ಪಾರಾದ ಆರೋಪಿ, ಸಿಕ್ಕಿಬಿದ್ದ ಪೊಲೀಸ್‌ !

‘ನ್ಯಾಯವಾದಿ’ಗಳು ಎಂದರೆ ನಮ್ಮ ಕಕ್ಷಿದಾರರಿಗೆ ಬೇಕಾಗಿರುವ ‘ನ್ಯಾಯ’ ಒದಗಿಸಿಕೊಡುವವರು ಅಷ್ಟೇ. ಕಕ್ಷಿದಾರರು ಅಪರಾಧ ಮಾಡಿರುವ ಬಗ್ಗೆ ವಕೀಲರಲ್ಲಿ ಹೇಳಿಕೊಂಡಾಗ ಅವರನ್ನು ಹೇಗೆ ಬಚಾವು ಮಾಡಬೇಕು ಎನ್ನುವುದಷ್ಟೇ ನಮ್ಮ ತಲೆಯಲ್ಲಿ ಉಳಿಯುತ್ತದೆಯೇ ವಿನಾ ಉಳಿದವು ನಗಣ್ಯ.

ಪಾರಾದ ಆರೋಪಿ, ಸಿಕ್ಕಿಬಿದ್ದ ಪೊಲೀಸ್‌ !

2012ರ ಆಸುಪಾಸು ನಡೆದ ಘಟನೆ ಇದು. ಸೇನೆಯಲ್ಲಿ ವಾಹನ ಚಾಲಕನಾಗಿದ್ದ ಬೆಂಗಳೂರಿನ ನಿವಾಸಿ ಶಿವಶೇಖರ ಕೊಲೆ ಆರೋಪ ಹೊತ್ತಿದ್ದ. ಅವನ ಪರವಾಗಿ ವಕಾಲತ್ತು ವಹಿಸಿದ್ದ ನನಗೆ ತಿಳಿದುಬಂದದ್ದು ಇಷ್ಟು...

ಸೇನೆಯವರಿಗಾಗಿ ಇರುವ ‘ಆರ್ಮಿ ಕ್ಯಾಂಟೀನ್‌’ಗೆ ಶಿವಶೇಖರ ತನ್ನ ಗೆಳೆಯ ರಾಮಪ್ರಸಾದನ ಜೊತೆಗೂಡಿ ಕಾನೂನು ಬಾಹಿರವಾಗಿ ಕೆಲವೊಂದು ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ. ರಾಮಪ್ರಸಾದ ಕೂಡ ಸೇನೆಯಲ್ಲಿ ಸೇವೆಗಿದ್ದವನು. ಬರುವ ಕಮಿಷನ್‌ ಅನ್ನು ಸಮನಾಗಿ ಹಂಚಿಕೊಳ್ಳತೊಡಗಿದರು. ಇವರ ಕಳ್ಳವ್ಯವಹಾರ ಯಾರ ಗಮನಕ್ಕೂ ಬಾರದೇ ನಿರಾತಂಕವಾಗಿ ನಡೆಯತೊಡಗಿತು.

ಈ ನಡುವೆ, ರಾಮಪ್ರಸಾದನಿಗೆ ಕಾಶ್ಮೀರಕ್ಕೆ ವರ್ಗವಾಯಿತು. ಕಳ್ಳದಂಧೆ ಮುಂದುವರಿಸಲು ಶಿವಶೇಖರ ಇನ್ನೊಬ್ಬ ವ್ಯಕ್ತಿಯನ್ನು ಹುಡುಕತೊಡಗಿದ. ಆಗ ಅವನಿಗೆ ಸಿಕ್ಕಿದ್ದು ಕೋನಪ್ಪರೆಡ್ಡಿ. ಈಗಾಗಲೇ ಸಾಕಷ್ಟು ಹಣ ಸಂಪಾದನೆ ಮಾಡಿದ್ದ ರೆಡ್ಡಿ, ಅಷ್ಟೊಂದು ಚುರುಕು ವ್ಯಕ್ತಿಯಾಗಿರಲಿಲ್ಲ. ಕುಡಿಯುವುದಕ್ಕೆ ಒಂದಿಷ್ಟು ದುಡ್ಡು ಕೊಟ್ಟರೆ ಸಾಕು, ಖಾಲಿ ಪೇಪರ್‌ಗೆ ಬೇಕಾದ್ರೂ ಸಹಿ ಮಾಡುತ್ತಿದ್ದವ. ಇಂಥದ್ದೇ ವ್ಯಕ್ತಿ ಶಿವಶೇಖರನಿಗೂ ಬೇಕಾಗಿತ್ತು. ಅವನನ್ನೇ ತನ್ನ ಜೊತೆ ಸೇರಿಸಿಕೊಂಡ.

ಶಿವಶೇಖರನ ಮದುವೆ ಗೊತ್ತಾದಾಗ, ಕೋನಪ್ಪರೆಡ್ಡಿಗೆ ದುಂಬಾಲು ಬಿದ್ದು ₹ 40 ಸಾವಿರವನ್ನು ಸಾಲವಾಗಿ ಪಡೆಯುತ್ತಾನೆ. ಬಂದ ಬಡ್ಡಿಯಲ್ಲಿ ಇನ್ನಷ್ಟು ಕುಡಿಯಬಹುದೆಂಬ ಮಹದಾಸೆಯಿಂದ ರೆಡ್ಡಿಯೂ ಇಂತಿಷ್ಟು ಬಡ್ಡಿ ನೀಡಬೇಕು ಎಂದು ಮಾತುಕತೆ ನಡೆಸಿ ಹಣ ಕೊಡುತ್ತಾನೆ.

ಮಾತಿನಂತೆ ಶಿವಶೇಖರ ಸರಿಯಾಗಿ ಬಡ್ಡಿಯನ್ನು ಚುಕ್ತಾ ಮಾಡುತ್ತಿರುತ್ತಾನೆ. ಕ್ರಮೇಣ ಬಡ್ಡಿ ಹಣ ಕೊಡುವುದು ನಿಲ್ಲಿಸಿಬಿಡುತ್ತಾನೆ. ಆಗ ಕೋನಪ್ಪರೆಡ್ಡಿಗೆ ಸಿಟ್ಟುಬಂದು, ಅಸಲು ಹಣವನ್ನು ವಾಪಸು ಕೊಡುವಂತೆ ತಾಕೀತು ಮಾಡುತ್ತಾನೆ. ಆದರೆ ಶಿವವಶೇಖರ ಸಬೂಬು ಹೇಳುತ್ತಾ ಕಾಲದೂಡುತ್ತಾನೆ.

ಹಲವು ತಿಂಗಳಾದರೂ ಬಡ್ಡಿಯನ್ನೂ ಕೊಡದೆ, ಅಸಲನ್ನೂ ವಾಪಸ್‌ ಮಾಡದ ಶಿವಶೇಖರನ ವಿರುದ್ಧ ತಿರುಗಿಬಿದ್ದ ರೆಡ್ಡಿ, ‘ನನ್ನ ಹಣವನ್ನು ವಾಪಸ್‌ ಮಾಡದಿದ್ದರೆ ನಿನ್ನ ಅವ್ಯವಹಾರಗಳನ್ನೆಲ್ಲಾ ಮಿಲಿಟರಿಯವರಿಗೆ ಹೇಳುತ್ತೇನೆ. ಅವರಿಗೆ ಸತ್ಯ ಗೊತ್ತಾದರೆ ನಿನ್ನ ಕಥೆ ಅಷ್ಟೇ. ಕೆಲಸವೂ ಇರಲ್ಲ, ಶಿಕ್ಷೆಯೂ ಆಗುತ್ತದೆ’ ಎಂದು ಗದರಿಸುತ್ತಾನೆ. ಈಗ ಶಿವಶೇಖರನಿಗೆ ಭಯ ಶುರುವಾಗುತ್ತದೆ. ಈ ರೆಡ್ಡಿ ಮೊದಲೇ ಕುಡುಕ, ಏನು ಬೇಕಾದರೂ ಮಾಡಿಯಾನು ಎಂದುಕೊಂಡ ಅವನು, ಹೇಗಾದರೂ ಮಾಡಿ ಅವನನ್ನು ಮುಗಿಸುವ ನಿರ್ಧಾರಕ್ಕೆ ಬರುತ್ತಾನೆ. ಅದೊಂದು ದಿನ, ದುಡ್ಡು ಕೊಡುವೆ ಎಂದು ಹೇಳಿ ರೆಡ್ಡಿಯನ್ನು ಮನೆಗೆ ಬರುವಂತೆ ಶಿವಶೇಖರ ಆಹ್ವಾನಿಸುತ್ತಾನೆ. ಅಲ್ಲಿ ದುಡ್ಡಿನ ವಿಷಯವಾಗಿ ಮಾತಿಗೆ ಮಾತು ಬೆಳೆದು ಜಗಳ ಪ್ರಾರಂಭವಾಗುತ್ತದೆ. ಜಗಳ ವಿಕೋಪಕ್ಕೆ ಹೋದಾಗ ಶಿವಶೇಖರ, ಮುರಿದ ಕುರ್ಚಿಯೊಂದನ್ನು ಎತ್ತಿಕೋನಪ್ಪರೆಡ್ಡಿಯ ತಲೆಗೆ ಬಲವಾಗಿ ಹೊಡೆಯುತ್ತಾನೆ. ಕೋನಪ್ಪರೆಡ್ಡಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡಿ ಪ್ರಾಣ ಕಳೆದುಕೊಳ್ಳುತ್ತಾನೆ.

ಈ ಘಟನೆ ನಡೆದದ್ದು ಸಂಜೆ ಸುಮಾರು 6.45ಕ್ಕೆ. ಕೊಲೆಯ ನಂತರ ಶಿವಶೇಖರ, ಯಾರಿಗೂ ಗೊತ್ತಾಗದ ಹಾಗೆ ಶವವನ್ನು ಹೇಗೆ ಸಾಗಿಸುವುದು ಎಂದೆಲ್ಲಾ ಯೋಚಿಸುತ್ತಾನೆ. ತನ್ನ ಗೆಳೆಯನೊಬ್ಬನಿಗೆ ಕರೆ ಮಾಡಿ ಅವನ ಕಾರನ್ನು ತುರ್ತು ಕಾರ್ಯಕ್ಕೆ ಕೊಡುವಂತೆ ಕೇಳಿಕೊಳ್ಳುತ್ತಾನೆ.

ರಾತ್ರಿ ಸುಮಾರು 9ಗಂಟೆಗೆ ಕಾರನ್ನು ಮನೆಗೆ ತರುತ್ತಾನೆ. ಶವವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಕೊಲೆ ನಡೆದ ಸ್ಥಳದಲ್ಲಿ ಚೆಲ್ಲಿದ್ದ ರಕ್ತವನ್ನು ಸಂಪೂರ್ಣವಾಗಿ ತೊಳೆದು ಒರೆಸುತ್ತಾನೆ. ಆ ಸಮಯದಲ್ಲೂ ಕೋನಪ್ಪರೆಡ್ಡಿಯ ಜೇಬಿನಲ್ಲಿದ್ದ ಹಣವನ್ನು ತೆಗೆದುಕೊಳ್ಳುವುದನ್ನು ಮರೆಯುವುದಿಲ್ಲ...! ಶವವನ್ನು ಕಾರಿನ ಡಿಕ್ಕಿಯಲ್ಲಿ ಹಾಕುತ್ತಾನೆ. ಕೋನಪ್ಪ
ರೆಡ್ಡಿಯ ಮೊಬೈಲ್ ನಿಂದ ಆತನ ಮನೆಯಲ್ಲಿರುವ ಇನ್ನೊಂದು ಮೊಬೈಲ್‌ ಫೋನ್‌ಗೆ, ‘ನಾನು ತಿರುಪತಿಯಲ್ಲಿ ಇದ್ದೇನೆ. ಒಂದೆರಡು ದಿನಗಳಲ್ಲಿ ಹಿಂದಿರುಗುತ್ತೇನೆ’ ಎಂದು ಟೈಪ್‌ ಮಾಡಿ ಮೆಸೇಜ್‌ ಕಳಿಸಿ ಫೋನ್‌ ಸ್ವಿಚ್‌ ಆಫ್‌ ಮಾಡುತ್ತಾನೆ. ‌

ಕಾರನ್ನು ಬೆಂಗಳೂರು ಹೊರವಲಯದ ಹೊಸೂರಿನ ಬಳಿ ತಂದು ಏಕಾಂತ ಸ್ಥಳವನ್ನು ಹುಡುಕಿ ಶವ ಇಳಿಸುತ್ತಾನೆ. ತಾನು ತಂದಿದ್ದ ಪೆಟ್ರೋಲ್‌ ಅನ್ನು ಶವದ ಮೇಲೆ ಸುರಿದು ಬೆಂಕಿ ಹಚ್ಚುತ್ತಾನೆ. ಜ್ವಾಲೆ ಹೆಚ್ಚಾದಾಗ ಅದನ್ನು ಯಾರಾದರೂ ನೋಡಿಬಿಟ್ಟಾರು ಎಂಬ ಭಯದಿಂದ ಅಲ್ಲಿಯೇ ಸಿಕ್ಕ ವಸ್ತುಗಳಿಂದ ನಂದಿಸುತ್ತಾನೆ. ಅಲ್ಲಿಯೇ ಒಂದು ಗುಂಡಿ ಕಂಡ ಅವನು, ಅರ್ಧಂಬರ್ಧ ಸುಟ್ಟ ಶವವನ್ನು ಅದರಲ್ಲಿ ಎಸೆದು, ಕಲ್ಲು ಮುಳ್ಳುಗಳಿಂದ ಮುಚ್ಚಿ ವಾಪಸ್‌ ಮನೆಗೆ ಬರುತ್ತಾನೆ.

ಕೋನಪ್ಪರೆಡ್ಡಿಯ ಸ್ಕೂಟರ್‌ ತನ್ನ ಮನೆಯ ಬಳಿಯೇ ಇದ್ದುದರಿಂದ, ಅದನ್ನು ಪುನಃ ತೆಗೆದುಕೊಂಡು ಹೋಗಿ ಹೊಸೂರಿನ ಬಳಿ ಬಿಟ್ಟು ಬರುತ್ತಾನೆ. ತನ್ನ ಮೊಬೈಲ್‌ ಫೋನ್‌ನಿಂದ ಮಾಡಿರುವ ಕರೆಗಳಿಂದ ತಾನು ಸಿಕ್ಕಿ ಬೀಳಬಹುದೆಂದು ಅದನ್ನೂ ವಾಪಸ್‌ ಬರುವಾಗ ಮೋರಿಯೊಂದರಲ್ಲಿ ಎಸೆದು ಬರುತ್ತಾನೆ.

***

ಹಲವು ದಿನಗಳು ಕಳೆದರೂ ಕೋನಪ್ಪ ರೆಡ್ಡಿಯ ಸುಳಿವೇ ಇರುವುದಿಲ್ಲ. ಮೊಬೈಲ್‌ ಫೋನ್‌ ಕೂಡ ಸ್ವಿಚ್‌ ಆಫ್‌ ಆಗಿರುತ್ತದೆ. ಇದರಿಂದ ಗಾಬರಿಗೊಂಡ ಕುಟುಂಬದವರು ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸುತ್ತಾರೆ. ಪೊಲೀಸರು ಎಷ್ಟು ತಡಕಾಡಿದರೂ ರೆಡ್ಡಿಯ ಸುಳಿವೇ ಸಿಗುವುದಿಲ್ಲ. ಅಲ್ಲಿ ಇಲ್ಲಿ ವಿಚಾರಿಸಿದಾಗ, ಶಿವಶೇಖರ ಮತ್ತು ಕೋನಪ್ಪರೆಡ್ಡಿ ಸದಾ ಒಟ್ಟಿಗೆ ಇರುತ್ತಿದ್ದುದು ಪೊಲೀಸರಿಗೆ ತಿಳಿಯುತ್ತದೆ. ಆ ಮಾಹಿತಿ ಅನ್ವಯ ಪೊಲೀಸರು ಶಿವಶೇಖರನನ್ನು ಠಾಣೆಗೆ ಕರೆಸುತ್ತಾರೆ. ಅವನ ಹಾವಭಾವಗಳನ್ನೆಲ್ಲಾ ನೋಡಿದ ಪೊಲೀಸರಿಗೆ ಶಿವಶೇಖರನ ಮೇಲೆ ಬಲವಾದ ಸಂಶಯ ಉಂಟಾಗುತ್ತದೆ. ತಮ್ಮದೇ ಶೈಲಿಯಲ್ಲಿ ಆತನ ಬಾಯಿ ಬಿಡಿಸಿದಾಗ ಕೃತ್ಯದ ಬಗ್ಗೆ ತಪ್ಪು ಒಪ್ಪಿಕೊಳ್ಳುತ್ತಾನೆ.

2013ರ ಜುಲೈ 11ರಂದು ಶಿವಶೇಖರನನ್ನು ಬಂಧಿಸುವ ಪೊಲೀಸರು, ಅವನ ಮನೆಯಲ್ಲಿಯೇ ಕೊಲೆ ನಡೆದಿದ್ದುದರಿಂದ ಮನೆಗೆ ಬೀಗ ಹಾಕುತ್ತಾರೆ. ಶವವನ್ನು ಹೂತಿಟ್ಟ ಸ್ಥಳವನ್ನು ಶಿವಶೇಖರ ತಿಳಿಸಿದ ಕೂಡಲೇ, ಪೊಲೀಸರ ತಂಡ ಸ್ಥಳಕ್ಕೆ ಧಾವಿಸುತ್ತದೆ. ಆದರೆ ಅದಾಗಲೇ ರಾತ್ರಿಯಾದ್ದರಿಂದ ಶವವನ್ನು ಮಾರನೆಯ ದಿನ ಹೊರಕ್ಕೆ ತೆಗೆದರಾಯಿತು ಎಂದುಕೊಂಡು ತಂಡ ವಾಪಸಾಗುತ್ತದೆ.

ಮರುದಿನ ವಿಷಯ ತಿಳಿದ ಜನರು ಶವ ಹೂತಿಟ್ಟ ಸ್ಥಳಕ್ಕೆ ಧಾವಿಸುತ್ತಾರೆ. ಅವರ ಮುಂದೆ ಶವ ಹೊರತೆಗೆಯುವ ಪ್ರಕ್ರಿಯೆಯನ್ನು ಪೊಲೀಸರು ಮುಗಿಸುತ್ತಾರೆ. ಆರೋಪಿಯ ಮನೆಯ ಬೀಗ ತೆಗೆದು ಎಲ್ಲೆಡೆ ತಪಾಸಣೆ ಮಾಡುತ್ತಾರೆ. ಆದರೆ ‘ಜಾಣ’ ಶಿವಶೇಖರ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿದ್ದರಿಂದ ‍ಪೊಲೀಸರಿಗೆ ಯಾವ ಕುರುಹೂ ಸಿಗುವುದಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರನ್ನು ಕರೆಯಿಸಿ ರಾಸಾಯನಿಕ ಸಿಂಪಡಿಸಿ ನೋಡಿದಾಗ ಅಲ್ಲಿ ರಕ್ತದ ಕಲೆಗಳು ಕಾಣಿಸುತ್ತವೆ. ಇದರ ಬಗ್ಗೆ ಅದೇ 12ನೇ ತಾರೀಖು ಪೊಲೀಸರು ಪಂಚನಾಮೆ ಬರೆಯುತ್ತಾರೆ...

...ಇಷ್ಟು ವಿಷಯಗಳನ್ನು ಆರೋಪಿ ಶಿವಶೇಖರನ ಕಡೆಯಿಂದ ನಾನು ಕೇಳಿ ತಿಳಿದುಕೊಂಡೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ನಾನು ತಿರುವಿ ಹಾಕಿದೆ. ಇಂಥ ಪ್ರಕರಣಗಳನ್ನು ಸಾಕಷ್ಟು ನಡೆಸುವ ನನ್ನಂಥ ವಕೀಲರ ಮೊದಲ ಗಮನ ಹೋಗುವುದು ಪೊಲೀಸರ ತನಿಖೆಯ ಬಗ್ಗೆ. ಕೆಲವರು ಬೇಜವಾಬ್ದಾರಿಯಿಂದ ತನಿಖೆ ನಡೆಸುವುದು ಒಂದು ಭಾಗವಾದರೆ, ಆಮಿಷಗಳಿಗೆ ಬಲಿಯಾಗಿ ಆರೋಪಿಗಳ ಪರವಾಗಿ ಇರುವಂಥ ವರದಿ ತಯಾರು ಮಾಡುವುದು ಇನ್ನೊಂದೆಡೆ. ಇದು ಮಾಮೂಲು ಆಗಿಬಿಟ್ಟಿದೆ.

ಏಕೆಂದರೆ ತನಿಖಾಧಿಕಾರಿಗಳಿಗೂ ಚೆನ್ನಾಗಿ ಗೊತ್ತು... ಕೊಲೆಗಾರ ಇಂಥದ್ದೇ ವ್ಯಕ್ತಿ ಎಂದು ತೀರ್ಪು ಕೊಡುವ ನ್ಯಾಯಾಧೀಶರಿಗೆ ಮನವರಿಕೆಯಾದರೂ, ಅಂಥವರನ್ನು ಶಿಕ್ಷೆಗೆ ಒಳಪಡಿಸಲು ಬೇಕಿರುವುದು ಸಾಕ್ಷ್ಯಾಧಾರಗಳು ಮಾತ್ರ, ಆರೋಪಿಯ ಪರವಾಗಿ ಏನಾದರೂ ಒಂದು ಅಂಶ ಕೋರ್ಟ್‌ಗೆ ಕಂಡರೂ ಆತನಿಗೆ ಶಿಕ್ಷೆಯಿಂದ ಮುಕ್ತಿ ಸಿಗುವುದು ಖಚಿತ ಎಂದು... ಅದಕ್ಕಾಗಿ ಆರೋಪಿಗಳು ಅಲ್ಲೊಂದು ಇಲ್ಲೊಂದು ತಪ್ಪು ಮಾಡಿದ್ದರೂ ಅವರಿಗೆ ಶಿಕ್ಷೆ ಆಗದ ಹಾಗೆ ‘ಅನುಕೂಲ’ ಮಾಡಿಕೊಡುವಂಥ ವರದಿಯನ್ನು ತಯಾರಿಸುವಲ್ಲಿ ಕೆಲ ಪೊಲೀಸರು ಸಿದ್ಧಹಸ್ತರು. ಅಲ್ಲಿಗೆ ತಮ್ಮ ಜೇಬು ಭರ್ತಿ ಮಾಡಿಕೊಂಡು ಆರೋಪಿಗಳಿಗೆ ‘ನ್ಯಾಯ’ ಒದಗಿಸಿರುವ ಖುಷಿ ಅವರಲ್ಲಿ ಇರುತ್ತದೆ!

ಹಾಗೆನೇ... ‘ನ್ಯಾಯವಾದಿ’ಗಳು ಎಂದರೆ ನಮ್ಮ ಕಕ್ಷಿದಾರರಿಗೆ ಬೇಕಾಗಿರುವ ‘ನ್ಯಾಯ’ ಒದಗಿಸಿಕೊಡುವವರು ಅಷ್ಟೇ. ಕಕ್ಷಿದಾರರು ಅಪರಾಧ ಮಾಡಿರುವ ಬಗ್ಗೆ ವಕೀಲರಲ್ಲಿ ಹೇಳಿಕೊಂಡಾಗ ಅವರನ್ನು ಹೇಗೆ ಬಚಾವು ಮಾಡಬೇಕು ಎನ್ನುವುದಷ್ಟೇ ನಮ್ಮ ತಲೆಯಲ್ಲಿ ಉಳಿಯುತ್ತದೆಯೇ ವಿನಾ ಉಳಿದವು ನಗಣ್ಯ.

ಆಗಷ್ಟೇ ನಿವೃತ್ತಿ ಅಂಚಿನಲ್ಲಿದ್ದ ಈ ಕೇಸಿನ ಪೊಲೀಸ್‌ ತನಿಖಾಧಿಕಾರಿ ತಮ್ಮ ಅಷ್ಟೂ ವರ್ಷಗಳ ಅನುಭವದ ಆಧಾರದ ಮೇಲೆ ನ್ಯಾಯಾಲಯಕ್ಕೆ ಬೇಕಾಗಿರುವುದು ಏನು ಎಂಬುದನ್ನು ತಿಳಿದುಕೊಂಡಿದ್ದರು ಆದ್ದರಿಂದ ಅವರು ಆರೋಪಿಯಿಂದ ಹೇಳಿಕೆ ಪಡೆದುಕೊಂಡ ದಿನವನ್ನು 11.07.2013 ಎಂದು ನಮೂದಿಸುತ್ತಾರೆ. ಆದರೆ ಸ್ಥಳಕ್ಕೆ ಹೋಗಿ ಶವವನ್ನು ಹೊರತೆಗೆದ ದಿನಾಂಕವನ್ನು 10.07.2013 ಎಂದು ಬರೆದುಕೊಳ್ಳುತ್ತಾರೆ. ಅಂದರೆ ಆರೋಪಿ ತಪ್ಪು ಒಪ್ಪಿಕೊಂಡ ಒಂದು ದಿನ ಮುಂಚೆ...!

ಇಲ್ಲಿ ಭಾರತೀಯ ಸಾಕ್ಷ್ಯ ಕಾಯ್ದೆಯ 27ನೇ ಕಲಮಿನ ಬಗ್ಗೆ ಒಂದು ಅಂಶ ಉಲ್ಲೇಖಿಸಬೇಕು. ಅದೇನೆಂದರೆ, ಆರೋಪಿ ತಾನು ಮಾಡಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡ ತಕ್ಷಣ ಆತನನ್ನು ಘಟನೆ ನಡೆದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಅಲ್ಲಿರುವ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾಗುತ್ತದೆ. ಈ ಮಾಹಿತಿ ತನಿಖಾಧಿಕಾರಿ ಮತ್ತು ಆರೋಪಿಯ ಮಧ್ಯೆ ಗೌಪ್ಯವಾಗಿರಬೇಕು, ಈ ಪ್ರಕರಣದ ಬಗ್ಗೆ ಹೇಳುವುದಾದರೆ, ಶವವನ್ನು ತಾನು ಹೂತಿಟ್ಟಿದ್ದ ಬಗ್ಗೆ ಶಿವಶೇಖರ ಹೇಳಿದಾಗ ಪೊಲೀಸ್‌ ತನಿಖಾಧಿಕಾರಿಯು ಅಂದೇ ಅವನನ್ನು ಕರೆದುಕೊಂಡು ಹೋಗಿ ಶವವನ್ನು ತೆಗೆಯಬೇಕಿತ್ತು. ಆದರೆ ತನಿಖಾ ತಂಡ ಕಾಟಾಚಾರಕ್ಕೆ ಎಂಬಂತೆ ಸ್ಥಳಕ್ಕೆ ಧಾವಿಸಿ, ಆ ದಿನವೇ ಶವ ಹೊರತೆಗೆಯದೇ ವಾಪಸಾಯಿತು. ಆ ವೇಳೆಗಾಗಲೇ ಶವದ ಮಾಹಿತಿ ಸಾರ್ವಜನಿಕರ ಕಿವಿಗೂ ಮುಟ್ಟಿದ್ದರಿಂದ ಅವರು ಸ್ಥಳದಲ್ಲಿ ಜಮಾಯಿಸಿದ್ದರು, ಅಂದರೆ ಅಲ್ಲಿ ಕಾಯ್ದೆಯ ಅನ್ವಯ ಇರಬೇಕಿದ್ದ ಗೌಪ್ಯತೆ ಇರಲಿಲ್ಲ. ಎಲ್ಲರಿಗೂ ವಿಷಯ ತಿಳಿದುಬಿಟ್ಟಿತು, ಸಾಲದು ಎಂಬುದಕ್ಕೆ ಈ ಪ್ರಕರಣದಲ್ಲಿ ದಿನಾಂಕ ನಮೂದಿಸುವಲ್ಲಿ ಕೂಡ ತನಿಖಾಧಿಕಾರಿ ಎಡವಟ್ಟು ಮಾಡಿದ್ದರು.

ನಾನು ಅದನ್ನೇ ಕೋರ್ಟ್‌ ಮುಂದೆ ವಾದಿಸಿದೆ. ‘ಶವದ ರಿಕವರಿ ವೇಳೆ ಸಾರ್ವಜನಿಕರೂ ಇದ್ದುದರಿಂದ ಅದು ಸಾಕ್ಷ್ಯದ ರೂಪದಲ್ಲಿ ಕೋರ್ಟ್‌ ಪರಿಗಣಿಸಲು ಬರುವುದಿಲ್ಲ. ಪೊಲೀಸರ ದಾಖಲೆಯಲ್ಲಿ ಉಲ್ಲೇಖಿಸಲಾದ ದಿನಾಂಕವನ್ನು ನೋಡಿದರೆ, ನನ್ನ ಕಕ್ಷಿದಾರ ಕೊಲೆ ಮಾಡಿರುವುದು ಸಾಬೀತು ಆಗುವುದಿಲ್ಲ. ದಿನಾಂಕದಲ್ಲಿ ಎಡವಟ್ಟು ಆಗಿದ್ದು, ನನ್ನ ಕಕ್ಷಿದಾರ ನಿರಪರಾಧಿ ಎಂದು ಇದರಿಂದ ತಿಳಿಯುತ್ತದೆ’ ಎಂದೆ.

ಈತನೇ ಕೊಲೆ ಮಾಡಿದ್ದು ಎಂದು ನ್ಯಾಯಾಧೀಶರಿಗೆ ಸಂಪೂರ್ಣ ಮನವರಿಕೆ ಯಾಗಿದ್ದರೂ, ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಆತನನ್ನು ಬಿಡುಗಡೆ ಮಾಡಿದರು. ಜೀವಾವಧಿ ಶಿಕ್ಷೆಯಿಂದ ಶಿವಶೇಖರ ತಪ್ಪಿಸಿಕೊಂಡ.

ಇಂಥ ಪ್ರಕರಣಗಳಲ್ಲಿ ಹೆಚ್ಚಾಗಿ ನ್ಯಾಯಾಧೀಶರು ಆದೇಶ ಹೊರಡಿಸಿ ಸುಮ್ಮನಾಗುತ್ತಾರೆ. ಆದರೆ ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಶಿವಶೇಖರನನ್ನು ಬಿಡುಗಡೆ ಮಾಡಿದರೂ, ತನಿಖಾಧಿಕಾರಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ‘ನಿಮ್ಮಿಂದ ಈ ಪ್ರಕರಣಕ್ಕೆ ಬೆಂಕಿ ಬಿದ್ದಿದೆ. ಬೇಜವಾಬ್ದಾರಿಯ ತನಿಖೆಯಿಂದ ಸಮಾಜಕ್ಕೆ ಕೆಟ್ಟ ಸಂದೇಶ ರವಾನೆಯಾಗಿದೆ. ಇದು ನೀವು ಎಸಗಿರುವ ಕರ್ತವ್ಯಲೋಪ’ ಎಂದು ಆದೇಶದಲ್ಲಿ ಉಲ್ಲೇಖಿಸಿದ ಅವರು, ತನಿಖಾಧಿಕಾರಿ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಿದರು. ಅದಿನ್ನೂ ವಿಚಾರಣಾ ಹಂತದಲ್ಲಿದೆ...

ಬಡ್ಡಿಯ ಹಣ, ಅಸಲು ಹಣ ಎಲ್ಲವನ್ನೂ ನುಂಗಿ ಆರಾಮಾಗಿ ಇರುವ ಶಿವಶೇಖರ ಈಗಲೂ ತನ್ನ ಕಳ್ಳ ವ್ಯವಹಾರಗಳನ್ನು ಮುಂದುವರಿಸುತ್ತಿದ್ದಾನೆಂಬ ಸುದ್ದಿ ಸಿಕ್ಕಿದೆ. ಇನ್ನೊಂದೆಡೆ, ಆತನನ್ನು ಬಚಾವು ಮಾಡಿದ ತನಿಖಾಧಿಕಾರಿ ಎಷ್ಟು ಬೇಕೋ ಅಷ್ಟನ್ನು ಗಳಿಸಿಕೊಂಡು ಸಂತೃಪ್ತಿಯಿಂದ ಸೇವೆಯಿಂದ ನಿವೃತ್ತರಾಗಿದ್ದಾರೆ. ಆದರೂ ಇಲಾಖಾ ತನಿಖೆಯ ತೂಗುಗತ್ತಿ ಸದ್ಯ ತಲೆಯ ಮೇಲಿದೆ...!

ಹೆಸರು ಬದಲಾಯಿಸಲಾಗಿದೆ

ಲೇಖಕ ಹೈಕೋರ್ಟ್‌ ವಕೀಲ

Comments
ಈ ವಿಭಾಗದಿಂದ ಇನ್ನಷ್ಟು
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

ಕಟಕಟೆ–110
ಬುದ್ಧನ ಕಥೆಗೆ ಬಗ್ಗಿದ ವೈದ್ಯ!

18 Mar, 2018

ವಿಜಯಪುರ
‘ನೀನೇನು ಎಲೆಕ್ಷನ್‌ಗೆ ನಿಲ್ತಿಯೇನಪ್ಪಾ..!’

‘ನೋಡಪ್ಪಾ ನೀ ಎಲೆಕ್ಷನ್‌ಗೆ ನಿಲ್ಲೋದಿದ್ರೇ ಹೇಳು. ಸುಮ್ನೇ ಯಾಕ ಕಾರ್ಪೊರೇಟರ್ ಆಗಾಕ ಬಡಿದಾಡ್ತಿ. ನಮ್‌ ಸದಸ್ಯರನ್ನೆಲ್ಲಾ ಒಪ್ಸಿ, ನಿನ್ನೇ ಸಿಟಿಗೆ ಎಂಎಲ್‌ಎ ಎಲೆಕ್ಷನ್‌ಗೆ ನಿಲ್ಲಸ್ತೀನಿ...’ ...

18 Mar, 2018

ಈ ಭಾನುವಾರ
ಬಟ್ಟೆ ಧರಿಸದಿದ್ದರೆ ಮಾನ ಹೋಗೋದು!

‘ಬೆಂಗಳೂರಿನ ಮಾನ ಹೋದ ಮೇಲೆ ಇನ್ನೊಂದು ವರದಿ ಕೊಟ್ಟರೆ ಜನರು ನಂಬ್ತಾರಾ’ ಎಂದು ಪತ್ರಕರ್ತರು ಮರು ಪ್ರಶ್ನಿಸಿದಾಗ, ‘ಅಯ್ಯೊ ಮಾನ ಹೇಗೆ ಹೋಗುತ್ತೆ. ನಾವು...

18 Mar, 2018
ಫುಟ್‌ಬಾಲ್ ಅಂಗಳದ ಮಿನುಗುತಾರೆ

ವ್ಯಕ್ತಿ
ಫುಟ್‌ಬಾಲ್ ಅಂಗಳದ ಮಿನುಗುತಾರೆ

18 Mar, 2018
 ‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

ವಾರದ ಸಂದರ್ಶನ
‘ಅಕ್ರಮ ನೇಮಕಾತಿ ಕುರಿತು ತನಿಖೆ ನಡೆಯಲಿ’

18 Mar, 2018