ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮಣದಾಸರ ಕಥೆಗಳು

Last Updated 11 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಆನೆಯನ್ನು ಜೇಬಿನಲ್ಲಿಡು!

ಒಂದು ನಡು ಮಧ್ಯಾಹ್ನ... ಕೃಷ್ಣದೇವರಾಯನ ಆಸ್ಥಾನ.

ಪ್ರಭು ಕೃಷ್ಣದೇವರಾಯರು ಕೇಳ್ತಾರೆ.

ತೆನಾಲಿ ರಾಮಕೃಷ್ಣ... ಮಕ್ಕಳು ಮಾತನಾಡಿದರೆ ಹೇಗಿರುತ್ತಯ್ಯಾ... ಸ್ವಲ್ಪ ತೋರಿಸೋ...

ತೆನಾಲಿ: ತೋರಿಸುವುದಕ್ಕೆ ಒಂದು ನಾಟಕ ಮಾಡಬೇಕು ಪ್ರಭು. ನೀವು ನನಗೆ ಅಪ್ಪ, ನಾನು ನಿಮಗೆ ಮಗನ ಪಾತ್ರಧಾರಿಯಾಗಬೇಕು.

ಕೃಷ್ಣದೇವರಾಯ: ಅದು ಹೇಗೆ ಸಾಧ್ಯವೋ?

ತೆನಾಲಿ: ಪ್ರಭು, ಮಕ್ಕಳು ಹೇಗೆ ಮಾತನಾಡುತ್ತವೋ ಆ ರೀತಿ ತೋರಿಸಬೇಕು ಅಲ್ಲವೇ...

ಕೃಷ್ಣದೇವರಾಯ: ಹೌದಯ್ಯ ತೋರಿಸಲೇಬೇಕು... ಆಯಿತು ನಾಟಕ ಮಾಡೇ ಬಿಡೋಣ.

(ಅಷ್ಟರಲ್ಲಿ ರಾಜಬೀದಿಯಲ್ಲಿ ಒಬ್ಬ ಮಾವುತ ಆನೆಯ ಮೇಲೆ ಕುಳಿತು ಅರಮನೆಯತ್ತ ಬರುತ್ತಿದ್ದಾನೆ)

ತೆನಾಲಿ: ಅಪ್ಪಾ...

ಕೃಷ್ಣದೇವರಾಯ: ಏನೋ ಮಗನೇ...

ತೆನಾಲಿ: ಅಲ್ಲಿ ಹೋಗುತ್ತಿದೆಯಲ್ಲ, ಅದಕ್ಕೆ ಮುಂದೊಂದು ಹಿಂದೊಂದು (ಸೊಂಡಿಲು ಮತ್ತು ಬಾಲ) ಎರಡು ಬಾಲ ಇದೆಯಲ್ಲ, ಅದೇನಪ್ಪ...

ಕೃಷ್ಣದೇವರಾಯ: ಅದು ಆನೆ ಕಣೋ ಮಗನೆ.

ತೆನಾಲಿ: ಮೇಲೆ ಕುಳಿತಿರುವವನು ಯಾರು?

ಕೃಷ್ಣದೇವರಾಯ: ಅವನನ್ನು ಮಾವುತ ಎಂದು ಕರೆಯುತ್ತಾರಪ್ಪ.

ತೆನಾಲಿ: ಅವನನ್ನು ಇಲ್ಲಿಗೆ ಬಾ ಅಂತ ಹೇಳು

ಕೃಷ್ಣದೇವರಾಯ: ಏಕೋ...

ತೆನಾಲಿ: ಅದು ಬೇಕು.

ಕೃಷ್ಣದೇವರಾಯ: ಅದು ಏನು ಮಾಡುವುದಕ್ಕೋ...

ತೆನಾಲಿ: ಅದನ್ನು ತಂದು ನನ್ನ ಜೇಬಿನಲ್ಲಿ ಇಡು.

ಕೃಷ್ಣದೇವರಾಯ: ಆನೆಯನ್ನು ಜೇಬಿನಲ್ಲಿಡುವುದಕ್ಕೆ ಆಗುತ್ತದೆಯೇನೋ?

ತೆನಾಲಿ: ಮಕ್ಕಳ ಮಾತನ್ನು ಹೀಗೆ ಅಂತ ಹೇಳುವುದಕ್ಕೆ ಆಗುತ್ತದೆಯೋನೋ... ಅಪ್ಪಾ....

ಕೃಷ್ಣದೇವರಾಯ ಸಂತೋಷದಿಂದ - ‘ನಿನ್ನ ಮಾತು ನಿಜ ಅಪ್ಪ... ಮಕ್ಕಳ ಮಾತೇ ಮಾತು, ಅಮೃತಂ ಬಾಲ ಭಾಷಿತಂ... ಮಕ್ಕಳು ಮಾತನಾಡಿದ್ದೆಲ್ಲ ಅಮೃತವೇ ಕಣಯ್ಯ’ ಎನ್ನುತ್ತಾನೆ.

***

ಗುಮ್ಮನ ಕರೆಯದಿರು...


ಜಗದಾದಿ ಮೂರುತಿಯಾದ ಶ್ರೀಕೃಷ್ಣ ತನ್ನ ಬಾಲಲೀಲೆಗಳನ್ನು ಪ್ರಕಟಿಸಿದ್ದು ಅನನ್ಯ. ಅವನ ಬಾಲಲೀಲೆಗಳು ಒಂದೇ... ಎರಡೇ..? ಅವನ ಬಾಲಲೀಲೆಗಳಿಗೆ ತಾಯಿ ಯಶೋದೆ ಮನಸೋತಳು, ಗಡಿಬಿಡಿಗೆ ಒಳಗಾದಳು. ಗೋಪಿಕಾ ಸ್ತ್ರೀಯರನ್ನು ಕಾಡಿಸಿದ್ದು ಕಡಿಮೆಯೇ..? ಗೋಪಿಕೆಯರು ಯಶೋದೆಗೆ ಕೃಷ್ಣನ ಕೀಟಲೆಗಳ ಬಗ್ಗೆ ದೂರುಗಳ ಸರಮಾಲೆಯನ್ನೇ ಹೇಳುತ್ತಾರೆ.

ಹೀಗೆ ಜಗದೋದ್ಧಾರಕನಾದ ಕೃಷ್ಣ ಪರಮಾತ್ಮನ ಬಾಲಲೀಲೆಗಳನ್ನು ಪುರಂದರದಾಸರು ಮನೋಜ್ಞವಾಗಿ ಕಟ್ಟಿಕೊಟ್ಟಿದ್ದಾರೆ. ಆ ಸಾಲುಗಳನ್ನು ನಿಮಗೆ ಹೇಳುತ್ತೇನೆ... ಕೇಳ್ರಯ್ಯ...

ಒಂದು ದಿನ ಗೋಪಿಕಾ ಸ್ತ್ರೀಯರು ನೀಡಿದ ದೂರಿಗೆ ತಾಯಿ ಯಶೋದೆ ಕೋಪಗೊಳ್ಳುತ್ತಾಳೆ. ‘ಕೃಷ್ಣಾ... ಕೃಷ್ಣಾ... ನೀನೇಕೆ ಹೀಗೆ ಕಾಡುವೆ..? ನೀನೇನಾದರೂ ಹೀಗೆ ಕೀಟಲೆ ಮಾಡುತ್ತಿದ್ದರೆ ನಾನು ಗುಮ್ಮನನ್ನು ಕರೆದು ನಿನ್ನನ್ನು ಕೊಟ್ಟುಬಿಡುತ್ತೇನೆ ಎಚ್ಚರಿಕೆ’ ಎಂದು ಗದರಿಸ್ತಾಳೆ.

ಆಗ ಮಗು ಕೃಷ್ಣ, ತಾಯಿಯ ಹತ್ತಿರಕ್ಕೆ ಬಂದು ‘ನಾನೆಂದೂ ಹೀಗೆ ಮಾಡುವುದಿಲ್ಲ ಅಮ್ಮ. ನಿನ್ನ ಮಾತು ಕೇಳ್ತೇನೆ. ಗುಮ್ಮನನ್ನು ಮಾತ್ರ ಕರೆಯಬೇಡ. ಹೆಣ್ಣುಗಳು (ಗೋಪಿಕಾ ಸ್ತ್ರೀಯರು) ಇರುವಲ್ಲಿ ಹೋಗಿ ಅವರ ಕಣ್ಣು ಮುಚ್ಚುವುದಿಲ್ಲ. ಚಿಣ್ಣರ ಬಡಿಯೆನು, ಅಣ್ಣನ ಬಯ್ಯೆನು, ಬೆಣ್ಣೆಯ ಬೇಡೆನು, ಮಣ್ಣು ತಿನ್ನುವುದಿಲ್ಲ, ಗುಮ್ಮನ ಕರೆಯದಿರೇ...

ಅಮ್ಮ... ಬಾವಿಗೆ ನಾ ಹೋಗೆ ಕಾಣೆ, ಹಾವಿನೊಳು ಆಡೆ ಕಾಣೆ, ಹಸುವಿನ ಜತೆ ಕರುಗಳ ಬಿಡೆ ನೋಡೆ, ದೇವರಂತೆ ಬಂದು ನೀನು ಹೇಳಿದಂತೆ ಕೇಳುವೆ, ಸುಮ್ಮನೆ ಕೂರುವೆ (ಶ್ರೀಕೃಷ್ಣ ದೇವರೇ ಆದರೂ ಬಾಲಕನಾಗಿ ವಿನೋದಗಳನ್ನು ಮಾಡುತ್ತಿದ್ದಾನೆ). ಗುಮ್ಮನ ಕರೆಯದಿರೆ ಎನ್ನುತ್ತಾನೆ.

ಇದನ್ನೆಲ್ಲ ಕೇಳಿದ ಯಶೋದೆ, ಆನಂದಪರವಶಳಾಗಿ ಮುಗುಳ್ನಕ್ಕು ಜಗದ ಒಡೆಯನಾದ ಪುರಂದರವಿಠಲನನ್ನು ಮೋಹದಿಂದ ಬಿಗಿದಪ್ಪಿದಳು. ತಾಯಿಗೆ ಮಕ್ಕಳು ಹೇಗೆ ವಿಧೇಯರಾಗಿರಬೇಕು, ಅವಳ ಮನಸ್ಸಿಗೆ ಕಿಂಚಿತ್ತೂ ನೋವು ಮಾಡಬಾರದು ಎಂಬುದನ್ನು ಲೋಕಕ್ಕೆ ತೋರಿಸಲು ಪ್ರಭು ಈ ಬಾಲಲೀಲೆಗಳನ್ನು ನಡೆಸಿದ್ದಾನೆ.

***

ಒಂಬತ್ತೊಂದಲಿ ಒಂಬತ್ತು

ಒಂದು ಬೆಳಿಗ್ಗೆ. ಮೇಷ್ಟ್ರ ಮನೆಗೆ ಬಾಲಕ ಧ್ರುವ ಪಾಠಕ್ಕೆ ಬಂದಿರುತ್ತಾನೆ.

‘ಮಕ್ಕಳೇ ನೀವು ಏನೇನು ಕಲಿತಿದ್ದೀರಿ, ಹೇಳಿ’ ಎಂದು ಕೇಳುತ್ತಾರೆ ಧ್ರುವನ ಗುರುಗಳು. ಧ್ರುವ ಕೈ ಜೋಡಿಸಿ ವಿನೀತನಾಗಿ, ‘ಗುರುಗಳೇ ನಾನು ಒಂದು ಮಗ್ಗಿ ಕಲಿತಿದ್ದೇನೆ...’

ಗುರುಗಳು: ಯಾವ ಮಗ್ಗೀನೋ...

ಧ್ರುವ: ಗುರುಗಳೇ ಒಂಬತ್ತೊಂದಲು

ಗುರುಗಳು: ಹೇಳೋ...ನೋಡೋಣ...

ಧ್ರುವ ಕೈ ಜೋಡಿಸಿ ಕಣ್ಮಚ್ಚಿ... ರಾಗವಾಗಿ ಮಗ್ಗಿ ಹೇಳುತ್ತಾನೆ.

ಒಂಬತ್ತೊಂದಲಿ ಒಂಬತ್ತು

ಒಂಬತ್ತೆರಡಲಿ ಹದಿನೆಂಟು (1+8=9)

ಒಂದೂ ಎಂಟು ಒಂಬತ್ತು (1+8=9)

ಒಂಬತ್ತಮೂರಲಿ ಇಪ್ಪತ್ತೇಳು (2+7=9)

ಒಂಬತ್ತನಾಲ್ಕಲಿ ಮೂವತ್ತಾರು (3+6=9)

ಒಂಬತ್ತ ಐದಲಿ ನಲವತ್ತೈದು (4+5=9)

ಒಂಬತ್ತಾರಲಿ ಐವತ್ತನಾಲ್ಕು (5+4=9)

ಒಂಬತ್ತೇಳಲಿ ಅರವತ್ತಮೂರು (6+3=9)

ಒಂಬತ್ತೆಂಟಲಿ ಎಪ್ಪತ್ತೆರಡು (7+2=9)

ಒಂಬೊಂಬೊತ್ತಲಿ ಎಂಬತ್ತೊಂದು (8+1=9)

ಒಂಬತ್ತತ್ತಲಿ ತೊಂಬತ್ತು (ಸೊನ್ನೆ ತೆಗೆದರೆ ಒಂಬತ್ತೇ).

ಗುಣಿಸಿ ಕೊನೆಗೆ ಬಂದಿರುವ ಶೇಷವನ್ನು ಕೂಡಿದರೆ ಆ ಸಂಖ್ಯೆಗಳು ಒಂಬತ್ತೇ ಬರುತ್ತವೆ.

ಗುರುರಾಜಲು ನಾಯ್ಡು ಅವರು ಇಂತಹ ಗಣಿತದ ಪದ್ಯಗಳನ್ನು ಹರಿಕಥೆಯೊಳಗೆ ಸೇರಿಸಿಕೊಳ್ಳುತ್ತಿದ್ದರು. ಮಕ್ಕಳಿಗೆ ಈ ಜಾಣ್ಮೆಯ ಲೆಕ್ಕಗಳು ಅರಿವಾಗಲಿ ಎನ್ನುವುದು ಅವರ ಉದ್ದೇಶ.

***

ಅಂಬೇಡ್ಕರ್ ಆಟ-ಪಾಠ

ಬಾಲಕ ಅಂಬೇಡ್ಕರ್ ಅವರ ಬಾಲ್ಯದ ಲೀಲೆಗಳು ಎಲ್ಲರ ಬದುಕಿನ ಲೀಲೆಗಳಂತೆ ಖುಷಿಯಾಗಿ ಇರಲಿಲ್ಲ. ಬಾಲಲೀಲೆಗಳೆಲ್ಲ ಸಂಕಟದ ಲೀಲೆಗಳೇ ಆಗಿದ್ದವು. ಆದರೆ ಈ ಸಂಕಟದ ಲೀಲೆಗಳು ಅವರಲ್ಲಿ ಸ್ವಾಭಿಮಾನ ಬೆಳೆಸಿದವು. ಅಸ್ಪೃಶ್ಯತೆಯ ವಿರುದ್ಧದ ಹೋರಾಟಕ್ಕೆ ಮುನ್ನುಗ್ಗಿಸಿತು.

ಒಂದು ಇಳಿಸಂಜೆ. ಸೋದರತ್ತೆ ಮೀರಾಬಾಯಿ ಮನೆಯ ಒಳಗೆ ಇದ್ದಾಳೆ. ಬಾಲಕ ಅಂಬೇಡ್ಕರ್ ಹಟ್ಟಿಯ ಅಂಗಳದಲ್ಲಿ ಆಟವಾಡುತ್ತಿದ್ದಾನೆ. ಅದೇ ಬೀದಿಯ ಕೊನೆಯಲ್ಲಿ ಮಗದೊಂದಿಷ್ಟು ಹುಡುಗರ ಆಟ ಸಾಗಿದೆ. ಅಲ್ಲಿಗೆ ಹೋದ ಅಂಬೇಡ್ಕರ್‌ನನ್ನು ಆಟಕ್ಕೆ ಸೇರಿಸಿಕೊಳ್ಳುವುದೇ ಇಲ್ಲ... ಮುಟ್ಟುವುದೇ ಇಲ್ಲ... ಪಕ್ಕಕ್ಕೆ ಕೂರಿಸಿಕೊಳ್ಳುವುದೇ ಇಲ್ಲ... ಓಡೋಡಿ ದುಃಖದಿಂದಲೇ ಮನೆಗೆ ಬರುವ ಅಂಬೇಡ್ಕರ್, ‘ಅಮ್ಮಾ... ನನ್ನ ಏಕಮ್ಮ ಅವರು ಆಟಕ್ಕೆ ಸೇರಿಸಿಕೊಳ್ಳುವುದಿಲ್ಲ. ಮುಟ್ಟುವುದಿಲ್ಲ. ದೂರ ಇಡುತ್ತಾರಲ್ಲಮ್ಮ...’ ಎಂದು ಕೇಳುತ್ತಾನೆ.

ಏನು ಹೇಳಲಿ, ಹೇಗೆ ಸಮಾಧಾನಪಡಿಸಲಿ ಎನ್ನುವ ಚಿಂತೆ ಮೀರಾಳದ್ದು.

‘ಈ ಸಮಾಜದಲ್ಲಿ ನಮ್ಮ ಸ್ಥಿತಿ ಹೀಗೆಯೇ ಮಗು. ಇದು ಯಾವಾಗ ಸರಿ ಹೋಗುತ್ತದೆಯೋ... ಮನುಷ್ಯರೆಲ್ಲರೂ ಒಂದೇ ಎನ್ನುವ ಭಾವ ಯಾವಾಗ ಬರುತ್ತದೆಯೋ... ಕಾಯಬೇಕಪ್ಪ. ಕಾಲ ಕೂಡಿ ಬರುವವರೆಗೂ’ ಎನ್ನುತ್ತಾಳೆ ಮೀರಾ.

ಆ ಕ್ಷಣದಲ್ಲಿ ಮಗು ಅಂಬೇಡ್ಕರನಿಗೆ ಮತ್ತಷ್ಟು ಅಸಮಾನತೆಯ ಮುಖಗಳ ಪರಿಚಯವಾಗುತ್ತದೆ. ಬಾಲ್ಯದಲ್ಲಿ ಅನುಭವಿಸಿದ ಅನೇಕ ಅಸಮಾನತೆಯ ಸಂಕಟಗಳು ಅಂಬೇಡ್ಕರ್ ಅವರನ್ನು ಹೋರಾಟಕ್ಕೆ ಅಣಿಗೊಳಿಸಿದವು.

ಮಕ್ಕಳೇ,ಹಲವು ಕಷ್ಟಗಳನ್ನು ಎದುರಿಸಿದ ಅಂಬೇಡ್ಕರ್ ಅವಕಾಶ ವಂಚಿತರಿಗೆ ಬೆಳಕು ನೀಡಿದ ಸೂರ್ಯನಾದರು. ಮಕ್ಕಳೇ, ಕಷ್ಟಗಳು ನಮ್ಮನ್ನು ಗಟ್ಟಿಗೊಳಿಸಬೇಕು, ಆತ್ಮವಿಶ್ವಾಸವನ್ನು ಕುಗ್ಗಿಸುವ ಬದಲು ಗೆಲ್ಲುವ ಛಲ ಮೂಡಿಸಬೇಕು. ‘ಎಲ್ಲರೂ ಒಂದೇ. ಜಾತಿಭೇದದಿಂದ ಮನಸ್ಸು ಛಿದ್ರವಾಗುತ್ತದೆ’ ಮಕ್ಕಳೇ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT