆರಿಗೆ ಸೇರಿದಂತೆ ವಿವಿಧ ಅಸ್ತ್ರಗಳನ್ನು ಬಳಸಿ ಕಾಂಗ್ರೆಸ್ ನಾಯಕರಿಗೆ ತೊಂದರೆ ನೀಡುತ್ತಿದೆ’ ಎಂದು ದೂರಿದರು.

‘ರಾಜಕೀಯ ಕಾಲ ಘಟ್ಟ ಇಂದು ಬದಲಾಗಿದೆ. ಈ ಹಿಂದೆ ಸಹಕಾರ ಸಂಘಗಳನ್ನು ರಚಿಸಿ, ಸಾಮಾಜಿಕ ಹಿತಕ್ಕಾಗಿಯೇ ದುಡಿದ ವ್ಯಕ್ತಿಗಳು ಉನ್ನತ ಸ್ಥಾನಮಾನ ಪಡೆದುಕೊಳ್ಳುತ್ತಿದ್ದರು. ಆದರೆ ಈ ರೀತಿಯ ಸೇವೆ ಮಾಡಿದವರಿಗೆ ಇಂದು ಉನ್ನತ ಹುದ್ದೆಗಳು ದೊರಕುತ್ತಿಲ್ಲ’ ಎಂದು ಎಚ್‌.ಕೆ.ಪಾಟೀಲ ವಿಷಾದ ವ್ಯಕ್ತಪಡಿಸಿದರು.

‘ಅನೇಕರು ವೈಯಕ್ತಿಕ ಆಸ್ತಿ ಮಾಡಿಕೊಳ್ಳಲು ಬಯಸುತ್ತಾರೆ. ಆದರೆ ಇಂಡಿ ಶಾಸಕ ಯಶವಂತರಾಯಗೌಡ ಮಾತ್ರ ರೈತರಿಗಾಗಿ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಂತಹ ಮಹತ್ವದ ಆಸ್ತಿಯನ್ನೇ ಸಂರಕ್ಷಿಸಿದ್ದಾರೆ. ಕೆಲವರು ಕಬಳಿಸಬೇಕೆಂದು ಹೊಂಚು ಹಾಕಿದ್ದ ಈ ಆಸ್ತಿಯನ್ನು ಸಂರಕ್ಷಿಸಿ, ಅನೇಕ ಹೋರಾಟ ಮಾಡಿ ರೈತರ ಆಸ್ತಿ ರೈತರಿಗೆ ಉಳಿಯುವಂತೆ ಮಾಡಿದ್ದಾರೆ’ ಎಂದು ಪ್ರಶಂಸಿಸಿದರು.

ಇಂಡಿಯಲ್ಲಿ ಅಚ್ಛೇ ದಿನ: ಎಂ.ಬಿ.
‘ಬಿಜೆಪಿ ನಾಯಕರ ಅಚ್ಛೇ ದಿನ ಬಂದಿಲ್ಲ. ಆದರೆ ಕಾಂಗ್ರೆಸ್ ಮಾತ್ರ ಜನರಿಗೆ ಅಚ್ಛೇ ದಿನ ನೀಡುತ್ತಿದೆ. ಶಾಸಕ ಯಶವಂತರಾಯಗೌಡ ಇಂಡಿ ಜನರಿಗೆ ಅಭಿವೃದ್ಧಿಯ ಅಚ್ಛೇ ದಿನ ತಂದಿದ್ದಾರೆ’ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ಮೆಚ್ಚುಗೆ ವ್ಯಕ್ತಪಡಿಸಿದರು.

‘ದಶಕಗಳಿಂದ ಕನಸಾಗಿಯೇ ಉಳಿದಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಪುನರಾರಂಭ, ಸುಸಜ್ಜಿತ ಮಿನಿ ವಿಧಾನಸೌಧ, ಕೆರೆಗಳಿಗೆ ನೀರು ತುಂಬಿಸಿರುವುದು ಸೇರಿದಂತೆ ಅನೇಕ ರೀತಿಯ ಅಭಿವೃದ್ಧಿಯ ಕಾರ್ಯ ಕೈಗೊಳ್ಳುವ ಮೂಲಕ ಇಂಡಿಯಲ್ಲಿ ಅಚ್ಛೇ ದಿನ ಬರುವಂತೆ ಮಾಡಿದ್ದಾರೆ’ ಎಂದರು.

ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿ ‘ಮತಕ್ಷೇತ್ರದ ಪ್ರಗತಿಗೆ ಪೂರಕವಾದ ಬೇಡಿಕೆಗಳನ್ನು ಶೇ 100ಕ್ಕೆ 100ರಷ್ಟು ಈಡೇರಿಸಿದ ಶ್ರೇಯಸ್ಸು ಸಿದ್ದರಾಮಯ್ಯ ಅವರಿಗೆ ಸಲ್ಲಬೇಕು. ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಕಾಲದಲ್ಲಿದ್ದ ವಾತಾವರಣ ಇದೀಗ ಮತ್ತೆ ನಿರ್ಮಾಣ ಗೊಂಡಿದೆ’ ಎಂದು ಹೇಳಿದರು.

ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ಶಿವಾನಂದ ಪಾಟೀಲ, ರಾಜ್ಯ ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸಿ.ಎಸ್.ನಾಡಗೌಡ, ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ, ಕರ್ನಾಟಕ ಸಾಬೂನು ಮಾರ್ಜಕ ನಿಗಮದ ಅಧ್ಯಕ್ಷ ಪ್ರೊ.ರಾಜು ಆಲಗೂರ, ಜಿ.ಪಂ. ಅಧ್ಯಕ್ಷೆ ನೀಲಮ್ಮ ಮೇಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಪ್ರಕಾಶ ರಾಠೋಡ, ಮಾಜಿ ಶಾಸಕ ಮನೋಹರ ಐನಾಪುರ, ಡಿ.ಸಿ ಕೆ.ಬಿ.ಶಿವಕುಮಾರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT