ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾಲಕೊಂಡ ಮೇಷ್ಟ್ರ ಕೋಣೆಯ ಮಕ್ಕಳು

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಹಾವೇರಿ ಜಿಲ್ಲೆಯ ಶಿಗ್ಗಾಂವ್ ಬಳಿ ಕ್ಯಾಲಕೊಂಡ ಎಂಬ ಹಳ್ಳಿ. ಅಲ್ಲಿ ಒಲೆ ಮೇಲೆ ಅನ್ನ ಬೇಯುತ್ತದೆ. ಬೇಯಿಸುವ ಕೈಗಳು ದಿನವೂ ಬೇರೆ ಬೇರೆಯಾಗಬಹುದು. ತಿನ್ನುವವರೆಷ್ಟೆನ್ನುವ ಲೆಕ್ಕವನ್ನೂ ಇಡುವುದಿಲ್ಲ; ಇಡಲಾಗದು. ಹಸಿವಾದರೆ ಉಣ್ಣುವ, ಜ್ಞಾನದ ಹಸಿವಾದರೆ ಓದುವ–ಬರೆಯುವ, ಅನುಮಾನ ಬಂದರೆ ಸಂವಾದಕ್ಕೆ ಇಳಿಯುವ ಅದನ್ನು ರೂಪಕವಾಗಿ ‘ಅನ್ನದ ಮನೆ’ ಎನ್ನಲಡ್ಡಿಯಿಲ್ಲ. ಮೂವತ್ತೈದು ನಲವತ್ತು ಮಕ್ಕಳಿಗೆ ಅಲ್ಲಿ ಜ್ಞಾನದಾಸೋಹ.

ಅದು ಆ ಹಳ್ಳಿ ಶಾಲೆಯ ವಿಶೇಷ ಶಿಕ್ಷಕರ ಕೋಣೆ. ಶಾಲೆ ಬಿಟ್ಟ ನಂತರವೂ ಅದೆಷ್ಟೋ ಮಕ್ಕಳ ಕಲರವ ಅಲ್ಲಿ ನಡೆಯುವುದರಿಂದ ಅದಕ್ಕೆ ಮನೆಯ ಸ್ವರೂಪ ಬಂದಿದೆ. ಮೇಷ್ಟರು ಇರಲಿ, ಬಿಡಲಿ ಕೋಣೆಯ ಕದ ಮುಚ್ಚುವುದಿಲ್ಲ. ಅಲ್ಲಿ ನಾಟಕದ ತಾಲೀಮು ನಡೆಯುತ್ತದೆ. ಅರ್ಥವಾಗದ ವಿಷಯವನ್ನು ಅರ್ಥ ಮಾಡಿಕೊಳ್ಳುವ ದಾರಿ ಹುಡುಕಲಾಗುತ್ತದೆ. ಮಕ್ಕಳ ಪೋಷಕರಿಗೂ ತಮ್ಮ ಕುಡಿಗಳು ಅಲ್ಲಿದ್ದರೆ ನಿಶ್ಚಿಂತೆ. ‘ಖಂಡಿತ ಏನೋ ಕಡಿದು ಕಟ್ಟೆ ಹಾಕುತ್ತವೆ’ ಎಂಬ ಭರವಸೆ.

ಹೀಗೆ ತೆರೆದ ಕೋಣೆಯಲ್ಲಿ ಕಂದಮ್ಮಗಳ ಕಲರವ ಹಚ್ಚಿಬಿಟ್ಟಿರುವ ಮೇಷ್ಟ್ರ ಹೆಸರು ಕೃಷ್ಣಮೂರ್ತಿ ಕ್ಯಾಲಕೊಂಡ. ಮೊದಲ ನೋಟಕ್ಕೆ ಸಂಕೋಚದ ಸ್ವಭಾವದವರಂತೆ ಕಾಣುವ ಅವರು ಹೊಳಲ್ಕೆರೆ ತಾಲ್ಲೂಕಿನ ತಾಳೀಕಟ್ಟೆಯವರು.

ಎಂಟು ವರ್ಷಗಳ ಹಿಂದೆ ಕ್ಯಾಲಕೊಂಡ ಎಲ್ಲ ಹಳ್ಳಿಗಳಂತೆ ಇರಲಿಲ್ಲ. ಆಗ ವಿಶೇಷ ಶಿಕ್ಷಕರಾಗಿ ಕೃಷ್ಣಮೂರ್ತಿ ನೇಮಕಗೊಂಡರು. ಡಿಡಿಪಿಐ, ಬಿಇಒ ಎಲ್ಲರೂ ಆ ಊರಿನ ಶಾಲೆಯಲ್ಲಿ ಕೆಲಸ ಎಂದಾಕ್ಷಣ ವಿಚಿತ್ರವಾಗಿ ನೋಡಿದ್ದರು. ‘ನಿಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಹೋಗಿ’ ಎಂದು ಎಚ್ಚರಿಸಿದ್ದರು.

ಹಳ್ಳಿ ಎಂದಮೇಲೆ ವೈಮನಸ್ಸು ಇದ್ದೇ ಇರುತ್ತದೆ. ಖುದ್ದು ಗ್ರಾಮದ ಸೊಗಡಿನಲ್ಲಿ ಬೆಳೆದ ಮೇಷ್ಟ್ರ ಮನಸ್ಸು ಗಟ್ಟಿಯಾಗಿತ್ತು. ಆರು ತಿಂಗಳು ತಾವಾಯಿತು, ತಮ್ಮ ಕೊನೆಯ ಪೀರಿಯಡ್ ಆಯಿತು ಎಂದುಕೊಂಡು ಕೆಲಸ ಮಾಡಿದರು. ಮಕ್ಕಳಿಗೆ ನಾಟಕದ ರುಚಿ ಹತ್ತಿಸಿದರು.

ಶಾಲೆಯ 250 ಅಡಿಯಷ್ಟು ಸುತ್ತಳತೆಯ ಕಾಂಪೌಂಡ್‍ಗೆ ಬಣ್ಣ ಬಳಿಯಲೆಂದು ಆಗ ಶಿಕ್ಷಣ ಇಲಾಖೆ 12 ಸಾವಿರ ರೂಪಾಯಿ ಕೊಡುತ್ತಿತ್ತು. ಕೃಷ್ಣಮೂರ್ತಿ ಬಿಳಿ ಬಣ್ಣದ ಬದಲು ಕೆಂಪು ಬಳಿಯುವಂತೆ ಸೂಚಿಸಿದರು. ಆ ಕೆಂಪು ಬಣ್ಣವನ್ನೇ ಭಿತ್ತಿಯಾಗಿಸಿದರು. ವಿದ್ಯಾರ್ಥಿಗಳಿಗೆ ತಮ್ಮಿಷ್ಟದ ‘ವಿಷಯವಸ್ತು’ವನ್ನು ಅದರ ಮೇಲೆ ಚಿತ್ರವಾಗಿಸಲು ಹೇಳಿದರು.

ಆ ‘ಕ್ಲಾಸ್ ವರ್ಕ್’ ಅನ್ನು ಮಕ್ಕಳು ಇನ್ನಿಲ್ಲದಂತೆ ಅನುಭವಿಸಿದರು. ನೋಡನೋಡುತ್ತಲೇ ಭೂಮಿಯ ಉಗಮದಿಂದ ಹಿಡಿದು ಮನುಷ್ಯ ನಾಗರಿಕನಾದವರೆಗೆ, ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಅದು ಸಿಗುವ ವರೆಗೆ... ಇಂಥ ಹಲವು ಸಾಮಾಜಿಕ ಮಹತ್ವದ ವಸ್ತುವಿಷಯಗಳು ಕಾಂಪೌಂಡ್ ಭಿತ್ತಿಯ ಮೇಲೆ ಚಿತ್ರಗಳಾಗಿ ಮೂಡಿದವು.

ಆ ಮುಗ್ಧ ಗೆರೆಗಳು ಊರಿನ ಎಲ್ಲರ ಗಮನ ಸೆಳೆದದ್ದಷ್ಟೇ ಅಲ್ಲ; ಟೀವಿ ವಾಹಿನಿಗಳನ್ನೂ ಆಕರ್ಷಿಸಿದವು. ‘ನಮ್ಮೂರ ಶಾಲೆ’ ಎಂದು ಸುತ್ತಮುತ್ತಲ ಹಳ್ಳಿಗಳಲ್ಲಿ ಯಾರು ಆಗ ಮಾತನಾಡಿದರೂ ಅದು ಕ್ಯಾಲಕೊಂಡ ಶಾಲೆಯ ಕುರಿತೇ ಆಗಿರುತ್ತಿತ್ತು.

ಮೇಷ್ಟ್ರು ಮೆಚ್ಚಾದರು. ಕೊನೆಯ ಪೀರಿಯೆಡ್ ಅವಧಿ ವಿಸ್ತರಣೆಯಾದರೂ ಊರಿನವರು ತಲೆಕೆಡಿಸಿಕೊಳ್ಳದ ಮಟ್ಟಕ್ಕೆ ಪರಿಸ್ಥಿತಿ ಬದಲಾಯಿತು. ಬೋಳು ಆವರಣದಲ್ಲಿ ಗಿಡಗಳು ಬೆಳೆದವು. ಮಕ್ಕಳ ನಗುವಿಗೆ, ಹಳ್ಳಿಯಲ್ಲಿ ಸಂಸ್ಕಾರದ ಹಸಿರು ಮೂಡಿದ್ದಕ್ಕೆ ಅದೊಂಥರ ಪ್ರತಿಮೆಯಂತೆ. ‘ಪ್ರತಿಭಾ ಕಾರಂಜಿ’ ಆ ಕಾಲಘಟ್ಟದಲ್ಲಿ ಒದಗಿಬಂದ ಇನ್ನೊಂದು ಆಮ್ಲಜನಕ.

ಕೃಷ್ಣಮೂರ್ತಿ ನೀನಾಸಂ ಪ್ರಾಡಕ್ಟ್. ಸಂಸ್ಕೃತಿಯ ಗಂಧವನ್ನು ಅವರು ಹರಡಿದ ರೀತಿ ಗಮನಾರ್ಹ. ಶಾಲೆಯ ಮಕ್ಕಳ ಸುಪ್ತ ಪ್ರತಿಭೆ ಅನಾವರಣಗೊಳಿಸುವ ‘ಪ್ರತಿಭಾ ಕಾರಂಜಿ’ ಕಾರ್ಯಕ್ರಮಕ್ಕೆ ಮಕ್ಕಳನ್ನು ಸಿದ್ಧಗೊಳಿಸಲು ಅವರು ಸಭೆಗಳನ್ನು ನಡೆಸಿದರು. ಜಾತಿ ಸಂಘರ್ಷದ ಕಾರಣಕ್ಕೆ ಪರಸ್ಪರ ಮುಖ ಸಿಂಡರಿಸುತ್ತಿದ್ದವರೂ ಅಲ್ಲಿ ಎದುರು ಬದಿರಾಗಿ, ನಗಲಾರಂಭಿಸಿದರು. ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಒಂಬತ್ತು ಸಲ ಸ್ಪರ್ಧಿಸುವಷ್ಟು ಈ ಮೇಷ್ಟರು ಮಕ್ಕಳ ಪ್ರತಿಭೆಯನ್ನು ಹೊರತಂದರು. ಬಹುಮಾನ ಗೆದ್ದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾದಾಗಲೆಲ್ಲ ಕ್ಯಾಲಕೊಂಡದ ಜನರಿಗೆ ಹೆಮ್ಮೆ.

ವರ್ಷಗಳ ಹಿಂದೆ ಹಲವು ಶಾಲೆಗಳ ಶಿಕ್ಷಕರ ಸಭೆ ನಡೆದರೆ ಕ್ಯಾಲಕೊಂಡದ ಮೇಷ್ಟ್ರ ಪಕ್ಕ ಕೂರಲೂ ಹಿಂಜರಿಯುತ್ತಿದ್ದವರೆಲ್ಲ ಆಮೇಲೆ ಮನಸ್ಸು ಬದಲಿಸಿದರು.

ಕಳೆದ ವರ್ಷ ಕ್ಯಾಲಕೊಂಡ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಯಿತು. 30 ರಾಜ್ಯ, 7 ಕೇಂದ್ರಾಡಳಿತ ಪ್ರದೇಶಗಳ 36 ತಂಡಗಳಲ್ಲಿ ಮಕ್ಕಳು ರಂಗಸ್ಪರ್ಧೆಯಲ್ಲಿದ್ದರು. 3,500 ಮಕ್ಕಳ ನಾಟಕ ವೈಭವ ಅದು. ಎಲ್ಲರನ್ನೂ ಹಿಂದಿಕ್ಕಿ ಕ್ಯಾಲಕೊಂಡ ಶಾಲೆಯ ಮಕ್ಕಳು 12 ಚಿನ್ನದ ಪದಕಗಳನ್ನು ಗೆದ್ದರು. ‘ಪ್ರತಿಭಾ ಕಾರಂಜಿ’ ರಾಷ್ಟ್ರಮಟ್ಟದ ‘ಕಲೋತ್ಸವ’ದಲ್ಲಿ ಚಿಮ್ಮಿದ್ದು ಹೀಗೆ.

‘ಬಾಲೆಗೆ ಸೋತ ಸಾಮ್ರಾಟ ಅಶೋಕ’ ನಾಟಕವನ್ನು ಅವರು ದೊಡ್ಡಾಟಕ್ಕೆ ಅಳವಡಿಸಿದ್ದರು. ಅದು ಜನಮನ ಗೆದ್ದಿತು. ಗೆದ್ದು ಊರಿಗೆ ಮರಳಿದಾಗ ಸುತ್ತೂರಿನವರೆಲ್ಲ ಸೇರಿ ಮೆರವಣಿಗೆ ಮಾಡಿದ್ದರು (‘ಮೆರವಣಿಗೆ ಮಾಡಿಸಬೇಕಾ?’ ಎನ್ನುವುದು ಅವಮಾನ ಮಾಡಲೆಂದು ಕೆಲವು ಹಳ್ಳಿಗರು ಬಳಸುವ ನಾಣ್ನುಡಿ. ಆದರೆ, ಈ ಊರಿನ ಮಟ್ಟಿಗೆ ಆ ಮೆರವಣಿಗೆಯ ಅರ್ಥ ಕ್ರಮೇಣ ಬದಲಾದದ್ದು ಗಮನಾರ್ಹ).

ಸ್ಪರ್ಧೆಗಾಗಿ ದೆಹಲಿಗೆ ಹೊರಟಿದ್ದೂ ಸಾಧನೆಯೇ. ಟಿಕೆಟ್ ಸಿಕ್ಕಿದ್ದು ಮೂವರಿಗಷ್ಟೇ. ಕೃಷ್ಣಮೂರ್ತಿ ಅವರಲ್ಲದೆ ಒಬ್ಬ ಮೇಕಪ್ ಮ್ಯಾನ್ ಹಾಗೂ ಇನ್ನೊಬ್ಬರಿಗೆ ಅವಕಾಶ. ಮಿಕ್ಕ ಎಲ್ಲರ ಖರ್ಚು ತೂಗಿಸಿದ್ದು ಕಲಾಪ್ರೇಮಿಗಳ ಸಹಕಾರದಿಂದ. ಪಕ್ಕದ ಊರಿಗೆ ಹೆಣ್ಣುಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದ ಊರು ಅದು. ಅಲ್ಲಿ ಮೂವರು ಹೆಣ್ಣುಮಕ್ಕಳನ್ನು ನಾಟಕಕ್ಕೆಂದು ದೆಹಲಿಗೆ ಕಳುಹಿಸುವಂಥ ಪರಿವರ್ತನೆ ತಂದದ್ದು ಮೇಷ್ಟ್ರ ಸಾಧನೆಗೆ ಸಾಕ್ಷಿ.

2009ರಲ್ಲಿ ‘ಮಧ್ಯಮ ವ್ಯಾಯೋಗ’ ನಾಟಕವಾಡಿಸಿ ಮಕ್ಕಳ ಪ್ರತಿಭೆ ಅರಳಿಸಿದ್ದ ಕೃಷ್ಣಮೂರ್ತಿ, ಆಮೇಲೆ ನಿರಂತರವಾಗಿ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತಾ ಬಂದರು. ವಿನಾಶದ ಹಾದಿಯಲ್ಲಿರುವ ದೊಡ್ಡಾಟ ಅವರಿಗೆ ಈಗ ಹೆಚ್ಚು ಮುಖ್ಯವೆನ್ನಿಸತೊಡಗಿದೆ. ಝೀ ವಾಹಿನಿಯಲ್ಲಿ ‘ಡ್ರಾಮಾ ಜೂನಿಯರ್ಸ್’ ಕಾರ್ಯಕ್ರಮದಲ್ಲಿ ಎರಡು ತಿಂಗಳ ಹಿಂದೆ ದೊಡ್ಡಾಟ ಪ್ರದರ್ಶನವನ್ನು ಸಂಯೋಜಿಸಿದ್ದು ಇದೇ ಕೃಷ್ಣಮೂರ್ತಿ. ದೊಡ್ಡಾಟದ ದಿಗ್ಗಜ ಕಲಾವಿದರನ್ನೆಲ್ಲ ಸೇರಿಸಿ, ಆ ಕಲೆಯ ಪುನರುತ್ಥಾನಕ್ಕೂ ಅವರು ಸಂಕಲ್ಪ ತೊಟ್ಟಿದ್ದಾರೆ.

ಈಗಲೂ ಅವರ ಕೋಣೆ ತೆರೆದಿದೆ. ಅಲ್ಲಿ ನಡುರಾತ್ರಿಯವರೆಗೂ ಮಕ್ಕಳು ಕಥೆಯನ್ನೋ, ಕವನವನ್ನೋ ವಾಚಿಸುತ್ತಾರೆ. ನಾಟಕದ ಅಭ್ಯಾಸ ಮಾಡುತ್ತಾರೆ. ಹೊಸ ಕನಸುಗಳನ್ನು ಕಾಣುತ್ತಾರೆ.
ಇಷ್ಟೆಲ್ಲ ತೊಡಗಿಸಿಕೊಂಡಿರುವ ಈ ಮೇಷ್ಟ್ರು ಕಾಯಕದಲ್ಲಿ ಎಷ್ಟು ಬಿಜಿಯಾಗಿಬಿಟ್ಟಿದ್ದಾರೆಂದರೆ, ಅವರಿಗೆ ಮದುವೆಯಾಗಲೂ ಪುರುಸೊತ್ತಿಲ್ಲ!ಖುಷಿಗಳ ಗರಿಗೆ ಇನ್ನೊಂದು

ಕೃಷ್ಣಮೂರ್ತಿ ಈಗ ಬ್ರೆಜಿಲ್ ಹಾಗೂ ಇಂಗ್ಲೆಂಡ್ ದೇಶಗಳಲ್ಲಿ ಬೋಧನಾ ತಂತ್ರದ ತರಬೇತಿಗೆ ಹೋಗಿದ್ದಾರೆ. ಅವರಿಗೆ ‘ಗುರು ಪುರಸ್ಕಾರ ಪ್ರಶಸ್ತಿ’ ಸಂದಿರುವುದರ ಫಲವಿದು. ರಾಜ್ಯದ ಮೂವರು ಶಿಕ್ಷಕರಷ್ಟೇ ಈ ಗೌರವಕ್ಕೆ ಪಾತ್ರರಾಗಿದ್ದು. ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ, ಶಿಕ್ಷಣ ಕ್ರಮದ ಕುರಿತು ಕೇಳುವ ಪ್ರಶ್ನೆಗಳಿಗೆ ವಿಭಿನ್ನ ಉತ್ತರ ಕೊಟ್ಟವರನ್ನು ಆಯ್ಕೆ ಸಮಿತಿ ಈ ಪ್ರಶಸ್ತಿಗೆ ಆರಿಸಿದೆ.

*


–ಕೃಷ್ಣಮೂರ್ತಿ ಕ್ಯಾಲಕೊಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT